ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಥಾಂಜಲಿ

ವಿಕಿಸೋರ್ಸ್ದಿಂದ

ಕಥಾಂಜಲಿ : ಕನ್ನಡದಲ್ಲಿ ಸಣ್ಣಕಥೆಗಳಿಗೆ ಮೀಸಲಾದ ಈ ಪತ್ರಿಕೆ ಪ್ರಕಟವಾದದ್ದು 1929ನೆಯ ಜುಲೈ ತಿಂಗಳಿನಲ್ಲಿ. ಇದರ ಸಂಪಾದಕರು ಪ್ರಸಿದ್ಧ ಸಾಹಿತಿಗಳೂ ಸ್ವತಃ ಕಥೆಗಾರರೂ ಕಾದಂಬರೀಕಾರರೂ ಆಗಿದ್ದ ಅ.ನ.ಕೃಷ್ಣರಾಯರು. ಕೆಲವು ತಿಂಗಳುಗಳ ಅನಂತರ ಕೃಷ್ಣರಾಯರು ತಮ್ಮ ಈ ಪತ್ರಿಕೆಯ ಪ್ರಕಾಶನದ ಜವಾಬ್ದಾರಿಯನ್ನು ಬಿ.ಎನ್. ಗುಪ್ತರವರಿಗೆ ವಹಿಸಿಕೊಟ್ಟು, ಪತ್ರಿಕೆಗೆ ಹದಿನಾಲ್ಕು ತಿಂಗಳು ತುಂಬುವವರೆಗೆ ಸಂಪಾದಕರಾಗಿದ್ದರು. ಅನಂತರ ಸಂಪಾದನ ಕಾರ್ಯವನ್ನು ಮುಂದುವರಿಸಿಕೊಂಡು ಹೋದವರು-ಮಾ. ನಾ. ಚೌಡಪ್ಪ, ಶ್ರೀನಾಥ (ಎನ್.ಶ್ರೀನಿವಾಸರಾವ್), ಎಸ್. ವೆಂಕಟಾಚಲಪತಿ ಮತ್ತು ನಾಡಿಗೇರ ಕೃಷ್ಣರಾಯ-ಇವರು.

ಮೊದಲನೆಯ ಮಜಲಿನಲ್ಲಿ ಕಥಾಂಜಲಿ 1931ರ ಕೊನೆಯವರೆಗೆ ನಡೆದು ನಿಂತು ಹೋಯಿತು. ಅನಂತರ ಎರಡನೆಯ ಘಟ್ಟದಲ್ಲಿ 1937ರ ಮಧ್ಯಭಾಗದಿಂದ 1941ರ ಅಂತ್ಯದವರೆಗೆ ನಡೆಯಿತು. ಹೀಗೆ ಕಥಾಂಜಲಿ ಸು. ಏಳು ವರ್ಷಗಳ ಕಾಲ ಕನ್ನಡ ಸಾಹಿತ್ಯಕ್ಕೆ ತನ್ನ ಸೇವೆ ಸಲ್ಲಿಸಿತು. ಕಥಾಂಜಲಿಯ ಸ್ಥಾಪನೆಯ ಉದ್ದೇಶವೇನು ಎಂಬುದನ್ನು ಸಂಸ್ಥಾಪಕ ಸಂಪಾದಕ ಅ.ನ. ಕೃಷ್ಣರಾಯರು ಪತ್ರಿಕೆಯ ಪ್ರಥಮ ಸಂಪಾದಕೀಯ ಲೇಖನದಲ್ಲಿ ಈ ರೀತಿ ಸ್ಪಷ್ಟಪಡಿಸಿದ್ದರು: ನಮ್ಮ ಕನ್ನಡನಾಡಿನಲ್ಲಿ...ಕೇವಲ ಸಣ್ಣಕಥೆಗಳಿಗಾಗಿಯೇ ಸಮರ್ಪಿಸಲ್ಟಟ್ಟು ಒಂದು ನಿಯುಕ್ತ ಆದರ್ಶವನ್ನಿಟ್ಟುಕೊಂಡು ಹೊರಟಿರುವ ಪತ್ರಿಕೆಯ ಕೊರತೆ ಬಹುಕಾಲದಿಂದಲೂ ಇದ್ದೇ ಇದ್ದಿತು...ನಮ್ಮಲ್ಲಿ ಸರ್ವತೋಮುಖವಾದ ಬೆಳೆ ಬೆಳೆದು ಕುಯಿಲಿಗೆ ಸಿದ್ಧವಾಗಿದ್ದರೂ ಅದನ್ನು ಕುಯ್ದು ನಾಡಿಗರಿಗೆ ಹಂಚುವವರಿಲ್ಲವಲ್ಲ ಎಂದು ಎನಿಸುತ್ತಲೇ ಇದ್ದಿತು. ಈ ಅಂತಸ್ತಾಪವನ್ನು ದೂರಮಾಡಿ, ಸನ್ಮಿತ್ರರ ಸಹಾಯ ಸ್ಪೂರ್ತಿಗಳಿಂದ ಹುರಿಗೊಂಡು ನಾವು ಈ ಕೆಲಸಕ್ಕೆ ಉದ್ಯುಕ್ತರಾಗಿರುವೆವು...ಸಣ್ಣಕಥೆಗಳಲ್ಲಿ ನಾನಾ ಬಗೆಗಳುಂಟು, ಸಂಪ್ರದಾಯಗಳುಂಟು, ಶೈಲಿಗಳುಂಟು. ನಾವು ಯಾವ ಒಂದು ಶೈಲಿ ಸಂಪ್ರದಾಯಕ್ಕೂ ತಾಳಿಕಟ್ಟುವುದಿಲ್ಲ. ಎಲ್ಲವುಗಳ ಪರಿಚಯಾನುಭವವನ್ನು ಕನ್ನಡಿಗರಿಗೆ ಮಾಡಿಸಿಕೊಡಬೇಕೆಂಬುದೇ ನಮ್ಮಿಚ್ಛೆ. ಸ್ವಕಪೋಲಕಲ್ಪಿತವಾದ ಕನ್ನಡಿಗರ ಕಥೆಗಳಿಗೆ ಪ್ರಾಧಾನ್ಯ ಕೊಟ್ಟು ಅನಂತರ ಇತರ ಭಾಷೆಗಳಲ್ಲಿನ ಕಥೆಗಳ ಪರಿಚಯವನ್ನು ಉಂಟು ಮಾಡಿಕೊಡುತ್ತೇವೆ.

ಒಟ್ಟಿನಲ್ಲಿ ಕಥಾಂಜಲಿ ತನ್ನ ಜೀವಿತಾವಧಿಯಲ್ಲಿ ಈ ಧ್ಯೇಯವನ್ನು ಚೆನ್ನಾಗಿ ಪರಿಪಾಲಿಸಿಕೊಂಡು ಬಂದಿತೆನ್ನಬಹುದು. ತಂತ್ರವೈವಿಧ್ಯವುಳ್ಳ ಹಲವಾರು ಉತ್ತಮ ಕನ್ನಡ ಸಣ್ಣಕಥೆಗಳನ್ನೂ ಕನ್ನಡೇತರ ಭಾಷೆಗಳ ಕಥೆಗಳ ಅನುವಾದವನ್ನೂ ಅದು ಪ್ರಕಟಿಸಿತು. ವೈಯಕ್ತಿಕ ಅನುಬಂಧಗಳನ್ನು ಗಣನೆಗೆ ತಾರದೆ, ವಸ್ತುನಿಷ್ಠವಾದ ಸಾಹಿತ್ಯ ಸಮೀಕ್ಷೆಯನ್ನೂ ನಡೆಸಿತು.

ಇವೆಲ್ಲಕ್ಕಿಂತಲೂ ಮುಖ್ಯವಾದ ಅಂಶವೆಂದರೆ-’1929ರಲ್ಲಿ ಆರಂಭಿಸಿದ ಕಥಾಂಜಲಿ ಮಾಸಪತ್ರಿಕೆ...ಹೊಸ ಲೇಖಕರ ವಿಕಾಸಕ್ಕೆ ನೆರವಾಯಿತು...ಸು. 50 ಜನ ಲೇಖಕರು ಕಥಾಂಜಲಿಯಿಂದ ಮುಂದಕ್ಕೆ ಬಂದರು. ಸಣ್ಣಕಥೆಗಳ ವಿಪುಲವಾದ ಸೃಷ್ಟಿಗೂ ಕಥನಕಲೆಯ ನವ ವಿಜ್ಞಾನದ ಉದಯಕ್ಕೂ ಕಥಾಂಜಲಿ ಬಹಳ ಹೆಣಗಿತು’-ಎಂದು ಅ.ನ. ಕೃಷ್ಣರಾಯರು, ಬೊಂಬಾಯಿನ ಆಲ್ ಇಂಡಿಯಾ ರೇಡಿಯೋ ಕೇಂದ್ರದಿಂದ ಕನ್ನಡ ಸಣ್ಣಕಥೆಗಳನ್ನು ಕುರಿತು ಮಾಡಿದ ಭಾಷಣದಲ್ಲಿ ಹೇಳಿದ ಮಾತುಗಳಲ್ಲಿ ಉತ್ಟ್ರೇಕ್ಷೆಯಿಲ್ಲ.

ಶ್ರೀನಾಥ, ಮಾ.ನಾ. ಚೌಡಪ್ಪ, ವಾಣಿ, ನಾಡಿಗೇರ ಕೃಷ್ಣರಾಯ-ಇವರು ಕನ್ನಡ ಸಾಹಿತ್ಯಲೋಕವನ್ನು ಪ್ರವೇಶಿಸಿದ್ದು ಕಥಾಂಜಲಿಯ ಮೂಲಕ; ಜಿ.ಪಿ.ರಾಜರತ್ನಂ, ಮ. ನ. ಮೂರ್ತಿ, ಕ್ಷೀರಸಾಗರ (ಸೀತಾರಾಮಶಾಸ್ತ್ರಿ), ರಾಘವ (ಎಂ. ವಿ. ಸೀತಾರಾಮಯ್ಯ), ಇ. ಎ. ಭಾಸ್ಕರರಾವ್, ರಾ.ಶಿ. (ಎಂ. ಶಿವರಾಮ್) ಮುಂತಾದವರ ಆರಂಭಕಾಲದ ಲೇಖನಗಳಲ್ಲಿ ಹಲವು ಬೆಳಕು ಕಂಡದ್ದು ಕಥಾಂಜಲಿಯಲ್ಲಿ. ಆನಂದ (ಎ. ಸೀತಾರಾಂ), ಕೆ. ಗೋಪಾಲಕೃಷ್ಣರಾಯ, ದೇವುಡು, ಕೃಷ್ಣಕುಮಾರ ಕಲ್ಲೂರ, ಶ್ರೀರಂಗ (ಆದ್ಯ ರಂಗಾಚಾರ್ಯರು), ಡಿ. ಕೆ. ಭಾರದ್ವಾಜ್, ಬೆಳ್ಳಾವೆ ನರಹರಿಶಾಸ್ತ್ರಿಗಳು ಮುಂತಾದ ಖ್ಯಾತ ಲೇಖಕರು ಕಥಾಂಜಲಿಯ ಲೇಖಕ ಬಳಗದಲ್ಲಿ ಸೇರಿದ್ದರು-ಎಂಬಿವು ಸ್ಮರಣಿಯ ಅಂಶಗಳು. (ಎಂ.ಎನ್.ಸಿ.ಎಚ್.)