ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಪಿಲ

ವಿಕಿಸೋರ್ಸ್ದಿಂದ

ಕಪಿಲ : ಸಾಂಖ್ಯದರ್ಶನ ಪ್ರವರ್ತಕ. ಕಾಲ ಯಾವುದೆಂದು ತೀರ್ಮಾನವಾಗಿಲ್ಲ ಐತಿಹಾಸಿಕ ವ್ಯಕ್ತಿಯೋ ಅಥವಾ ಕೇವಲ ಪೌರಾಣಿಕ ವ್ಯಕ್ತಿಯೋ ಹೇಳಲು ಸಾಧ್ಯವಿಲ್ಲ ಅಂತೂ ವೈದಿಕ ಋಷಿಗಳ ಪರಂಪರೆಯಲ್ಲಿ ಯಾರೂ ಇವನನ್ನು ಸ್ಮರಿಸಿಲ್ಲ, ಭಾಗವತ ಪುರಾಣದ ಪ್ರಕಾರ ಕಪಿಲ ಮಹಾವಿಷ್ಣುವಿನ ಅವತಾರ. ಸಿದ್ಧರಲ್ಲಿ ತಾನು ಕಪಿಲನೆಂದು ಕೃಷ್ಣ ಭಗವದ್ಗೀತೆಯಲ್ಲಿ ಹೇಳಿಕೊಂಡಿದ್ದಾನೆ. ಸಗರಪುತ್ರರನ್ನು ತನ್ನ ತಪಃ ಪ್ರಭಾವದಿಂದ ಸುಟ್ಟವ ಈತನೇ ಇರಬಹುದೆಂದು, ಹಲವರ ಮತ. ಅಂತೂ ಕಪಿಲ ಸಾಂಖ್ಯಮತ ಪ್ರವರ್ತಕನೆಂಬುದರಲ್ಲಿ ಯಾವ ಸಂಶಯವೂ ಇಲ್ಲ.

ವಿದ್ವಾಂಸರ ಅಭಿಪ್ರಾಯದ ಪ್ರಕಾರ ಕಪಿಲಸೂತ್ರ ಅಥವಾ ಸಾಂಖ್ಯಸೂತ್ರವೆಂಬ ಗ್ರಂಥ 12ನೆಯ ಶತಮಾನದ್ದು. ಬಹುಶಃ ಈ ಸೂತ್ರಗ್ರಂಥ ಕಪಿಲ ಋಷಿಯ ಸ್ವಂತಕೃತಿಯಲ್ಲ. ತತ್ತ್ವಸಮಾಸ ಎಂಬ ಸಾಂಖ್ಯಗ್ರಂಥದ ಪ್ರಸ್ತಾವನೆಯಲ್ಲಿ ಈತ ಆಸುರಿ (ನೋಡಿ) ಎನ್ನುವವನಿಗೆ ಪ್ರತ್ಯಕ್ಷನಾಗಿ ತತ್ತ್ವ ಸಮಾಸವನ್ನು ಬೋಧಿಸಿದ ವಿವರಣೆಯುಂಟು. ಬಹುಶಃ ಗಾತ್ರದಲ್ಲಿ ಬಹು ಚಿಕ್ಕದಾದ ತತ್ತ್ವಸಮಾಸವೇ ಸಾಂಖ್ಯದರ್ಶನದ ಆದಿಯಾಗಿರಬಹುದು. ಈ ದರ್ಶನದ ಅತ್ಯುತ್ತಮ ಹಾಗೂ ಶಾಸ್ತ್ರಯುಕ್ತವಾದ ಗ್ರಂಥ ಈಶ್ವರಕೃಷ್ಣನೆಂಬಾತ ಬರೆದ ಸಾಂಖ್ಯಕಾರಿಕಾ. ಈ ಗ್ರಂಥದ ಕೊನೆಯಲ್ಲಿ ಸಾಂಖ್ಯದರ್ಶನ ಕಪಿಲ ಮುನಿಯಿಂದ ಬೋಧಿಸಲ್ಪಟ್ಟು ಆಸುರಿ, ಪಂಚಶಿಖಾದಿಗಳಿಂದ ವಿಸ್ತೃತವಾಗಿ ಶಿಷ್ಯಪರಪಂಪರಾನುಗತವಾಗಿ ತನ್ನವರೆಗೆ ಬಂದು ತಾನು ಕಾರಿಕಾರೂಪದಲ್ಲಿ ತನ್ನ ಸಾಂಖ್ಯಕಾರಿಕಾ ಗ್ರಂಥವನ್ನು ಬರೆದೆನೆಂದು ಈಶ್ವರಕೃಷ್ಣ ಹೇಳುತ್ತಾನೆ (ನೋಡಿ: ಸಾಂಖ್ಯದರ್ಶನ). (ಕೆ.ಬಿ.ಆರ್.)