ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಲಘಟಗಿ

ವಿಕಿಸೋರ್ಸ್ದಿಂದ

ಕಲಘಟಗಿ : ಕರ್ನಾಟಕ ರಾಜ್ಯದ ಧಾರವಾಡ ಜಿಲ್ಲೆಯ ಪಶ್ಚಿಮ ಭಾಗದಲ್ಲಿ ೧೫ ಡಿಗ್ರಿ ೧೦' ಉ. ಅ. ಮತ್ತು ೭೪ ಡಿಗ್ರಿ ೫೫' ಪೂ. ರೇ. ದಲ್ಲಿರುವ ಒಂದು ಪಟ್ಟಣ. ಇದೇ ಹೆಸರಿನ ತಾಲ್ಲೂಕಿನ ಮುಖ್ಯಸ್ಥಳ. ಹುಬ್ಬಳ್ಳಿಯಿಂದ ೨೭ ಕಿಮೀ ಅಂತರದಲ್ಲಿ ಹುಬ್ಬಳ್ಳಿ ಧಾರವಾಡಗಳಿಂದ ಕಾರವಾರಕ್ಕೆ ಹೋಗುವ ಹೆದ್ದಾರಿಯ ಮೇಲೆ ಇದೆ. ಇದು ಈ ತಾಲ್ಲೂಕಿನಲ್ಲಿಯೇ ಅತಿ ದೊಡ್ಡ ಪಟ್ಟಣ. ವಿಸ್ತೀರ್ಣ ೧೬ ಚ.ಕಿಮೀ. ಜನಸಂಖ್ಯೆ ೧೪,೬೭೬ (೨೦೦೧). ಹತ್ತು ವರ್ಷಗಳ ಅವಧಿಯಲ್ಲಿ ಇದು ಮಲೆನಾಡಿನ ಹದ್ದಿನಲ್ಲಿರುವುದರಿಂದ ಈ ಜಿಲ್ಲೆಯ ಇತರ ಭಾಗಕ್ಕಿಂತ ಇಲ್ಲಿ ಸಾಮಾನ್ಯವಾಗಿ ಮಳೆ ಹೆಚ್ಚು (ವಾರ್ಷಿಕ ಸರಾಸರಿ ೮೮ಸೆಂಮೀ).

ಇಲ್ಲಿಯದು ಕಂದು ಬಣ್ಣ ಮಿಶ್ರಿತ ಮಸಾರಿ ಭೂಮಿ. ಬತ್ತ ಇಲ್ಲಿಯ ಮುಖ್ಯ ಬೆಳೆ. ಕೃಷಿ ಇಲ್ಲಿಯ ಮುಖ್ಯ ಕಸಬು. ಇತರ ಕಸಬುಗಳಲ್ಲೂ ಕೈಗಾರಿಕೆಗಳಲ್ಲೂ ತೊಡಗಿದವರು ಕಡಿಮೆ. ಇಲ್ಲಿ ಐದು ಬತ್ತದ ಗಿರಣಿಗಳಿವೆ. ಅವಲಕ್ಕಿ ಚುರಮುರಿಗಳನ್ನೂ ತಯಾರಿಸುವರು. ಕಲಘಟಗಿಯ ಅಕ್ಕಿ ರುಚಿಗೆ ಬಲು ಹೆಸರುವಾಸಿ. ಆದ್ದರಿಂದ ಅದಕ್ಕೆ ಬಹಳ ಬೇಡಿಕೆ ಇದೆ. ಅಕ್ಕಿಯನ್ನು ಬಹಳ ದೂರದ ಪ್ರದೇಶಗಳಿಗೆ ರವಾನಿಸುತ್ತಾರೆ. ಅರಣ್ಯ ಸಮೀಪವಾಗಿರುವುದರಿಂದ ಮರದ, ಬಿದಿರಿನ ಸರಕುಗಳನ್ನು ಇಲ್ಲಿ ತಯಾರಿಸುವರು. ಕಲಘಟಗಿಯ ಬಣ್ಣದ ಮರದ ತೊಟ್ಟಿಲುಗಳು ಒಂದು ಕಾಲಕ್ಕೆ ತುಂಬ ಪ್ರಸಿದ್ಧವಾಗಿದ್ದುವು. ಆದರೆ ಈಗ ಈ ಕೈಗಾರಿಕೆ ಅಷ್ಟಾಗಿ ನಡೆಯದಿದ್ದರೂ ಮೊದಲಿನ ಹೆಸರನ್ನು ಉಳಿಸಿಕೊಂಡಿದೆ. ಇಲ್ಲಿಯ ಮನೆಗಳು ಸಾಮಾನ್ಯವಾಗಿ ಹಂಚಿನವು. ಅಷ್ಟು ಎತ್ತರವಾಗಿರುವುದಿಲ್ಲ. ಗುರುವಾರ ಸ್ಥಾನಿಕ ಸಂತೆ ಜರುಗುತ್ತದೆ. ಪಟ್ಟಣದ ಸ್ಥಾನಿಕ ಆಡಳಿತಕ್ಕಾಗಿ ಒಂದು ಪಂಚಾಯತಿ ಇದೆ. ಪಟ್ಟಣದ ಜನಸಂಖ್ಯೆ ೧೪,೬೭೬ (೨೦೦೧).

ಇದೊಂದು ಇತಿಹಾಸ ಪ್ರಸಿದ್ಧ ಸ್ಥಳ. ಇಲ್ಲಿ ಐದು ಶಿಲಾಶಾಸನಗಳು ದೊರೆತಿದ್ದು ಅವುಗಳಲ್ಲಿ ಅತ್ಯಂತ ಪ್ರಾಚೀನವಾದದ್ದು ಚಾಳುಕ್ಯ ದೊರೆ ಆರನೆಯ ವಿಕ್ರಮಾದಿತ್ಯನಿಗೆ (೧೦೭೭-೧೧೨೭) ಸೇರಿದ್ದು. ಮರಾಠರ ಕಾಲದಲ್ಲಿ ಇದು ಸಾಮಂತರ ಕೇಂದ್ರವಾಗಿತ್ತು. ಕಲಘಟಗಿಯಲ್ಲಿ ೧೮ನೆಯ ಶತಮಾನದ ಮುಸ್ಲಿಂ ಸಂತ ರುಸ್ತುಂ ಶಹೀದನ ಗೋರಿಯಿದೆ. ಪ್ರತಿವರ್ಷ ಯುಗಾದಿಯ ಅನಂತರ ಇಲ್ಲಿ ಉರುಸು ನಡೆಯುತ್ತದೆ. (ಎಸ್.ವಿ.ಪಿ.ಎ.)