ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾವೂರ್, ಡಿ, ಕ್ಯಾಮಿಯೊ ಬೆನ್ಸೊ

ವಿಕಿಸೋರ್ಸ್ದಿಂದ

ಕಾವೂರ್, ಡಿ, ಕ್ಯಾಮಿಯೊ ಬೆನ್ಸೊ

 1810-1861. ಪೀಡ್ ಮಾಂಟ್ ರಾಜ್ಯದ ರಾಜನೀತಿಜ್ಞ ಮತ್ತು ಇಟಲಿಯ ಏಕೀಕರಣದ ಶಿಲ್ಪಿ. 1810ರಲ್ಲಿ ಟ್ಯೂರಿನ್‍ನಲ್ಲಿ ಶ್ರೀಮಂತ ಮನೆತನವೊಂದರಲ್ಲಿ ಜನಿಸಿ ಸೈನ್ಯ ಶಿಕ್ಷಣಪಡೆದು ಸೈನ್ಯದ ಯಾಂತ್ರಿಕ ವಿಭಾಗದಲ್ಲಿ ಸೇರಿದ. ಆದರೆ ತನ್ನ ಪ್ರಗತಿಪರ ಅಭಿಪ್ರಾಯಗಳಿಂದ ವರಿಷ್ಠರ ವಿರೋಧ ಗಳಿಸಿ 1831ರಲ್ಲಿ ಸೈನ್ಯದಿಂದ ಹೊರಬಂದು, ಮುಂದಿನ 15 ವರ್ಷಗಳನ್ನು ಲೆರಿಯಲ್ಲಿದ್ದ ತನ್ನ ತಂದೆಯ ಆಸ್ತಿಪಾಸ್ತಿಗಳ ವ್ಯವಸ್ಥೆಯಲ್ಲಿ ನಿರತನಾದ ನೂತನ ಕೃಷಿ ವಿಧಾನಗಳಲ್ಲೂ ಪಶುಪಾಲನೆಯಲ್ಲೂ ಹೆಚ್ಚಿನ ಆಸಕ್ತಿ ವಹಿಸಿದ. ಆರ್ಥಿಕ ಮತ್ತು ಕೈಗಾರಿಕಾ ಪ್ರಗತಿಗೆ ಸಾಧಕವಾದ ಮತ್ತು ರಾಜನೀತಿಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಈತ ಅಭ್ಯಸಿಸಿದನಲ್ಲದೆ ಹಲವಾರು ಬಾರಿ ಇಂಗ್ಲೆಂಡ್ ಪ್ರಾನ್ಸ್‍ಗಳಿಗೆ ಭೇಟಿನೀಡಿ ಅಲ್ಲಿಯ ರಾಜ್ಯಪದ್ಧತಿಗಳನ್ನು ತಿಳಿದುಕೊಂಡ.

1842ರಲ್ಲಿ ಟ್ಯೂರಿನ್ ನಗರದಲ್ಲಿ ಒಂದು ವ್ಯವಸಾಯ ಸಂಘವನ್ನು ಕಾವೂರ್ ಸ್ಥಾಪಿಸಿದ. ಚಾರಲ್ಸ್ ಆಲ್ಬರ್ಟ್ ದೊರೆ ಇದರ ಪೋಷಕ. ಇಟಲಿಯ ಏಕೀಕರಣವಾಗಬೇಕು. ವ್ಯಾಪಾರಾಭಿವೃದ್ಧಿಯಾಗಬೇಕು, ನೂತನ ರೈಲ್ವೆ ಮಾರ್ಗಗಳ ನಿರ್ಮಾಣಬೇಕು-ಎಂದು ಈತ ಮನವಿಗಳನ್ನು ಹೊರಡಿಸಿದ್ದು ಈ ಸಂಸ್ಥೆಯ ಮೂಲಕ. ಕ್ರೈಸ್ತಮಂಡಲಿಯ ಹತೋಟಿಯಿಂದ ವಿಮೋಚನೆಗಾಗೂ ವಾಕ್ ಸ್ವಾತಂತ್ರ್ಯಕ್ಕಾಗೂ ಹೋರಾಡಿದ. 1847ರಲ್ಲಿ ಈತ ಆರಂಭಿಸಿದ ರಿಸಾರ್ಜಿಮೆಂಟೊ ಪತ್ರಿಕೆ ಇವನ ರಾಜಕೀಯ ವಿಚಾರಗಳ ಪ್ರಚಾರಕ್ಕೆ ಮೀಸಲಾಯಿತು. ಪೀಡ್ ಮಾಂಟನಲ್ಲಿ ಇಂಗ್ಲಿಷ್ ಸಂವಿಧಾನದವನ್ನು ಆಚರಣೆಗೆ ತರಬೇಕೆಂದು ಪತ್ರಿಕೆಯ ಮೂಲಕ ಪ್ರಚಾರಮಾಡಿದ. ಪತ್ರಿಕಾಸ್ವಾತಂತ್ರ್ಯದ ಸ್ಥಾಪನೆ ಮತ್ತು ನಿರಂಕುಶ ನ್ಯಾಯಮಂಡಳಿಗಳ ರದ್ದಿಗಾಗಿ ಇವನು ಬಹುವಾಗಿ ಶ್ರಮಿಸಿದ. 1848ರಲ್ಲಿ ಚಾರಲ್ಸ್ ಆಲ್ಬರ್ಟ್ ಪೀಡ್‍ಮಾಂಟಿನಲ್ಲಿ ಹೊಸ ಸಂವಿಧಾನವನ್ನೂ ಪಾರ್ಲಿಮೆಂಟನ್ನೂ ಜಾರಿಗೆ ತಂದಾಗ ಕಾವೂರನಿಗೆ ಸಂತೋಷವಾಯಿತು.

ಪೀಡ್‍ಮಾಂಟಿನ ಪಾರ್ಲಿಮೆಂಟಿಗೆ ಟ್ಯೂರಿನ್ ನಗರದ ಸದಸ್ಯನಾಗಿ 1849ರ ಜೂನ್ ತಿಂಗಳಲ್ಲಿ ಕಾವೂರ್ ಆಯ್ಕೆ ಹೊಂದಿದ. ಆಗ ಉಗ್ರಗಾಮಿಗಳು ಜೋಸೆಫ್ ಮ್ಯಾಟ್‍ಜಿóನಿಯ ನೇತೃತ್ವದಲ್ಲಿ ರಾಜಪ್ರಭುತ್ವವನ್ನು ವಿರೋಧಿಸುತ್ತಿದ್ದರು. ಕಾವೂರ್ ಇದನ್ನು ಖಂಡಿಸಿದನಲ್ಲದೆ ಆಸ್ಟ್ರಿಯದ ವಿರುದ್ಧ ಯುದ್ಧದಲ್ಲಿ ತೊಡಗಿದ್ದ ಚಾರಲ್ಸ್ ಆಲ್ಬರ್ಟ್ ಬೆಂಬಲ ನೀಡಿದ.

1850ರಲ್ಲಿ ಕಾವೂರನಿಗೆ ಪೀಡ್‍ಮಾಂಟಿನ ಮಂತ್ರಿಮಂಡಲದಲ್ಲಿ ಒಂದು ಸ್ಥಾನ ಲಭ್ಯವಾಯಿತು. ವಾಣಿಜ್ಯ ಮತ್ತು ವ್ಯವಸಾಯ ಖಾತೆಗಳನ್ನು ಇವನಿಗೆ ನೀಡಲಾಯಿತು. ಇವನ ಅಧಿಕಾರದ ಕಾಲದಲ್ಲಿ ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳೊಡನೆ ವಾಣಿಜ್ಯ ಒಪ್ಪಂದಗಳಾದುವು. ರೈಲು ಮಾರ್ಗಗಳನ್ನು ವಿಸ್ತರಿಸಲಾಯಿತು. 1854ರಲ್ಲಿ ಪೀಡ್‍ಮಾಂಟಿನ ಪ್ರಧಾನಮಂತ್ರಿಯಾಗಿ ನೇಮಕವಾಗಿ, ಸಾಯುವವರೆಗೂ (1862ರ ಸ್ಥಾನದಲ್ಲಿ ಮುಂದುವರಿದ, ನಡುವೆ ಕೆಲವು ವಾರಗಳ ವಿನಾ). ಪೀಡ್ ಮಾಂಟಿನ ಪ್ರಧಾನಮಂತ್ರಿಯಾಗಿದ್ದ ಕಾಲದಲ್ಲಿ ಈತ ದೊಡ್ಡ ರಾಜಕಾರಣಿ ಮತ್ತು ವ್ಯವಹಾರಪಟುವೆಂದು ಹೆಸರು ಗಳಿಸಿ, ಆಸ್ಟ್ರಿಯದ ದಬ್ಬಾಳಿಕೆಗೆ ಒಳಗಾಗಿದ್ದ ಇಟಲಿಯ ಏಕೀಕರಣವನ್ನೂ ಸ್ವಾತಂತ್ರ್ಯವನ್ನೂ ಸಾಧಿಸಿದ. ಈ ಉದ್ದೇಶ ಸಾಧನೆಗಾಗಿ ಆಸ್ಟ್ರಿಯವನ್ನು ಇಟಲಿಯಾದ ಹೊಡೆದೋಡಿಸುವುದು. ಅನಿವಾರ್ಯವೆಂದೂ ಇದನ್ನು ಸಾಧಿಸಲು ಇಟಲಿಗೆ ಇತರ ಬಲಿಷ್ಠ ರಾಷ್ಟ್ರಗಳ ಬೆಂಬಲ ಅತ್ಯಂತ ಆವಶ್ಯಕವೆಂದೂ ಇವನು ತಿಳಿದಿದ್ದ. ಇದಕ್ಕೆ ವ್ಯವಸ್ಥಾಬದ್ದ ಆಡಳಿತ ಮತ್ತು ಪ್ರಗತಿಶೀಲ ಪ್ರಭುವನ್ನು ಹೊಂದಿದ್ದ ಪೀಡ್‍ಮಾಂಟ್ ಇಟಲಿಯ ನೇತೃತ್ತ್ವ ವಹಿಸಬೇಕಾಗಿತ್ತು. ಪೀಡ್‍ಮಾಂಟಿನ ಕೈಗಾರಿಕೆ, ವಾಣಿಜ್ಯಗಳನ್ನು ಉತ್ತಮಗೊಳಿಸಿ, ಆಡಳಿತ ಪದ್ಧತಿಯನ್ನು ಸುಧಾರಿಸಿ, ಪ್ರಗತಿಪರ ರಾಜ್ಯವನ್ನಾಗಿ ಮಾಡಿ, ಇತರ ಪ್ರಾಂತ್ಯಗಳ ಜನ ಪೀಡ್‍ಮಾಂಟಿನ ಮುಂದಾಳುತನವನ್ನು ಅಪೇಕ್ಷಿಸುವಂತಾದುದಕ್ಕೆ ಕಾವೂರನ ಪ್ರಯತ್ನವೇ ಕಾರಣ.

ಆಸ್ಟ್ರಿಯದ ವಿರುದ್ಧ ಪೀಡ್‍ಮಾಂಟಿಗೆ ನೆರವು ನೀಡಬಹುದಾಗಿದ್ದ ಪ್ರಬಲರಾಷ್ಟ್ರಗಳೆಂದರೆ ಬ್ರಿಟನ್ ಮತ್ತು ಫ್ರಾನ್ಸ್. ಯೂರೋಪಿನ ರಾಜಕೀಯದಲ್ಲಿ ಕೈಹಾಕಲು ಬ್ರಿಟನ್ನಿಗೆ ಆಸಕ್ತಿಯಿರಲಿಲ್ಲ. ಆದ್ದರಿಂದ ಇಟಲಿಯ ಭವಿಷ್ಯ ಫ್ರಾನ್ಸನ್ನು ಅವಲಂಬಿಸಿದೆಯೆಂಬುದು ಕಾವೂರನ ತೀರ್ಮಾನವಾಗಿತ್ತು. ಫ್ರಾನ್ಸಿನ ಚಕ್ರವರ್ತಿ ಮೂರನೆಯ ನೆಪೋಲಿಯನ್ ಮಹತ್ವಾಕಾಂಕ್ಷಿಯೂ ಸಾಹಸಿಯೂ ಆಗಿದ್ದ. ಅವನ ಒಲವನ್ನು ಪಡೆಯುವುದೇ ಕಾವೂರನ ಧ್ಯೇಯವಾಯಿತು.

1855ರಲ್ಲಿ ಅಂಥ ಒಂದು ಅವಕಾಶ ಲಭಿಸಿತು. ಇಂಗ್ಲೆಂಡ್ ಮತ್ತು ಫ್ರಾನ್ಸ್‍ಗಳು ರಷ್ಯದ ವಿರುದ್ಧ ಕ್ರಿಮಿಯ ಯುದ್ಧದಲ್ಲಿ ತೊಡಗಿದ್ದವು. ಕಾವೂರ್ ತನ್ನ ಮಂಡಲಿಗೂ ತಿಳಿಸದೆ, ದೊರೆ ವಿಕ್ಟರ್ ಎಮಾನ್ಯುಯೆಲನ ಅನುಮತಿ ಪಡೆದು ಬೇಷರತ್ತಾಗಿ ಇಂಗ್ಲೆಂಡ್ ಮತ್ತು ಫ್ರಾನ್ಸ್‍ಗಳ ಸಹಾಯಕ್ಕೆ ಪೀಡ್‍ಮಾಂಟ್ ಸೈನಿಕರನ್ನು ಕಳುಹಿಸಿಕೊಟ್ಟ. ಕ್ರಿಮಿಯ ಯುದ್ಧದಲ್ಲಿ ರಷ್ಯಕ್ಕೆ ಸೋಲುವುಂಟಾಯಿತು. 1856ರಲ್ಲಿ ಪ್ಯಾರಿಸಿನಲ್ಲಿ ನಡೆದ ಶಾಂತಿ ಸಮ್ಮೇಳನದಲ್ಲಿ ಭಾಗವಹಿಸಲು ಕಾವೂರನಿಗೆ ಆಹ್ವಾನ ಬಂತು. ಆ ಸದವಕಾಶವನ್ನುಪಯೋಗಿಸಿಕೊಂಡು ಕಾವೂರ್ ಇಟಲಿಯ ಭವಿಷ್ಯವನ್ನು ಕುರಿತು ಚರ್ಚಿಸಿದ. ಎರಡು ವರ್ಷಗಳ ಅನಂತರ ಕಾವೂರನಿಗೆ ಪ್ರತಿಫಲ ದೊರೆಯಿತು. ಮೂರನೆಯ ನೆಪೋಲಿಯನ್ ಮತ್ತು ಕಾವೂರ್ ಇವರು ಪ್ಲಾಂಬೆಯರ್ಸ್‍ನಲ್ಲಿ 1858ರ ಜುಲೈಯಲ್ಲಿ ಪರಸ್ಪರ ಸಂಧಿಸಿ ಈ ಬಗ್ಗೆ ಸಂಧಾನ ನಡೆಸಿದರು. ಇಟಲಿಯನ್ನು ಆಸ್ಟ್ರಿಯದ ಆಳ್ವಿಕೆ ಮತ್ತು ಪ್ರಭಾವದಿಂದ ಸಂಪೂರ್ಣವಾಗಿ ವಿಮೋಚನೆಗೊಳಿಸುವ ಉದ್ದೇಶದಿಂದ ಅದರ ವಿರುದ್ಧ ಯುದ್ಧ ಹೂಡಲು ರಹಸ್ಯ ಒಪ್ಪಂದಕ್ಕೆ ಬಂದರು. ಇಟಲಿಯಲ್ಲಿ ಆಸ್ಟ್ರಿಯದ ಆಳ್ವಿಕೆಗೆ ಒಳಗಾಗಿದ್ದ ಲಂಬಾರ್ಡಿ ಮತ್ತು ವೆನೀಷಿಯವನ್ನೂ ಪೋಪನ ರಾಜ್ಯದ ಒಂದು ಭಾಗವನ್ನೂ ಪೋಪನ ಅಧ್ಯಕ್ಷತೆಯಲ್ಲಿ ಒಂದುಗೂಡಿಸಬೇಕೆಂದೂ ನಿರ್ಣಯ ಮಾಡಲಾಯಿತು. ನೆಪೋಲಿಯನನ ಸಹಾಯಕ್ಕೆ ಪ್ರತಿಫಲವಾಗಿ ಸವಾಯ್ ಮತ್ತು ನೈಸ್ ಪ್ರದೇಶಗಳನ್ನು ಫ್ರಾನ್ಸಿಗೆ ಕೊಡಬೇಕಾಗಿತ್ತು. ಸೂಕ್ತ ಸಮಯದಲ್ಲಿ, ಆಸ್ಟ್ರಿಯದ ವಿರುದ್ಧ ನೆಪೋಲಿಯನ್ ಯುದ್ಧ ಪ್ರಾರಂಭಿಸುವುದಾಗಿಯೂ ಇದಕ್ಕಾಗಿ ನೆಪೋಲಿಯನ್ ಇನ್ನೂರು ಸಾವಿರ ಸೈನಿಕರನ್ನು ಒದಗಿಸಬೇಕೆಂದೂ ಪೀಡ್‍ಮಾಂಟ್ ರಾಜ್ಯ ನೂರು ಸಾವಿರ ಸೈನಿಕರನ್ನು ಒದಗಿಸಬೇಕೆಂದೂ ತೀರ್ಮಾನಿಸಲಾಯಿತು.

ಈ ಒಡಂಬಡಿಕೆಯಂತೆ ಪೀಡ್‍ಮಾಂಟ್ ಯುದ್ಧಸನ್ನದ್ಧವಾಗುತ್ತಿದ್ದಾಗ 1859ರ ಏಪ್ರಿಲ್ 23ರಂದು ಆಸ್ಟ್ರಿಯದಿಂದ ಅದಕ್ಕೆ ಎಚ್ಚರಿಕೆ ಬಂತು. 3 ದಿನಗಳೊಳಗೆ ಶಸ್ತ್ರತ್ಯಾಗ ಮಾಡದಿದ್ದರೆ ಯುದ್ಧ ಅನಿವಾರ್ಯವೆಂದು ಅದು ತಿಳಿಸಿತು. ಪೀಡ್‍ಮಾಂಟ್ ಆ ಬೆದರಿಕೆಗೆ ಸೊಪ್ಪುಹಾಕಲಿಲ್ಲ, ಏಪ್ರಿಲ್ 26ರಂದು ಯುದ್ಧ ಪ್ರಾರಂಭವಾಯಿತು. ಏಪ್ರಿಲ್ 29ರಂದು ನೆಪೋಲಿಯನ್ ಆಸ್ಟ್ರಿಯದ ವಿರುದ್ಧ ಯುದ್ಧ ಘೋಷಣೆ ಮಾಡಿದ. ಪೀಡ್‍ಮಾಂಟಿನ ಪಾರ್ಲಿಮೆಂಟು ದೊರೆ ವಿಕ್ಟರ್ ಎಮಾನ್ಯುಯೆಲನನ್ನು ಸರ್ವಾಧಿಕಾರಿಯಾಗಿ ನೇಮಿಸಿ ವಿಸರ್ಜನೆಗೊಂಡಿತು.

ಮಾಗೆಂಟ ಮತ್ತು ಸಾಲ್ಟೆರಿನೊ ಕದನಗಳಲ್ಲಿ ಆಸ್ಟ್ರಿಯ ಪರಾಭವಗೊಂಡಿತು. ನೆಪೋಲಿಯನ್ ಲಂಬಾರ್ಡಿಯನ್ನು ಆಕ್ರಮಿಸಿಕೊಂಡ. ಇಟಲಿಯಲ್ಲಿ ಆಸ್ಟ್ರಿಯದ ಅಧೀನದಲ್ಲಿ ವೆನೀಷಿಯ ಮಾತ್ರ ಉಳಿದಿತ್ತು. ಆದರೆ ನೆಪೋಲಿಯನ್ ಕಾವೂರನಿಗೆ ತಿಳಿಸದೆಯೇ ಯುದ್ಧ ನಿಲ್ಲಿಸಿ, ಆಸ್ಟ್ರಿಯದ ಚಕ್ರವರ್ತಿ ಫ್ರಾನ್ಸಿಸ್ ಜೋಸೆಫ್‍ನೊಡನೆ ವಿಲ್ಲ ಫ್ರಾಂಕ ಒಪ್ಪಂದ ಮಾಡಿಕೊಂಡ. ಇದರ ಮುಖ್ಯ ಷರತ್ತುಗಳಿವು : 1 ಆಸ್ಟ್ರಿಯದ ಅಧೀನದಲ್ಲಿ ವೆನೀಷಿಯ ಮಾತ್ರ ಉಳಿಯತಕ್ಕದ್ದು. 2 ಲಂಬಾರ್ಡಿ ಪೀಡ್ ಮಾಂಟಿಗೆ ಸೇರಬೇಕು. 3 ಇಟಲಿಯ ಉಳಿದ ರಾಜ್ಯಗಳ ಒಕ್ಕೂಟ ಸ್ಥಾಪನೆಯಾಗಬೇಕು.

ನೆಪೋಲಿಯನನ ಈ ಅನಿರೀಕ್ಷಿತ ನಡತೆಗೆ ಹಲವು ಕಾರಣಗಳಿದ್ದುವು. ಆಸ್ಟ್ರಿಯವನ್ನು ಸಂಪೂರ್ಣವಾಗಿ ಸೋಲಿಸಲು ಇದ್ದ ತೊಂದರೆಗಳು ಅವನಿಗೆ ಗೊತ್ತಿದ್ದವು. ಆವರೆಗಿನ ತನ್ನ ಜಯಗಳು ನಿರ್ಣಾಯಕವಲ್ಲವೆಂದೂ ಸಂಪದ್ಭರಿತ ದೇಶವಾದ ಆಸ್ಟ್ರಿಯದೊಂದಿಗೆ ದೀರ್ಘ ಹೋರಾಟಕ್ಕೆ ತಾನು ಮಾಡಿಕೊಂಡಿದ್ದ ಸಿದ್ಧತೆ ಸಾಲದೆಂದೂ ಅವನು ಮನಗಂಡಿದ್ದ. ಇದಲ್ಲದೆ ಆಸ್ಟ್ರಿಯದ ನೆರವಿಗೆ ರಷ್ಯ ಬರುವ ಸಾಧ್ಯತೆಯಿತ್ತು. ಇಟಲಿಯ ಏಕೀಕರಣವಾಗಿ ಅದು ಪ್ರಾಬಲ್ಯ ಗಳಿಸಿದರೆ, ಫ್ರಾನ್ಸ್ ದೇಶಕ್ಕೆ ಅಪಾಯ ಒದಗಬಹುದೆಂದೂ ಅವನು ಯೋಚಿಸಿದ.

ಒಪ್ಪಂದದ ಸುದ್ದಿ ಕಾವೂರನಿಗೆ ಸಿಡಿಲಿನೋಪಾದಿಯಲ್ಲಿ ಬಂತು. ಇದರಿಂದ ಇವನ ಆಶಾಭಂಗವಾಯಿತು. ಫ್ರಾನ್ಸಿನ ವಿರುದ್ಧ ತೀವ್ರಕ್ರಮ ತೆಗೆದುಕೊಳ್ಳಬೇಕೆಂದು ವಿಕ್ಟರ್ ಎಮಾನ್ಯುಯೆಲನಿಗೆ ಕಾವೂರ್ ಸೂಚಿಸಿದ. ಎಮಾನ್ಯುಯೆಲ್ ಒಪ್ಪಲಿಲ್ಲ. ಕಾವೂರ್ ಮುಖ್ಯಮಂತ್ರಿತ್ವಕ್ಕೆ ರಾಜೀನಾಮೆ ಕೊಟ್ಟು ಸ್ವಿಟ್ಜರ್ಲೆಂಡಿಗೆ ತೆರಳಿದ.

ಆಸ್ಟ್ರಿಯದೊಡನೆ ಯುದ್ಧ ನಡೆಯುತ್ತಿದ್ದಾಗ ಇಟಲಿಯ ಪೋಪನ ರಾಜ್ಯಕ್ಕೆ ಸೇರಿದ್ದ ರೊಮಾನಾ, ಮೊಡೇನಾ, ಪಾರ್ಮ ಮತ್ತು ಟಸ್ಕನಿಗಳ ಜನ ಬಂಡಾಯವೆದ್ದು ನಿರಂಕುಶ ಪ್ರಭುತ್ವವನ್ನು ಅಂತ್ಯಗೊಳಿಸಿದರು; ತಾವು ಪೀಡ್‍ಮಾಂಟ್ ರಾಜ್ಯಕ್ಕೆ ಸೇರಬೇಕೆಂಬುದು ಅವರ ಅಭಿಮತವಾಗಿತ್ತು. ವಿಕ್ಟರ್ ಎಮಾನ್ಯುಯೆಲ್ ಇದಕ್ಕೆ ಒಪ್ಪಿದ. ಈ ಎಲ್ಲ ರಾಜ್ಯಗಳೂ ಸೇರಿದ ಸಂಯುಕ್ತ ಪಾರ್ಲಿಮೆಂಟಿನ ಪ್ರಥಮ ಅಧಿವೇಶನವನ್ನು 1860ರ ಏಪ್ರಿಲ್ 2ರಂದು ಟ್ಯೂರಿನ್ ನಗರದಲ್ಲಿ ಪ್ರಾರಂಭಿಸಿದ. ಹೀಗೆ ಇಟಲಿಯ ಏಕೀಕರಣ ಸಾಧಿಸಿತು. ಸವಾಯ್ ಮತ್ತು ನೈಸ್ ನಗರಗಳು ಫ್ರಾನ್ಸಿಗೆ ದೊರಕಿದುವು.

ಇಟಲಿಯ ನೇಪಲ್ಸಿನಲ್ಲಿ ರಾಜ್ಯವನ್ನಾಳುತ್ತಿದ್ದ ಎರಡನೆಯ ಫ್ರಾನ್ಸಿಸ್ ನಿರಂಕುಶ ಪ್ರಭುವಾಗಿದ್ದ. ನೇಪಲ್ಸಿನ ಆಡಳಿತಕ್ಕೆ ಸೇರಿದ ಸಿಸಿಲಿ ದ್ವೀಪವಾಸಿಗಳು 1869ರಲ್ಲಿ ದಂಗೆ ಎದ್ದಾಗ ಇಟಲಿಯ ದಳಪತಿ ಗಾರಿವಾಲ್ಡಿ ಜನತೆಯ ಪರವಾಗಿ ತನ್ನ ಸ್ವಂತ ಪಡೆಯನ್ನು ತೆಗೆದುಕೊಂಡು ಹೋಗಿ ಫ್ರಾನ್ಸಿಸನನ್ನು ಸಿಸಿಲಿಯಲ್ಲಿ ಸೋಲಿಸಿ ನೇಪಲ್ಸ್ ನಗರವನ್ನು ವಶಪಡಿಸಿಕೊಂಡು ವಿಕ್ಟರ್ ಎಮಾನ್ಯುಯೆಲನ ಹೆಸರಿನಲ್ಲಿ ಸರ್ವಾಧಿಕಾರಿಯಾದ. ಪೋಪನ ರಕ್ಷಣೆಯಲ್ಲಿದ್ದ ಮತ್ತು ಫ್ರಾನ್ಸಿನ ರಕ್ಷಣೆ ಪಡೆದಿದ್ದ ರೋಮ್ ನಗರವನ್ನು ಮುತ್ತುವ ಸಿದ್ಧತೆ ನಡೆಸಿದ. ರೋಮಿಗೆ ಮುತ್ತಿಗೆ ಹಾಕಿದರೆ ಫ್ರಾನ್ಸಿನೊಡನೆ ಯುದ್ಧ ಅನಿವಾರ್ಯವಾಗುತ್ತಿತ್ತು. ಈ ಅಪಾಯವನ್ನು ತಪ್ಪಿಸಲು ಕಾವೂರ್ ಪುನಃ ಮುಖ್ಯಮಂತ್ರಿಯಾಗಿ, ಗಾರಿಬಾಲ್ಡಿಯಿಂದ ನೇತೃತ್ವ ವಹಿಸಿಕೊಂಡ. ರೋಮ್ ನಗರಕ್ಕೆ ಮಾತ್ರ ಮುತ್ತಿಗೆ ಹಾಕದೆ, ಪೋಪನ ಸೈನ್ಯವನ್ನು ಕ್ಯಾಸ್ಟಲ್‍ಫಿಡರ್ಡೊದಲ್ಲಿ ಸೋಲಿಸಿದ. ಅಂಬ್ರಿಯಾ ಪ್ರದೇಶ ಇಟಲಿಯ ವಶವಾಯಿತು. 1861ರ ಮಾರ್ಚಿ 17ರಂದು ಎರಡನೆಯ ವಿಕ್ಟರ್ ಎಮಾನ್ಯುಯೆಲನನ್ನು ಇಟಲಿಯ ಪ್ರಭುವೆಂದು ಘೋಷಿಸಲಾಯಿತು.

 ಇಟಲಿಗೆ ರೋಮ್‍ನಗರ ರಾಜಧಾನಿಯಾಗಬೇಕೆಂಬುದೂ ಯುದ್ಧವಿಲ್ಲದೆ ಅದನ್ನು ವಶಪಡಿಸಿಕೊಳ್ಳಬೇಕೆಂಬುದೂ ಕಾವೂರನ ಆಶಯವಾಗಿತ್ತು. ಆದರೆ ಅದನ್ನು ಪೂರ್ಣಗೊಳಿಸುವ ಮೊದಲೇ 1861ರ ಜೂನ್ 6ರಂದು, ತನ್ನ ಐವತ್ತೊಂದನೆಯ ವಯಸ್ಸಿನಲ್ಲಿ ಮರಣ ಹೊಂದಿದ. 1870ರಲ್ಲಿ ರೋಮ್ ಇಟಲಿಯ ರಾಜಧಾನಿಯಾಯಿತು. ಇದಕ್ಕೆ ನಾಲ್ಕು ವರ್ಷಗಳ ಮೊದಲು ವೆನೀಷಿಯವನ್ನು ಆಸ್ಟ್ರಿಯದ ಆಳ್ವಿಕೆಯಿಂದ ವಿಮೋಚನೆಗೊಳಿಸಲಾಗಿತ್ತು. ಇಟಲಿಯ ಸ್ವಾತಂತ್ರ್ಯ ಮತ್ತು ಏಕೀಕರಣದ ಶಿಲ್ಪಿಯೆಂದು ಕಾವೂರನ ಹೆಸರು ಇತಿಹಾಸದಲ್ಲಿ ಚಿರಸ್ಥಾಯಿಯಾಗಿದೆ.

(ಎ.ವಿ.ವಿ.; ಎಚ್.ಆರ್.ಡಿ.)