ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಯಿಧೂಪ

ವಿಕಿಸೋರ್ಸ್ದಿಂದ

ಕಾಯಿಧೂಪ

ಕೆನೇರಿಯಮ್ ಸ್ಟ್ರಿಕ್ಟಮ್ ಎಂಬ ಶಾಸ್ತ್ರೀಯ ಹೆಸರುಳ್ಳ ದೊಡ್ಡಗಾತ್ರದ ಚೆಲುವಾದ ಮರ. ಬರ್ಸೆರೇಸೀ ಕುಟುಂಬಕ್ಕೆ ಸೇರಿದೆ. ಪಶ್ಚಿಮ ಘಟ್ಟಗಳ 5000' ಎತ್ತರದಲ್ಲಿನ ದಟ್ಟವಾದ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಮಂಡಧೂಪ ಇದರ ಪರ್ಯಾಯ ನಾಮ. ಇಂಗ್ಲಿಷಿನಲ್ಲಿ ಇದರ ಹೆಸರು ಬ್ಲಾಕ್ ಡಮ್ಮಾರ್ ಟ್ರೀ. ಇದರ ಕಾಂಡ ನೇರ. ಬಣ್ಣ ಬಿಳಿ. ಎಲೆಗಳು ಸಂಯುಕ್ತಮಾದರಿಯವು; ಜೋಡಣೆ ಪರ್ಯಾಯ ಮಾದರಿಯದು. ಎಲೆಗಳು ಎಳೆಯವಾಗಿದ್ದಾಗ ಅಚ್ಚಹಳದಿ ಬಣ್ಣದವಾಗಿದ್ದು ಬರಬರುತ್ತ ಕೆಂಪು ಬಣ್ಣಕ್ಕೆ ತಿರುಗುತ್ತವೆ. ಹೂಗಳು ಭಿನ್ನಲಿಂಗಿಗಳು ಅಥವಾ ದ್ವಿಲಿಂಗಿಗಳು ; ಎಲೆಗಳ ಕಂಕುಳಲ್ಲೋ ಇಲ್ಲವೆ ರೆಂಬೆಗಳ ತುದಿಯಲ್ಲೋ ಇರುವ ಸಂಕೀರ್ಣಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಪುಷ್ಪಪತ್ರಗಳು 3, ದಳಗಳು 3, ಕೇಸರುಗಳು 6. ಅಂಡಾಶಯ ಉಚ್ಚಸ್ಥಾನದ್ದು. ಫಲ ಅಷ್ಟಿಫಲ ಮಾದರಿಯದು.

 ಕಾಯಿಧೂಪದ ಕಾಂಡದಿಂದ ಒಂದು ಬಗೆಯ  ಹೊಳೆಯುವ ಕಪ್ಪುಬಣ್ಣದ ರಾಳ ಒಸರುತ್ತದೆ. ಇದನ್ನು ಮೆರುಗೆಣ್ಣೆ, ಸೀಸೆಗಳ ಮುಚ್ಚಳವನ್ನು ಬಂಧಿಸುವ ಅರಗು ಮುಂತಾದವುಗಳ ತಯಾರಿಕೆಯಲ್ಲೂ ದೋಣಿಗಳ ಹಲಗೆಗಳ ಸಂದನ್ನು ನೀರು ಸೋರದಂತೆ ಮುಚ್ಚಲೂ ಉಪಯೋಗಿಸುತ್ತಾರೆ. ಕಾಂಡದ ಮೇಲೆ ಚಾಕುವಿನಿಂದ ಗಾಯಮಾಡಿ, ಮರದ ಬುಡದ ಸುತ್ತ ಬೆಂಕಿಯಿಡುತ್ತಾರೆ. ಇದರಿಂದ ತೊಗಟೆ ಮತ್ತು ಹೊರಪದರ ಸುಟ್ಟುಹೋಗಿ ಸುಮಾರು 2 ವರ್ಷಗಳ ಅನಂತರ ಗಾಯಮಾಡಿದ ಸ್ಥಳದಿಂದ ರಾಳ ಒಸರಲಾರಂಭಿಸುತ್ತದೆ. ಪ್ರತಿವರ್ಷವೂ ಸುಮಾರು 6 ತಿಂಗಳು ಕಾಲ ಈ ರಾಳ ಹೊರಬರುತ್ತದೆ. ಒಂದು ಮರದಿಂದ 10 ವರ್ಷಕಾಲ ರಾಳವನ್ನು ಪಡೆಯಬಹುದು. ಗಾಳಿಯ ಸಂಪರ್ಕಕ್ಕೆ ಬಂದ ಒಡನೆ ಇದು ಅರೆಪಾರದರ್ಶಕವಾದ ಹೊಳೆಯುವ ಕಪ್ಪುಬಣ್ಣದ ಗಾಜಿನಂಥ ಗಟ್ಟಿವಸ್ತುವಾಗುತ್ತದೆ. ಕಾಯಿಧೂಪದ ಚೌಬೀನೆ ಸಾಧಾರಣ ಗಟ್ಟಿಯಾದುದೂ ಭಾರವಾದುದೂ ಆಗಿದೆ. ಇದರ ಬಣ್ಣ ಹೊಳೆಯುವ ಬೂದಿ ಮಿಶ್ರಿತ ಬಿಳುಪು, ಕೊಯ್ಯಲು ಸುಲಭ. ಆದರೆ ಹೆಚ್ಚು ಬಾಳಿಕೆ ಬರುವುದಿಲ್ಲ. ಇದನ್ನು ಬೆಂಕಿಪೆಟ್ಟಿಗೆ, ಹಲಗೆಗಳು, ಪ್ಲೈವುಡ್ ಮುಂತಾದವನ್ನು ಮಾಡಲು ಬಳಸುತ್ತಾರೆ.

 

(ಎ.ಕೆ.ಎಸ್.)