ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನಕಾಂಬರ

ವಿಕಿಸೋರ್ಸ್ದಿಂದ

ಕನಕಾಂಬರ : ಅಕ್ಯಾನ್ತೇಸೀ ಕುಟುಂಬಕ್ಕೆ ಸೇರಿದ ಕ್ರಾಸ್ಯಾಂಡ್ರ ಎಂಬ ಸಸ್ಯವಿಜ್ಞಾನ ಹೆಸರಿನ ಚಿಕ್ಕ ಪೊದೆಸಸ್ಯ. ಈ ಜಾತಿಯಲ್ಲಿ ಸು. 40 ಪ್ರಭೇಧಗಳಿವೆ. ಭಾರತದ ಮೂಲ ನಿವಾಸಿಗಳಾದ ಇವು ಏಷ್ಯದ ಇತರ ಭಾಗಗಳಲ್ಲೂ ಮಡಗಾಸ್ಕರ್ ದ್ವೀಪಗಳಲ್ಲೂ ಆಫ್ರಿಕದಲ್ಲೂ ಕಂಡುಬರುತ್ತವೆ. ಇವುಗಳಲ್ಲಿ ಕ್ರಾ.ಅನ್ಡುಲಿಫೋಲಿಯ, ಕ್ರಾ.ಆಕ್ಸಿಲ್ಯಾರಿಸ್, ಕ್ರಾ.ನಿಲೋಟಿಕ ಮತ್ತು ಕ್ರಾ. ಇನ್ಫಂಡಿಬ್ಯೂಲಿಫ್ರ್ಮಿಸ್ ಎಂಬ ಪ್ರಭೇದಗಳು ಮುಖ್ಯವಾದುವು. ಕನಕಾಂಬರವನ್ನು ತೋಟಗಳಲ್ಲಿ ಮತ್ತು ದೇವಸ್ಥಾನದ ಆವರಣಗಳಲ್ಲಿ ಅಲಂಕಾರಕ್ಕೂ ಹೂವಿಗಾಗಿಯೂ ಬೆಳೆಸುತ್ತಾರೆ. ಈಚೆಗೆ ಇದನ್ನು ಮನೆಮನೆಗಳಲ್ಲೂ ಬೆಳೆಸುತ್ತಿದ್ದಾರೆ. ಸಾಮಾನ್ಯವಾಗಿ ಬೀಜದಿಂದ ಮತ್ತು ಕಾಂಡದ ತುಂಡುಗಳಿಂದ ವೃದ್ಧಿಮಾಡುತ್ತಾರೆ. ಕನಕಾಂಬರದ ಕಾಂಡ ಎಳೆಯದಾಗಿದ್ದಾಗ ಹಸಿರು ಬಣ್ಣದ್ದೂ ಬಲಿದಾಗ ಕಂದು ಬಣ್ಣದ್ದೂ ಆಗಿದೆ. ಅದರ ಮೇಲ್ಮೈನುಣುಪು. ಗಿಣ್ಣುಗಳು ಉಬ್ಬಿಕೊಂಡಿವೆ. ಕಾಂಡದಮೇಲೆ ಅಭಿಮುಖವಾಗಿ ಜೋಡಿಸಿರುವ ಸರಳ ಎಲೆಗಳಿವೆ. ಅವುಗಳ ಉದ್ದ ಸು. 6", ಅಗಲ ಸು. 2",ಆಕಾರ ಈಟಿಯಂತೆ, ಅಂಚು ಅಲೆಯಂತೆ, ತುದಿ ಮೊನಚು. ಎಲೆಗಳಿಗೆ ವೃಂತಪರ್ಣಗಳಿಲ್ಲ. ಹೂಗಳು ಕದಿರು ಗೊಂಚಲಿನಲ್ಲಿ (ಸ್ಪೈಕ್) ಜೋಡಣೆಗೊಂಡಿವೆ. ಬಹಳ ಸುಂದರವಾದ ಅವುಗಳಲ್ಲಿ ಕೇಸರಿ, ಕಿತ್ತಳೆ ಮಿಶ್ರಿತ ಹಳದಿ, ನಸುನೀಲಿ ಹಾಗೂ ಅಚ್ಚಹಳದಿ ವರ್ಣವೈವಿಧ್ಯವಿದೆ. ಕೇಸರಿ ಬಣ್ಣದವಕ್ಕೆ ಒಳ್ಳೆಯ ಬೇಡಿಕೆ ಇದೆ. ಹೂಗಳಿಗೆ ಬ್ರ್ಯಾಕ್ಟು ಮತ್ತು ಬ್ರ್ಯಾಕ್ಟಿಯೋಲುಗಳಿವೆ. ದ್ವಿಲಿಂಗಿಗಳಾದ ಅವು ಉಭಯ ಪಾಶರ್ವ್‌ ಸಮಾಂಗತೆಯುಳ್ಳವು. ಪುಷ್ಪಪಾತ್ರೆಯಲ್ಲಿ ಬುಡಭಾಗದಲ್ಲಿ ಕೂಡಿಕೊಂಡಿವೆ. ಕೇಸರಗಳು ನಾಲ್ಕು, ಹೂದಳಗಳಿಗೆ ಅಂಟಿಕೊಂಡಿವೆ. ಎರಡು ಕೇಸರಗಳು ಉಳಿದೆರಡಕ್ಕಿಂತ ಹೆಚ್ಚು ಉದ್ದವಾಗಿವೆ. ಪರಾಗಕೋಶಗಳಲ್ಲಿ ಒಂದೇ ಕೋಣೆಯಿದೆ. ಅಂಡಾಶಯ ಉಚ್ಛಸ್ಥಾನದ್ದು. ಎರಡು ಕಾರ್ಪೆಲುಗಳಿಂದ ಕೂಡಿದೆ. ಇವೆರಡೂ ಸಂಯುಕ್ತವಾಗಿದ್ದು ಎರಡಕ್ಕೂ ಸೇರಿಕೊಂಡಂತೆ ಎರಡು ಕೋಣೆಗಳಿವೆ. ಅಂಡಕಗಳ ಸಂಖ್ಯೆ 4. ಫಲ ಆಯತಾಕಾರದ ಚೂಪು ತುದಿಯ ಕ್ಯಾಪ್ಸ್ಯುಲ್. ಬೀಜಗಳು ಚಪ್ಪಟೆಯಾಗಿದೆ. ಅವು ಕಾಯಿಯಿಂದ ಹೊರಸಿಡಿಯಲು ಅನುಕೂಲವಾಗುವಂತೆ ಅವುಗಳ ಬುಡದಲ್ಲಿ ಕೊಕ್ಕೆ ಆಕಾರದ ರಚನೆಗಳಿವೆ (ರೆಟಿನ್ಯಾಕ್ಯುಲ). (ಟಿ.ಸಿ.)