ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರೀಜೀರಿಗೆ

ವಿಕಿಸೋರ್ಸ್ದಿಂದ

ಕರೀಜೀರಿಗೆ : ರ್ಯಾನನ್ಕ್ಯುಲೇಸೀ ಕುಟುಂಬಕ್ಕೆ ಸೇರಿದ ನೈಜೆಲ ಸೇಟಿವ ಎಂಬ ಶಾಸ್ತ್ರೀಯ ಹೆಸರಿನ ಪುಟ್ಟಮೂಲಿಕೆ (ಬ್ಲ್ಯಾಕ್ ಕಮಿನ್). ಔಷಧೀಯ ಮಹತ್ತ್ವವುಳ್ಳ ಇದರ ಬೀಜಗಳಿಗಾಗಿ ಇದನ್ನು ಭಾರತದಲ್ಲಿ ಅಲ್ಲಲ್ಲಿ ಬೆಳೆಸುತ್ತಾರೆ. ಪಂಜಾಬ್, ಹಿಮಾಚಲಪ್ರದೇಶ ಬಿಹಾರ ಹಾಗೂ ಅಸ್ಸಾಂಗಳಲ್ಲಿ ಸ್ವಾಭಾವಿಕವಾಗಿಯೂ ಬೆಳೆಯುತ್ತದೆ.

ಸು. ಳಿ ಮೀ ಎತ್ತರಕ್ಕೆ ಬೆಳೆಯುವ ಏಕವಾರ್ಷಿಕ ಸಸ್ಯ ಇದು. ಪರ್ಯಾಯವಾಗಿ ಜೋಡಣೆಗೊಂಡಿರುವ ಇದರ ಎಲೆಗಳು 2.5-5.0 ಸೆಂಮೀ ಉದ್ದವಿದ್ದು ಉದ್ದುದ ಎಳೆಗಳಂಥ ಭಾಗಗಳಿಗೂ ಸೀಳಿವೆ. ಹೂಗಳು ಎಲೆಗಳ ಕಂಕುಳಲ್ಲಿ ಒಂಟೊಂಟಿಯಾಗಿ ಅರಳುತ್ತವೆ. ಇವಕ್ಕೆ ಉದ್ದವಾದ ತೊಟ್ಟುಗಳಿವೆ. ಇವುಗಳ ಬಣ್ಣ ತಿಳಿನೀಲಿ. ಒಂದೊಂದು ಹೂವಿನಲ್ಲೂ ಐದೈದು ಪುಷ್ಪಪತ್ರಗಳೂ ದಳಗಳೂ ಅಸಂಖ್ಯಾತ ಕೇಸರಗಳೂ ಐದು ಕಾರ್ಪೆಲುಗಳಿಂದಾದ ಉಚ್ಚಸ್ಥಾನದ ಅಂಡಾಶಯವೂ ಇವೆ. ಕಾರ್ಪೆಲುಗಳು ಬುಡಭಾಗದಲ್ಲಿ ಒಂದರೊಡನೊಂದು ಕೂಡಿಕೊಂಡಿರುವುದು ಈ ಸಸ್ಯದ ವೈಶಿಷ್ಟ್ಯ. ಬೀಜಗಳು ಮುಮ್ಮೂಲೆ ಯುಳ್ಳವೂ ಕಪ್ಪುಬಣ್ಣದವೂ ಆಗಿವೆ; ಇವುಗಳ ಹೊರಮೈ ಒರಟಾಗಿದೆ. ಬೀಜಗಳಲ್ಲಿ ಒಂದು ರೀತಿಯ ಹಳದಿಬಣ್ಣದ ಚಂಚಲತೈಲವಿದೆ. ಇದನ್ನು ಕೆಮ್ಮು ಮತ್ತು ಅಸ್ತಮಗಳಲ್ಲಿ ಉಪಯೋಗಿಸಬಹುದೆಂದು ಹೇಳಲಾಗಿದೆ. ಬೀಜಗಳಲ್ಲಿ ಎಣ್ಣೆಯೋಂದೇ ಅಲ್ಲದೆ ನೈಜೆಲಿನ್ ಎಂಬ ಕಹಿವಸ್ತುವೂ ಟ್ಯಾನಿಸ್, ರಾಳ, ಪ್ರೋಟೀನು, ಅಮೈನೋ ಆಮ್ಲಗಳು, ಸಾಪೊನಿನ್ ಮುಂತಾದ ಸಂಯುಕ್ತಗಳೂ ಇವೆ. ಬೀಜಗಳನ್ನು ವಾತಹರವಾಗಿಯೂ ಉತ್ತೇಜವಾಗಿಯೂ ಜಂತುನಾಶಕವಾಗಿಯೂ ಉಪಯೋಗಿಸುತ್ತಾರೆ. ಬೊಕ್ಕೆಗಳ ನಿವಾರಣೆಗೂ ಇವನ್ನು ಬಳಸುತ್ತಾರೆ. ಕೆಲವು ರೀತಿಯ ಬ್ಯಾಕ್ಟೀರಿಯಗಳನ್ನು ನಾಶಪಡಿಸುವ ಗುಣವೂ ಬೀಜಗಳಿಗಿದೆ. ಬೀಜಗಳನ್ನು ಉಣ್ಣೆ ಹಾಗೂ ಲಿನೆನ್ ಬಟ್ಟೆಗಳ ಮಧ್ಯೆ ಇಡುವುದರಿಂದ ಬಟ್ಟೆಗಳಿಗೆ ಹುಳುಗಳು ಹತ್ತುವುದನ್ನು ತಡೆಯಬಹುದೆಂದು ತಿಳಿದುಬಂದಿದೆ. (ಎಚ್.ಕೆ.ಎಂ.)