ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರ್ಕ್ಯೂಲಿಯಾನಿಡೀ

ವಿಕಿಸೋರ್ಸ್ದಿಂದ

ಕರ್ಕ್ಯೂಲಿಯಾನಿಡೀ: ಗೋಧಿ, ಅಕ್ಕಿ ಹಿಟ್ಟು ಮುಂತಾದುವಕ್ಕೆ ಹತ್ತುವ ಕುಟ್ಟೆ ಹುಳುಗಳು ಅಥವಾ ವಾಡೆ ಹುಳುಗಳು ಎಂದು ಕರೆಯಲ್ಪಡುವ ಸೊಂಡಿಲು ಕೀಟಗಳ ಕುಟುಂಬ. ಇವು ಕೀಟವರ್ಗದ ಕೋಲಿಯಾಪ್ಟಿರ ಗಣಕ್ಕೆ ಸೇರಿವೆ. ಇತರ ಜೀರುಂಡೆಗಳೊಡೆನೆ (ಬೀಟಲ್ಸ್‌) ಹೋಲಿಕೆಯಿದ್ದರೂ ಕೆಲವು ಗುಣಲಕ್ಷಣಗಳಲ್ಲಿ ಇವು ಭಿನ್ನವಾಗಿವೆ. ಈ ಕುಟುಂಬದ ಕೀಟಗಳ ತಲೆಯ ಮುಂಭಾಗ ಕೊಕ್ಕಿನ ಅಥವಾ ಸೊಂಡಿಲಿನ ಹಾಗಿರುವುದರಿಂದ ಇವನ್ನು ಸೊಂಡಿಲು ಕೀಟಗಳು (ವೀವಿಲ್ಸ್‌) ಎಂದು ಕರೆಯುವುದುಂಟು. ಇವುಗಳಲ್ಲಿ ಹಲವಾರು ಜಾತಿಗಳಿವೆ. ವಿವಿಧ ಜಾತಿಗಳಲ್ಲಿನ ಸೊಂಡಿಲ ಗಾತ್ರ, ಆಕಾರ ಮತ್ತು ಉದ್ದಗಳಲ್ಲಿ ವೈವಿಧ್ಯವಿದೆ. ಅನೇಕ ಪ್ರಭೇದಗಳಲ್ಲಿ ಸೊಂಡಿಲು ಸಾಮಾನ್ಯವಾಗಿದೊಡ್ಡದು. ಕುಡಿಮೀಸೆ (ಆಂಟೆನ) ಸೊಂಡಿಲಿನ ಮಧ್ಯಪ್ರದೇಶದಿಂದ ಹುಟ್ಟುತ್ತದೆ. ಕೆಲವು ಬಗೆಯ ಕೀಟಗಳಲ್ಲಿ (ನಟ್ವೀವಿಲ್ಸ್‌) ಸೊಂಡಿಲು ಬಹಳ ತೆಳ್ಳಗೆ ಕೀಟದ ಉದ್ದದಷ್ಟು ನೀಳವಾಗಿದೆ. ಸೊಂಡಿಲು ಕೀಟಗಳು ಕಾಯಿ, ಹಣ್ಣು, ಮತ್ತು ಸಸ್ಯಕಾಂಡಗಳಲ್ಲಿ ಆಳವಾದ ರಂಧ್ರಗಳನ್ನು ಕೊರೆಯುತ್ತವೆ. ಇಂಥ ರಂಧ್ರಗಳಲ್ಲಿಯೇ ಹೆಣ್ಣು ಕೀಟ ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಗಳಿಂದ ಹೊರಬಂದ ಡಿಂಬಗಳು (ಲಾರ್ವ) ಸಾಮಾನ್ಯವಾಗಿ ಮೊಗ್ಗು, ಬೀಜ, ಕಾಯಿ ಮತ್ತು ಕಾಂಡಗಳ ಒಳಗೇ ಇದ್ದು ಅವನ್ನು ತಿಂದು ಬೆಳೆಯುತ್ತವೆ. ಸೊಂಡಿಲು ಕೀಟಗಳು ಗೆಣಸು, ಹತ್ತಿ, ಪ್ಲಮ್, ಚೆರ್ರಿ, ಪೀಚ್, ಸೇಬು ಮುಂತಾದ ಹಣ್ಣುಗಳನ್ನೂ ಉಗ್ರಾಣಗಳಲ್ಲಿ ಶೇಖರಣೆ ಮಾಡುವ ದವಸಗಳನ್ನೂ ತಿಂದು ಹಾಳುಮಾಡುತ್ತವೆ. ತೊಂದರೆಗೊಳಗಾದಾಗ ಈ ಕೀಟಗಳು ತಮ್ಮ ಕುಡಿಮೀಸೆ ಮತ್ತು ಕಾಲುಗಳನ್ನು ಮುದುಡಿ, ಚಲಿಸದೆ ನೆಲದ ಮೇಲೆ ಬಿದ್ದುಕೊಂಡಿದ್ದು ಸತ್ತಹಾಗೆ ನಟಿಸುತ್ತವೆ. ಕೆಲವಂತೂ ಬಣ್ಣದಲ್ಲಿ ಮತ್ತು ಆಕಾರದಲ್ಲಿ ಮರದ ತೊಗಟೆಯನ್ನೊ ಕಸಕಡ್ಡಿಗಳನ್ನೊ ಅನುಕರಿಸುತ್ತವೆ. ಚಲಿಸದೆ ಬಿದ್ದಿರುವಾಗ ಇವನ್ನು ಗುರುತಿಸುವುದು ಕಷ್ಟ. ಈ ಕುಟುಂಬದಲ್ಲಿ ಕೆಳಗೆ ಸೂಚಿಸಿರುವ 13 ಉಪಕುಟುಂಬಗಳಿವೆ. 1. ಸೈಲಾಡಿನೀ: ತೆಳುವಾದ ಉದ್ದನೆಯ ಇರುವೆಗಳಂತಿರುವ ಕುಟ್ಟೆ ಹುಳುಗಳು ಇದಕ್ಕೆ ಸೇರಿವೆ. ಇವುಗಳ ಡಿಂಬಗಳನ್ನು ಸಿಹಿಗೆಣಸು ರಂಧ್ರ ಹುಳು ಎನ್ನುತ್ತಾರೆ. ಇವು ಸಿಹಿಗೆಣಸನ್ನು ಕೊರೆದು ಬೇರುಗಳನ್ನೂ ಗಿಡಗಳನ್ನೂ ನಾಶಗೊಳಿಸುತ್ತವೆ. ಅನೇಕ ವೇಳೆ ಇವು ಗೆಣಸಿನ ಗೆಡ್ಡೆಯಲ್ಲಿದ್ದು ಗೆಣಸು ಮಾರುಕಟ್ಟೆಗೆ ಬಂದಾಗ ಪ್ರೌಢಾವಸ್ಥೆ ತಲುಪಿ ಹೊರಬರುತ್ತವೆ. 2. ಬೆಲಿನೀ: ಇದರ ಒಂದೇ ಒಂದು ಪ್ರಭೇದವಾದ ಇಕ್ಥಿಸಿರಸ್ ನೊವಬೊ ರೇಸಿಯಸ್ಸಿಸ್ ಎಂಬ ಕೀಟ ಓಕ್, ಹಿಕರಿ ಮತ್ತು ಬೀಚ್ ಮರಗಳ ಕೊಂಬೆ ಮತ್ತು ಎಲೆಗಳಲ್ಲಿರುತ್ತದೆ. ಇದರ ಡಿಂಬಗಳು ಕೊಂಬೆಗಳನ್ನು ಕೊರೆಯುತ್ತವೆ. ಇದರ ಉದ್ದ 12-18 ಮಿಮೀ. ಬಣ್ಣ ಮಿರುಗುವ ಕಪ್ಪು. 3. ರಿಂಖಿಟಿನೀ (ಸಿಂಬಿನೀ): ಈ ಕುಟುಂಬದ ಕೀಟಗಳ ಮ್ಯಾಂಡಿಬಲ್ನ ಹೊರ ಮತ್ತು ಒಳ ಅಂಚಿನ ಮೇಲೆ ಹಲ್ಲುಗಳಿರುವುದರಿಂದ ಇವನ್ನು ಹಲ್ಲು ಮೂಗಿನ ಸೊಂಡಿಲು ಕೀಟ ಎಂದು ಕರೆಯುವುದುಂಟು. ಇವುಗಳ ಉದ್ದ 1.5-6.5 ಮಿಮೀ. ಇವು ಸಾಧಾರಣವಾಗಿ ಕುಳ್ಳಾದ ಗಿಡಗಳ ಮೇಲಿರುತ್ತವೆ. ರಿಂಖೈಟಿನ್ ಬೈಕಲರ್ ಎಂಬ ಪ್ರಭೇದದ ಕೀಟಗಳು ಸಾಮಾನ್ಯ ವಾಗಿ ಗುಲಾಬಿಗಿಡಗಳಲ್ಲಿರುತ್ತವೆ. ಇದರ ಮೇಲ್ಮೈ ಕೆಂಪಾಗಿಯೂ ಕೆಳಭಾಗ ಕಪ್ಪಾಗಿಯೂ ಇರುತ್ತದೆ. ಮಿಕ್ಕ ಪ್ರಭೇದಗಳು ಮೊಗ್ಗು, ಕಾಯಿ ಮತ್ತು ಹಣ್ಣುಗಳಲ್ಲಿ ಮೊಟ್ಟೆಯಿಡುತ್ತವೆ. 4. ಅಟ್ಟೆಲಾಬಿನೀ: ರೂಢಿಯಲ್ಲಿ ಈ ಕುಟುಂಬದ ಕೀಟವನ್ನು ಎಲೆಸುರುಳಿ ಮಾಡುವ ಸೊಂಡಿಲು ಕೀಟ ಎನ್ನುತ್ತಾರೆ. ಮೊಟ್ಟೆಯನ್ನು ಎಲೆಯ ಮೇಲಿಟ್ಟ ಮೇಲೆ ಅದನ್ನು ಚಮತ್ಕಾರವಾಗಿ ಸುರುಳಿಸುತ್ತಿ ಎಲೆಯ ತೊಟ್ಟನ್ನು ಕಡಿದು ಅದನ್ನು ಕೆಳಗೆ ಬೀಳಿಸುತ್ತದೆ. ಮೊಟ್ಟೆಯೊಡೆದು ಹೊರಬರುವ ಡಿಂಬ ಎಲೆಯ ಒಳಭಾಗವನ್ನು ತಿಂದು ಬೆಳೆಯುತ್ತದೆ. ಕೀಟದ ಉದ್ದ 3-6ಮಿಮೀ. 5. ಆಕ್ಸಿಕೊರಿನಿನೀ (ಅಲ್ಲೊಕೊರಿನಿನೀ): ಇದರಲ್ಲಿ ಒಂದೇ ಒಂದು ಪ್ರಭೇದವಿದೆ. ಈ ಕುಟ್ಟೆಹುಳು ಆರೋರೂಟ್ ಗಿಡದಲ್ಲಿ ಜೀವಿಸುತ್ತದೆ. 6. ಟ್ರ್ಯಾಖಿಗೋನಿನೀ: ಈ ಕುಟುಂಬದ ಕೀಟಗಳು ನೆಲಗಪ್ಪೆ ಆಕಾರವಿರುವುದರಿಂದ ಇವಕ್ಕೆ ನೆಲಗಪ್ಪೆ ಸೊಂಡಿಲು ಕೀಟಗಳೆಂದು ಹೆಸರು. ಎಲೆಯ ಕೆಳಭಾಗದಲ್ಲೇ ಚಲಿಸುವುದು ಈ ಕೀಟಗಳ ವಿಶೇಷ ಗುಣ. 7. ಟೀರೋ ಕೋಲಿನೀ: ಇದಕ್ಕೆ ಸೇರಿದ ಕೀಟಗಳು ಮೊಟಕು ರೆಕ್ಕೆಯವು. ಸಣ್ಣ ಓಕ್ ಮರಗಳಲ್ಲಿ ಸಾಧಾರಣವಾಗಿ ಕಾಣಬರುತ್ತವೆ. 8. ಎಪಿಯೋನಿನೀ: ಈ ಕುಟುಂಬದ ಕೀಟಗಳು ಬಹಳ ಸಣ್ಣ ಗಾತ್ರದವು. ಉದ್ದ ಸುಮಾರು 4.5 ಮಿಮೀ ಅಥವಾ ಇನ್ನೂ ಕಡಿಮೆ. ಅನೇಕ ಪ್ರಭೇದಗಳು ಅವರೆ ಜಾತಿಯ ಸಸ್ಯಗಳಲ್ಲಿ ಕಾಣಬರುತ್ತವೆ. ಡಿಂಬಗಳು ಈ ಸಸ್ಯಗಳ ಬೀಜ, ಕೊಂಬೆ ಮತ್ತು ಇತರ ಭಾಗಗಳನ್ನು ಕೊರೆದು ಅವುಗಳಲ್ಲಿರುತ್ತವೆ. ಇನ್ನು ಕೆಲವು ಪ್ರಭೇದಗಳು ಬೇರೆ ಗಿಡಮರಗಳಲ್ಲಿರುವುದುಂಟು. 9. ಕರ್ಕ್ಯೂಲಿಯೋನಿನೀ: ಈ ಕುಟುಂಬದ ಸೊಂಡಿಲು ಕೀಟಗಳು ಕರ್ಕ್ಯೂಲಿಯಾನಿಡೀ ವರ್ಗಕ್ಕೆ ಸೇರಿದ ಜೀರುಂಡೆಗಳ ಪ್ರತಿರೂಪೀ ಉದಾಹರಣೆಗಳು. ಇವು ಅನೇಕ ರೀತಿಯಲ್ಲಿ ಉತ್ತಮ ಬೆಳೆಗಳ ಮತ್ತು ಹಣ್ಣಿನ ಮರಗಳ ಪಿಡುಗುಗಳಾಗಿದ್ದು ಹೆಚ್ಚಿನ ಪ್ರಾಮುಖ್ಯ ಪಡೆದಿವೆ. ಇವುಗಳಲ್ಲಿ ಕೆಲವನ್ನು ಇಲ್ಲಿ ತಿಳಿಸಿದೆ. ಉದಾ: ಕೋನೊಟ್ರೇಚಲಸ್ ನೆಸುಫಾರ್ ಎಂಬ ಪ್ರಭೇದ ಪ್ಲಮ್ ಹಣ್ಣಿನ ಕುಟ್ಟೆಹುಳು. ಇದು ಮಿಕ್ಕ ಕೆಲವು ಹಣ್ಣುಗಳಲ್ಲೂ ಪಿಡುಗಾಗಿರುವುದು. ಆನ್ತ್ರೊನೊಮಸ್ ಗ್ರಾಂಡಿಸ್ ಎಂಬ ಪ್ರಭೇದ ಹತ್ತಿಗಿಡಗಳ ಮೇಲೆ ವಾಸಿಸುವುದು. ಎಕಾರ್ನ್‌ ಮತ್ತು ಗಟ್ಟಿಕಾಯಿಗಳ (ನಟ್) ಕೀಟಗಳಲ್ಲಿ ನೀಳವಾದ ಸೊಂಡಿಲಿರುತ್ತದೆ. 10. ಥೆಸೆಸ್ಟರ್ನಿನೀ (ಬ್ರೈಸೆಪೈನೀ): ಇವು ಎಮ್ಮೆ ಮುಸುಡಿ ಕೀಟಗಳು. ದನಕರುಗಳು ಸೆಗಣಿ ಕೆಳಗಡೆ ಇವುಗಳ ವಾಸ. 11. ಕೊಸೊನಿನೀ: ಅಗಲವಾದ ಮೊಟಕು ಕೊಕ್ಕಿನ ಕೀಟಗಳು. 1.5-6.5 ಮಿಮೀ. ನಷ್ಟು ಉದ್ದವಿರುತ್ತವೆ. 12. ಓಟಯೊರಿಂಖಿನೀ: ಇವು ಕುರುಚಲು ಗಿಡಗಳಲ್ಲಿ ಅಥವಾ ನೆಲದಲ್ಲಿರುತ್ತವೆ. ಕೆಲವಂತೂ ಬಹಳ ಮುಖ್ಯವಾದ ಬೆಳೆಗಳ ಪಿಡುಗುಗಳು. 13. ಕ್ಯಾಲೆಂಡ್ರಿನೀ (ಬೆಲ್ ಬಗ್ಸ್‌ ಮತ್ತು ಕಾಳಿನ ಕೀಟಗಳು): ಇದರ ಪ್ರಭೇದಗಳು ಸಾಮಾನ್ಯವಾಗಿ ಪುಷ್ಟವಾಗಿ, ದುಂಡಾಗಿ ವಿವಿಧ ಗಾತ್ರದಲ್ಲಿರುವುವು. ರಿಂಕೊಪೊರಸ್ ಕೊಯನ್ಟೇಟಸ್ ಹಾಗೂ ರಿ. ಫೆರುಜಿನಿಯಸ್ ಎಂಬುವು 20-30 ಮಿಮೀ. ಉದ್ದವಿರುತ್ತವೆ. ಇವು ತೆಂಗಿನ ಜಾತಿಯ ಮರಗಳಲ್ಲಿರುವುವು. ಸೈಟೊಫೈಲಸ್ ಒರೈಜೆ ಎಂಬುವು ಅಕ್ಕಿ, ಗೋಧಿ ಮುಂತಾದ ಕಾಳುಗಳಲ್ಲಿರುವ ಸಣ್ಣ ಕುಟ್ಟೆ ಹುಳುಗಳು. ಇವು 3-4 ಮಿಮೀ. ಉದ್ದವಿರುವುವು. ಇವುಗಳ ಡಿಂಬಗಳು ಕಾಳುಗಳಲ್ಲಿ ಬೆಳೆಯುವುವು. (ಎನ್.ಬಿ.ಕೆ.;ಎನ್.ವಿ.ಎ.)