ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕವಿಸಮಯ

ವಿಕಿಸೋರ್ಸ್ದಿಂದ

ಕವಿಸಮಯ : ಕವಿಗಳು ತಮ್ಮ ಕಲ್ಪನಾ ವಿಲಾಸವನ್ನು ಪ್ರದರ್ಶಿಸುವುದಕ್ಕಾಗಿ ಲೋಕಪ್ರಸಿದ್ಧವೂ ಶಾಸ್ತ್ರಸಂಗತವೂ ಅಲ್ಲದ ಕೆಲವು ವಿಷಯಗಳನ್ನು ಊಹಿಸಿಕೊಂಡು ಪಾರಂಪರ್ಯವಾಗಿ ಪ್ರಯೋಗಿಸುತ್ತ ಬಂದಿದ್ದಾರೆ. ಇದನ್ನೇ ಕವಿಸಮಯ, ಕವಿ ಸಂಪ್ರದಾಯ, ಕವಿಗಳ ಮಾಮೂಲು ಪದ್ಧತಿ ಎನ್ನುವರು.

ಅಮೂರ್ತ ಭಾವನೆಗಳಿಗೆ ಮೂರ್ತಸ್ವರೂಪ ಕೊಡುವುದು ಒಂದು ಬಗೆಯ ಕವಿಸಮಯ. ಉದಾಹರಣೆಗೆ_ಮಹಾಪುರುಷರ ಕೀರ್ತಿ ಧವಳವಾಗಿದೆ ಎನ್ನುವುದು. ಅದು ಅವರ ಸುತ್ತ ಪ್ರಭಾವಲಯವೊಂದನ್ನು ಸೃಷ್ಟಿಸಿಕೊಳ್ಳುತ್ತದೆಂದು ವರ್ಣಿಸುವುದು. ಕೋಪ ಕ್ರೋಧಾರುಣ ಜಲ, ಕಗ್ಗತ್ತಲೆ ಸೂಚೀ ಭೇದ್ಯ ತಮಿಸ್ರ, ಸೂಜಿಯಿಂದ ಚುಚ್ಚುವಷ್ಟು ದಟ್ಟ ಎಂದು ಬಣ್ಣಿಸುವುದು. ಸದಸದ್ವಿವೇಕ, ವಿರಹಿಗಳ ಶೃಂಗಾರ ಮುಂತಾದ ವರ್ಣನೆಗಳಿಗೆ ಜನರ ನಂಬಿಕೆಯ ಆಧಾರದ ಮೇಲೆ ಕೆಲವೊಂದು ಉಪಮೆಗಳನ್ನು ಕವಿಗಳು ಕಾವ್ಯಜಗತ್ತಿನಲ್ಲಿ ಸೃಷ್ಟಿಸಿಕೊಂಡಿದ್ದಾರೆ: ನೀರಕ್ಷೀರ ವಿಭಜನ ಶಕ್ತಿ ಹಂಸಕ್ಕಿದೆಯೆಂಬ ಭಾವನೆ, ಚಕ್ರವಾಕ ಪಕ್ಷಿಮಿಥುನ ಹಗಲೆಲ್ಲ ವಿಹರಿಸುತ್ತಿದ್ದು ರಾತ್ರಿ ವಿರಹದಿಂದ ಗೋಳಿಡುತ್ತದೆಂಬ ವಿಚಾರ ಈ ಬಗೆಯ ಕವಿಸಂಕೇತಗಳು.

ಪ್ರಕೃತಿ ವರ್ಣನೆ ಕುರಿತಾದ ಮತ್ತೊಂದು ಬಗೆಯ ಕವಿಸಮಯವುಂಟು. ನದಿಗಳಲ್ಲಿ ಹಂಸಗಳು, ತಾವರೆ, ಕನ್ನೈದಿಲೆ ಹೂಗಳು ಮುಂತಾದವು ಇವೆಯೆಂದು ವರ್ಣಿಸುವುದು. ಬೆಟ್ಟಗಳಲ್ಲಿ ನಾನಾಬಗೆಯ ರತ್ನಗಳಿವೆ ಎಂಬ ಕಲ್ಪನೆ, ಆನೆಯ ಕುಂಭಸ್ಥಳ, ಸರ್ಪಗಳ ಹೆಡೆಗಳು ಮತ್ತು ಸಮುದ್ರಗಳಲ್ಲಿ ಮುತ್ತು ರತ್ನಗಳಿವೆ ಎಂಬ ವರ್ಣನೆ_ಮುಂತಾದುವು ಪ್ರಕೃತಿವರ್ಣನೆಗೆ ಅಲೌಕಿಕ ಸೌಂದರ್ಯವನ್ನು ಚೆಲುವನ್ನು ಕೊಡತಕ್ಕಂಥವು.

ಇದೇ ರೀತಿ ವರ್ಣನಾಸೌಕರ್ಯಕ್ಕಾಗಿ ಮಲಯಪರ್ವತದಲ್ಲಿ ಮಾತ್ರ ಶ್ರೀಗಂಧವಿರುವುದೆಂದೂ ಶುಕ್ಲಪಕ್ಷದ ರಾತ್ರಿಯೆಂದ ಕೂಡಲೇ ತಿಥಿ ಯಾವುದಾದರೂ ಸರಿಯೆ ಅಮಲಜ್ಯೋತ್ಸ್ನಾ ಸಂಕ್ರಾಂತ ರಜನಿಯೆಂದೂ ಕನ್ನೈದಿಲೆ ರಾತ್ರಿ ಮಾತ್ರ ಅರಳುವುದೆಂದೂ ಕೋಗಿಲೆ ವಸಂತದಲ್ಲಿ ಮಾತ್ರ ಕೂಗುವುದೆಂದೂ ಚಕೋರಪಕ್ಷಿ ಚಂದ್ರನ ಬೆಳದಿಂಗಳನ್ನೇ ಕುಡಿಯುವುದೆಂದೂ ಮುತ್ತು ತಾಮ್ರಪರ್ಣಿ ನದಿಯಲ್ಲಿ ಮಾತ್ರ ದೊರೆಯುವುದೆಂದೂ ಚಾತಕ ಮಳೆನೀರನ್ನು ಮಾತ್ರ ಕುಡಿಯುವುದೆಂದೂ ಮಾಡಿಕೊಂಡಿರುವ ಕವಿಸಂಪ್ರದಾಯಗಳು ಮತ್ತೊಂದು ಗುಂಪಿನವು.

ಈ ಎಲ್ಲ ಬಗೆಯ ಕವಿಸಮಯಗಳೂ ಕವಿಕಲ್ಪನೆಯ ಮೂಸೆಯಲ್ಲಿ ಪುಟಗೊಂಡು ನೂರಾರು ಅಲಂಕಾರಗಳಿಗೆ ಆಶ್ರಯವಾಗಿ ಕಾವ್ಯದಲ್ಲಿ ಸೌಂದರ್ಯದಾಯಕವಾಗುತ್ತವೆ. ಕವಿಯಾದವ ಪೂರ್ವಕವಿ ಪ್ರಯುಕ್ತವಾದ ಈ ಬಗೆಯ ಕವಿ ಸಮಯಗಳನ್ನು ಪರಿಚಯ ಮಾಡಿಕೊಳ್ಳಬೇಕೆಂಬುದೂ ಕವಿಶಿಕ್ಷೆಯ ವಿಷಯಗಳಲ್ಲೊಂದು.

ಕವಿಸಮಯಗಳ ಸೂಚನೆ ವಾಮನನ ಗ್ರಂಥದಲ್ಲಿ ಬಂದರೂ ಇದನ್ನು ವಿವರವಾಗಿ ನಿರೂಪಿಸಿದ ಕೀರ್ತಿ ರಾಜಶೇಖರನದು. ಆತನ ಕಾವ್ಯಮೀಮಾಂಸೆಯನ್ನು ಅನುಸರಿಸಿಯೇ ಸಂಸ್ಕೃತದಲ್ಲಿ ಹೇಮಚಂದ್ರ, ಕನ್ನಡದಲ್ಲಿ ನಾಗವರ್ಮ ಮುಂತಾದವರು ತಂತಮ್ಮ ಗ್ರಂಥಗಳಲ್ಲಿ ಕವಿಸಮಯದ ಬಗ್ಗೆ ಬರೆದಿದ್ದಾರೆ. ಆದರೆ ವಾಲ್ಮೀಕಿಯಲ್ಲೇ ಎಷ್ಟೋ ಕವಿ ಸಮಯಗಳನ್ನು ಕಾಣಬಹುದಾಗಿದೆ. (ಸಿ.ಜಿ.ಪಿ.)