ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಡವೆ

ವಿಕಿಸೋರ್ಸ್ದಿಂದ

ಕಡವೆ : ಸರ್ವಸ್ (ರೂಸ) ಯೂನಿಕಲರ್ ಎಂಬ ವೈಜ್ಞಾನಿಕ ಹೆಸರಿನ ದೊಡ್ಡ ಜಿಂಕೆ. ಸ್ತನಿಕ ವರ್ಗ, ಆರ್ಟಿಯೋಡ್ಯಾಕ್ಟೈಲ ಉಪವರ್ಗ, ಹಾಗೂ ಸರ್ವಿಡೀ ಕುಟುಂಬಕ್ಕೆ ಸೇರಿದೆ. ಸಾಂಬರ್ ಎಂದೂ ಇದನ್ನು ಕರೆಯುತ್ತಾರೆ. ಭಾರತ ಮತ್ತು ಶ್ರೀಲಂಕಗಳ ದಟ್ಟ ಕಾಡುಗಳ ಬೆಟ್ಟ ಗುಡ್ಡಗಳೇ ಇದರ ಬೀಡು. ಭಾರತದಲ್ಲಿ ನೀಲಗಿರಿ ಮತ್ತು ಪಳನಿಬೆಟ್ಟಗಳಲ್ಲಿ ಹೇರಳವಾಗಿ ಕಾಣಬರುತ್ತದೆ. ಇದು ಸು. 5' ಗಿಂತ ಹೆಚ್ಚು ಎತ್ತರ ಮತ್ತು 500 ಪೌಂಡಿಗೂ ಮಿಗಿಲಾಗಿ ಭಾರವಿರುತ್ತದೆ. ದೇಹದ ಬಣ್ಣ ಹಳದಿ ಮಿಶ್ರಿತ ಕಂದು. ಮೈಮೇಲೆಲ್ಲ ಒರಟಾದ ಕೂದಲುಗಳಿವೆ.

ಕುತ್ತಿಗೆಯ ಭಾಗದಲ್ಲಿ ಉದ್ದ ಕೂದಲುಗಳ ಅಯಾಲು (ಮೇನ್) ಇದೆ. ಮುದಿ ಕಡವೆಗಳು ಕಪ್ಪು ಬಣ್ಣಕ್ಕಿರುತ್ತವೆ. ಗಂಡು ಕಡವೆಯಲ್ಲಿ ಒರಟಾದ ಚರ್ಮದಿಂದ ಆವರಿಸಿದ ಕವಲೊಡೆದ ಕೊಂಬುಗಳಿವೆ. ಇವೂ ಪ್ರತಿವರ್ಷದ ಮಾರ್ಚಿ ತಿಂಗಳ ವೇಳೆಗೆ ಉದುರಿ ಹೋಗುತ್ತವೆ. ಮತ್ತೆ ಅವುಗಳ ಸ್ಥಳದಲ್ಲಿ ಕೊಂಬುಗಳು ಮೂಡುತ್ತವೆ. ಹೆಣ್ಣು ಕಡವೆಗಳಲ್ಲಿ ಕೊಂಬುಗಳಿಲ್ಲ. ಕಡವೆ ಸಾಮಾಜಿಕ ಜೀವಿ. ದೊಡ್ಡ ದೊಡ್ಡ ಗುಂಪುಗಳಲ್ಲಿ ವಾಸಿಸುತ್ತದೆ. ಹುಲ್ಲು, ಎಳೆಚಿಗುರು, ಹಣ್ಣು ಹಂಪಲು ಇತ್ಯಾದಿ ಇದರ ಆಹಾರ. ಸಾಮಾನ್ಯವಾಗಿ ರಾತ್ರಿಯ ವೇಳೆ ಮಾತ್ರ ಆಹಾರಕ್ಕಾಗಿ ಅಲೆದಾಡುತ್ತದೆ. ಹಗಲು ದಟ್ಟವಾದ ಪೊದೆಗಳಲ್ಲಿ ಅಡಗಿ ಕಾಲ ಕಳೆಯುತ್ತದೆ. ನೀರನ್ನು ಕಂಡರೆ ಇಷ್ಟ, ತುಂಬ ಚೆನ್ನಾಗಿ ಈಜಲೂ ಬಲ್ಲುದು.

ನವೆಂಬರಿನಿಂದ ಡಿಸೆಂಬರಿನ ವರೆಗಿನ ಕಾಲ ಇದರ ಬೆದೆಗಾಲ. ಈ ಕಾಲದಲ್ಲಿ ಒಂದು ಗಂಡು 5-12 ಹೆಣ್ಣು ಕಡವೆಗಳೊಂದಿಗೆ ಗುಂಪುಗೂಡಿರುತ್ತದೆ. ಬೆದೆಗಾಲ ಮುಗಿದ ಬಳಿಕ ಗುಂಪು ಒಡೆದು ಹೋಗುವುದು ಸಾಮಾನ್ಯ.

ಕಡವೆ ಬಹಳ ಧೈರ್ಯಶಾಲಿ. ವೈರಿಗಳೊಂದಿಗೆ ಭಯಂಕರವಾಗಿ ಹೋರಾಡುತ್ತದೆ. (ಎಸ್.ಎಚ್.ಒ.; ಪಿ.ಎಸ್.ಆರ್.)