ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಿರಲುಬೋಗಿ

ವಿಕಿಸೋರ್ಸ್ದಿಂದ

ಕಿರಲುಬೋಗಿ

ಡಿಪ್ಪಿರೊಕಾರ್ಪೇಸೀ ಕುಟುಂಬಕ್ಕೆ ಸೇರಿದ ಹೋಪಿಯ ಪಾರ್ವಿಫ್ಲೊರ ಎಂಗ ವೈಜ್ಞಾನಿಕ ಹೆಸರಿನ ದೊಡ್ಡ ಪ್ರಮಾಣದ, ದಟ್ಟವಾದ ಹಂದರದ, ಸುಂದರವಾದ, ನಿತ್ಯಹರಿದ್ವರ್ಣದ ಮರ. ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳಲ್ಲಿ ಬಲು ಸಾಮಾನ್ಯ, ಕೊಡಗು, ದ.ಕನ್ನಡ ಜಿಲ್ಲೆಗಳ ನಿತ್ಯಹರಿದ್ವರ್ಣಕಾಡುಗಳಲ್ಲಿ ಹೆಚ್ಚು ವ್ಯಾಪಕವಾಗಿ ಬೆಳೆಯುತ್ತದೆ. ತೇವಪೂರಿತವಾದ ಹಾಗೂ ಫಲವತ್ತಾದ ಮಣ್ಣು ಇದರ ಬೆಳೆವಣಿಗೆ ಅನುಕೂಲವಾಗಿರುವುದರಿಂದ ನದಿದಡಗಳು, ಕಣಿವೆಗಳು ಮುಂತಾದೆಡೆ ಸೊಂಪಾಗಿ ಬೆಳೆಯುತ್ತದೆ. ಕೆಲವೊಮ್ಮೆ ಗಡುಸಾದ ಜಂಬೆ (ಲ್ಯಾಟರೈಟ್) ಮಣ್ಣಿನಲ್ಲೂ ಬೆಳೆಯುವುದುಂಟು.

ಕಿರಲುಬೋಗಿ ಸುಮಾರು 120' ಎತ್ತರಕ್ಕೆ ಬೆಳೆಯುವ ಬೃಹದ್ ಗಾತ್ರದ ಮರ, ಮರದ ಬೊಡ್ಡೆಯ ಸುತ್ತಳತೆ ಸುಮಾರು 18' ಇರುವುದುಂಟು. ಬರಿಯ ಬೊಡ್ಡೆಯೇ 50'-60' ಎತ್ತರ ಇರುತ್ತದೆ. ಎಲೆಗಳು ಸರಳ; ಪರ್ಯಾಯ ಮಾದರಿಯಲ್ಲಿ ಜೋಡಣೆಯಾಗಿವೆ. ಹೂಗಳು ಚಿಕ್ಕವು; ಅಂತ್ಯಾರಂಭಿ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ; ಇವುಗಳ ಬಣ್ಣ ನಸುಹಳದಿ. ಹೂಗಳಿಗೆ ಕೊಂಚ ಸುವಾಸನೆಯೂ ಇದೆ. ಹೂಬಿಡುವ ಕಾಲ ಜನವರಿ-ಫೆಬ್ರವರಿ ತಿಂಗಳುಗಳು. ಫಲ ಒಂದೇ ಬೀಜವುಳ್ಳ ನಟ್ ಮಾದರಿಯದು. ಇದಕ್ಕೆ ಎರಡು ರೆಕ್ಕೆಗಳಿವೆ. ಗಾಳಿಯಿಂದಾಗುವ ಫಲಪ್ರಾಸಾರಕ್ಕೆ ಇವು ಸಹಾಯಕ. ಕಿರಲುಬೋಗಿಯ ಚೌಬೀನೆ ಮಾಸಲು, ಬೂದು ಮಿಶ್ರ ಕಂದುಬಣ್ಣದ್ದು; ಸಾಧಾರಣಮಟ್ಟಿಗೆ ಹದಗೊಳ್ಳತ್ತದೆ; ಗಡುಸಾಗಿದ್ದು ಬಾಳಿಕೆ ಬರುವುದು. ಆದರೆ ಕೊಯ್ತುಕ್ಕೆ ಸ್ವಲ್ಪ ಕಷ್ಟ. ಹಸಿಮರವನ್ನು ಕೊಯ್ದು ನೆರಳಿನಲ್ಲಿ ಆರಲು ಇಡಬೇಕು. ಈ ಮರಕ್ಕೆ ಗೆದ್ದಲು ಹತ್ತುವುದಿಲ್ಲವಾದ್ದರಿಂದ ದೋಣಿಗಳಿಗೆ, ರೈಲ್ವೆ ಸ್ಲೀಪರುಗಳಿಗೆ ಹೆಚ್ಚಾಗಿ ಬಳಸುವರು. ಇದರ ಮರ ಚೆನ್ನಾಗಿ ಮೆರಗು ತೆಗೆದುಕೊಳ್ಳಬಲ್ಲುದಾದರೂ ಹತ್ತರಿ ಹಿಡಿದು ನಯಮಾಡುವುದು ಕಷ್ಟ. ಮನೆಕಟ್ಟಲು ಇದನ್ನು ತೊಲೆ, ಸರ, ಕಂಬ ಇತ್ಯಾದಿಗಳಿಗೆ ಬಳಸುವರು. ಅಂಗಡಿಮುಂಗಟ್ಟುಗಳಿಗೂ ಪೆಟ್ಟಿಗೆ, ಬೀರು, ಬ್ರಷ್ಷುಗಳ ಹಿಡಿ ಮುಂತಾದವುಗಳಿಗೂ ಉಪಯೋಗಿಸುವುದುಂಟು. ಕೆಲಸಕ್ಕಾಗದ ಭಾಗಗಳನ್ನು ಒಳ್ಳೆಸೌದೆಯಾಗಿ ಬಳಸುತ್ತಾರೆ.

(ಎ.ಕೆ.ಎಸ್.)