ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಟಾರಿ, ಆರ್ ಡಿ

ವಿಕಿಸೋರ್ಸ್ದಿಂದ

ಕಟಾರಿ, ಆರ್ ಡಿ : ಭಾರತೀಯ ನೌಕಾಬಲದ ವರಿಷ್ಠ ಹುದ್ದೆಗೆ ಏರಿದ ಪ್ರಥಮ ಭಾರತೀಯ. ರಾಮದಾಸ್ ಡಿ.ಕಟಾರಿಯವರ ಜನನ ತಮಿಳುನಾಡಿನ ಚೆಂಗಲ್ಪೇಟೆಯಲ್ಲಿ. ನೌಕಾಬಲದ ಡಫರಿನ್ ಎಂಬ ಶಿಕ್ಷಣ ನೌಕೆಯಲ್ಲಿ ಮೊದಲು ಶಿಕ್ಷಣ ದೊರೆಯಿತು. ಮುಂದೆ ಎರಡನೆಯ ಮಹಾಯುದ್ಧದಲ್ಲಿ ಅಟ್ಲಾಂಟಿಕ್ ಮತ್ತು ಹಿಂದೂ ಸಾಗರಗಳಲ್ಲಿ ಯುದ್ಧಾನುಭವ ಗಳಿಸಿದರು. ಸ್ವಲ್ಪಕಾಲ ನೌಕಾಬಲದಲ್ಲಿ ಶಿಕ್ಷಕರಾಗಿಯೂ ಇದ್ದರು. ಐ.ಎನ್.ಎಸ್, ಕೃಷ್ಣ ಎಂಬ ಹಡಗಿನ ನಾಯಕರಾಗಿದ್ದಾಗ ಭಾರತದ ಮೊದಲನೆಯ ಐ.ಎನ್.ಎಸ್. ನ್ಯೂ ಡೆಲ್ಲಿ ಎಂಬ ಹೆಸರಿನ ಕ್ರೂಸರ್ ನೌಕೆಗೆ ಸೇರಿಕೊಳ್ಳಲು ಇಂಗ್ಲೆಂಡಿಗೆ ತೆರಳಿದರು. ಜುಲೈ 1948ರಲ್ಲಿ ಅದನ್ನು ವಹಿಸಿ ಕೊಂಡಂದಿನಿಂದ 1949ರ ಆದಿ ಭಾಗದವರೆಗೆ ಭಾರತದ ಪ್ರಥಮ ಪತಾಕಾ ನೌಕೆಯ (ಫ್ಲಾಗ್ಶಿಪ್) ಮುಖ್ಯಸ್ಥರು ಇವರೇ. ಆ ಬಳಿಕ ಭಾರತೀಯ ನೌಕಾದಳದ ಡಿಸ್ಟ್ರಾಯರ್ ಪಡೆಯ ಅಧಿನಾಯಕರಾಗಿ ಕೆಲಸಮಾಡಿ ಮುಂದೆ ಐ.ಎನ್.ಎಸ್. ರಾಜಪುತ್ ಎಂಬ ನೌಕೆಯ ನಾಯಕತ್ವವನ್ನು ವಹಿಸಿಕೊಂಡರು. 1954ರಲ್ಲಿ ನೌಕಾಬಲದ ಉಪಮುಖ್ಯಸ್ಥರಾದರು. ಏಪ್ರಿಲ್ 1958ರಲ್ಲಿ ಇವರು ವೈಸ್ ಅಡ್ಮಿರಲ್ ದರ್ಜೆಗೆ (ಅಂದಿನ ವರಿಷ್ಠ ದರ್ಜೆ) ಬಡ್ತಿ ಪಡೆದು ನೌಕಾಬಲದ ಮುಖ್ಯಸ್ಥರಾದರು. ನಿವೃತ್ತರಾದುದು 1962ರಲ್ಲಿ. (ಎ.ಎನ್.ಎಸ್.ಎಂ.)