ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರಿಬೇವು

ವಿಕಿಸೋರ್ಸ್ದಿಂದ

ಕರಿಬೇವು : ರೊಟೇಸೀ ಕುಟುಂಬದ ಮರಯ ಕೊನಿಗೆ ಎಂಬ ವೈಜ್ಞಾನಿಕ ಹೆಸರಿನ ಮರ. ಉಷ್ಣವಲಯದಲ್ಲೆಲ್ಲ ಪ್ರಸರಿಸಿದೆ. ಭಾರತದಲ್ಲಿ ಹಿಮಾಲಯದಿಂದ ಕನ್ಯಾಕುಮಾರಿಯವರೆಗೂ ಎಲ್ಲೆಡೆಗಳಲ್ಲೂ ಸ್ವಾಭಾವಿಕವಾಗಿ ಬೆಳೆಯುತ್ತದೆ. ಇದರ ಸುವಾಸನಾಯಕ್ತ ಎಲೆಗಳಿಗೊಸ್ಕರ ಇದನ್ನು ಬೆಳೆಸುತ್ತಾರೆ.

ಇದು ಸು. 20' ಎತ್ತರಕ್ಕೆ ಬೆಳೆಯುವ ಬಹುವಾರ್ಷಿಕ ಮರ. ಇದರ ತೊಗಟೆ ಕಗ್ಗಂದು ಅಥವಾ ಕಪ್ಪು ಬಣ್ಣದ್ದು. ಎಲೆಗಳು ಪರ್ಯಾಯವಾಗಿ ಜೋಡಣೆಗೊಂಡಿದ್ದು ಗರಿರೂಪದ ಸಂಯುಕ್ತ ಮಾದರಿಯವಾಗಿವೆ. ಒಂದೊಂದು ಎಲೆಯಲ್ಲೂ ಸು. 9-25 ಕಿರುಎಲೆಗಳಿವೆ (ಪರ್ಣಿಕೆ). ಇವನ್ನು ಬೆಳಕಿಗೆ ಎದುರಾಗಿ ಹಿಡಿದು ಪರೀಕ್ಷಿಸಿದರೆ ಅವುಗಳ ಅಲಗಿನ ಮೇಲೆಲ್ಲ ಸೂಕ್ಷ್ಮವಾದ ಚುಕ್ಕೆಗಳಂಥ ರಸಗ್ರಂಥಿಗಳನ್ನು ನೋಡಬಹುದು. ಈ ಗ್ರಂಥಿಗಳಲ್ಲಿ ಒಂದು ವಿಶಿಷ್ಟಬಗೆಯ ಚಂಚಲತೈಲವಿದೆ. ಇದರಿಂದಾಗಿ ಎಲೆಗಳು ಗಂಧಯುಕ್ತವಾಗಿವೆ. ಹೂಗಳು ದ್ವಿಲಿಂಗಿಗಳು; ರೆಂಬೆಗಳ ತುದಿಯಲ್ಲಿ ಹುಟ್ಟುವ ಮಧ್ಯಾರಂಭಿ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹೂಗಳು ಬಿಳಿಯಬಣ್ಣದವೂ ನವುರಾದ ವಾಸನೆಯುಳ್ಳವೂ ಆಗಿವೆ. ಪುಷ್ಪಪಾತ್ರೆ ಮತ್ತು ಪುಷ್ಪದಳ ಸಮೂಹ ತಲಾ ಐದೈದು ಪತ್ರಗಳನ್ನೂ ದಳಗಳನ್ನೂ ಒಳಗೊಂಡಿವೆ. ಕೇಸರಗಳು 10; ಎರಡು ಸುತ್ತುಗಳಲ್ಲಿ ಜೋಡಿತವಾಗಿವೆ. ಅಂಡಾಶಯ ಉಚ್ಚಸ್ಥಾನದ್ದು; ಅದರಲ್ಲಿ ಎರಡು ಕೋಣೆಗಳಿವೆ. ಫಲ ಗುಂಡಗಿನ ಅಥವಾ ಉದ್ದುದ್ದವಾದ ಬೆರ್ರಿ ಮಾದರಿಯದು. ಅದರ ಬಣ್ಣ ಊದಾಮಿಶ್ರಿತ ಕಪ್ಪು.

ಕರಿಬೇವು ತನ್ನ ಸುಗಂಧಪುರಿತ ಎಲೆಗಳಿಂದಾಗಿ ಬಹುಪ್ರಾಮುಖ್ಯ ಪಡೆದಿದೆ. ಎಲೆಗಳನ್ನು ಹಲವಾರು ಬಗೆಯ ಅಡಿಗೆಯ ಕೆಲಸಗಳಲ್ಲಿ ಉಪಯೋಗಿಸುವುದು ಎಲ್ಲರಿಗೂ ತಿಳಿದದ್ದೇ. ಎಲೆಗಳ ರಾಸಾಯನಿಕ ಸಂಯೋಜನೆ ಈ ರೀತಿ ಇದೆ: ತೇವಾಂಶ 66.3%; ಪ್ರೋಟೀನು 6.1%; ಕೊಬ್ಬು 1.0%; ಸಕ್ಕರೆ-ಪಿಷ್ಟದ ಅಂಶ 16.0%; ನಾರಿನ ಅಂಶ 6.4%; ಲವಣಾಂಶ 4.2%; ಹಾಗೂ ಪ್ರತಿ 100 ಗ್ರಾಂ. ಎಲೆಗಳಲ್ಲಿ 810 ಮಿಗ್ರಾಂ. ಕ್ಯಾಲ್ಸಿಯಂ, 600 ಮಿಗ್ರಾಂ. ರಂಜಕ. 3.1 ಮಿಗ್ರಾಂ. ಕಬ್ಬಿಣ, 12,600 ಐ. ಯು ಕ್ಯಾರೋಟೀನ್ (ಎ ಜೀವಾತು ರೂಪದಲ್ಲಿ), 4 ಮಿಗ್ರಾಂ, ಸಿ ಜೀವಾತು. ಇವಲ್ಲದೆ ಹಲವಾರು ಬಗೆಯ ಅಮೈನೋ ಅಮ್ಲಗಳೂ ಇವೆ. ಆಗ ತಾನೇ ಕೊಯ್ದ ಎಲೆಗಳನ್ನು ಅಸವೀಕರಣಗೊಳಿಸಿ (ಆವಿ ಬಟ್ಟಿಯಿಳಿಸುವಿಕೆ) ಒಂದು ಬಗೆಯ ಚಂಚಲ ತೈಲವನ್ನು ತೆಗೆಯಬಹುದು. ಶುದ್ಧಗೊಳಿಸಿದ ಈ ಎಣ್ಣೆ ಹಳದಿ ಬಣ್ಣದ್ದೂ ಸಂಬಾರದ ವಾಸನೆಯುಳ್ಳದ್ದೂ ಲವಂಗದ ಕಟುರುಚಿಯುಳ್ಳದ್ದೂ ಅಗಿದೆ. ಇದನ್ನು ಕೆಲವು ಬಗೆಯ ಸಾಬೂನುಗಳಿಗೆ ಕೊಡುವ ಸುಗಂಧ ದ್ರವ್ಯಗಳನ್ನು ಸ್ಥಿರೀಕರಣಗೊಳಿಸಲು ಬಳಸುತ್ತಾರೆ. ಎಲೆಗಳನ್ನು ಆಮಶಂಕೆ. ಅತಿಸಾರ, ವಾಂತಿ ಮುಂತಾದವನ್ನು ನಿಲ್ಲಿಸಲು ಉಪಯೋಗಿಸುವುದಲ್ಲದೆ ತರೆಚು ಗಾಯಗಳಿಗೂ ಬೊಕ್ಕೆಗಳಿಗೂ ಹಚ್ಚಲು ಬಳಸುತ್ತಾರೆ. ಬೇರು ಮತ್ತು ತೊಗಟೆಗಳನ್ನು ಶಕ್ತಿವರ್ಧಕ, ಜೀರ್ಣಕಾರಿ ಹಾಗೂ ವಾತಹರ ಔಷಧಿಗಳಾಗಿ ಉಪಯೋಗಿಸುತ್ತಾರೆ. ಇದರ ಚೌಬೀನೆ ಗಡುಸಾಗಿ ನಯವಾದ ಎಳೆಗಳ ವಿನ್ಯಾಸವನ್ನು ಹೊಂದಿದೆ. ಹಾಗೂ ದೀರ್ಘಕಾಲ ಬಾಳಿಕೆ ಬರುತ್ತದೆ. ಆದ್ದರಿಂದ ಇದನ್ನು ವ್ಯವಸಾಯದ ಉಪಕರಣಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.

ಕರಿಬೇವು ಸಸ್ಯವನ್ನು ಸಸ್ಯಗಳ ಸುತ್ತಲೂ ಬೇರಿನಿಂದ ಹೊರಟಿರುವ ಸಸಿಗಳಿಂದಲೂ ಬೀಜಗಳಿಂದಲೂ ವೃದ್ಧಿಮಾಡಬಹುದು. ಚೌಗುಪ್ರದೇಶಗಳಲ್ಲಿ ಇದರ ಬೇಸಾಯ ಮಾಡಲು ಸಾಧ್ಯವಿಲ್ಲ. ಸಸಿ ನಾಟಿಮಾಡಿದ ಅನಂತರ ಇದು ಸರಿಯಾಗಿ ಬೇರುಬಿಟ್ಟು ಚಿಗುರುವ ತನಕ ಎಚ್ಚರಿಕೆ ವಹಿಸಬೇಕು. ಸಸಿನೆಟ್ಟ 3-4 ವರ್ಷಗಳ ಅನಂತರ ಎಲೆಗಳನ್ನು ಕೊಯ್ಯುಬಹುದು. ಈ ಸಸ್ಯ ಬಹಳ ನಿಧಾನವಾಗಿ ಬೆಳೆಯುವ ಗುಣವುಳ್ಳದ್ದು. ಆದ್ದರಿಂದ ಎಳೆಯ ಸಸಿಯಾಗಿರುವಾಗ ಎಲೆ ಕೊಯ್ಯುಲು ಪ್ರಾರಂಭಿಸಿದರೆ ಬೆಳೆವಣಿಗೆ ನಿಂತುಹೋಗಿ ಗಿಡ ಸತ್ತುಹೋಗುವ ಸಾಧ್ಯತೆ ಹೆಚ್ಚು. (ಎಂ.ಎಚ್.ಎಂ.)