ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಂಭ

ವಿಕಿಸೋರ್ಸ್ದಿಂದ

ಕುಂಭ

ಪುರಾಣೀತಿಹಾಸಗಳಲ್ಲಿ ಈ ಹೆಸರಿನ ಮೂವರಿದ್ದಾರೆ. ಅವರಲ್ಲಿ ಕುಂಭಕರ್ಣ ಮತ್ತು ವೃತ್ರಜ್ವಾಲೆಯರ ಹಿರಿಯ ಮಗ ಒಬ್ಬ.  ಮಹಾ ಪರಾಕ್ರಮಶಾಲಿ. ರಾಮರಾವಣರ ಯುದ್ಧದಲ್ಲಿ ಭಯಂಕರ ರೀತಿಯಲ್ಲಿ ಕಾದು ವಾನರ ಸೇನೆಯನ್ನು ಕ್ಷೋಭೆಗೀಡುಮಾಡಿ ಸುಗ್ರೀವನಿಂದ ಹತನಾದನೆಂದು ರಾಮಾಯಣದಿಂದ ತಿಳಿದುಬರುತ್ತದೆ. ಮಹಾಭಾರತದ ಹೇಳಿಕೆಯ ಪ್ರಕಾರ ಎರಡನೆಯ ಕುಂಭ ಪ್ರಹ್ಲಾದನ ಮಗ.

 ಮೂರನೆಯವ ಈಶ್ವರನ ಪ್ರಮಥಗಣದಲ್ಲಿ ಒಬ್ಬ. ಶಿವ ಪಾರ್ವತಿಯನ್ನು ಮದುವೆಯಾದ ಹೊಸದರಲ್ಲಿ ಮಾವನ ಮನೆಯಲ್ಲಿಯೇ ನಿಂತಾಗ ಅತ್ತೆ ಮೇನಾದೇವಿ ಶಿವನನ್ನು ಹುಟ್ಟುದರಿದ್ರನೆಂತಲೂ ನಿಲ್ಲಲು ಮನೆಯೂ ಗತಿಯಲ್ಲದವನಂತಲೂ ನಿಂದಿಸಿದಳು. ತಾಯಿಯ ಮಾತಿಗೆ ಇದನ್ನು ಶಿವನಿಗೆ ಹೇಳಿದಳು. ಶಿವ ತನ್ನ ಪರಿವಾರದಲ್ಲಿದ್ದ ಕುಂಭನನ್ನು ಕರೆದು ಏನಾದರೊಂದು ಉಪಾಯ ಹೂಡಿ ಕಾಶೀರಾಜ ದಿವೋದಾಸನನ್ನು ಕಾಶಿಯಿಂದ ಬಿಡಿಸಿದರೆ ನಾವು ಪರಿವಾರದೊಂದಿಗೆ ಅಲ್ಲಿರಬಹುದೆಂದು  ತಿಳಿಸಿದ. ಕುಂಭ ಕಾಶೀನಗರದ ನಿಕುಂಭನೆಂಬ ಬ್ರಾಹ್ಮಣನ ಕನಸಿನಲ್ಲಿ ಮೆಯ್ದೋರಿ ಶಿವನಿಗೆ ಒಂದು ಗುಡಿ  ಕಟ್ಟಿಸಿ, ಪೂಜಿಸೆಂದ. ಆ ಬ್ರಾಹ್ಮಣ ಕಾಶೀರಾಜನಿಗೆ ತನ್ನ ಕನಸಿನ ಮಾತನ್ನು ಹೇಳಲಾಗಿ ಆತ ಒಂದು ಶಿವಗುಡಿಯನ್ನು ಕಟ್ಟಿಸಿದ. ದಿನದಿನಕ್ಕೆ  ಆ ಗುಡಿಯ ಮಹಿಮೆ ಹೆಚ್ಚತೊಡಗಿತಾದರೂ ದಿವೋದಾಸನ ಒಂದು ಇಷ್ಟಾರ್ಥವೂ ಕೈಗೂಡಲಿಲ್ಲ. ಇದರಿಂದ ಬೇಸತ್ತ  ರಾಜ ಗುಡಿಯನ್ನು ಒಡೆಸಿದ. ಸಿಟ್ಟುಗೊಂಡ ಶಿವ ಕಾಶೀನಗರ ಹಾಳುಬೀಳಲೆಂದು ಶಾಪವಿತ್ತಾಗ ದಿವೋದಾಸ ಕಾಶೀನಗರ ತ್ಯಜಿಸಿದ. ಅನಂತರ ಶಿವ ಕಾಶೀಪಟ್ಟಣದಲ್ಲಿ ತನ್ನ ಪರಿವಾರದೊಂದಿಗೆ ನೆಲೆಯಾಗಿ ನಿಂತ. ಈ ಕಾರಣದಿಂದ ಕಾಶೀಪಟ್ಟಣ ಅವಿಮುಕ್ತ ಕ್ಷೇತ್ರವೆನಿಸಿತೆಂದು ಹರಿವಂಶದಿಂದ ತಿಳಿದುಬರುತ್ತದೆ.

(ಬಿ.ಎಚ್.ಎಸ್.)