ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಡು ಕಾಸಿ ಕಣಗಿಲೆ

ವಿಕಿಸೋರ್ಸ್ದಿಂದ

ಕಾಡು ಕಾಸಿ ಕಣಗಿಲೆ

ಅಪೋಸೈನೇಸೀ ಕುಟುಂಬಕ್ಕೆ ಸೇರಿದ ಗಿಡ. ಶಾಸ್ತ್ರನಾಮ ತೆವೀಷಿಯ ನಿರಿಫೋಲಿಯ, ಕಣಗಿಲು, ಬೆಪ್ಪಾಲೆ ಮುಂತಾದ ಗಿಡಗಳೂ ಇದೇ ಕುಟುಂಬಕ್ಕೆ ಸೇರಿವೆ. ಇದಕ್ಕೆ ಸಂಸ್ಕøತದಲ್ಲಿ ಅಶ್ವಘ್ನ, ಅಶ್ವಹ, ಹರಿ ಪ್ರಿಯ, ಕರವೀರ ಮುಂತಾದ ಹೆಸರುಗಳಿವೆ. ಹಚ್ಚ ಕಣಗಿಲು ಎಂದೂ ಕರೆಯುತ್ತಾರೆ. ಇದು ನಿತ್ಯ ಹರಿದ್ವರ್ಣದ ದೊಡ್ಡ ಪೊದರುಗಿಡ. ಕೆಲವು ಕಡೆಗಳಲ್ಲಿ ಚಿಕ್ಕ ಮರವಾಗಿಯೂ ಬೆಳೆಯುತ್ತದೆ. ಇದರ ಮೂಲಸ್ಥಾನ ದಕ್ಷಿಣ ಅಮೆರಿಕ. ಭಾರತದ ಆದ್ಯಂತ ಸ್ವಾಭಾವಿಕವಾಗಿ ಬೆಳೆಯುತ್ತದೆ. ಗಿಡದಲ್ಲಿ ಹಾಲು ಬರುತ್ತದೆ. ಎಲೆಗಳು ಉದ್ದ ಮತ್ತು ನೀಳವಾಗಿವೆ. ಹೂಗಳ ಬಣ್ಣ ಹಳದಿ, ಆಕಾರ ಗಂಟೆಯಂತೆ. ದಳಗಳ ಮೇಲೆ ದಳರೋಮಗಳು (ಕೊರೋನಾ) ಬೆಳೆದಿರುತ್ತದೆ. ಕೇಸರಗಳು ದಳಕೊಳವೆಯ ಗಂಟಲಲ್ಲಿ ಒಟ್ಟುಗೂಡಿವೆ. ಶಲಾಕಾಗ್ರ ಲಿಂಗಾಕಾರವಾಗಿದೆ. ಕಾಯಿಯ ಉದ್ದ 3 ಸೆಂಮೀ., ಅಗಲ 3.8 ಸೆಂಮೀ. ಇದರಲ್ಲಿ 4 ಬೀಜಗಳಿವೆ. ಕಾಯಿಗೆ ದುಂದಾಡ ಮೂಲೆಗಳಿವೆ.

ಗಿಡ ಬಹಳ ಕಹಿ. ಇದರ ಹಾಲು ವಿಷ. ಆಗಾಗ ಬಿಟ್ಟು ಬರುವ ಜ್ವರಕ್ಕೆ ಗಿಡದ ತೊಗಟೆಯನ್ನು ಔಷಧಿಯಾಗಿ ಉಪಯೋಗಿಸುತ್ತಾರೆ. ಬೀಜಗಳು ಸಹ ವಿಷಪೂರಿತವಾದವು. ಮುಂಡರು ಹಂದಿ ಮತ್ತು ನರಿಗಳನ್ನು ಸಾಯಿಸಲು ಬೀಜಗಳನ್ನು ವಿಷವಾಗಿ ಉಪಯೋಗಿಸುತ್ತಾರೆ. ಇವುಗಳಿಂದ ತೆಗೆದ ಎಣ್ಣೆಗೆ ಭೇಧಿ ಔಷಧಿಯಾಗಿ ಬಳಕೆ ಉಂಟು.

ಕಾಡು ಕಾಸಿಕಣಗಿಲೆ ಗಿಡದಿಂದ ಥೆವಿಟಿನ್, ಥೆವಿಟಾಕ್ಸಿನ್, ನಿರಿಫೋಲಿನ್, ಅಸಿಟೈಲ್ ಮುಂತಾದ ರಾಸಾಯನಿಕ ಔಷಧಿಗಳನ್ನು ಬೇರ್ಪಡಿಸಿದ್ದಾರೆ. ಥೆವಿಟಿನ್ ಮುಂತಾದ ಔಷಧಿ ಹೃದ್ರೋಗಗಳಿಗೆ ಬಹಳ ಪರಿಣಾಮಕಾರಿ ಎಂದು          ತಿಳಿದುಬಂದಿದೆ. ಮೂಲರೋಗ, ತೊನ್ನು, ಚರ್ಮರೋಗಗಳಿಗೂ ಈ ಗಿಡದಿಂದ ಔಷಧಿಗಳನ್ನು ತಯಾರಿಸುತ್ತಾರೆ.

 

(ಎಂ.ಸಿ.ಆರ್.)