ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಿನವುಲ್ಫ್‌

ವಿಕಿಸೋರ್ಸ್ದಿಂದ

ಕಿನವುಲ್ಫ್

ಎಂಟನೆಯ ಶತಮಾನದ ಕಡೆಯಲ್ಲಿ ಜೀವಿಸಿದ್ದ ಪ್ರಾಚೀನ ಆಂಗ್ಲ ಕವಿಗಳಲ್ಲಿ ಒಬ್ಬ. ನಾರ್ದಂಬ್ರಿಯಕ್ಕೆ ಸೇರಿದವನೆಂದು ಹೇಳಲಾಗಿದೆ. ಎಕ್ಸೀಟರ್ ಮತ್ತು ವರ್ಸೆಲಿ ಗ್ರಂಥಗಳಲ್ಲಿರುವ ನಾಲ್ಕು ಪದ್ಯಗಳ ಕರ್ತೃ. ಈತನ ಜೀವಿತದ ಬಗ್ಗೆ ಹೆಚ್ಚು ತಿಳಿದಿಲ್ಲ. ಸಮಕಾಲೀನ ಲ್ಯಾಟಿನ್ ಚರ್ಚುಗಳ ಸಾಹಿತ್ಯದ ಬಗ್ಗೆ ಈತನಿಗೆ ಸಾಕಷ್ಟು ತಿಳಿವಳಿಕೆ ಇದ್ದಂತೆ ತೋರುತ್ತದೆ. ಹಳೆಯ ಇಂಗ್ಲಿಷಿನ ಉಪ ಭಾಷೆಯೊಂದರಲ್ಲಿ ತನ್ನ ಪದ್ಯಗಳನ್ನು ರಚಿಸಿದ್ದಾನೆ. ದಿ ಫೇಟ್ಸ್ ಆಫ್ ಅಪೋಸಲ್ಸ್ ಮತ್ತು ಎಲಿನ್ ಎಂಬ ಪದ್ಯಗಳು ವರ್ಸೆಲಿಯದಲ್ಲಿಯೂ ದಿ ಆಸೆನ್ಷನ್ ಮತ್ತು ಜೂಲಿಯಾನಗಳು ಎಕ್ಸೀಟರ್‍ನಲ್ಲಿಯೂ ಇವೆ. ಇವುಗಳಲ್ಲಿ ಎಲಿನ್ ಶ್ರೇಷ್ಠ ಕೃತಿ ಎನಿಸಿಕೊಂಡಿದೆ. ಇದರಲ್ಲಿ ಕಾನ್‍ಸ್ಟನ್‍ಟೈನ್ ಚಕ್ರವತಿಯ ತಾಯಿಯಾದ ಹೆಲೆನ ಶಿಲುಬೆಯನ್ನು ಕಂಡುಕೊಂಡದ್ದನ್ನು ತಿಳಿಸಲಾಗಿದೆ. ಕೊನೆಯ ಭಾಗ ಕೃತಿಕಾರನ ವ್ಯಕ್ತಿತ್ವ ಜೀವಿತದ ಪ್ರಸಂಗಗಳ ಮೇಲೆ ಬೆಳಕು ಚೆಲ್ಲುತ್ತದೆ.      

(ಎನ್.ಎಸ್.ಎಲ್.)