ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾರ್ನ್ವಾಲಿಸ್, ಲಾರ್ಡ್

ವಿಕಿಸೋರ್ಸ್ದಿಂದ

ಕಾರ್ನ್‍ವಾಲಿಸ್, ಲಾರ್ಡ್

 1738-1805: ಪ್ರಥಮ ಮಾಕ್ರ್ವಿಸ್ ಬ್ರಿಟಿಷ್ ದಂಡನಾಯಕ ಮತ್ತು ಆಡಳಿತಗಾರ. 1786 ರಿಂದ 1793ರ ವರೆಗೆ ಭಾರತದ ಗವರ್ನರ್-ಜನರಲ್ ಆಗಿದ್ದ. ಲಂಡನಿನಲ್ಲಿ 1738ರ ಡಿಸೆಂಬರ್ 31ರಂದು ಪ್ರಥಮ ಅರ್ಲ್ ಕಾರ್ನ್‍ವಾಲಿಸನ ಹಿರಿಯ ಮಗನಾಗಿ ಜನಿಸಿದ. 1757ರಲ್ಲಿ ಸೈನ್ಯವನ್ನು ಸೇರಿ ಜರ್ಮನಿಯಲ್ಲಿ ಏಳು ವರ್ಷಗಳ ಯುದ್ಧದಲ್ಲಿ ಭಾಗವಹಿಸಿದ. 1765ರ ಅನಂತರ ಕೆಲಕಾಲ ರಾಜಕಾರಣಕ್ಕಿಳಿದು ವಸಾಹತುಗಳ ತೆರಿಗೆಯ ನೀತಿಯನ್ನು ವಿರೋಧಿಸುತ್ತಿದ್ದ. 1776ರಲ್ಲಿ ಮೇಜರ್ ಜನರಲ್ ಹುದ್ದೆಯನ್ನು ವಹಿಸಿಕೊಂಡು ಅಮೆರಿಕಕ್ಕೆ ತೆರಳಿದ. ಮರುವರ್ಷವೇ ಅಲ್ಲಿಯ ಸೈನ್ಯದ ಉಪಮುಖ್ಯಾಧಿಕಾರಿಯ ಪದವಿ ದೊರಕಿತು. ಅಮೆರಿಕದಲ್ಲಿದ್ದ ಬ್ರಿಟಿಷ್ ಅಧಿಕಾರಿಗಳಲ್ಲಿ ಶ್ರೇಷ್ಠನಾಗಿದ್ದು 1780-81ರಲ್ಲಿ ದಕ್ಷಿಣ ಭಾಗದಲ್ಲಿ ಗಮನಾರ್ಹ ಜಯಗಳಿಸಿದರೂ 1781ರ ಅಕ್ಟೋಬರಿನಲ್ಲಿ ಯಾರ್ಕ್‍ಟೌನ್ ಕದನದಲ್ಲಿ ಶರಣಾಗತನಾಗಬೇಕಾಯಿತು. ಇದರಿಂದಾಗಿ ಅಮೆರಿಕದಲ್ಲಿ ಬ್ರಿಟಿಷರ ಅಧಿಕಾರ ಕೊನೆಗೊಳ್ಳುವಂತಾಯಿತು.

 ಉತ್ತಮ ಆಡಳಿತಗಾರ ಮತ್ತು ದಕ್ಷಯೋಧನೆಂದು ಹೆಸರಾಗಿದ್ದುದರಿಂದ ಇವನನ್ನು 1786ರಲ್ಲಿ ಭಾರತದ ಬ್ರಿಟಿಷ್ ಗವರ್ನರ್-ಜನರಲ್ ಆಗಿ ನೇಮಿಸಲಾಯಿತು. ಉತ್ತಮ ಅಧಿಕಾರಿಗಳ ಸಹಾಯದಿಂದ ಭಾರತದಲ್ಲಿ ಕೆಲವು ಸುಧಾರಣೆಗಳನ್ನು ಮಾಡಿ, ರಾಜ್ಯಾಡಳಿತವನ್ನೀತ ಉತ್ತಮಗೊಳಿಸಿದ. ಇತರರ ಪ್ರಯತ್ನಗಳ ಫಲವಾಗಿ ಇವನ ಕಾಲದಲ್ಲಿ ಸುಧಾರಣೆಗಳು ಜಾರಿಗೆ ಬಂದರೂ ಅವನ್ನು ಸುವ್ಯವಸ್ಥಿತ ರೀತಿಯಲ್ಲಿ ಕಾರ್ಯಗತಗೊಳಿಸಿದುದು ಇವನ ದಕ್ಷತೆಯನ್ನು ಸೂಚಿಸುತ್ತದೆ. ಬಂಗಾಳದ ಖಾಯಂ ಗುತ್ತಾ ಪದ್ಧತಿ (ಪರ್ಮನೆಂಟ್ ಲ್ಯಾಂಡ್ ರೆವೆನ್ಯೂ ಸೆಟ್ಲ್‍ಮೆಂಟ್) ಮತ್ತು ಭೂಕಂದಾಯ ಆಡಳಿತ ಸುಧಾರಣೆಗಳು ಕಟುಟೀಕೆಯನ್ನು ಎದುರಿಸಬೇಕಾಯಿತು. ಆದರೆ ಈತ ದೇಶೀಯ ಮತ್ತು ಬ್ರಿಟಿಷ್ ಆಡಳಿತವರ್ಗಗಳ ನಡುವಣ ಅಂತರಗಳನ್ನು ನಿವಾರಿಸಿ ಅವರಲ್ಲಿ ಸಮತೆಯನ್ನುಂಟುಮಾಡಲು ಪ್ರಯತ್ನಿಸಿದ. ಬ್ರಿಟಿಷ್ ಅಧಿಕಾರಿಗಳು ಆಡಳಿತದಲ್ಲಿ ವ್ಯಾಪಾರೀ ಮನೋಭಾವವನ್ನು ತೋರುತ್ತಿದ್ದುದು ಇದರಿಂದ ಕೊನೆಗೊಳ್ಳುವಂತಾಯಿತು. ನ್ಯಾಯಾಡಳಿತದಲ್ಲೂ ಹಲವಾರು ಸುಧಾರಣೆಗಳನ್ನು ತಂದ. ಇದಕ್ಕಾಗಿ ಹಿಂದೂ ನ್ಯಾಯಶಾಸ್ತ್ರ ಗ್ರಂಥಗಳನ್ನು ಇಂಗ್ಲಿಷಿಗೆ ತರ್ಜುಮೆ ಮಾಡಿಸಿದನಲ್ಲದೆ ಪೋಲೀಸ್ ದಳವನ್ನು ಏರ್ಪಡಿಸಿದ.

   3ನೆಯ ಮೈಸೂರು ಯುದ್ಧ ನಡೆದದ್ದು ಇವನ ಕಾಲದಲ್ಲಿ. 1790ರಲ್ಲಿ ಮೈಸೂರಿನ ಟಿಪ್ಪುಸುಲ್ತಾನ್ ಬ್ರಿಟಿಷರ ಸ್ನೇಹವನ್ನು ಸಂಪಾದಿಸಿದ್ದ. ತಿರುವಾಂಕೂರು ರಾಜ್ಯವನ್ನು ಮುತ್ತಿದುದರಿಂದ ಕಾರ್ನ್‍ವಾಲಿಸ್ ಮರಾಠರ ಮತ್ತು ಹೈದರಾಬಾದಿನ ನಿeóÁಮನ ಸಹಾಯದಿಂದ ಮೈಸೂರಿನ ಮೇಲೆ ದಂಡೆತ್ತಿಹೋಗಿ ಟಿಪ್ಪುವಿನ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣವನ್ನು ಮುತ್ತಲಾಗಿ, ಟಿಪ್ಪು ಶರಣಾಗತನಾಗಿ ಬ್ರಿಟಿಷರ ಷರತ್ತುಗಳಿಗೆ ಒಪ್ಪಿಕೊಂಡ. ಬ್ರಿಟಿಷ್ ಚಕ್ರವರ್ತಿ ಕಾರ್ನ್‍ವಾಲಿಸನ ಕಾರ್ಯವನ್ನು ಮೆಚ್ಚಿಕೊಂಡ. ಈತ ಲಂಡನಿಗೆ ಮರಳಿದಾಗ 1793ರಲ್ಲಿ ಇವನಿಗೆ ಮಾಕ್ರ್ವಿಸ್ ಎಂಬ ಬಿರುದನ್ನು ನೀಡಲಾಯಿತು ಮತ್ತು ಸಚಿವಮಂಡಳಿಯ ದರ್ಜೆಯಲ್ಲಿ ಮಾಸ್ಟರ್-ಜನರಲ್ ಆಫ್ ಆರ್ಡ್‍ನೆನ್ಸ್ ಹುದ್ದೆಗೆ ನೇಮಿಸಲಾಯಿತು. ಈತ 1798ರಿಂದ 1801ರ ವರೆಗೆ ಐರ್ಲೆಂಡಿನಲ್ಲಿ ರಾಜಪ್ರತಿನಿಧಿಯಾಗಿ (ವೈಸ್‍ರಾಯ್) ಕೆಲಸಮಾಡಿದ. 1798ರಲ್ಲಿ ಅಲ್ಲಿ ನಡೆದ ದಂಗೆಯನ್ನು ಯಶಸ್ವಿಯಾಗಿ ಅಡಗಿಸಿದ. ಪ್ರಧಾನಮಂತ್ರಿ ವಿಲಿಯಂ ಪಿಟ್ಟನ ಏಕತಾನೀತಿಗೆ ಬೆಂಬಲ ನೀಡಿ, ಕೆಥೊಲಿಕ್ ಮತ್ತು ಆರೆಂಜ್ ಜನರ ಬೆಂಬಲದಿಂದ ಅದನ್ನು ಕಾರ್ಯಗತಗೊಳಿಸಿದ. 3ನೆಯ ಜಾರ್ಜ್ ದೊರೆ ಕೆಥೊಲಿಕರಿಗೆ ಮತೀಯ ಸ್ವಾತಂತ್ರ್ಯ ನೀಡಲು ನಿರಾಕರಿಸಿದಾಗ ಈತ 1801ರಲ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಿದ. ಏಮಿಯನ್ ಶಾಂತಿ ಸಂಧಾನಕ್ಕೆ ಬ್ರಿಟನಿನ ಮುಖ್ಯ ಸಂಧಾನಕಾರನಾಗಿ ಇವನು ನೇಮಕವಾದ್ದು ಅದೇ ವರ್ಷದಲ್ಲಿ.

 1805ರಲ್ಲಿ ಮರಳಿ ಭಾರತದ ಗೌರ್ನರ್-ಜನರಲ್ ಆಗಿ ನೇಮಕವಾದಾಗ ಮನಸ್ಸಿಲ್ಲದಿದ್ದರೂ ಈತ ಭಾರತಕ್ಕೆ ಮರಳಿ ಅದೇ ವರ್ಷದ ಅಕ್ಟೋಬರ್ 5ರಂದು ಘಾಜಿûೀಪುರದಲ್ಲಿ ಮೃತ ಹೊಂದಿದ. ಅಲ್ಲಿ ಇವನ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ.

 

(ಎಂ.ಎಸ್.ಬಿ.)