ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಟಾಹ

ವಿಕಿಸೋರ್ಸ್ದಿಂದ

ಕಟಾಹ : ಆಗ್ನೇಯ ಏಷ್ಯದ ಒಂದು ಪ್ರಾಚೀನ ಸ್ಥಳ. ಮೊಟ್ಟಮೊದಲನೆಯದಾಗಿ ಸಂಸ್ಕೃತ ಪುರಾಣಸಾಹಿತ್ಯದಲ್ಲಿ ಇದರ ಉಲ್ಲೇಖ ಬರುತ್ತದೆ. ಭೂಮಿ ಒಂಬತ್ತು ಭಾಗಗಳಿಂದ ಕೂಡಿದುದೆಂದೂ ಕಟಾಹ ಅವುಗಳಲ್ಲಿ ಒಂದೆಂದೂ ಕೆಲವು ಪುರಾಣಗಳು ತಿಳಿಸುತ್ತವೆ. ಮತ್ತೆ ಕೆಲವು ಪುರಾಣಗಳಲ್ಲಿ ಸುವರ್ಣದ್ವೀಪವೇ ಇದೆನ್ನಲಾಗಿದೆ. ಕಟಾಹ ದ್ವೀಪ ಮತ್ತು ಸುವರ್ಣದ್ವೀಪಗಳು ಭಿನ್ನವಾದವೆಂಬುದು ಕಥಾಸರಿತ್ಸಾಗರದಿಂದ ವೇದ್ಯವಾಗುವ ಅಂಶ. ಇತ್ತೀಚಿನ ಸಂಶೋಧನೆಗಳಿಂದ ಇದು ಮಲಯ ಪರ್ಯಾಯದ್ವೀಪದಲ್ಲಿ ಪೀನಾಂಗ್ ಬಳಿ ಇರುವ ಈಗಿನ ಕೆಡ್ಡಹ್ ಎಂಬ ಸ್ಥಳವೆಂದು ತಿಳಿದುಬಂದಿದೆ.

ಪ್ರಾಚೀನ ಕಾಲದಿಂದಲೂ ಭಾರತಕ್ಕೂ ಕಟಾಹಕ್ಕೂ ವಾಣಿಜ್ಯ ಮತ್ತು ಸಾಂಸ್ಕೃತಿಕ ಸಂಬಂಧಗಳಿದ್ದುವು. ಗಂಗೈಕೊಂಡ ಚೋಳನೆಂದು ಬಿರುದಾಂಕಿತನಾದ ಒಂದನೆಯ ರಾಜೇಂದ್ರಚೋಳ (1012-44) 1025ರಲ್ಲಿ ಅಲ್ಲಿಗೆ ದಂಡೆತ್ತಿಹೋದನೆಂದು ತಿರುವಾಳಂಗಾಡು ತಾಮ್ರಶಾಸನ ತಿಳಿಸುತ್ತದೆ. ರಾಜೇಂದ್ರಚೋಳ, ಪ್ರಕ್ಷುಬ್ಧ ಸಮುದ್ರದ ಮೇಲೆ ಅನೇಕ ಹಡಗುಗಳನ್ನು ಕಳಿಸಿ, ಕಡಾರಂ ದೊರೆಯಾದ ಸಂಗ್ರಾಮ ವಿಜಯೋತ್ತುಂಗವರ್ಮನನ್ನು ಅವನ ಅಶ್ವಸೇನೆಯೊಂದಿಗೆ ಹಿಡಿದು, ಆ ದೊರೆ ಸಂಗ್ರಹಿಸಿದ್ದ ಐಶ್ವರ್ಯರಾಶಿಯನ್ನು ವಶಪಡಿಸಿಕೊಂಡನಲ್ಲದೆ, ಶ್ರೀವಿಜಯ, ಪಣ್ಣೈ, ಮಲೈಯೂರ್ ಮುಂತಾದವನ್ನು ಆಕ್ರಮಿಸಿಕೊಂಡನೆಂದೂ ಆಳವಾದ ಸಮುದ್ರದಿಂದ ರಕ್ಷಿತವಾಗಿದ್ದ ಕಡಾರಂ ಕೂಡ ಇವನ ಸ್ವಾಧೀನವಾಯಿತೆಂದೂ ತಿಳಿದುಬಂದಿದೆ. ಬಹುಶಃ ಕಡಾರಂ ಎಂಬುದು ಕಟಾಹದ ಇನ್ನೊಂದು ಹೆಸರಾಗಿತ್ತಲ್ಲದೆ ಅದು ಶ್ರೀವಿಜಯಸಾಮ್ರಾಜ್ಯದ ರಾಜಧಾನಿಯಾಗಿತ್ತು.

ರಾಜೇಂದ್ರಚೋಳನ ಈ ದಂಡಯಾತ್ರೆಗೆ ಕಾರಣವೇನೆಂಬುದು ಸ್ಪಷ್ಟವಾಗಿಲ್ಲ. ರಾಜೇಂದ್ರಚೋಳನ ತಂದೆಯ ಕಾಲದಲ್ಲಿ ಈ ಎರಡು ಸಾಮ್ರಾಜ್ಯಗಳ ನಡುವೆ ಸ್ನೇಹಭಾವವೇ ಇತ್ತು. ರಾಜೇಂದ್ರಚೋಳ ಪಟ್ಟಕ್ಕೆ ಬಂದ ಮೇಲೂ ಈ ಬಾಂಧವ್ಯ ಬೆಳೆದುಬಂದಿತ್ತು. ಹೀಗಿದ್ದಾಗ 1014-1025ರ ವರೆಗಿನ ಕಾಲದಲ್ಲಿ ಈ ಸ್ನೇಹ ವೈರವಾಗಿ ತಿರುಗಿದ್ದಾದರೂ ಏಕೆಂಬುದು ಗೊತ್ತಾಗುವುದಿಲ್ಲ. ಗಂಗಾನದಿಯ ಪ್ರದೇಶದಲ್ಲಿ ನಡೆಸಿದ ಜೈತ್ರಯಾತ್ರೆಯಿಂದ ಪ್ರತಿಷ್ಠೆ ಬೆಳೆಸಿಕೊಂಡ ರಾಜೇಂದ್ರಚೋಳ, ಶೈಲೇಂದ್ರ ಸಾಮ್ರಾಜ್ಯಕ್ಕೆ ತನ್ನ ನೌಕಾಶಕ್ತಿಯೆಷ್ಟೆಂಬುದನ್ನು ತೋರ್ಪಡಿಸಲು ಈ ವಿಜಯಯಾತ್ರೆ ಕೈಕೊಂಡಿದ್ದಿರಬಹುದು. ಭಾರತಕ್ಕೂ ದೂರ ಪ್ರಾಚ್ಯಕ್ಕೂ ನಡುವಣ ವ್ಯಾಪಾರದ ಮೇಲೆ ಸ್ವಾಮ್ಯ ಹೊಂದುವುದು ಇವನ ಉದ್ದೇಶವಾಗಿದ್ದರೂ ಇರಬಹುದು. ತಮಿಳು ವ್ಯಾಪಾರಿಗಳು ಈ ಪ್ರದೇಶದ ಮಣಿಮಂಗಳಂ ಎಂಬಲ್ಲಿ ವ್ಯಾಪಾರಸಂಸ್ಥೆಗಳನ್ನು ಸ್ಥಾಪಿಸಿದರೆಂದು ಹೇಳಲಾಗಿದೆ. ಕಟಾಹದ ಮೇಲೆ ರಾಜೇಂದ್ರಚೋಳನ ಅಧಿಕಾರ ಎಷ್ಟು ಕಾಲ ನಡೆಯಿತೆಂಬ ಬಗ್ಗೆಯೂ ನಿಖರವಾದ ಆಧಾರಗಳೇನೂ ದೊರಕುವುದಿಲ್ಲ.

ಅನಂತರ 1068ರಲ್ಲಿ ಒಂದನೆಯ ವೀರರಾಜೇಂದ್ರ ಕಟಾಹದ ಮೇಲೆ ಮತ್ತೆ ದಂಡೆತ್ತಿ ಹೋಗಿ ಅಲ್ಲಿಯ ರಾಜನನ್ನು ಸೋಲಿಸಿದನೆಂದೂ ಅನಂತರ ಇದನ್ನು ಅವನಿಗೇ ಹಿಂದಿರುಗಿಸಿದನೆಂದೂ ಶಾಸನಗಳಿಂದ ಗೊತ್ತಾಗುತ್ತದೆ. 13ನೆಯ ಶತಮಾನದ ಅನಂತರ ಆಗ್ನೇಯ ಏಷ್ಯದ ಇತರ ಭಾಗಗಳಲ್ಲಿ ಭಾರತೀಯ ಸಂಸ್ಕೃತಿಯ ಪ್ರಭಾವ ನಶಿಸಿಹೋದಂತೆ ಕಟಾಹದಲ್ಲಿಯೂ ಕ್ಷೀಣಿಸಿತು. (ಎ.ವಿ.ಎನ್.; ಜಿ.ಆರ್.ಆರ್.)