ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರ್ಕಿ, ಡಿ.ಎಸ್.

ವಿಕಿಸೋರ್ಸ್ದಿಂದ

ಕರ್ಕಿ, ಡಿ.ಎಸ್.: 1907-84. ಕನ್ನಡ ನವೋದಯ ಮಾರ್ಗದ ಕವಿ. ದುಂಡಪ್ಪ ಸಿದ್ದಪ್ಪ ಕರ್ಕಿ ಎಂಬುದು ಇವರ ಪೂರ್ಣ ನಾಮ. ಬೆಳಗಾಂವಿ ಜಿಲ್ಲೆಯ ಭಾಗೋಜಿ ಕೊಪ್ಪದಲ್ಲಿ ಜನಿಸಿದರು. ಇವರು ಮೂರು ವರ್ಷದವರಿರುವಾಗಲೇ ತಾಯಿಯನ್ನು ಕಳೆದುಕೊಂಡರು. ಅನಂತರ ಇವರು ಬೆಳೆದದ್ದು ಸೋದರಮಾವನ ಮನೆಯಲ್ಲಿ. ಬೆಲ್ಲದ ಬಾಗೇವಾಡಿಯಲ್ಲಿ ಪ್ರಾಥಮಿಕ ಶಿಕ್ಷಣ, ಬೆಳಗಾಂವಿಯ ಜಿ.ಎ.ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪಡೆದರು. ಕೊಲ್ಲಾಪುರದ ರಾಜಾರಾಮ ಕಾಲೇಜು, ಪುಣೆಯ ಫಗುರ್ಯ್‌ಸನ್ ಕಾಲೇಜು, ಧಾರವಾಡದ ಕರ್ನಾಟಕ ಕಾಲೇಜುಗಳಲ್ಲಿ ಓದಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕಾರವಾರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಜೀವನ ಆರಂಭಿಸಿದರು. ಕೆಲಕಾಲದಲ್ಲಿ ಕೆ.ಎಲ್.ಇ. ಸೊಸೈಟಿ ಸೇರಿದರು. ಜಿ.ಎ. ಪ್ರೌಢ ಶಾಲೆಯಲ್ಲಿ ಅಧ್ಯಾಪಕರಾದರು. ಅನಂತರ ಬೆಳಗಾಂವಿಯ ಲಿಂಗರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಕೆ.ಎಲ್.ಇ. ಸೊಸೈಟಿಯ ಹುಬ್ಬಳ್ಳಿಯ ಆಟ್ರ್ಸ್‌ ಕಾಲೇಜಿನ ಉಪಪ್ರಾಚಾರ್ಯರಾಗಿ, ಪ್ರಾಂಶುಪಾಲರಾಗಿ, ಕೆಲಕಾಲ ನರೇಗಲ್ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆಸಲ್ಲಿಸಿ ಹುಬ್ಬಳ್ಳಿಗೆ ಹಿಂದಿರುಗಿದರು. ದಕ್ಷ ಆಡಳಿತಗಾರರೆಂದೂ ಇವರು ಹೆಸರುಗಳಿಸಿದರು. ವಿದ್ಯಾರ್ಥಿಗಳನ್ನು ಸ್ನೇಹಿತರಂತೆ ಕಾಣುತ್ತಿದ್ದರು. ಕರ್ಕಿಯವರು ಸಹಜಮಾದುರ್ಯದ ಸಂವೇದನಾಶೀಲ ಮತ್ತು ಭಾವನಿಷವಿ ರಮ್ಯ ಕವನಗಳ ಮೂಲಕ ಕನ್ನಡ ನಾಡು ನುಡಿ ಸಂಸ್ಕೃತಿಯ ಉನ್ನತಮೌಲ್ಯಗಳನ್ನು ಉದಾತ್ತ ಆದರ್ಶಗಳನ್ನು ಹೃದ್ಯವಾಗಿ ಹಾಡಿದ ಭಾವಗೀತೆಯ ಕವಿ ಎಂದೇ ಪ್ರಸಿದ್ಧರಾಗಿದ್ದರು. ಪ್ರಕೃತಿ ಮತ್ತು ಜೀವನದ ಸಾತ್ವಿಕ ಸತ್ವ ಸೌಂದರ್ಯದಿಂದ ಅಗಾಧವಾಗಿ ಪ್ರಭಾವಿತರಾದ ಇವರು ಗದ್ಯಪದ್ಯವೆರಡರಲ್ಲೂ ತಮ್ಮ ವ್ಯಕ್ತಿ ವಿಶಿಷ್ಟ ಪ್ರತಿಭೆಯನ್ನು ಪ್ರದರ್ಶಿಸಿದರು. ಕಾವ್ಯ, ಪ್ರಬಂಧ, ಮಕ್ಕಳಸಾಹಿತ್ಯ ಮತ್ತು ಸಂಪಾದನೆ, ಸಂಶೋಧನೆಗೆ ಸಂಬಂಧಿಸಿದ ಒಟ್ಟು ಹನ್ನೊಂದು ಕೃತಿಗಳನ್ನು ಪ್ರಕಟಿಸಿದ್ದಾರೆ. ಆಧ್ಯಾತ್ಮಿಕ ಚಿಂತನೆಗಳನ್ನು ಸೌಂದರ್ಯಪ್ರಜ್ಞೆ ಮತ್ತು ಜೀವನಸಂಸ್ಕೃತಿ ಕುರಿತಾದ ಆರೋಗ್ಯಪೂರ್ಣ ವಿಚಾರಗಳನ್ನು ಬದುಕಿನ ಶುಚಿ ರುಚಿ ಮತ್ತು ಒಲವು ಚೆಲವನ್ನು ಕಲಾತ್ಮಕ ವಿನ್ಯಾಸದಲ್ಲಿ ಸುಕುಮಾರ ಶೈಲಿಯಲ್ಲಿ ಪಡಿಮೂಡಿಸಿರುವ ಇವರ ಕಾವ್ಯಪ್ರತಿಭೆ ಅನನ್ಯವಾದುದು. ನಕ್ಷತ್ರಗಾನ (1949), ಭಾವತೀರ್ಥ (1953), ಗೀತಗೌರವ (1968), ಕರಿಕೆ ಕಣಗಿಲು (1976), ನಮನ (1977) - ಇವು ಇವರ ಕವನ ಸಂಕಲನಗಳು. ಹಚ್ಚೇವು ಕನ್ನಡದ ದೀಪ, ಕರುನಾಡದೀಪ ಸಿರಿನುಡಿಯದೀಪ ಒಲವೆತ್ತಿ ತೋರುವ ದೀಪ ಎಂದು ಕನ್ನಡಿಗರ ಎದೆಯಾಳದ ಮಿಡಿತವನ್ನು ಕಾವ್ಯದ ಕೊರಳಲ್ಲಿ ಮಿಡಿದ ನಾಡಕವಿ ಇವರು. ಕವಿಯ ಜೀವನ ಪ್ರೀತಿ, ಪ್ರಕೃತಿ, ಕಲೆ ಮತ್ತು ಸಾಹಿತ್ಯ ಚಿಂತನೆಯ ಚತುರ್ಮುಖ ದರ್ಶನ ನೀಡುವ ಗದ್ಯಕೃತಿ ನಾಲ್ದೆಸೆಯನೋಟ (1952), ಸಾಹಿತ್ಯ ಸಂಸ್ಕೃತಿ ಶೃತಿ (1974) ಇವರ ಗದ್ಯಶೈಲಿಯ ಸೊಗಸು ಪ್ರಬಂಧ ಪ್ರತಿಭೆ ಮತ್ತು ಅನುವಾದ ಸಾಮರ್ಥ್ಯಕ್ಕೆ ಉತ್ತಮ ಉದಾಹರಣೆ. ಮಕ್ಕಳ ಶಿಕ್ಷಣ (1956) ಶಿಕ್ಷಣತಜ್ಞನೊಬ್ಬನ ಶೈಕ್ಷಣಿಕ ಕಾಳಜಿಗಳನ್ನು ಪ್ರಕಟಿಸಿರುವ ಕೃತಿ. ಬಣ್ಣದ ಚೆಂಡು, ತನನತೋಂನಂ ಶಿಶುಗೀತೆಗಳ ಸಂಕಲನಗಳು. ಕರ್ನಾಟಕದ ಅನುಭಾವಿ ಕವಿ ಶಿಶುನಾಳ ಶರೀಫರ ತತ್ವಪದಗಳ ಸಂಗ್ರಹ ಜನಪ್ರಿಯ ಪದಗಳು. ಇದು ಶರೀಫರ ಗೀತೆಗಳ ಆನುಭಾವಿಕ ಸಾಮಾಜಿಕ, ತಾತ್ತ್ವಿಕ ನೆಲೆಗಳ ಗಂಭೀರ ಪ್ರತಿಪಾದನೆ ಯನ್ನೊಳಗೊಂಡಿದೆ. ಕನ್ನಡ ಛಂದೋವಿಕಾಸ (1956) ಕನ್ನಡ ಛಂದಸ್ಸಿನ ಚರಿತ್ರೆ ಮತ್ತು ಸ್ವರೂಪವನ್ನು ಪ್ರಾಚೀನ ಮತ್ತು ಆಧುನಿಕ ಕಾವ್ಯ ಭಾಗಗಳ ಮೂಲಕ ವಿಶ್ಲೇಷಿಸುವ ಸಂಶೋಧನ ಮಹಾ ಪ್ರಬಂಧ. ಛಂದಶ್ಶಾಸ್ತ್ರದ ಗಂಭೀರ ಅಧ್ಯಯನಗಳು ವಿರಳವಾಗಿದ್ದ ಸಂದರ್ಭದಲ್ಲಿ ಛಂದಶ್ಶಾಸ್ತ್ರದ ಅಧ್ಯಯನಕ್ಕೆ ಅಧಿಕೃತ ಆಕರ ಗ್ರಂಥವಾಗಿದ್ದ ಕನ್ನಡ ಛಂದೋವಿಕಾಸ ಅಚ್ಚಗನ್ನಡದ ದೇಸಿ ಛಂದಸ್ಸನ್ನು ಕುರಿತು ನಡೆಸಿರುವ ವಿವೇಚನೆ ಮೌಲಿಕವಾದುದಾಗಿದೆ. ತ್ರಿಪದಿ, ಕಂದ, ರಗಳೆ, ಸಾಂಗತ್ಯ, ಷಟ್ಪದಿ, ಅಕ್ಕರ, ಚೌಪದಿ, ಏಳೆ ಇತ್ಯಾದಿ ಅಚ್ಚಗನ್ನಡ ಛಂದೋಲಯಗಳ, ಚಾರಿತ್ರಿಕ ಮತ್ತು ಕಲಾತ್ಮಕ ನೆಲೆಯ ಚರ್ಚೆ ಕರ್ಕಿಯವರ ವಿದ್ವತ್ ಪರಿಶ್ರಮ ಮತ್ತು ಸದಭಿರುಚಿಯ ಪ್ರತೀಕವಾಗಿದೆ. ಇವರ ಸಾಹಿತ್ಯಕ ಸಾಧನೆಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ (1972). ""ಕಾವ್ಯಗೌರವ"" ಎಂಬ ಸಂಭಾವನಾ ಗ್ರಂಥವನ್ನು ಇವರಿಗೆ ಅರ್ಪಿಸಲಾಗಿದೆ (1991). (ಎಸ್ಎಚ್ಎ.ಐ.)