ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾರ್ಮಿಕ ಸಂಘಟನೆ ಮತ್ತು ಕಲ್ಯಾಣ

ವಿಕಿಸೋರ್ಸ್ದಿಂದ

ಕಾರ್ಮಿಕ ಸಂಘಟನೆ ಮತ್ತು ಕಲ್ಯಾಣ

ಭಾರತದಲ್ಲಿ ಕಾರ್ಮಿಕ ಸಂಘಟನೆ ಪ್ರಾರಂಭವಾದದ್ದು ಬಹಳ ವಿಳಂಬವಾಗಿ. ಕರ್ನಾಟಕ ರಾಜ್ಯದಲ್ಲೂ ಅದು ಪ್ರಾರಂಭವಾದ್ದದ್ದು ತಡವಾಗಿಯೇ. ಇಂದು ಸಂಘಟನೆ ಹಾಗೂ ಕಲ್ಯಾಣಕಾರ್ಯಗಳು ಬಿರುಸಿನಿಂದ ನಡೆಯುತ್ತಿವೆ. ಒಳ್ಳೆಯ ತಳಹದಿಯ ಮೇಲೆ ವ್ಯವಸ್ಥಿತವಾಗುತ್ತಿವೆ. ಕಳೆದ ಶತಮಾನದಿಂದ ಏಳ್ಗೆಗೊಳ್ಳುತ್ತಿರುವ ಈ ಚಟುವಟಿಕೆಯ ಇತಿವೃತ್ತ ಮತ್ತು ಅದರ ಇಂದಿನ ಸ್ಥಿತಿಗಳು ಕರ್ನಾಟಕದ ಆರ್ಥಿಕತೆಯ ಅಧ್ಯಯನದ ಒಂದು ಮುಖ್ಯಾಂಗವಾಗಿದೆ. ಇದಕ್ಕೆ ಸಂಬಂಧಿಸಿದ ವಿಷಯಗಳ ಸಮೀಕ್ಷೆಯನ್ನು ಈ ಲೇಖನದಲ್ಲಿ ಇತಿಹಾಸ, ಬೆಳೆವಣಿಗೆ, ಆರ್ಥಿಕ ಸ್ಥಿತಿಗತಿ, ರಚನೆ ಮತ್ತು ಆಡಳಿತ, ಕಾರ್ಮಿಕ ಕಲ್ಯಾಣ ಎಂಬ ವಿಭಾಗಗಳಲ್ಲಿ ವಿಂಗಡಿಸಿಕೊಡಲಾಗಿದೆ.

ಇತಿಹಾಸ: ಕರ್ನಾಟಕದಲ್ಲಿ 1920ರವರೆಗೂ ಯಾವ ಕಾರ್ಮಿಕ ಸಂಘಗಳೂ ಸ್ಥಾಪನೆಗೊಂಡಿರಲಿಲ್ಲ. 1884ರಲ್ಲಿ ಮೊತ್ತಮೊದಲು ಬೆಂಗಳೂರಿನಲ್ಲಿ ಒಂದು ದೊಡ್ಡ ಹತ್ತಿಬಟ್ಟೆ ಗಿರಣಿ ಸ್ಥಾಪಿತವಾದರೂ ಅಲ್ಲಿ ಕಾರ್ಮಿಕ ಸಂಘಟನೆಯ ಚಟುವಟಿಕೆಗಳೇ ಇರಲಿಲ್ಲ. 1920ರಲ್ಲಿ ಕಾರ್ಮಿಕರ ಒಂದು ದುರ್ಬಲ ಪ್ರತಿಕ್ರಿಯೆ ರೂಪುಗೊಂಡಿತು. ಇದೂ ಒಂದು ಸುಸಂಘಟಿತ ಚಟುವಟಿಕೆಯ ರೂಪವನ್ನೇನೂ ತಳೆಯಲಿಲ್ಲ. ಅದು ಉದ್ಯಮಿಗಳ ವಿರುದ್ಧ ಕೇವಲ ತಾತ್ಕಾಲಿಕ ಪ್ರತಿಭಟನೆಯಾಗಿತ್ತು. ಕರ್ನಾಟಕದ ವಿಳಂಬಿತ ಕೈಗಾರಿಕೀಕರಣ ಪ್ರಾರಂಭ ಕಾಲದಲ್ಲಿ ಕಾರ್ಮಿಕರ ಪೂರೈಕೆಯಲ್ಲಿ ವಿರಳತೆಯಿದ್ದುದರಿಂದ ಉದ್ಯಮಶೀಲರು ಅವರಿಗೆ ಬೇಕಾದ ಎಲ್ಲ ಅನುಕೂಲಗಳನ್ನೂ ಒದಗಿಸಲು ತಯಾರಿದ್ದರು. ಕಾರ್ಮಿಕರಲ್ಲಿ ಭಾಷೆ, ವ್ಯವಹಾರ, ನಡವಳಿಕೆ ಇತ್ಯಾದಿಗಳಲ್ಲಿ ವಿಭಿನ್ನತೆಯಿತ್ತು. ಕಾರ್ಮಿಕರ ಸಂಘಟನೆಗೆ ಅನುಕೂಲಕರವಾದ ಕಾನೂನುಗಳಿರಲಿಲ್ಲ, ಆದ್ದರಿಂದ ಸಂಘಟನೆ ಬೆಳೆಯಲಿಲ್ಲ. 1926ರಲ್ಲಿ ಕೇಂದ್ರದ ಕಾರ್ಮಿಕ ಸಂಘಗಳ ಕಾನೂನು ಜಾರಿಗೆ ಬಂತು. ಸುಮಾರು ಆ ಕಾಲದಲ್ಲಿ ಕರ್ನಾಟಕದಲ್ಲೂ ಕಾರ್ಮಿಕ ಸಂಘಟನೆಯ ಪ್ರಯತ್ನಗಳು ನಡೆದವು. 1926 ರಿಂದ 1942ರವರೆಗೆ ಅನೇಕ ಜವಳಿ ಗಿರಣಿಗಳಲ್ಲಿ ಕಾರ್ಮಿಕ ಸಂಘಗಳು ದಿವಂಗತ ಕೆ.ಟಿ.ಭಾಷ್ಯಂ ಅವರಂತಹ ರಾಜಕೀಯ ಮುಂದಾಳುಗಳ ಪ್ರಯತ್ನದ ಫಲವಾಗಿ ಅಸ್ತಿತ್ವಕ್ಕೆ ಬಂದುವು. ಆದರೆ ಈ ಸಂಘಗಳೆಲ್ಲವೂ 1924ರವರೆಗೆ ಕಾನೂನಿನ ಬೆಂಬಲವಿಲ್ಲದೆ ಸಮಾಜಸೇವಾ ಸಂಸ್ಥೆಗಳಂತೆ ಕೆಲಸ ಮಾಡುತ್ತಿದ್ದು ಸಹಕಾರ ಸಂಘಗಳ ಕಾನೂನಿನ ವ್ಯಾಪ್ತಿಯಲ್ಲಿ ನೋಂದಣಿಯಾದ ಸಂಸ್ಥೆಗಳಾಗಿದ್ದುವು. 1942ರಲ್ಲಿ ಮೈಸೂರು ರಾಜ್ಯದ ಕಾರ್ಮಿಕ ಸಂಘಗಳ ನಿಬಂಧನೆಗಳು ಎಂಬ ಹೆಸರಿನಲ್ಲಿ ರಾಜ್ಯಕ್ಕೆ ಅನ್ವಯಿಸಿದ 1926ರ ಕೇಂದ್ರದ ಕಾರ್ಮಿಕ ಸಂಘಗಳ ಕಾನೂನಿಂದ ಕರ್ನಾಟಕದಲ್ಲಿ ಕಾರ್ಮಿಕರ ಸಂಘಗಳ ಬೆಳೆವಣಿಗೆಗೆ ಅಂಕುರಾರ್ಪಣವಾಯಿತು. ಹಿಂದಿದ್ದ ಸಂಸ್ಥೆಗಳು ಕಾರ್ಮಿಕ ಸಂಘಗಳಾದುವು.

 ಕರ್ನಾಟಕದ ಕಾರ್ಮಿಕ ಸಂಘಗಳು ಎರಡು ಮಹಾಯುದ್ಧಗಳ ಮಧ್ಯಂತರದಲ್ಲಿ ತಮ್ಮ ಸದಸ್ಯರುಗಳ ಆರ್ಥಿಕ ಸ್ಥಿತಿಗತಿಗಳನ್ನು ಉತ್ತಮ ಪಡಿಸುವುದಕ್ಕೆ ಹಾಗೂ ತಮಗೆ ಕಾನೂನಿನ ಮಾನ್ಯತೆಯನ್ನು ಪಡೆದುಕೊಳ್ಳುವುದಕ್ಕೆ ಚಳುವಳಿಗಳನ್ನು ನಡೆಸಿದವು. ಒಂದನೆಯ ಮಹಾಯುದ್ಧದ ಕಾಲದಲ್ಲಿ ಹಾಗೂ ಅದು ಮುಕ್ತಾಯವಾದ ತರುವಾಯ ರಾಜ್ಯದಲ್ಲಿನ ಕೈಗಾರಿಕಾ ಸಂಸ್ಥೆಗಳು ರಾಷ್ಟ್ರದ ಇತರ ಪ್ರಾಂತ್ಯಗಳ ಸಂಸ್ಥೆಗಳಂತೆ ಅಧಿಕ ಲಾಭ ಗಳಿಸಿದರೂ ಅವುಗಳ ಮಾಲೀಕರು ತಮ್ಮ ಕಾರ್ಮಿಕರಿಗೆ ಹೆಚ್ಚಿನ ವೇತನವನ್ನಾಗಲೀ ಬೋನಸ್ಸನ್ನಾಗಲೀ ಕೊಡಲು ನಿರಾಕರಿಸಿದುದು ಮತ್ತು ಇದೇ ಕಾಲದಲ್ಲಿ ಪದಾರ್ಥಗಳ ಬೆಲೆಗಳು ತೀವ್ರವಾಗಿ ಏರಿ ಕಾರ್ಮಿಕರ ಸ್ಥಿತಿಗತಿಗಳು ಹದಗೆಟ್ಟುದು ಮುಂತಾದ ಕಾರಣಗಳಿಂದ ಅಸಮಾಧಾನಗೊಂಡ ರಾಜ್ಯದ ಕಾರ್ಮಿಕರು 1920ರಲ್ಲಿ ಒಟ್ಟುಗೂಡಿ ಮುಷ್ಕರ ಪ್ರಾರಂಬಿsಸಿದರು. ಬೆಂಗಳೂರಿನ ಬಿನ್ನಿಮಿಲ್ ಕೆಲಸಗಾರರಿಗೇ ಆಡಳಿತದವರು ಬೋನಸ್ಸನ್ನು ಕೊಡಲು ನಿರಾಕರಿಸಿದುದರಿಂದ ಭಾಷ್ಯಂರವರ ನೇತೃತ್ವದಲ್ಲಿ ಅವರು ಒಂದು ಮುಷ್ಕರ ಪ್ರಾರಂಭಿಸಿದರು. ಇದರಿಂದ ಬೆಂಗಳೂರಿನ ಇತರ ಮುಖ್ಯ ಜವಳಿ ಗಿರಣಿಗಳಲ್ಲೂ ಮಿನರ್ವ ಮಿಲ್ ಮತ್ತು ಕೃಷ್ಣ ಮಿಲ್‍ಗಳಲ್ಲೂ ಕಾರ್ಮಿಕ ಸಂಘಗಳು ಪ್ರಾರಂಭವಾದುವು. ರಾಜ್ಯದ ಜವಳಿ ಗಿರಣಿ ಕಾರ್ಮಿಕರೆಲ್ಲರೂ ಒಟ್ಟುಗೂಡಿ ತಮ್ಮದೇ ಆದ ಒಂದು ಪ್ರಬಲ ಕಾರ್ಮಿಕ ಸಂಘವನ್ನು ಸ್ಥಾಪಿಸಬೇಕೆಂಬ ಅಭಿಪ್ರಾಯಕ್ಕೆ ಮನ್ನಣೆ ದೊರಕಿದಂತಾಯಿತು.

 ಆದರೂ 1926 ರಿಂದ 1942ರವರೆಗಿನ ಕಾಲ ಕರ್ನಾಟಕದ ಕಾರ್ಮಿಕ ಸಂಘಟನೆಯ ದೃಷ್ಟಿಯಿಂದ ಬಲು ತ್ರಾಸದಾಯಕ ಕಾಲವಾಗಿತ್ತೆಂದೇ ಹೇಳಬೇಕು. ಈ ಕಾಲದಲ್ಲಿ ಕೈಗಾರಿಕಾ ಹಿಂಜರಿತ ಉಂಟಾಗಿ ಕೈಗಾರಿಕಾ ಸಂಸ್ಥೆಗಳಲ್ಲಿ ಕಾರ್ಮಿಕರ ಉಚ್ಚಾಟನೆ ವ್ಯಾಪಕವಾಗಿ ಪ್ರಾರಂಭವಾಯಿತು. ಇದರಿಂದ ಕೈಗಾರಿಕಾ ಮುಷ್ಕರಗಳು ಮತ್ತು ಬೀಗಮುದ್ರೆಗಳು ಪ್ರಾರಂಭವಾದುವಲ್ಲದೆ, ಕಾರ್ಮಿಕರಿಗೆ ಹಿಂಜರಿತದ ಕಾಲದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೇಡಿಕೆಯಿರಲಿಲ್ಲವಾಗಿ ಮುಷ್ಕರಗಳಲ್ಲಿ ಕಾರ್ಮಿಕರು ಅಪಜಯ ಗಳಿಸಬೇಕಾಯಿತು. ಈ ಕಾರಣದಿಂದ ಕೈಗಾರಿಕೆಯ ಮಟ್ಟದಲ್ಲಿ ಕಾರ್ಮಿಕರ ಪ್ರಬಲ ಸಂಘಟನೆಯ ಆವಶ್ಯಕತೆಯ ತೀವ್ರತೆಯ ಅರಿವಾಗಿ ಬೆಂಗಳೂರು ಜವಳಿ ಕಾರ್ಮಿಕರ ಸಂಘ 1929 ರಲ್ಲಿ ಕೆ.ಟಿ. ಭಾಷ್ಯಂ ಅವರ ನಾಯಕತ್ವದಲ್ಲಿ ಸ್ಥಾಪಿಸಲ್ಪಟ್ಟಿತು. ಕ್ರಮೇಣ ಈ ಸಂಘ ಪ್ರಬಲವಾಯಿತು. ಸರ್ಕಾರದ ಗಮನವನ್ನು ಸೆಳೆಯಿತು. ಈ ಸಂಘದ ಬೆಂಬಲದಿಂದ ಬಿನ್ನಿ ಮಿಲ್ ಮತ್ತು ಮಿನರ್ವ ಮಿಲ್ ಕಾರ್ಮಿಕರು ಬೇರೆ ಬೇರೆಯಾಗಿ ಮುಷ್ಕರಗಳನ್ನು ಹೂಡಿ ಜಯ ಗಳಿಸಿದರು. ಈ ಎರಡು ಮುಷ್ಕರಗಳಲ್ಲೂ ಮೊದಲು ಕಾರ್ಮಿಕರ ಮುಂದಾಳುಗಳನ್ನು ದಸ್ತಗಿರಿ ಮಾಡಿ ಮುಷ್ಕರಗಳನ್ನು ನಿಷ್ಕ್ರಿಯಗೊಳಿಸಲು ಸರ್ಕಾರ ಪ್ರಯತ್ನಿಸಿತಾದರೂ ಅಂತಿಮವಾಗಿ ಕಾರ್ಮಿಕರೇ ಜಯಗಳಿಸಿದರು. ಹೀಗೆ ಬೆಂಗಳೂರು ಜವಳಿ ಗಿರಣಿ ಕಾರ್ಮಿಕರ ಸಂಘದ ಚಟುವಟಿಕೆಗಳು ಗಮನಾರ್ಹವಾಗಿ ಬೆಳೆದುದರಿಂದ ಸರ್ಕಾರ ಇದರ ಪ್ರಭಾವವನ್ನು ಮೊಟಕುಗೊಳಿಸಲು ಏನಾದರೊಂದು ವ್ಯವಸ್ಥೆಯನ್ನು ಮಾಡಬೇಕೆಂಬ ಅಂಶವನ್ನು ಮನಗಂಡು 1940ರಲ್ಲಿ ಕಾರ್ಮಿಕರ ಸಂಘಗಳಿಗೆ ಮಾನ್ಯತೆಯನ್ನು ಕೊಡುವುದರ ಬಗ್ಗೆ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಶಾಂತಿಯನ್ನು ಏರ್ಪಡಿಸುವುದರ ಬಗ್ಗೆ ಸೂಕ್ತ ಶಿಫಾರಸ್ಸುಗಳನ್ನು ಮಾಡಬೇಕೆಂದು ಕೋರಿ ಒಂದು ಸಮಿತಿಯನ್ನು ನೇಮಿಸಿತು. ಈ ಸಮಿತಿಯ ಸಲಹೆಗಳಿಗನುಗುಣವಾಗಿ 1942ರಲ್ಲಿ ಮೈಸೂರು ಕಾರ್ಮಿಕರ ಸಂಘ ನಿಬಂಧ£ ಎಂಬ ಕಾನೂನನ್ನು ಜಾರಿಗೆ ತಂದಿತು. ಈ ಕಾನೂನಿನ ಪ್ರಕಾರ, ಕೈಗಾರಿಕಾ ಮಟ್ಟದಲ್ಲಿ ಕಾರ್ಮಿಕರ ಸಂಘಸ್ಥಾಪನೆ ಬಹಿಷ್ಕರಿಸಲ Éಗಳು ್ಪಟ್ಟು ಕೈಗಾರಿಕಾಘಟಕದ ಮಟ್ಟದಲ್ಲಿ ಕಾರ್ಮಿಕ ಸಂಘ ಸ್ಥಾಪಿಸಲ್ಪಡುವುದಕ್ಕೆ ಪೆÇ್ರೀತ್ಸಾಹವನ್ನು ನೀಡಿತು. ಹೀಗೆ ಘಟಕಗಳ ಮಟ್ಟದಲ್ಲಿ ಸ್ಥಾಪಿಸಲ್ಪಟ್ಟ ಕಾರ್ಮಿಕ ಸಂಘಗಳು ನೋಂದಾವಣೆ ಮಾಡಿಸಿಕೊಳ್ಳಬೇಕೆಂಬ ನಿಯಮವನ್ನು ಜಾರಿಗೆತರಲಾಯಿತು.

 1942ರ ಮೈಸೂರು ಕಾರ್ಮಿಕರ ಸಂಘಗಳ ನಿಬಂಧನೆ ಜಾರಿಗೆ ಬಂದುದರಿಂದ ಕಾರ್ಮಿಕ ಸಂಘಗಳ ಮೇಲೆ ಅನೇಕ ಅನಪೇಕ್ಷಣೀಯ ಪರಿಣಾಮಗಳುಂಟಾದುವು. ಕೈಗಾರಿಕಾಮಟ್ಟದಲ್ಲಿ ಸ್ಥಾಪಿತವಾದ ಬೆಂಗಳೂರು ಜವಳಿ ಕೈಗಾರಿಕೆಯ ಕಾರ್ಮಿಕರ ಸಂಘ ಅವಸಾನಕ್ಕೀಡಾಯಿತು. ಈ ಕಾರಣದಿಂದಲೇ ಮುಷ್ಕರಗಳಲ್ಲಿ ಕಾರ್ಮಿಕರು ಅಪಜಯವನ್ನನುಭವಿಸ ಬೇಕಾಯಿತು. ಕಾರ್ಮಿಕರಲ್ಲಿ ಒಡಕುಂಟಾಯಿತು. ಅವರ ಸಂಘಟನಾಶಕ್ತಿ ದುರ್ಬಲಗೊಂಡಿತು. ಆದರೆ ಕೈಗಾರಿಕಾಘಟಕಗಳ ಮಟ್ಟದಲ್ಲಿ ಕಾರ್ಮಿಕರ ಸಂಘಗಳು ಹೆಚ್ಚು ಪ್ರಮಾಣದಲ್ಲಿ ಸ್ಥಾಪಿತವಾದುವು. ಉದಾಹರಣೆಗೆ ಕೋಲಾರದ ಚಿನ್ನದಗಣಿ ಹಾಗೂ ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳಲ್ಲಿ ಕಾರ್ಮಿಕ ಸಂಘಗಳು ಸ್ಥಾಪಿತವಾದುವು. ಆದರೆ ರಾಜ್ಯದಲ್ಲಿ ಜವಳಿ ಅಂದು ಬಹುಮುಖ್ಯ ಕೈಗಾರಿಕೆಯಾಗಿದ್ದುದರಿಂದ ಆ ಕೈಗಾರಿಕೆಯ ಘಟಕಗಳಲ್ಲೂ ಕಾರ್ಮಿಕ ಸಂಘಗಳು ಹೆಚ್ಚಿನ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬಂದುವು. ಎರಡನೆಯ ಮಹಾಯುದ್ಧದಿಂದೀಚೆಗೆ, ಅದರಲ್ಲೂ ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಎಂಜಿನಿಯರಿಂಗ್ ಕೈಗಾರಿಕೆ ಅಭಿವೃದ್ಧಿಗೊಂಡು ಆ ಕೈಗಾರಿಕೆಯ ಘಟಕಗಳಲ್ಲಿ ಕಾರ್ಮಿಕ ಸಂಘಟನೆಯ ಚಟುವಟಿಕೆಗಳು ಪ್ರಾರಂಭವಾದುವು. ಉದಾಹರಣೆಗೆ ಮೈಕೋ, ರೆಮ್ಕೋ, ಸರ್ಕಾರಿ ವಿದ್ಯುತ್ ಕಾರ್ಖಾನೆ, ಕೇಂದ್ರ ಸರ್ಕಾರದ ವತಿಯಿಂದ ಸ್ಥಾಪಿಸಲ್ಪಟ್ಟ ಹಿಂದೂಸ್ಥಾನ್ ಏರೋನಾಟಿಕ್ಸ್, ಹಿಂದೂಸ್ಥಾನ್ ಮೆಷಿನ್ ಟೂಲ್ಸ್ ಇತ್ಯಾದಿ ಕಾರ್ಖಾನೆಗಳಲ್ಲಿ ಕಾರ್ಮಿಕ ಸಂಘಗಳು ಸ್ಥಾಪಿತವಾದುವು.

 ಹೀಗೆ ಘಟಕಗಳ ಮಟ್ಟದಲ್ಲಿ ಬೆಳೆದ ಕಾರ್ಮಿಕ ಸಂಘಗಳಲ್ಲಿ ಜವಳಿ ಕೈಗಾರಿಕೆಯಲ್ಲಿನ ಕಾರ್ಮಿಕ ಸಂಘಗಳಂಥ, ಮೊದಲು ಅಭಿವೃದ್ಧಿಗೆ ಬಂದ, ಕಾರ್ಮಿಕ ಚಟುವಟಿಕೆಗಳಿಗೆ ರಾಜಕೀಯ ಧುರೀಣರು ಮಾರ್ಗದರ್ಶನ ನೀಡುತ್ತಿದ್ದರು. ಎಂಜಿನಿಯಂರಿಂಗ್ ಕೈಗಾರಿಕೆಯ ಘಟಕಗಳ ಕಾರ್ಮಿಕ ಸಂಘಗಳಿಗೆ ಪ್ರಾರಂಭದಲ್ಲಿ ಕಾರ್ಮಿಕರೇ ಮುಂದಾಳತ್ವ ವಹಿಸಿದ್ದರು. ಆದರೆ ಈ ಮುಂದಾಳುಗಳು ಕೊನೆಗೆ ಉದ್ಯಮಿಗಳ ವ್ಯಗ್ರದೃಷ್ಟಿಗೆ ಬಿದ್ದು ತೊಂದರೆಗೀಡಾದ್ದರಿಂದ ಮುಂದೆ ಈ ಘಟಕಗಳಲ್ಲೂ ಹೊರಗಿನವರ ನಾಯಕತ್ವ ಬೇರೂರಿತ್ತು. ಇದರಿಂದ ಕಾರ್ಮಿಕ ಸಂಘಗಳಲ್ಲಿಯೇ ತಾತ್ತ್ವಿಕ ಭೇದಭಾವ, ನಿರ್ದಿಷ್ಟ ರಾಜಕೀಯ ಪಕ್ಷಗಳತ್ತ ಒಲವು ಉಂಟಾಗಿ ಅವುಗಳಲ್ಲಿ ಪರಸ್ಪರ ವೈಮನಸ್ಸಿಗೆ ಕಾರಣವಾಯಿತು. ಇದರಿಂದ ಸಂಘಟನೆಗೆ ತೊಡಕುಂಟಾಯಿತು.

 ರಾಜ್ಯದಲ್ಲಿ ಕಾರ್ಮಿಕ ಸಂಘಗಳು ಮತ್ತು ಅವುಗಳ ಸದಸ್ಯರುಗಳ ಸಂಖ್ಯೆ ಉದ್ದಕ್ಕೂ ಅದಿsಕಗೊಳ್ಳುತ್ತಿದೆ. ಇದರಿಂದ ಕರ್ನಾಟಕದ ಕಾರ್ಮಿಕ ಸಂಘಟನೆ ಸಾಂಖ್ಯಿಕವಾಗಿ ಪ್ರಗತಿಯನ್ನು ಹೊಂದಿದೆಯೆಂದು ಹೇಳಬಹುದು. ಸಾಂಖ್ಯಿಕ ಪ್ರಗತಿಯೊಂದೇ ಕಾರ್ಮಿಕ ಸಂಘಟನೆಯ ಬಲದ ಸೂಚಕವೇನಲ್ಲ. ಕಾರ್ಮಿಕ ಉದ್ಯೋಗಿಗಳ ಸಂಖ್ಯೆಗೂ ಮತ್ತು ಕಾರ್ಮಿಕ ಸಂಘಗಳ ಸದಸ್ಯರ ಸಂಖ್ಯೆಗೂ ಇರುವ ಸಂಬಂಧ ಕುರಿತ ಅಂಕಿಗಳ ಅಭಾವ ಇದೆ. ವರದಿ ನೀಡುತ್ತಿರುವ ಕಾರ್ಮಿಕ ಸಂಘಗಳ ಸಂಖ್ಯೆ ಮತ್ತು ಅವುಗಳ ಸದಸ್ಯತ್ವ ಸುಮಾರು 1970ರವರೆಗೆ ಹೆಚ್ಚಾಗುತ್ತಿದ್ದರೂ ಸರಾಸರಿ ಸದಸ್ಯತ್ವ ಕಡಿಮೆಯಾಗುತ್ತಿತ್ತು. ಈಚೆಗೆ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ.

 ಭಾರತದ ಇತರ ರಾಜ್ಯಗಳಲ್ಲಿರುವಂತೆ ಕರ್ನಾಟಕ ರಾಜ್ಯದಲ್ಲಿಯೂ ಕಾರ್ಮಿಕ ಸಂಘಟನೆಯಲ್ಲಿ ಅನೇಕ ಸಮಸ್ಯೆಗಳು ಕಾಣುತ್ತವೆ. ಮುಖ್ಯವಾಗಿ ಕಾರ್ಮಿಕ ಸಂಘಗಳ ಸಂಖ್ಯಾಬಾಹುಳ್ಯ, ಅವುಗಳಲ್ಲಿನ ಪರಸ್ಪರ ದ್ವೇಷ ಮತ್ತು ಸ್ಪರ್ಧೆ, ಹೊರಗಿನವರ ನಾಯಕತ್ವ, ಕಾರ್ಮಿಕ ಸಂಘಗಳಿಗೆ ರಾಜಕೀಯದಲ್ಲಿನ ಆಸಕ್ತಿ, ಇದರಿಂದ ಉಂಟಾದ ರಾಜಕೀಯ ಪಕ್ಷಗಳೊಡನೆ ಕಾರ್ಮಿಕ ತಾತ್ವಿಕ ಸಂಬಂಧ, ದುರ್ಬಲ ಆರ್ಥಿಕ ಸ್ಥಿತಿ ಮುಂತಾದ ಸಮಸ್ಯೆಗಳು ರಾಜ್ಯದಲ್ಲಿನ ಕಾರ್ಮಿಕ ಸಂಘಗಳನ್ನು ದುರ್ಬಲಗೊಳಿಸಿವೆ.

 ರಾಜ್ಯದಲ್ಲಿ ಕಾರ್ಮಿಕ ಸಂಘಗಳು ಸಾಮಾನ್ಯವಾಗಿ ಕೈಗಾರಿಕಾವಾರು ಸಂಘಗಳಾಗಿರುತ್ತವೆ. ಆಯಾ ಉದ್ಯಮಘಟಕದಲ್ಲಿ ಕೆಲಸ ಮಾಡುವ ಎಲ್ಲ ವಿಧವಾದ ಕಾರ್ಮಿಕರೂ ಕುಶಲ ಕೆಲಸಗಾರರೂ ಅರೆಕುಶಲರೂ ಹಾಗೂ ಕುಶಲರಲ್ಲದ ಸಾಮಾನ್ಯ ಕೆಲಸಗಾರರೂ - ಈ ಸಂಘಗಳ ಸದಸ್ಯರಾಗಿರುತ್ತಾರೆ. ಉದಾಹರಣೆಗಾಗಿ ಬಿನ್ನಿ ಮಿಲ್ ಕಾರ್ಮಿಕರ ಸಂಘ, ಮೈಕೋ ಕೆಲಸಗಾರರ ಸಂಘ ಇಂಥ ಕಾರ್ಮಿಕ ಸಂಘಗಳ ಜೊತೆಗೆ ವೃತ್ತಿ ಸಂಘಗಳೂ ಇವೆ. ಉದಾ: ಕರಣಿಕರ ಸಂಘ, ಐ.ಟಿ.ಐ. ಡ್ರೈವರುಗಳ ಸಂಘ ಇತ್ಯಾದಿ. ಇವು ಒಂದೊಂದು ವೃತ್ತಿಗೆ ಸೇರಿದ ಕಾರ್ಮಿಕ ಸಂಘಗಳಾಗಿರುತ್ತವೆ. ಇವು ರಾಜ್ಯದಲ್ಲಿ ವಿರಳ.

ರಚನೆ ಮತ್ತು ಆಡಳಿತ: ಕಾರ್ಮಿಕ ಸಂಘಗಳ ರಚನೆ ಭಾರತದ ಇತರ ರಾಜ್ಯಗಳಲ್ಲಿರುವಂತೆ ಒಂದು ಪಿರಮಿಡ್ಡಿನ ಆಕಾರ ಹೊಂದಿದೆ. ಉದ್ಯಮ ಘಟಕಗಳಲ್ಲಿನ ಕಾರ್ಮಿಕ ಸಂಘಗಳು ಕೆಳ ಅಂತಸ್ತಿನ ಸಂಘಗಳು. ಅವುಗಳು ಪ್ರಾಥಮಿಕ ಸಂಘಗಳು. ಇದರ ಮೇಲಿನ ಅಂತಸ್ತಿನಲ್ಲಿ ರಾಜ್ಯಮಟ್ಟದ ಕಾರ್ಮಿಕ ಸಂಘಗಳಿವೆ. ಈ ಸಂಘಗಳಿಗೂ  ಸಂಬಂಧ ಕಲ್ಪಿಸುತ್ತವೆ. ಇವಲ್ಲದೆ ಕೆಲವು ಮಧ್ಯಮ ಮಟ್ಟದ ಜಿಲ್ಲಾವಾರು ಕಾರ್ಮಿಕ ಸಂಘಗಳೂ ಇವೆ (ಉದಾಹರಣೆಗೆ ಬೆಂಗಳೂರು ಜಿಲ್ಲೆಯ ಆಟೋಮೊಬೈಲ್ ಕೆಲಸಗಾರರ ಸಂಘ). ಇವು ಸ್ವತಂತ್ರ ಸಂಸ್ಥೆಗಳಾಗಿವೆ. ಇವು ಯಾವ ಸಂಯುಕ್ತ ರಚನೆಯ ಭಾಗವೂ ಆಗಿರುವುದಿಲ್ಲ. ಯಾವ ಕೇಂದ್ರ ಸಂಯುಕ್ತ ಸಂಘಗಳ ಜೊತೆಯಲ್ಲಿಯೂ ಸಂಬಂಧವಿಟ್ಟು ಕೊಂಡಿರುವುದಿಲ್ಲ. ಇನ್ನೂ ಕೆಲವು ಸ್ವತಂತ್ರ ಸಂಘಗಳಿವೆ. ಅವು ಯಾವ ಕೇಂದ್ರ ಅಥವಾ ರಾಷ್ಟ್ರೀಯ ಸಂಯುಕ್ತ ಕಾರ್ಮಿಕ ಸಂಘಗಳಿಗೂ ಸೇರಿರುವುದಿಲ್ಲ.

 ಕರ್ನಾಟಕದಲ್ಲಿ ಅನೇಕ ಕಾರ್ಮಿಕ ಸಂಘಗಳು ವಿವಿಧ ರಾಷ್ಟ್ರೀಯ ಸಂಯುಕ್ತ ಸಂಘಗಳ ಜೊತೆ ಸಂಬಂಧ ಇಟ್ಟುಕೊಂಡಿವೆ. ರಾಜ್ಯದ ಕಾರ್ಮಿಕ ಸಂಘಗಳ ಸಂಖ್ಯೆಯಲ್ಲಿ ಹೆಚ್ಚು ಭಾಗ ಯಾವ ಕೇಂದ್ರ ಸಂಯುಕ್ತ ಸಂಘಕ್ಕೂ ಸೇರದೆ ಅಥವಾ ಸಂಬಂಧವಿಟ್ಟುಕೊಳ್ಳದೆ ಸ್ವತಂತ್ರ ಸಂಸ್ಥೆಗಳಾಗಿ ಉಳಿದಿವೆ. ಆದರೆ ಕೇಂದ್ರ ಸಂಯುಕ್ತ ಸಂಘಗಳ ಜೊತೆ ಸಂಬಂಧವಿಟ್ಟುಕೊಂಡಿರುವ ಸಂಘಗಳ ಸದಸ್ಯರೇ ಅಧಿಕವಾಗಿದ್ದಾರೆ.

 ಭಾರತ ರಾಷ್ಟ್ರೀಯ ಕಾರ್ಮಿಕ ಸಂಘಗಳ ಒಕ್ಕೂಟ ಕಾಂಗ್ರೆಸ್ ಪಕ್ಷದ ಬೆಂಬಲವನ್ನು ಹೊಂದಿದ್ದರೆ ಅಖಿಲ ಭಾರತ ಕಾರ್ಮಿಕರ ಸಂಘಗಳು ಕಾಂಗ್ರೆಸ್ (ಐಟಿಯುಸಿ) ಕಮ್ಯೂನಿಸ್ಟ್ ಪಕ್ಷದ ಒಲವನ್ನು ಹೊಂದಿದೆ. ಅದೇ ರೀತಿ ಹಿಂದ್ ಮಜ್‍ದೂರ್ ಸಭಾ ಮತ್ತು ಸಂಯುಕ್ತ ಕಾರ್ಮಿಕ ಸಂಘಗಳ ಕಾಂಗ್ರೆಸ್ (ಯುನೈಟೆಡ್ ಟ್ರೇಡ್ ಯೂನಿಯನ್ ಕಾಂಗ್ರೆಸ್) ಕ್ರಮವಾಗಿ ಸಮಾಜವಾದಿ ಪಕ್ಷ ಮತ್ತು ವಾಮಪಂಥೀಯರ ಪಕ್ಷದ ಬೆಂಬಲವನ್ನು ಪಡೆದಿವೆ. ಇತ್ತೀಚೆಗೆ ಮಾಕ್ರ್ಸಿಸ್ಟ್ ಪಕ್ಷದ ಬೆಂಬಲವನ್ನು ಪಡೆದಿರುವ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಎಂಬ ಕೇಂದ್ರ ಸಂಯುಕ್ತ ಸಂಘವೂ ಬೆಳೆಯುತ್ತಿದೆ. 1980ರಲ್ಲಿ 1636 ಕಾರ್ಮಿಕ ಸಂಘಗಳಿದ್ದರೆ, 1999ರಲ್ಲಿ ಇವುಗಳ ಸಂಖ್ಯೆ 3905. ಇದು ಬೆಳೆಯುತ್ತಿರುವ ಕಾರ್ಮಿಕ ಸಂಘಟನೆಯ ಜಾಲಕ್ಕೂ ಮತ್ತು ಉದ್ಯೋಗಗಳ ಹೆಚ್ಚಳಕ್ಕೂ ಸಾಕ್ಷಿ.

 ಕರ್ನಾಟಕ ರಾಜ್ಯದ ಕಾರ್ಮಿಕ ಸಂಘಗಳು ಕಾರ್ಮಿಕ ಸಂಘದ ಎಲ್ಲ ಸಾಮಾನ್ಯ ಕಾರ್ಯಗಳನ್ನೂ ಪರಿಣಾಮಕಾರಿಯಾಗಿ ನಿರ್ವಹಿಸುತ್ತಿವೆ. ಉದಾಹರಣೆಗೆ ಅವು ತಮ್ಮ ತಮ್ಮ ಸದಸ್ಯರುಗಳ ಹಿತಸಾಧನೆಗೋಸ್ಕರ ಮಾಲೀಕರೊಡನೆ ಕಾರ್ಮಿಕರ ವೇತನ, ಬೋನಸ್ಸು, ಉದ್ಯೋಗ ಮುಂತಾದವುಗಳನ್ನು ಉತ್ತಮಪಡಿಸಲು ಹೋರಾಟ ನಡೆಸುತ್ತವೆ. ಅನಿವಾರ್ಯವಾದರೆ ಮುಷ್ಕರಗಳನ್ನೂ ಘೇರಾವೊಗಳನ್ನೂ ಹೂಡಲು ಹಿಂಜರಿದಿಲ್ಲ. ಸಾರ್ವಜನಿಕ ಹಾಗೂ ಖಾಸಗಿ ಕೈಗಾರಿಕಾ ಸಂಸ್ಥೆಗಳಲ್ಲಿ ಕಾರ್ಮಿಕ ಸಂಘಗಳು ತಮ್ಮ ಮಾಲೀಕರನ್ನು ಒಳ್ಳೆಯ ಕೈಗಾರಿಕಾ ಸಂಬಂಧವೇರ್ಪಡಿಸುವ ದೃಷ್ಟಿಯಿಂದ ತಮ್ಮೊಡನೆ ಒಂದು ನಿರ್ದಿಷ್ಟ ಕಾಲಾವಧಿಯವರೆಗೆ ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಳ್ಳುವಂತೆ ಒತ್ತಾಯಪಡಿಸಿ ಜಯಗಳಿಸಿವೆ. ಇದರಿಂದ ಉದ್ಯಮ ಘಟಕಗಳಲ್ಲಿ ಸಾಧ್ಯವಾದಮಟ್ಟಿಗೂ ಒಳ್ಳೆಯ ಕೈಗಾರಿಕಾ ಬಾಂಧವ್ಯವೇರ್ಪಡುವುದು ಸಾಧ್ಯವಾಗಿದೆ. ಅಷ್ಟೇ ಅಲ್ಲದೆ ಒಂದೆರಡು ಕಾರ್ಖಾನೆಗಳಲ್ಲಿ ಕಾರ್ಮಿಕ ಸಂಘಗಳು ಮಾನ್ಯತೆಯನ್ನು ಸಂಪಾದಿಸಲು ಅದುವರೆವಿಗೂ ಅನುಸರಿಸುತ್ತಿದ್ದ ಸದಸ್ಯರ ಸಂಖ್ಯಾಬಲವನ್ನು ಅವಲೋಕಿಸುವ ಪದ್ಧತಿಯನ್ನು ಕೈಬಿಟ್ಟು ಗುಪ್ತ ಮತದಾನ ಪದ್ಧತಿಯನ್ನು ಅನುಸರಿಸುವಂತೆ ಮಾಲೀಕರನ್ನು ಒತ್ತಾಯಪಡಿಸಿ ಜಯಗಳಿಸಿರುವುದು ಕರ್ನಾಟಕ ರಾಜ್ಯದ ಕಾರ್ಮಿಕರ ಬಲಯುತ ಸಂಘಟನೆಯ ಪ್ರತೀಕವಾಗಿದೆ. ಕರ್ನಾಟಕದ ಕೆಲವು ಭಾರಿ ಉದ್ಯಮಸಂಸ್ಥೆಗಳ ಆಡಳಿತದಲ್ಲಿ ಕಾರ್ಮಿಕರು ಭಾಗವಹಿಸುವ ಯೋಜನೆಯ ಅಂಗವಾಗಿ ಜಂಟಿ ಆಡಳಿತ ಸಮಿತಿಯನ್ನು ಸ್ಥಾಪಿಸುವ ಪ್ರಯತ್ನಗಳೂ ನಡೆದಿವೆ. ಕೊನೆಯದಾಗಿ ಸರ್ಕಾರ ಮತ್ತು ಉದ್ಯಮಿಗಳ ಜೊತೆಗೆ ಕಾರ್ಮಿಕ ಸಂಘಗಳೂ ರಾಜ್ಯದಲ್ಲಿ ಕಾರ್ಮಿಕರ ಕಲ್ಯಾಣಾಬಿsವೃದ್ಧಿ ಸೌಲಭ್ಯಗಳನ್ನು ಒದಗಿಸಲು ನೆರವಾಗುತ್ತಿವೆ.

 ಕರ್ನಾಟಕ ಕಾರ್ಮಿಕ ಸಂಘಗಳು ಭಾರತದ ಇತರ ರಾಜ್ಯಗಳಲ್ಲಿರುವ ಕಾರ್ಮಿಕ ಸಂಘಗಳಷ್ಟೇ ಸಬಲವಾಗಿವೆಯೆಂದು ಹೇಳಬಹುದು. ಕರ್ನಾಟಕದಲ್ಲಿ ಭಾರತದ ಇತರ ಭಾಗಗಳಲ್ಲಿರುವಂತೆ ಕಾರ್ಮಿಕ ಸಂಘಗಳು ರಾಜಕೀಯ ಪಕ್ಷಗಳ ಜೊತೆ ಸಂಬಂಧವನ್ನಿಟ್ಟುಕೊಂಡಿವೆ. ಈ ರಾಜಕೀಯ ಪಕ್ಷಗಳ ಧುರೀಣರು ಕಾರ್ಮಿಕ ಸಂಘಗಳಿಗೆ ನಾಯಕತ್ವವನ್ನು ಒದಗಿಸಿರುತ್ತಾರೆ. ಇದರಿಂದ ಕಾರ್ಮಿಕ ಸಂಘಗಳು ರಾಜಕೀಯ ಪಕ್ಷಗಳ ಸಂಪೂರ್ಣ ಬೆಂಬಲವನ್ನು ಪಡೆದಂತಾಗಿ ಬಲಯುತ ಹಾಗೂ ಒತ್ತಡ ಹೇರಬಲ್ಲ ಶಕ್ತಿ ಸಮುದಾಯಗಳಾಗಿವೆ.

 ಎರಡನೆಯದಾಗಿ ರಾಜ್ಯದಲ್ಲಿ ಕಾರ್ಮಿಕ ಸಂಘಗಳು ಕೆಲವೇ ಅನುಕೂಲಕರವಾದ ಬಿಂದುಗಳಲ್ಲಿ ಕೇಂದ್ರೀಕೃತವಾಗಿವೆ. ಉದಾಹರಣೆಗಾಗಿ, ಕಾರ್ಮಿಕ ಸಂಘಗಳು ಕೆಲವು ಅತಿಮುಖ್ಯವಾದ ಸಂಸ್ಥೆಗಳಲ್ಲಿ ಅಂದರೆ ಸರ್ವಜನೋಪಯೋಗಿ ಸಂಸ್ಥೆಗಳು, ದೇಶ ಸಂರಕ್ಷಣೆಗೆ ಸಂಬಂದಿsಸಿದ ಕೈಗಾರಿಕಾ ಸಂಸ್ಥೆಗಳು, ಆರ್ಥಿಕ ಬೆಳೆವಣಿಗೆಗೆ ಬೇಕಾಗುವ ಮೂಲ ವಸ್ತುಗಳನ್ನು ಉತ್ಪಾದಿಸುವ ಕೈಗಾರಿಕಾ ಘಟಕಗಳು ಇತ್ಯಾದಿಗಳಲ್ಲಿ ಕೇಂದ್ರೀಕೃತವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಕಾರ್ಮಿಕರು ಮುಷ್ಕರಗಳನ್ನೇನಾದರೂ ಹೂಡಿ ಉತ್ಪಾದನೆ ತಡೆಗಟ್ಟಲು ಪ್ರಯತ್ನಿಸಿದರೆ ರಾಷ್ಟ್ರದ ಹಾಗೂ ರಾಜ್ಯದ ಆರ್ಥಿಕ ಬೆಳೆವಣಿಗೆಗೆ ಮತ್ತು ಸಾರ್ವಜನಿಕರ ಸೇವಾ ಸೌಲಭ್ಯಗಳಿಗೆ ಧಕ್ಕೆ ಒದಗುವುದರಿಂದ ಸರ್ಕಾರವೇ ಆಗಲಿ ಮಾಲೀಕರೇ ಆಗಲಿ ಈ ಕಾರ್ಮಿಕ ಸಂಘಗಳನ್ನು ಕಡೆಗಣಿಸುವಂತಿಲ್ಲದಂತಾಗಿದೆ. 1991ರಿಂದ ಈಚೆಗೆ ದೇಶದಲ್ಲಿ ತೀವ್ರವಾಗಿ ಜಾರಿಗೆ ಬಂದ ಆರ್ಥಿಕ ಉದಾರೀಕರಣ ಹಾಗೂ ಸರ್ಕಾರಿ ವಲಯದ ಉದ್ಯಮಗಳ ಖಾಸಗೀಕರಣದ ನೀತಿಯಿಂದಾಗಿ ಕಾರ್ಮಿಕರ ಕಾನೂನುಗಳನ್ನು ಪುನರ್ವಿಮರ್ಶಿಸಲಾಗುತ್ತಿವೆ. ಈ ಪ್ರವೃತ್ತಿಯ ವಿರುದ್ಧ ಕಾರ್ಮಿಕರು ಹೋರಾಟದಲ್ಲಿ ತೊಡಗಿದ್ದಾರೆ.  

ಕಾರ್ಮಿಕ ಕಲ್ಯಾಣ: ಕಾರ್ಮಿಕ ಕಲ್ಯಾಣ ವಿಶಾಲವಾದ ಅರ್ಥದಲ್ಲಿ ಕಾರ್ಮಿಕರ ಕಲ್ಯಾಣಾಬಿsವೃದ್ಧಿಗೋಸ್ಕರ ಸರ್ಕಾರ, ಉದ್ಯಮಶೀಲರು ಮತ್ತು ಕಾರ್ಮಿಕ ಸಂಘಗಳು ಹಾಗೂ ಹಲವು ದಾನಶೀಲ ಸಂಸ್ಥೆಗಳು ಕೈಗೊಳ್ಳುವ ಕಾನೂನುಬದ್ಧವಾದ ಹಾಗೂ ಸ್ವಯಂಪ್ರೇರಿತ ಕಾರ್ಯಕ್ರಮಗಳನ್ನೊಳ ಗೊಂಡಿರುತ್ತವೆ. ಈ ಕಾರ್ಯಕ್ರಮಗಳು ಕಾರ್ಮಿಕರ ಕಾರ್ಯದಕ್ಷತೆಯನ್ನು ಮತ್ತು ಅವರ ಜೀವನದ ಸ್ಥಿತಿಗಳನ್ನು ಉತ್ತಮಗೊಳಿಸುವ ಕ್ರಮಗಳಷ್ಟೇ ಆಗಿರದೆ ಸಾಮಾಜಿಕ ಭದ್ರತಾಕ್ರಮಗಳಾಗಿವೆ. ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಸೌಕರ್ಯಗಳನ್ನು ಮತ್ತು ಕಾರ್ಮಿಕರಿಗೆ ವಸತಿಸೌಕರ್ಯಗಳನ್ನು ಒದಗಿಸಿಕೊಡುವ ಕಾರ್ಯಕ್ರಮಗಳೂ ಆಗಿರುತ್ತವೆ. ಈ ಕಾರ್ಯಕ್ರಮಗಳೆಲ್ಲವನ್ನೂ ಅಂತಾರಾಷ್ಟ್ರೀಯ ಕಾರ್ಮಿಕ ಸಂಘವೂ ಅನುಮೋದಿಸಿ ವಿಶ್ವದ ಪ್ರತಿಯೊಂದು ಕೈಗಾರಿಕಾ ರಾಷ್ಟ್ರದಲ್ಲೂ ಅವುಗಳನ್ನು ಜಾರಿಗೆ ತರುವಂತೆ ಪೆÇ್ರೀತ್ಸಾಹಿಸುತ್ತಿದೆ.

 ಬಡತನ ಅಧಿಕವಾಗಿರುವ ಮತ್ತು ಕಲ್ಯಾಣ ರಾಜ್ಯ ಸ್ಥಾಪನೆಯನ್ನು ಗುರಿಯಾಗಿಟ್ಟುಕೊಂಡಿರುವ ಭಾರತದಲ್ಲೂ ಈ ಎಲ್ಲ ಕಾರ್ಮಿಕ ಕಲ್ಯಾಣ ಕಾರ್ಯಕ್ರಮಗಳು ಜಾರಿಗೆ ಬಂದಿವೆ.

 ಕರ್ನಾಟಕದಲ್ಲಿ, ಎರಡನೆಯ ಮಹಾಯುದ್ಧದ ಪೂರ್ವದಲ್ಲಿಯೇ ಕೆಲವು ಪ್ರಗತಿಪರ ಹಾಗೂ ವಿವೇಕಿ ಉದ್ದಿಮೆದಾರರು ಸ್ವಪ್ರೇರಣೆಯಿಂದಲೆ ತಮ್ಮ ಕಾರ್ಖಾನೆಗಳಲ್ಲಿ ಕೆಲವು ಕಾರ್ಮಿಕ ಕಲ್ಯಾಣ ಸೌಲಭ್ಯಗಳನ್ನು ಒದಗಿಸಿದ್ದರು. ಆದರೆ ಈ ಸೌಲಭ್ಯಗಳು ಸಾಕಷ್ಟು ವ್ಯಾಪಕವಾಗಿಲ್ಲ ದಿದ್ದುದರಿಂದಲೂ ಕಾರ್ಮಿಕರ ಸಂಘಗಳು ಇವುಗಳನ್ನು ಕೈಗೊಳ್ಳಲು ಸಾಮಥ್ರ್ಯ ಹೊಂದಿಲ್ಲದಿದ್ದುದರಿಂದಲೂ ಸರ್ಕಾರ ಮಧ್ಯೆ ಪ್ರವೇಶಿಸಬೇಕಾಯಿತು. ಅದರಂತೆ ಕೇಂದ್ರದ 1948ರ ಕಾರ್ಖಾನೆಯ ಕಾನೂನಿನ ಅನ್ವಯ ರಾಜ್ಯದಲ್ಲಿ 1950ರಿಂದ ಪ್ರತಿಯೊಬ್ಬ ಉದ್ದಿಮೆದಾರನೂ ಅನೇಕ ಸೌಲಭ್ಯಗಳನ್ನು ತನ್ನ ಕಾರ್ಖಾನೆಯಲ್ಲಿ ನೇಮಿತರಾಗಿರುವ ಕಾರ್ಮಿಕರಿಗೆ ಕಡ್ಡಾಯವಾಗಿ ಒದಗಿಸಬೇಕಾಯಿತು. ಈ ಸೌಲಭ್ಯಗಳು ಯಾವುವೆಂದರೆ ಕುಡಿಯಲು ತಂಪಾದ ಹಾಗೂ ಶುದ್ಧವಾದ ನೀರು, ಶೌಚಗೃಹ, 250ಕ್ಕೂ ಹೆಚ್ಚು ಕಾರ್ಮಿಕರಿರುವ ಕಾರ್ಖಾನೆಗಳಲ್ಲಿ ಪ್ರತಿಯೊಂದರಲ್ಲೂ ಉಪಾಹಾರಮಂದಿರ, 50ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರಿರುವ ಪ್ರತಿಯೊಂದು ಕಾರ್ಖಾನೆಯಲ್ಲಿಯೂ ಶಿಶುವಿಹಾರ, ವಿಶ್ರಾಂತಿಗೃಹ, 150ಕ್ಕೂ ಹೆಚ್ಚು ಕಾರ್ಮಿಕರಿರುವ ಪ್ರತಿ ಕಾರ್ಖಾನೆಯಲ್ಲಿಯೂ ಉಪಾಹಾರ ಕೋಣೆಗಳು ಇತ್ಯಾದಿ. ಕಾರ್ಮಿಕರ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ಪ್ರತಿಯೊಂದು ದೊಡ್ಡ ಕಾರ್ಖಾನೆಗಳಲ್ಲಿಯೂ ಆವಿ, ಹೊಗೆ ಮತ್ತು ದೂಳು ಹೊರಗೆ ಹೋಗುವಂತೆ ಸರಿಯಾದ ವ್ಯವಸ್ಥೆ, ಆಕಸ್ಮಿಕಗಳನ್ನು ತಡೆಗಟ್ಟುವ ದೃಷ್ಟಿಯಿಂದ ಯಂತ್ರಗಳಿಗೆ ಬೇಲಿ ಅಥವಾ ಕಟಕಟೆಯನ್ನು ಕಟ್ಟಿಸುವುದು, ಕಾರ್ಮಿಕರುಗಳಿಗೆ ಸುರಕ್ಷತೆಯ ವಸ್ತ್ರಗಳು, ಪಾದರಕ್ಷೆಗಳು ಮತ್ತು ಕನ್ನಡಕಗಳು ಮೊದಲಾದುವುಗಳನ್ನು ಒದಗಿಸುವುದು ಇತ್ಯಾದಿ ಸೌಲಭ್ಯಗಳೆಲ್ಲವೂ ಕಡ್ಡಾಯವಾಗಿ ಜಾರಿಗೆ ಬಂದುವು. ಕಾರ್ಖಾನೆಗಳ ಕಾಯಿದೆಗೆ ಅನುಗುಣವಾದ ನಿಯಮಗಳನ್ನು ಗಣಿ, ಪ್ಲಾಂಟೇಷನ್ ಮತ್ತು ಬಂದರುಗಳ ಕಾರ್ಮಿಕರುಗಳ ಕಲ್ಯಾಣದ ದೃಷ್ಟಿಯಿಂದ ರಾಜ್ಯದಲ್ಲಿ ಜಾರಿಗೆ ತರಲಾಯಿತು.

 ಕಾರ್ಮಿಕರ ಅನಿಶ್ಚಿತತೆಯ ಪರಿಸ್ಥಿತಿಗಳನ್ನು ಎದುರಿಸಲು ನೆರವಾಗುವ ಸೌಲಭ್ಯಗಳನ್ನೊದಗಿಸುವ ಎರಡನೆಯ ಪಂಚವಾರ್ಷಿಕ ಯೋಜನೆಯ ಕಾಲದಲ್ಲಿ ರಾಜ್ಯ ಸರ್ಕಾರ ನೌಕರರ ರಾಜ್ಯ ವಿಮಾಯೋಜನೆಯನ್ನು ಜಾರಿಗೆ ತಂದಿತು. 1958ರಲ್ಲಿ ಬೆಂಗಳೂರಿನಲ್ಲೂ 1960ರಲ್ಲಿ ಹುಬ್ಬಳ್ಳಿಯಲ್ಲೂ 1961ರಲ್ಲಿ ದಾಂಡೇಲಿಯಲ್ಲೂ ಈ ಯೋಜನೆಯನ್ನು ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರಿಗೆ ಅನ್ವಯಿಸಲಾಯಿತು. ಉದ್ಯೋಗದಾತ, ಸರ್ಕಾರ ಮತ್ತುಕಾರ್ಮಿಕರಿಂದ ಪಡೆದ ಅಂಶದಾನಗಳಿಂದ ರಚಿಸಿದ ನಿದಿsಯಿಂದ ಈ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ವಿಮಾ ಯೋಜನೆಗೆ ಒಳಪಟ್ಟು ರಾಜ್ಯದ ಕಾರ್ಮಿಕರು ಐದು ಬಗೆಯ ಸೌಲಭ್ಯಗಳನ್ನು ಇದರಿಂದ ಪಡೆಯುತ್ತಾರೆ. ಅಸ್ವಸ್ಥತಾ ಪರಿಹಾರ, ಪ್ರಸೂತಿ ಪರಿಹಾರ, ಕೆಲಸಮದಲ್ಲಿ ನಿರತರಾದಾಗ ಆದ ಅಂಗವಿಕಲತೆ, ಉದ್ಯೋಗಹಾನಿ ಮತ್ತು ಕಾಯಿಲೆಗಳ ಕಾಲದಲ್ಲಿ ಕಾರ್ಮಿಕರಿಗೆ ನೆರವು, ಉಚಿತ ವೈದ್ಯಕೀಯ ಚಿಕಿತ್ಸೆ ಮತ್ತು ಮರಣಹೊಂದಿದ ಕಾರ್ಮಿಕನ ಅವಲಂಬಿತರಿಗೆ ಪರಿಹಾರ - ಇವೇ ಈ ಐದು ಸೌಲಭ್ಯಗಳು. ರಾಜ್ಯದ ಎಲ್ಲ ಕೈಗಾರಿಕಾ ಕಾರ್ಮಿಕರುಗಳನ್ನು ಈ ಯೋಜನೆಯ ವ್ಯಾಪ್ತಿಗೊಳಪಡಿಸುವುದೇ ರಾಜ್ಯಸರ್ಕಾರದ ಗುರಿಯಾಯಿತು.

 ಕಾಯಿದೆಗೊಳಪಡದ ಸೌಲಭ್ಯಗಳನ್ನೂ ಹಲವು ಉದ್ಯೋಗದಾತರು ಒದಗಿಸುತ್ತಿದ್ದಾರೆ. ಇವುಗಳಲ್ಲಿ ಮುಖ್ಯವಾದುವು ಉಚಿತ ವೈದ್ಯಕೀಯ ಚಿಕಿತ್ಸೆ, ಶಿಕ್ಷಣ ಮತ್ತು ಮನರಂಜನೆ. ನೌಕರರ ರಾಜ್ಯ ವಿಮಾ ವ್ಯವಸ್ಥೆಯ ಪ್ರಕಾರ ಚಿಕಿತ್ಸೆಯ ಸೌಲಭ್ಯವಿದ್ದರೂ ಕೆಲವು ಉದ್ಯಮಗಳು ತಮ್ಮವರೇ ಆದ ವೈದ್ಯರನ್ನು ನಿಯಮಿಸಿರುವುದುಂಟು. ಕಾರ್ಮಿಕರ ಮಕ್ಕಳ ಶಿಕ್ಷಣದ ವಿಷಯದಲ್ಲಿ ಅನೇಕ ಉದ್ಯಮಗಳು ಉದಾರವಾಗಿ ಧನಸಹಾಯ ನೀಡುತ್ತಿವೆ ಮತ್ತು ಕೆಲವು ಉದ್ಯಮಗಳು ತಮ್ಮವೇ ಆದ ಶಾಲೆಗಳನ್ನು ನಡೆಸುತ್ತಿವೆ. ಕಾರ್ಖಾನೆಗಳ ಪರಿಸರದಲ್ಲೇ ಕಾರ್ಮಿಕರಿಗೆ ವಸತಿಸೌಲಭ್ಯವನ್ನು  ಒದಗಿಸಿಕೊಡುವುದರಲ್ಲಿ ಕೆಲವು ಉದ್ದಿಮೆದಾರರು ಸರ್ಕಾರಕ್ಕಿಂತ ಹೆಚ್ಚು ಉತ್ತಮವಾದ ಪಾತ್ರವನ್ನು ವಹಿಸಿದ್ದಾರೆ. ಬೆಂಗಳೂರಿನಲ್ಲಿ ಮತ್ತು ಇತರ ದೊಡ್ಡ ನಗರಗಳಲ್ಲಿ ಕಾರ್ಮಿಕರು ವಾಸಸ್ಥಾನದಿಂದ ಕಾರ್ಖಾನೆಗೆ ಹೋಗಿಬರಲು ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆಯನ್ನು ಅನೇಕ ಕಾರ್ಖಾನೆಗಳು ಏರ್ಪಡಿಸಿವೆ. ಬೆಲೆಗಳ ತೀವ್ರ ಏರಿಕೆಯ ಕಾಲದಲ್ಲಿ ಕಾರ್ಮಿಕರಿಗೆ ಅವಶ್ಯವಾದ ಪದಾರ್ಥಗಳನ್ನು ನ್ಯಾಯ ಬೆಲೆಗಳಲ್ಲಿ ದೊರಕಿಸಲು ಅನುಕೂಲವಾಗುವಂತೆ ಬಳಕೆದಾರರ ಸಂಸ್ಥೆಗಳನ್ನು ಸ್ಥಾಪಿಸಲು ಉತ್ತೇಜನ ನೀಡಿರುವುದಲ್ಲದೆ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲಾಗಿದೆ. ಇದಕ್ಕೆ ಅಗತ್ಯವಾದ ಬಂಡವಾಳ, ಕಟ್ಟಡ ಹಾಗೂ ಕಾರ್ಯನಿರ್ವಹಣೆಯ ಸೌಲಭ್ಯಗಳನ್ನು ಉದ್ದಿಮೆದಾರರು ಒದಗಿಸಿದ್ದಾರೆ.

 ಕರ್ನಾಟಕ ರಾಜ್ಯದಲ್ಲಿ ಕಾರ್ಮಿಕರ ಕಲ್ಯಾಣ ಸಾಧನೆಗಾಗಿ  ಎರಡನೆಯ ಪಂಚವಾರ್ಷಿಕ ಯೋಜನೆಯ ಕಾಲದಿಂದ ಒಂದು ನಿರ್ದಿಷ್ಟ ಹಣದ ಮೊತ್ತವನ್ನು ರಾಜ್ಯ ಸರ್ಕಾರ ಖರ್ಚು ಮಾಡುತ್ತಿದೆ. ಕಾರ್ಮಿಕ ಕಲ್ಯಾಣ ಕೇಂದ್ರಗಳು ಸ್ಥಾಪಿಸಲ್ಟಟ್ಟಿವೆ. ರಾಜ್ಯದಲ್ಲಿ ಕಾರ್ಮಿಕರಿಗೆ  ಹಲವು ವಾಚನಾಲಯಗಳು, ಮನರಂಜನಾ ಸೌಲಭ್ಯಗಳು, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಸೌಕರ್ಯಗಳು, ಮಹಿಳೆಯರಿಗಾಗಿ ಹೊಲಿಗೆ ತರಬೇತಿ ಕೇಂದ್ರಗಳು, ಉದ್ಯೋಗ ವಿನಿಮಯ ಕೇಂದ್ರಗಳು, ಶಾಲೆ ಬಿಡುವ ಯುವಕರು ಅವರವರ ಅಬಿsರುಚಿ ಆಸಕ್ತಿಗಳಿಗೆ ಅನುಗುಣವಾಗಿ ಉದ್ಯೋಗಗಳನ್ನು ಆರಿಸಿಕೊಳ್ಳಲು ನೆರವಾಗಲು ವೃತ್ತಿಪೂರ್ವ ಮಾರ್ಗದರ್ಶನ ಘಟಕಗಳು - ಇವೇ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗಿದೆ. ಇವುಗಳ ಜೊತೆಗೆ ಇನ್ನೂ ಅನೇಕ ಖಾಸಗಿ ಉದ್ಯಮಗಳಿಂದ ನಿರ್ದೇಶಿತವಾದ ಕಾರ್ಮಿಕ ಕಲ್ಯಾಣ ಕೇಂದ್ರಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ.

 ಕಾರ್ಮಿಕ ಕಲ್ಯಾಣವನ್ನು ಸಾದಿsಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆಯನ್ನು ಸ್ಥಾಪಿಸಿದೆ. ಅದು ಕಾರ್ಮಿಕ ಕಮಿಷನರ್‍ರ ನೇತೃತ್ವದಲ್ಲಿದ್ದು 11 ವಿಭಾಗ ಕಚೇರಿಗಳನ್ನು ಹೊಂದಿದೆ, 99 ಉಪ ವಿಭಾಗ ಕಚೇರಿಗಳು ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ. ತಾಲ್ಲೂಕು ಮಟ್ಟದಲ್ಲಿ 164 ವೃತ್ತ ಕಚೇರಿಗಳಿವೆ. ಈ ಇಲಾಖೆಯ ಮುಖ್ಯ ಕಾರ್ಯಗಳೆಂದರೆ: 1 ಮುಷ್ಕರಗಳು ಆಗದಂತೆ ತಡೆಯುವುದು;  ಕಾರ್ಮಿಕರು ಮತ್ತು ಒಡೆತನದ ನಡುವೆ ಉದ್ಭವಿಸುವ ಕೈಗಾರಿಕಾ ವಿವಾದಗಳನ್ನು ಸಂಧಾನದ ಮೂಲಕ ಬಗೆಹರಿಸುವುದು. 2 ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಿದ ಕಾರ್ಮಿಕ ಕಾನೂನುಗಳು ಜಾರಿಯಾಗುವಂತೆ ನೋಡಿಕೊಳ್ಳುವುದು. 3 ಕನಿಷ್ಠ ವೇತನವನ್ನು ನಿಗದಿಗೊಳಿಸಿ ಅದು ಕಾರ್ಯಗತವಾಗುವಂತೆ ಮಾಡುವುದು. 4 ಕಾರ್ಮಿಕ ಕಲ್ಯಾಣ ಮಂಡಳಿಯ ಕೇಂದ್ರಗಳ ಮೂಲಕ ಕಾರ್ಮಿಕರ ಶಿಕ್ಷಣ ಅವರ ಮಕ್ಕಳ ಪೆÇೀಷಣೆ ಬಗ್ಗೆ ನಿಗಾ ಇಡುವುದು. 5 ವಿವಿಧ ವೇತನ ಮಂಡಳಿಗಳ ಶಿಫಾರಸುಗಳು ಜಾರಿಯಾಗುವಂತೆ ಮಾಡುವುದು. 6 ವಿವಿಧ ಕಾರ್ಮಿಕ ಕಲ್ಯಾಣ ಶಾಸನಗಳ ಪ್ರಯೋಜನ ಕಾರ್ಮಿಕರಿಗೆ ದೊರೆಯುವಂತೆ ಮಾಡುವುದು. 7 ವ್ಯವಸಾಯ ಮತ್ತಿತರ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ವೇತನ ಲಭ್ಯವಾಗುವಂತೆ ಖಾತರಿಪಡಿಸುವುದು. ರಾಜ್ಯದಲ್ಲಿ 9 ಇ.ಎಸ್.ಐ. ಆಸ್ಪತ್ರೆಗಳು, 129 ಚಿಕಿತ್ಸಾಲಯಗಳು, 9 ಆಯುರ್ವೇದ ಕೇಂದ್ರಗಳು ಕಾರ್ಮಿಕರ ಆರೋಗ್ಯ ಕ್ಷೇಮಕ್ಕಾಗಿ ಸ್ಥಾಪಿತವಾಗಿವೆ (1998-99).  

        (ಎಸ್.ಎನ್‍ಎ.)