ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಲ್ಯಾಣಸ್ವಾಮಿ

ವಿಕಿಸೋರ್ಸ್ದಿಂದ

ಕಲ್ಯಾಣಸ್ವಾಮಿ: ೧೮೩೭ರಲ್ಲಿ ಕೊಡಗಿನ ಸಿಂಹಾಸನಕ್ಕೆ ಉತ್ತರಾಧಿಕಾರಿ ಗಳೆಂದು ಸಾರಿಕೊಂಡು ಬ್ರಿಟಿಷರ ವಿರುದ್ಧ ಹೋರಾಡಿದ ಕಲ್ಯಾಣಪ್ಪ ಅಥವಾ ಕಲ್ಯಾಣಸ್ವಾಮಿ ಎಂಬ ಹೆಸರಿನ, ಒಬ್ಬರ ಅನಂತರ ಇನ್ನೊಬ್ಬರಂತೆ ಬಂದ ಇಬ್ಬರು ವ್ಯಕ್ತಿಗಳು. ಇವರು ಕಲ್ಯಾಣಬಸವ ಮತ್ತು ಪುಟ್ಟಬಸವ ಎಂಬಿಬ್ಬರು ಜಂಗಮರು. ಇಬ್ಬರೂ ೧೮೩೫ರಲ್ಲಿ ಮೊದಲು ತಾನು ಕೊಡಗು ಸಿಂಹಾಸನಕ್ಕೆ ಹಕ್ಕುದಾರನೆಂದು ಘೂೕಷಿಸಿ ಕೊನೆಗೆ ಬ್ರಿಟಿಷರಿಗೆ ಸೆರೆಯಾಳಾದ ಅಪರಂಪಾರನ ಆಪ್ತ ಅನುಯಾಯಿಗಳು. ಅಪರಂಪಾರ ಬ್ರಿಟಿಷರಿಂದ ತಪ್ಪಿಸಿಕೊಂಡು ಕಡಬದಿಂದ ಮಂಜರಾಬಾದಿಗೆ ಹೊರಟಾಗ ಇವರಿಬ್ಬರೂ ವೇಷ ಮರೆಸಿಕೊಂಡು ಕೊಡ್ಲಿಪೇಟೆಗೆ ಹೋದರು.

೧೮೩೫ರ ಅಂತ್ಯದಲ್ಲಿ ಕೊಡಗು ರಾಜ್ಯದಲ್ಲಿದ್ದ ಪುತ್ತೂರು ಮತ್ತು ಸುಳ್ಯ ತಾಲ್ಲೂಕುಗಳು ದಕ್ಷಿಣ ಕನ್ನಡ ಜಿಲ್ಲೆಯ ಕಲೆಕ್ಟರನ ಅಧಿಕಾರಕ್ಕೆ ವರ್ಗಾಯಿಸಲ್ಪಟ್ಟಾಗ ಅಲ್ಲಿನ ಜನರಲ್ಲಿ ಬೆಳೆದ ಅತೃಪ್ತಿಯನ್ನು ಬಂಡವಾಳ ಮಾಡಿಕೊಂಡು ಕಲ್ಯಾಣಬಸವ ತಾನು ಕೊಡಗಿನ ಪದಚ್ಯುತ ರಾಜ ಚಿಕ್ಕವೀರರಾಜೇಂದ್ರನ ದೊಡ್ಡತಂದೆ ಅಪ್ಪಾಜಿರಾಜನ ಎರಡನೆಯ ಮಗ ನಂಜುಂಡರಸನೆಂದು ಹೇಳಿಕೊಂಡ. ಆಗ ಇವನ ಅನುಯಾಯಿಗಳು ಇವನನ್ನು ಕಲ್ಯಾಣಸ್ವಾಮಿಯೆಂದು ಕರೆದರು. ೧೮೩೬ನೆಯ ಡಿಸೆಂಬರಿನಲ್ಲಿ ಕಲ್ಯಾಣಸ್ವಾಮಿ ಸೋಮವಾರಪೇಟೆ ತಾಲ್ಲೂಕಿನ ಗಡಿನಾಡು ಉಮ್ಮತ್ತು ನಾಡುಗಳಿಗೆ ಬಂದ. ಆದರೂ ಕೊಡಗಿನ ಇತರ ಭಾಗಗಳಲ್ಲಿ ತನಗೆ ಸಹಾಯ ಸಿಗಲಾರದೆಂದು ತಿಳಿದು ಅಲ್ಲಿಂದ ದಕ್ಷಿಣಕನ್ನಡ ಜಿಲ್ಲೆಗೆ ಹೋಗಲುದ್ಯುಕ್ತನಾದ. ಇವನು ನೆಟ್ಟಗೆ ಅಲ್ಲಿಗೆ ಹೋದರೆ ಬ್ರಿಟಿಷ್ ಸೈನಿಕರ ಕೈಗೆ ಬೀಳಬಹುದೆಂಬ ಹೆದರಿಕೆಯಿಂದ ಗಡಿನಾಡು ಉಮ್ಮತ್ತುನಾಡಿನ ಜನರು ಇವನನ್ನು ಗುಟ್ಟಾಗಿ ಮಲಬಾರಿನ ವೈನಾಡಿಗೆ ತಲಪಿಸಿದರು. ಆದರೆ ಅಷ್ಟರಲ್ಲಿ ಕ್ಯಾಪ್ಟನ್ ಲೀ ಹಾರ್ಡಿಗೆ ತಿಳಿದು ಇವನನ್ನು ಸೆರೆಹಿಡಿಯಲು ತನ್ನ ಸೈನಿಕರನ್ನು ಕಳುಹಿಸಿದ. ಈ ಮಧ್ಯೆ ವೈನಾಡಿಗೆ ಹೋಗಿದ್ದ ಕಲ್ಯಾಣ ಸ್ವಾಮಿ ವೇಷ ಬದಲಾಯಿಸಿ ಉತ್ತರ ಮಲಬಾರಿನ ಬೈತೂರನ್ನು ತಲಪಿದ್ದ. ಲೀ ಹಾರ್ಡಿಯ ಸೈನಿಕರು ೧೮೩೭ನೆಯ ಜನವರಿ ಆದಿಭಾಗದಲ್ಲಿ ಇವನನ್ನು ಸೆರೆಹಿಡಿದರು. ಮೈಸೂರಿನಲ್ಲಿ ವಿಚಾರಣೆಯಾಯಿತು. ಕಲ್ಯಾಣಸ್ವಾಮಿಗೆ ಯಾವ ಶಿಕ್ಷೆ ವಿಧಿಸಲ್ಪಟ್ಟಿತು ಎಂದು ತಿಳಿದಿಲ್ಲ. ಮೊದಲನೆಯ ಕಲ್ಯಾಣಸ್ವಾಮಿಯ ಕಥೆ ಇಲ್ಲಿಗೆ ಮುಗಿಯಿತು.

ಈ ಕಲ್ಯಾಣಸ್ವಾಮಿ ಸೆರೆಹಿಡಿಯಲ್ಪಟ್ಟರೂ ದಕ್ಷಿಣ ಕನ್ನಡದ ಅಮರಸುಳ್ಯ ಮಾಗಣೆಗಳ ಜನರು ಬ್ರಿಟಿಷರ ವಿರೋಧವಾದ ಯುದ್ಧದ ಯೋಜನೆಯನ್ನು ಬಿಡಲಿಲ್ಲ. ಇವನು ಸೆರೆಯಾದ ವಿಷಯ ಹೆಚ್ಚಿನ ಜನರಿಗೆ ಗೊತ್ತಿರಲಿಲ್ಲ. ಆದುದರಿಂದ ಕಲ್ಯಾಣಸ್ವಾಮಿಯ ಅನುಯಾಯಿಗಳು ಕೊಡಗಿನ ಸಿಂಹಾಸನಕ್ಕೆ ಅಪ್ಪಾಜಿ ಅರಸನ ಎರಡನೆಯ ಮಗನ ಹಕ್ಕನ್ನು ಬಹಿರಂಗವಾಗಿ ಸ್ಥಾಪಿಸುವುದಕ್ಕೆ ಕೊಡಗಿನಲ್ಲಿ ೧೮೩೭ರ ಮಾರ್ಚ್ ೫ನೆಯ ತಾರೀಖು ಶಿವರಾತ್ರಿಯ ದಿವಸದಲ್ಲೂ ಅಮರಸುಳ್ಯದ ಸೀಮೆಗಳಲ್ಲಿ ಏಪ್ರಿಲ್ ೬ನೆಯ ತಾರೀಖು ಯುಗಾದಿ ದಿವಸದಲ್ಲೂ ದಂಗೆಯೇಳುವುದೆಂದು ನಿಶ್ಚಯಿಸಿದರು. ಇದಕ್ಕೆ ಕಲ್ಯಾಣಸ್ವಾಮಿಯ ಬದಲು ಇನ್ನೊಬ್ಬ ವ್ಯಕ್ತಿಯನ್ನು ಅಪ್ಪಾಜಿ ಅರಸನ ಮಗನೆಂದು ಜನರ ಮುಂದಿಡಬೇಕಾಗಿದ್ದಿತು.

ಅಮರಸುಳ್ಯ ಸೀಮೆಗಳಲ್ಲಿ ಬ್ರಿಟಿಷರ ವಿರೋಧ ಚಳವಳಿಯಲ್ಲಿ ಮುಖ್ಯಸ್ಥನಾಗಿದ್ದ ಕೆದಂಪಾಡಿ ರಾಮೇಗೌಡನೆಂಬವನು ಮೊದಲು ಕಲ್ಯಾಣಸ್ವಾಮಿಯ ಜತೆಯಲ್ಲಿದ್ದ ಕೊಡಗಿನ ಏಳುಸಾವಿರ ಸೀಮೆಯ ಪುಟ್ಟಬಸವನೆಂಬವನನ್ನು ಇದಕ್ಕೆ ಆರಿಸಿ ಬೆಳ್ಳಾರೆ ಕೋಟೆಗೆ ಕರೆದುಕೊಂಡು ಹೋಗಿ ಅಲ್ಲಿ ಹಾಕಿದ್ದ ಚಪ್ಪರದ ಅಡಿಯಲ್ಲಿ ಸಿಂಹಾಸನದ ಮೇಲೆ ಕುಳ್ಳಿರಿಸಿದ. ಇವನೇ ಕಲ್ಯಾಣಸ್ವಾಮಿ ಅಥವಾ ನಂಜುಂಡರಸ, ಕೊಡಗು ಅಮರಸುಳ್ಯಗಳ ರಾಜ ಎಂದು ಸೀಮೆಯವರಿಗೆಲ್ಲ ತಿಳುಹಿಸಿದ. ಎರಡು ಮೂರು ಸಾವಿರ ಸಶಸ್ತ್ರಜನ ಇವನನ್ನು ಕೂಡಿಕೊಂಡರು. ಮರುದಿವಸ ಕಲ್ಯಾಣಸ್ವಾಮಿಯ ಹೆಸರಿನಲ್ಲಿ ನಿರೂಪಗಳನ್ನು ಬರೆಯಿಸಿ ಅವುಗಳ ಪ್ರತಿಗಳನ್ನು ಚೆಂಬು ಪೆರಾಜೆಗಳ ಪಾರ್ಪತಿಗಾರರಿಗೂ ಮಂಜುರಾಬಾದು ಸೀಮೆಯ ಪಟೇಲರಿಗೂ ತಾವುನಾಡು, ಟೇಂಗುನಾಡು, ಗಡಿನಾಡುಗಳ ಪಾರ್ಪತಿಗಾರರಿಗೂ ದಿವಾನ್ ಪೊನ್ನಪ್ಪನಿಗೂ ಕಳುಹಿಸಿದರು. ೧೮೩೭ನೆಯ ಮಾರ್ಚ್ ೩೧ರಲ್ಲಿ ಈ ನಿರೂಪದ ಒಂದು ಪ್ರತಿ ಕೊಡಗಿನ ಸೂಪರಿಂಟೆಂಡೆಂಟನಿಗೂ ತಲಪಿ ಅವನಿಗೆ ಬಂಡಾಯದ ಸುಳುಹು ಸಿಕ್ಕಿತು. ಒಂದೆರಡು ದಿನಗಳಲ್ಲೆ ಕೆದಂಪಾಡಿ ರಾಮೇಗೌಡ ಅಲ್ಲಿದ್ದ ಇತರ ಮುಖಂಡರನ್ನು ಸುಬೇದಾರರನ್ನಾಗಿ ನೇಮಿಸಿ ಅವರನ್ನು ಕೆಲವು ಜನರೊಡನೆ ಆ ಸೀಮೆಯ ಬೇರೆ ಬೇರೆ ಸ್ಥಳಗಳಿಗೆ ಕಳುಹಿಸಿದ. ತಾನು ಕಲ್ಯಾಣಸ್ವಾಮಿಯನ್ನೂ ಸೈನಿಕರನ್ನೂ ಕರೆದುಕೊಂಡು ಪುತ್ತೂರಿಗೆ ಹೊರಟ. ದಾರಿಯಲ್ಲಿ ಇವನ ಸಂಗಡಿಗರು ಒಬ್ಬ ಬ್ರಿಟಿಷ್ ಅಧಿಕಾರಿಗೆ ಸೇರಿದ್ದ ಏಳೆಂಟು ಕುದುರೆಗಳನ್ನು ಹಿಡಿದರು. ಧರ್ಮಸ್ಥಳದ ಮಂಜಯ್ಯಹೆಗ್ಗಡೆ ತನ್ನಲ್ಲಿದ್ದ ಎರಡು ಪಿsರಂಗಿಗಳನ್ನು ಕೊಟ್ಟರು. ಇತರ ಅನೇಕರು ವಿವಿಧ ರೀತಿಯಲ್ಲಿ ಸಹಾಯ ನೀಡಿದರು.

ಕಲ್ಯಾಣಸ್ವಾಮಿ ಮತ್ತು ಸಂಗಡಿಗರು ಪುತ್ತೂರನ್ನು ತಲಪಿದಾಗ ಸಣ್ಣ ತುಕಡಿಯೊಡನೆ ಅಲ್ಲಿಗೆ ಬಂದಿದ್ದ ಮಂಗಳೂರಿನ ಕಲೆಕ್ಟರ್ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದರು. ಆದರೆ ಸುದ್ದಿ ತಿಳಿದ ಕಲೆಕ್ಟರ್ ಓಡಿಹೋದ.

ಕಲ್ಯಾಣಸ್ವಾಮಿ ಪುತ್ತೂರನ್ನು ಸುಲಿಗೆ ಮಾಡಿ ಪಾಣೆಮಂಗಳೂರಿಗೆ ಹೋದ. ಅಲ್ಲಿ ನಂದಾವರದ ಲಕ್ಕಪ್ಪ ಬಂಗರಸ ಇವನ ಜೊತೆ ಸೇರಿಕೊಂಡ. ಆ ಹೊತ್ತಿಗೆ ದೊಡ್ಡದಾಗಿ ಬೆಳೆದಿದ್ದ ಸಮೂಹದೊಡನೆ ಕಲ್ಯಾಣಸ್ವಾಮಿ ಬಂಟ್ವಾಳಕ್ಕೆ ತೆರಳಿ ಪೇಟೆಯನ್ನು ಸುಲಿಗೆ ಮಾಡಿ ಮಂಗಳೂರಿಗೆ ಹೋದ. ಇವನು ಮಂಗಳೂರನ್ನು ತಲಪುವಷ್ಟರಲ್ಲಿ ಅಲ್ಲಿದ್ದ ಇಂಗ್ಲಿಷ್ ಅಧಿಕಾರಿಗಳು ಕಣ್ಣಾನೂರಿಗೆ ಓಡಿಹೋಗುವುದಕ್ಕೆ ಹಡಗನ್ನು ಕಾಯುತ್ತಿದ್ದರು. ಕಲ್ಯಾಣಸ್ವಾಮಿ ಅಲ್ಲಿ ಸೆರೆಮನೆಯ ಖೈದಿಗಳನ್ನು ಬಿಡಿಸಿ ತಾಲ್ಲೂಕು ಖಜಾನೆಯನ್ನು ಒಡೆದು ಹಣವನ್ನು ದೋಚಿದ. ಅಲ್ಲಿದ್ದ ಇಂಗ್ಲಿಷ್ ಉದ್ಯೋಗಸ್ಥರ ಮನೆಗಳಿಗೆ ಬೆಂಕಿ ಕೊಡಿಸಿದ. ಮಂಗಳೂರಿನಲ್ಲಿ ತನ್ನ ಬಾವುಟವನ್ನೇರಿಸಿ ಹದಿಮೂರು ದಿವಸಗಳಿದ್ದ. ಆದರೆ ಅಷ್ಟರಲ್ಲಿ ತಲಚೇರಿ, ಕಣ್ಣಾನೂರುಗಳಿಂದ ಇಂಗ್ಲಿಷರ ಸೈನ್ಯಗಳು ಮಂಗಳೂರನ್ನು ತಲಪಿದವು. ಸರಿಯಾದ ಆಯುಧಗಳಿಲ್ಲದ ಕಲ್ಯಾಣಸ್ವಾಮಿಯ ಜನ ಹೆದರಿ ಓಡಿ ಹೋದರು. ಕಲ್ಯಾಣಸ್ವಾಮಿಯೂ ಸುಳ್ಯಕ್ಕೆ ಓಡಿಬಂದ.

ಕಲ್ಯಾಣಸ್ವಾಮಿ ಮಂಗಳೂರಿಗೆ ಹೋದಾಗ ಇವನ ಸಂಗಡಿಗರು ಕೊಡಗನ್ನು ಹಿಡಿಯಬೇಕೆಂದು ಸನ್ನಾಹಮಾಡಿದ್ದರೂ ಕೊಡಗಿನಲ್ಲಿ ದಿವಾನರುಗಳಾಗಿದ್ದ ಚಪ್ಪುದಿರ ಪೊನ್ನಪ್ಪ ಮತ್ತು ಅಪ್ಪಾರಂಡ ಬೋಪು ಬ್ರಿಟಿಷರ ಆಳಿಕೆಗೆ ಬೆಂಬಲ ಕೊಟ್ಟಿದ್ದರಿಂದ ಸಾಧ್ಯವಾಗಲಿಲ್ಲ. ಪ್ರತಿಯಾಗಿ ಅವರು ಈ ದಂಗೆಯನ್ನು ಅಡಗಿಸಲು ಅಮರಸುಳ್ಯ ಸೀಮೆಗಳಿಗೆ ಬಂದು ಸುಳ್ಯದ ಕೋಟೆಪೇಟೆಗಳನ್ನು ಹಿಡಿದುಕೊಂಡು ಕಲ್ಯಾಣಸ್ವಾಮಿ ಬೆಳ್ಳಾರೆಯಲ್ಲಿರುವನೆಂಬ ವರ್ತಮಾನವನ್ನು ಕೇಳಿ ಬೆಳ್ಳಾರೆಗೆ ಹೋದರು. ಅಷ್ಟರಲ್ಲಿ ಕಲ್ಯಾಣಸ್ವಾಮಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಲಪಿದ್ದ. ಅಲ್ಲಿದ್ದ ಇಂಗ್ಲಿಷ್ ಸೈನ್ಯದ ಕಣ್ಣು ತಪ್ಪಿಸಿ ಮರೆಯಾದ. ಈ ವರ್ತಮಾನವನ್ನು ತಿಳಿದು ಈಸ್ಟ್‌ ಇಂಡಿಯ ಕಂಪನಿ ಸರ್ಕಾರ ಕಲ್ಯಾಣಸ್ವಾಮಿಯನ್ನು ಹಿಡಿದುಕೊಟ್ಟವರಿಗೆ ಹತ್ತು ಸಾವಿರ ರೂಪಾಯಿಗಳ ಬಹುಮಾನವನ್ನು, ಇವನ ಸಂಗಡಿಗರನ್ನು ಹಿಡಿದುಕೊಟ್ಟವರಿಗೆ ಐದು ಸಾವಿರ ರೂಪಾಯಿಗಳ ಬಹುಮಾನಗಳನ್ನು ಕೊಡುವುದಾಗಿ ಪ್ರಕಟಿಸಿತು. ಕಲ್ಯಾಣಸ್ವಾಮಿ ವೇಷ ಮರೆಸಿಕೊಂಡು ತನ್ನ ಊರನ್ನು ತಲುಪಿದ್ದ. ಇದನ್ನು ಅರಿತ ಅಲ್ಲಿನ ಕೆಲವು ಜನ ಹಣದ ಆಸೆಗಾಗಿ ಬ್ರಿಟಿಷರಿಗೆ ಸುದ್ದಿ ನೀಡಿದರು. ಕಲ್ಯಾಣಸ್ವಾಮಿ ಸೆರೆಸಿಕ್ಕಿದ.

ಆಗ ಕಲ್ಯಾಣಸ್ವಾಮಿ ತಾನು ಶನಿವಾರಸಂತೆಯ ಹತ್ತಿರದ ಹೆಮ್ಮನಿ ಗ್ರಾಮದ ಬೇಸಾಯಗಾರ, ಅಲ್ಲಿಗೆ ಕೆದಂಪಾಡಿ ರಾಮೇಗೌಡನ ಜನ ಬಂದು ತನ್ನನ್ನು ಅಮರಸುಳ್ಯಕ್ಕೆ ಕರೆದುಕೊಂಡು ಹೋಗಿ ಅಲ್ಲಿ ತನ್ನನ್ನು ಕೊಡಗಿನ ದೊರೆಯೆಂದು ಇತರರಿಗೆ ಹೇಳಿ ದಂಗೆಯೆಬ್ಬಿಸಿದರು, ತನ್ನ ಹುಟ್ಟು ಹೆಸರು ಬಸಪ್ಪ, ದೊಡ್ಡವನಾದಮೇಲೆ ತನ್ನನ್ನು ಪುಟ್ಟಬಸವ ಅಥವಾ ಮರಿಬಸವ ಎಂದು ಊರಿನವರು ಕರೆಯುತ್ತಿದ್ದರು ಎಂದು ಹೇಳಿಕೆ ನೀಡಿದನೆಂದು ಬ್ರಿಟಿಷ್ ದಾಖಲೆಗಳು ತಿಳಿಸುತ್ತವೆ.

ಮಂಗಳೂರಿನಲ್ಲಿ ಬ್ರಿಟಿಷ್ ಸೈನ್ಯಾಧಿಕಾರಿಗಳು ವಿಚಾರಣೆ ನಡೆಸಿ ಮರಣದಂಡನೆ ವಿಧಿಸಿದರು. ಕಲ್ಯಾಣಸ್ವಾಮಿ, ಲಕ್ಕಪ್ಪ ಬಂಗರಸು ಮತ್ತು ಇನ್ನು ಕೆಲವು ಮುಖಂಡರೊಡನೆ ಮಂಗಳೂರಿನ ಬಿಕ್ರಾನಕಟ್ಟೆ ಪದವಿನ ಹತ್ತಿರ ಗಲ್ಲಿಗೇರಿಸಲ್ಪಟ್ಟ. (ಡಿ.ಎನ್.ಕೆ.)