ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರಿಹಾವು

ವಿಕಿಸೋರ್ಸ್ದಿಂದ

ಕರಿಹಾವು : ಕೊಲ್ಯೂಬ್ರಿಡೀ ಕುಟುಂಬಕ್ಕೆ ಸೇರಿದ ಕಾಲ್ಯುಬರ್ ಕನ್ಸ್ಟ್ರಿಕ್ಟರ್ ಎಂಬ ಶಾಸ್ತ್ರೀಯ ಹೆಸರಿನ ಹಾವು. ಉತ್ತರ ಅಮೆರಿಕದಲ್ಲಿ ಇದು ಸಾಮಾನ್ಯ, ವಿಷರಹಿತ. ಇದರಲ್ಲಿ ಹಲವಾರು ಉಪಪ್ರಭೇದಗಳಿವೆ. ಇವುಗಳಲ್ಲಿ ಅಮೆರಿಕದ ಸಂಯುಕ್ತಸಂಸ್ಥಾನಗಳ ಮಧ್ಯಭಾಗದಲ್ಲಿ ಕಾಣಬರುವ ಬ್ಲೂ ರೇಸರ್ ಹಾಗೂ ಆಗ್ನೇಯ ಭಾಗದಲ್ಲಿ ಕಾಣಬರುವ ದಕ್ಷಿಣದ ಬ್ಲ್ಯಾಕ್ ರೇಸರ್ ಮುಖ್ಯವಾದುವು. ತೆಳು ಹಾಗೂ ನೀಳದೇಹದ ಈ ಹಾವು ಸು. 4-5 ಅಡಿ ಉದ್ದ ಬೆಳೆಯುತ್ತದೆ. ದೇಹದ ಮೇಲ್ಭಾಗ ಕಪ್ಪು, ತಳಭಾಗ ನಸುಬಿಳುಪು ಅಥವಾ ಹಳದಿ. ಬಾಯಿಯ ತಳಭಾಗ ಬಿಳಿಬಣ್ಣದ್ದಾಗಿದೆ. ಇದು ಬಹಳ ವೇಗವಾಗಿ ಚಲಿಸಬಲ್ಲುದಲ್ಲದೆ ಮರ ಹತ್ತುವುದಲ್ಲೂ ಈಜುವುದರಲ್ಲೂ ಪ್ರಾವೀಣ್ಯ ಪಡೆದಿದೆ. ಗಾಬರಿಗೊಂಡಾಗ ಬಾಲದ ತುದಿಯನ್ನು ಅಲುಗಾಡಿಸುತ್ತದೆ. ಕಪ್ಪೆ ಇತರ ಸಣ್ಣ ಗಾತ್ರದ ಹಾವುಗಳು, ಚಿಕ್ಕ ಸ್ತನಿಗಳು, ಹಕ್ಕಿಗಳು ಮೊಟ್ಟೆಗಳು ಇದರ ಆಹಾರ. ಇವು ವಸಂತ ಋತುವಿನಲ್ಲಿ ಕೂಡಿ 10-35 ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಯಿಡುವ ಕಾಲ ಮೇ-ಜುಲೈ, ಮೊಟ್ಟೆಗಳ ಮೇಲೆ ಸಣ್ಣ ಮರಳಿನಂಥ ಕಣಗಳಿಂದಾದ ಹೊದಿಕೆಯುಂಟು. 7-9 ವಾರಗಳಲ್ಲಿ ಮೊಟ್ಟೆಗಳೊಡೆದು ಮರಿಗಳು ಹೊರಬರುತ್ತವೆ. (ಕೆ.ಎಂ.ಎ.)