ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಲಾಂ ಅಬ್ದುಲ್, ಎ.ಪಿ.ಜೆ.

ವಿಕಿಸೋರ್ಸ್ದಿಂದ

ಕಲಾಂ ಅಬ್ದುಲ್, ಎ.ಪಿ.ಜೆ. (೧೯೩೧-.) : ಭಾರತ ಗಣರಾಜ್ಯದ ಮಾಜಿ ರಾಷ್ಟ್ರಪತಿ. ಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿ; ತತ್ತ್ವಜ್ಞ, ಭಾರತರತ್ನ ಪ್ರಶಸ್ತಿ ಪುರಸ್ಕೃತರು. ಇವರ ಪೂರ್ಣ ಹೆಸರು ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ಎಂದಾದರೂ ಅಬ್ದುಲ್ ಕಲಾಂ ಎಂದೇ ಪ್ರಸಿದ್ಧರಾದವರು. ಇವರು ತಮಿಳುನಾಡಿನ ರಾಮೇಶ್ವರಂನಲ್ಲಿ ೧೯೩೧ ಅಕ್ಟೋಬರ್ ೧೫ರಂದು ಜನಿಸಿದರು. ಬಡತನದ ಕುಟುಂಬದಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ಕಷ್ಟಸಹಿಷ್ಣುತೆಯನ್ನು ಮೈಗೂಡಿಸಿ ಕೊಂಡವರು. ಕಲಿಕೆ ಮತ್ತು ಗಳಿಕೆ ಇವರಿಗೆ ಚಿಕ್ಕಂದಿನಲ್ಲೇ ರೂಢಿಯಾಯಿತು. ಪತ್ರಿಕೆಗಳನ್ನು ಮನೆಮನೆಗೆ ಹಂಚುವ ಕಾಯಕ ಮಾಡಿ ಶಾಲೆಗೆ ಹೋಗುತ್ತಿದ್ದರು. ಇವರಿಗೆ ಗಣಿತವಿಜ್ಞಾನದ ಬಗ್ಗೆ ವಿಶೇಷ ಒಲವಿದ್ದುದನ್ನು ಅಧ್ಯಾಪಕರು ಗುರುತಿಸಿದ್ದರು.

ಮುಂದೆ ತಿರುಚಿರಾಪಳ್ಳಿಯಲ್ಲಿ ಕಾಲೇಜು ಶಿಕ್ಷಣಕ್ಕೆ ಸೇರಿ ೧೯೫೪ರಲ್ಲಿ ವಿಜ್ಞಾನದಲ್ಲಿ ಪದವಿ ಪಡೆದರು. ಇವರ ಆಸಕ್ತಿಯ ವಿಷಯವಾಗಿದ್ದ ಬಾಹ್ಯಾಕಾಶ ವಿಜ್ಞಾನದಲ್ಲಿ ವಿಶೇಷ ಅಧ್ಯಯನ ಮಾಡಲು ಚೆನ್ನೈನ ‘ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ ಸಂಸ್ಥೆ ಸೇರಿದರು. ಆ ವಿಷಯದಲ್ಲಿ ಪದವಿ ಪಡೆದು ಡಿಆರ್ಡಿಓ ಸಂಸ್ಥೆಯಲ್ಲಿ ಮುಖ್ಯ ವಿಜ್ಞಾನಿಯಾಗಿ ಸೇರಿದರು. ಏರೋ ಸ್ಪೇಸ್ ಎಂಜಿನಿಯರಿಂಗ್ನಲ್ಲಿ ಡಾಕ್ಟೊರೇಟ್ ಪದವಿ ಗಳಿಸಿದರು. ಇವರಿಗೆ ವಿವಿಧ ಯೋಜನೆಗಳಲ್ಲಿ ಕೆಲಸ ಮಾಡುವ, ವಿಕ್ರಮ್ ಸಾರಾಭಾಯಿಯಂತಹ ಪ್ರತಿಭಾವಂತ ವಿಜ್ಞಾನಿಗಳ ನೇತೃತ್ವದಲ್ಲಿ ಕೆಲಸ ಮಾಡುವ ಅವಕಾಶ ಒದಗಿಬಂತು. ೧೯೬೯ರಲ್ಲಿ ಕಲಾಂ ಅವರನ್ನು ಪ್ರಸಿದ್ಧ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೊಗೆ ವರ್ಗ ಮಾಡಲಾಯಿತು. ಇವರು ಅಲ್ಲಿ ರಾಷ್ಟ್ರದ ಪ್ರಥಮ ಉಪಗ್ರಹ ಉಡಾವಣಾವಾಹನದ (ಎಸ್ಎಲ್ವಿ) ರೂಪುರೇಷೆ ನಿರ್ಮಿಸುವಲ್ಲಿ ಭಾಗಿಯಾದರು. ೧೯೮೦ರ ಹೊತ್ತಿಗೆ ಇವರು ಪ್ರಧಾನವಾಗಿ ವಿನ್ಯಾಸಗೊಳಿಸಿದ್ದ ರಾಕೆಟ್ ಮೂಲಕ ರೋಹಿಣಿ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಲಾಯಿತು. ಪೋಖ್ರಾನ್ನಲ್ಲಿ ನಡೆಸಿದ ಅಣ್ವಸ್ತ್ರ ಪ್ರಯೋಗ ಕಾಲದಲ್ಲೂ ಕಲಾಂ ಅವರು ರಾಜಾರಾಮಣ್ಣ ಅವರ ಆಹ್ವಾನದ ಮೇರೆಗೆ ಸ್ಥಳದಲ್ಲಿ ಉಪಸ್ಥಿತರಿದ್ದರು. ಬ್ಯಾಲಿಸ್ಟಿಕ್ ಕ್ಷಿಪಣಿಗಳ ತಯಾರಿಕೆ; ಅಗ್ನಿ ಮತ್ತು ಪೃಥ್ವಿ ಕ್ಷಿಪಣಿಗಳ ಸಿದ್ಧತೆ- ಈ ಕಾರ್ಯಗಳಲ್ಲೂ ಇವರ ಪಾತ್ರ ದೊಡ್ಡದು. ೧೯೯೨-೧೯೯೯ರ ವರೆಗೂ ಭಾರತದ ಪ್ರಧಾನಮಂತ್ರಿಗಳ ಪ್ರಧಾನ ವೈಜ್ಞಾನಿಕ ಸಲಹೆಗಾರರಾಗಿ, ರಕ್ಷಣಾ ಇಲಾಖೆಯ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಹಿರಿಮೆ ಇವರದು. ಇವರು ಅಣುವಿಜ್ಞಾನಿ, ರಾಕೆಟ್ ವಿಜ್ಞಾನಿ ಹಾಗೂ ಬಾಹ್ಯಾಕಾಶ ತಜ್ಞರಾಗಿ ದೇಶವಿದೇಶಗಳಲ್ಲಿ ಮನ್ನಣೆ ಪಡೆದಿದ್ದಾರೆ. ದೇಶೀಯ ಮತ್ತು ವಿದೇಶಿ ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನ ಸಂಸ್ಥೆಗಳು ಇವರಿಗೆ ಗೌರವ ಡಾಕ್ಟೊರೇಟ್ ಪದವಿಗಳನ್ನು ಮತ್ತು ಉನ್ನತ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಭಾರತದ ಪ್ರತಿಷ್ಠಿತ ಪ್ರಶಸ್ತಿಗಳಾದ ಪದ್ಮಭೂಷಣ (೧೯೮೧), ಪದ್ಮವಿಭೂಷಣ (೧೯೯೦) ಹಾಗೂ ಭಾರತರತ್ನ (೧೯೯೭) ಪ್ರಶಸ್ತಿಗಳಿಗೆ ಇವರು ಭಾಜನರಾಗಿ ರಾಷ್ಟ್ರದ ಹೆಮ್ಮೆ ಎನಿಸಿದ್ದಾರೆ.

ಅಬ್ದುಲ್ ಕಲಾಂ ಅವರನ್ನು ಭಾರತದ ಗಣರಾಜ್ಯದ ಹನ್ನೊಂದನೆಯ ರಾಷ್ಟ್ರಪತಿಯಾಗಿ ಆರಿಸಲಾಯಿತು. ಇವರು ೨೦೦೨ರ ಜುಲೈ ೨೫ ರಿಂದ ೨೦೦೭ ಜುಲೈ ೨೪ರ ವರೆಗೆ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ್ದರು. ಸರಳತೆ, ಪ್ರಾಮಾಣಿಕತೆ, ಮತ್ತು ಮೇಧಾವಿತನದ ಸಾಕಾರದಂತಿರುವ ಕಲಾಂ ಅವರು ರಾಷ್ಟ್ರಪತಿ ಹುದ್ದೆಯ ಘನತೆಯನ್ನು ಹೆಚ್ಚಿಸಿದರು. ಜನಸಾಮಾನ್ಯರ ರಾಷ್ಟ್ರಪತಿ ಎಂಬ ಕೀರ್ತಿಗೆ ಪಾತ್ರರಾದರು. ಸ್ವತಃ ಬ್ರಹ್ಮಚಾರಿ ಆದ ಇವರಿಗೆ ಮಕ್ಕಳೆಂದರೆ ಬಹು ಪ್ರೀತಿ. ಮಕ್ಕಳೊಂದಿಗೆ ಬೆರೆತು ಉಪಯುಕ್ತ ಸಲಹೆ ಸೂಚನೆ ನೀಡುವುದು ಇವರ ಪ್ರಿಯ ಹವ್ಯಾಸ. ರಾಷ್ಟ್ರಪತಿ ಹುದ್ದೆಯಿಂದ ವಿರಮಿಸಿದ ಅನಂತರವೂ ಇವರು ಜನಪ್ರಿಯ ಧುರೀಣರು ಮತ್ತು ವಿಜ್ಞಾನಿಯಾಗಿ ಕಂಗೊಳಿಸುತ್ತಿದ್ದಾರೆ. ಇವರು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹತ್ತಾರು ಗ್ರಂಥಗಳನ್ನು ರಚಿಸಿದ್ದಾರೆ. ‘ವಿಂಗ್ಸ್‌ ಆಫ್ ಫೈರ್’ ಎಂಬುದು ಇವರ ಆತ್ಮಕಥೆ. ಇವರು ತಮ್ಮ ‘ಇಂಡಿಯಾ ಮೈ ಡ್ರೀಮ್’, ‘ಇಂಡಿಯಾ ೨೦೨೦’ ಎಂಬ ಗ್ರಂಥಗಳಲ್ಲಿ ಭವ್ಯ ಭಾರತ ನಿರ್ಮಾಣದ ಬಗ್ಗೆ ರೂಪುರೇಷೆಗಳನ್ನು ಹಾಕಿಕೊಟ್ಟಿದ್ದಾರೆ. ‘ಮೈ ಜರ್ನಿ’, ‘ಟಾರ್ಗೆಟ್ ತ್ರಿ ಬಿಲಿಯನ್’- ಇವು ಇವರ ಇತ್ತೀಚಿನ ಕೃತಿಗಳು. ಅಪ್ರತಿಮ ದೇಶಭಕ್ತರೂ ಉತ್ತಮ ವಾಗ್ಮಿಯೂ ಆಗಿರುವ ಕಲಾಂ ಅವರು ಈಗಲೂ ದೇಶ ವಿದೇಶಗಳಲ್ಲಿ ಸಂಚರಿಸುತ್ತ ಜ್ಞಾನ-ವಿಜ್ಞಾನ ಪ್ರಸಾರದಲ್ಲಿ ತಮ್ಮ ಸಹಾಯಹಸ್ತ ನೀಡುತ್ತಿದ್ದಾರೆ. (ಡಿ.ಎಸ್.ಜೆ.)