ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರಮ್ಜಿ಼ನ್, ನಿಕೊಲೆ

ವಿಕಿಸೋರ್ಸ್ದಿಂದ

ಕರಮ್ಜಿ಼ನ್, ನಿಕೊಲೆ : 1765-1826. ರಷ್ಯನ್ ಸಾಹಿತಿ. ಉತ್ತಮ ವಿದ್ಯಾಭ್ಯಾಸವನ್ನು ಪಡೆದು ಫ್ರೀ ಮೇಸನರ ಪ್ರಭಾವಕ್ಕೆ ಒಳಗಾದ. ರಷ್ಯನ್ ಪ್ರವಾಸಿಯ ಪತ್ರಗಳು ಎಂಬ ಈತನ ಪುಸ್ತಕ ಹೊಸ ವಿಶಾಲ ಸಂಸ್ಕೃತ ಮನೋಭಾವವನ್ನು ವ್ಯಕ್ತಪಡಿಸಿತು. ಮಾಸ್ಕೊ ಪತ್ರಿಕೆ, ಯುರೋಪಿನ ದೂತ ಎನ್ನುವ ಮಾಸಪತ್ರಿಕೆಗಳನ್ನು ಈತ ನಡೆಸಿದ. ಮಾಸ್ಕೊ ಪತ್ರಿಕೆಯ ಪ್ರಕಟಣೆ (1791) ಸೂಕ್ಷ್ಮ ಸಂವೇದನಾ ಪಂಥದ ನಾಂದಿ ಎನ್ನಬಹುದು. ಇವನ ಸಾಹಿತ್ಯ ಬಾಳುವಂಥದಲ್ಲವಾದರೂ ಹೊಸದೊಂದು ಮನೋಧರ್ಮವನ್ನು ಪ್ರಸಾರಗೊಳಿಸಿ ಸಾರ್ಥಕವೆನಿಸಿತು. ಮನುಷ್ಯನ ಸಹಜಪ್ರವೃತ್ತಿಗಳು ಒಳ್ಳೆಯವು ಅಲ್ಲದೆ ಸುಖಕ್ಕೆ ಸಾಧನ ಎನ್ನುವ ದೃಷ್ಟಿ ಇವನದು. ಇವನ ಸಂಸ್ಕೃತಿ ಈ ಅಭಿಪ್ರಾಯಕ್ಕೆ ಮೆರುಗನ್ನು ನೀಡಿತು. ಇವನ ಕಾದಂಬರಿಗಳು ಸತ್ತ್ವಯುತವಾಗಿಲ್ಲವೆನ್ನಬೇಕು. ಉದ್ದೇಶಪುರ್ವಕವಾದ ಕಲೆಯನ್ನು ಸೇರಿಸಿ ಕಥೆಗೆ ಸಾಹಿತ್ಯದ ಪಟ್ಟವನ್ನು ಕಟ್ಟಿದವನೀತ. ಸಾಹಿತ್ಯದ ಭಾಷೆಯಲ್ಲಿ ಲಾಮನೋಸಫ್ ಉಳಿಸಿಕೊಂಡಿದ್ದ ಚರ್ಚ್ಸ್ಲವೊಕ್ ಅಂಶವನ್ನು ತ್ಯಜಿಸಿ, ಅಧುನಿಕ ಭಾವನೆಗಳು ಮತ್ತು ಭಾವಗಳಿಗೆ ಫ್ರೆಂಚ್ ಪದಗಳನ್ನು ಭಾಷಾಂತರ ಮಾಡಿಕೊಂಡು ಬಳಸುವುದು,

ವಾಕ್ಯವಿನ್ಯಾಸದಲ್ಲಿಯೂ ಶೈಲಿಯಲ್ಲಿಯೂ ಫ್ರೆಂಚ್ ಮಾದರಿಗಳನ್ನನು ಸರಿಸುವುದು, ಸುಲಲಿತವಾದ ಶೈಲಿ-ಇವು ಕರಮಜಿûನ್ನ ಮುಖ್ಯ ಯೋಜನೆಗಳು. ಈ ಚಳವಳಿ ರೂಸೊ ಪ್ರತಿಪಾದಿಸಿದ್ದ ನವಸೂಕ್ಷ್ಮಸಂವೇದನಾ ಪಂಥಕ್ಕೆ ಬೆಂಬಲ ನೀಡಿತು. ಇವನ ಅತ್ಯುತ್ತಮ ಕೃತಿ ರಷ್ಯ ದೇಶದ ಚರಿತ್ರೆ (1811). ಸತ್ತ್ವ ಪುರ್ಣವೂ ನಿರಾಡಂಬರವೂ ಆದ ತರ್ಕ ಇದನ್ನು ಉತ್ತಮ ಸಾಹಿತ್ಯಕೃತಿಯನ್ನಾಗಿ ಮಾಡಿದೆ. (ಎಲ್.ಎಸ್.ಎಸ್.)