ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಕ್ಕೆ

ವಿಕಿಸೋರ್ಸ್ದಿಂದ

ಕಕ್ಕೆ : ಲೆಗ್ಯುಮಿನೋಸೀ ಕುಟುಂಬಕ್ಕೆ ಸೇರಿದ ಕ್ಯಾಶಿಯ ಫಿಸ್ಟುಲ ಎಂಬ ವೈಜ್ಞಾನಿಕ ಹೆಸರಿನ ಮಧ್ಯಮ ಪ್ರಮಾಣದ ಮರ, ಇದಕ್ಕೆ ಇಂಡಿಯನ್ ಲಬರ್ನಮ್ ಎಂಬ ಹೆಸರೂ ಉಂಟು. 1220 ಮೀಗಳ ಎತ್ತರದ ಹಿಮಾಲಯದ ತಪ್ಪಲಿನಿಂದ ಹಿಡಿದು ಕನ್ಯಾಕುಮಾರಿಯವರೆಗೂ ಹರಡಿದೆ. ಅಲ್ಲಲ್ಲಿ ಇದು ಸಾಮೂಹಿಕವಾಗಿ ತೋಪಿನಂತೆ ಬೆಳೆದಿರುವುದೂ ಉಂಟು. ಆಫ್ರಿಕದಲ್ಲಿ ಅಮೆರಿಕ ಮತ್ತು ವೆಸ್ಟ್‌ ಇಂಡೀಸ್ ದ್ವೀಪಗಳಲ್ಲೂ ಇದನ್ನು ಬೆಳೆಸುತ್ತಾರೆ.

ಕಕ್ಕೆ ಮರ 15'-20' ಎತ್ತರಕ್ಕೆ ಬೆಳೆಯುತ್ತದೆ. ಅತ್ಯಲ್ಪಕಾಲ ಎಲೆ ಉದುರಿದ್ದು ಏಪ್ರಿಲ್-ಮೇ ತಿಂಗಳುಗಳಲ್ಲಿ ಹೊಸ ಚಿಗುರು ಬರುವುದು. ಚಿಗುರಿನೊಂದಿಗೇ ಉದ್ದನೆ ಜೋಲಾಡುವ ಹಳದಿಯ ಹೂಗೊಂಚಲುಗಳು ಮೂಡಿ ಗಿಡ ನೋಡಲು ಅತ್ಯಂತ ಸುಂದರವೂ ಆಕರ್ಷಣೀಯವೂ ಆಗುತ್ತದೆ. ಹೂಗಳು ಹಳದಿ ಅಥವಾ ನಸುಗೆಂಪಾಗಿದ್ದು ಸುವಾಸನೆ ಬೀರುತ್ತಿರುತ್ತವೆ. ಜನವರಿ-ಮಾರ್ಚಿ ತಿಂಗಳುಗಳಲ್ಲಿ ಬಲಿಯುವ ಕಾಯಿಗಳು ಒಂದರಿಂದ ಎರಡು ಮೀ ಉದ್ದವಿದ್ದು, ಕಂದುಬಣ್ಣದ ಉರಳೆ ಆಕಾರದಲ್ಲಿ ನೇತಾಡುತ್ತಿರುತ್ತವೆ. ಮರ ಕತ್ತರಿಸಿದಾಗ ಹೊಸ ಚಿಗುರು, ಬೇರುಸಸಿಗಳು ಧಾರಾಳವಾಗಿ ಬರುತ್ತವೆ. ಕೋತಿ, ಕರಡಿ, ಹಂದಿ ಇತ್ಯಾದಿ ಪ್ರಾಣಿಗಳು ಕಾಯಿಯ ತಿರುಳನ್ನು ತಿಂದು ಮಲದಲ್ಲಿ ವಿಸರ್ಜಿಸಿದ ಬೀಜ ಸುಲಭವಾಗಿ ಮೊಳೆತು ಹೊಸ ಗಿಡಗಳು ಹುಟ್ಟುತ್ತವೆ. ಇದರ ಚೌಬೀನೆ ಗಡುಸಾಗಿದ್ದು, ಬಾಳಿಕೆ ಬರುವುದರಿಂದ ಮನೆ ಕಂಬಗಳಿಗೂ ಗಾಡಿಸಾಮಾನುಗಳಿಗೂ ವ್ಯವಸಾಯದ ಉಪಕರಣಗಳಿಗೂ ಉಪಯೋಗವಾಗುತ್ತದೆ. ಕಾಯ ತಿರುಳನ್ನು (ಪಲ್ಪ್‌) ತೀಕ್ಷ್ಣವಾದ ಹಾಗೂ ಸುಖವಿರೇಚಕವಾಗಿ ಬಳಸುವುದುಂಟು. ಈ ಮರದ ಒಣತೊಗಟೆಯನ್ನು ಚರ್ಮ ಹದಮಾಡಲು ಉಪಯೋಗಿಸುತ್ತಾರೆ. ಕರ್ನಾಟಕ ರಾಜ್ಯದ ಅರಣ್ಯಗಳಲ್ಲಿ ಇದನ್ನು ಗೌಣಸಸ್ಯಗಳಲ್ಲಿ ಮುಖ್ಯವಾದುದೆಂಬ ಕಾರಣದಿಂದ ಚೆನ್ನಾಗಿ ಕೃಷಿಮಾಡುತ್ತಿದ್ದಾರೆ. (ಎ.ಕೆ.ಎಸ್.; ಎಂ.ಎಚ್.ಎಂ.)