ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುತರ್ಕ

ವಿಕಿಸೋರ್ಸ್ದಿಂದ

ಕುತರ್ಕ

 ಒಂದು ವಾದ ವಿಧಾನ. ಇದರ ಉದ್ದೇಶ ಸತ್ಯವನ್ನು ಸ್ಥಾಪಿಸುವುದಲ್ಲ; ಸತ್ಯವನ್ನು ಮರೆ ಮಾಡುವುದು; ಸತ್ಯವಲ್ಲದ್ದನ್ನು ಸತ್ಯದಂತೆ ತೋರಿಸುವುದು. ಕುತರ್ಕದಲ್ಲಿ ವಾದದ ಸೋಗಿರುತ್ತದೆ. ಆದರೆ ಈ ವಾದ ಸರಿಯಲ್ಲವೆಂಬುದು ಸುಲಭವಾಗಿ ಕಾಣುವುದಿಲ್ಲ. ಇಂಥ ವಾದವನ್ನು ಭಾರತೀಯ ತಾರ್ಕಿಕರು ಜಲ್ಪ, ವಿತಂಡ ಮತ್ತು ಆಭಾಸಗಳೆಂದು ಕರೆದಿರುತ್ತಾರೆ. ಪ್ರಾಚೀನ ಗ್ರೀಸಿನಲ್ಲಿ ಇಂಥ ವಾದ ವಿಧಾನವನ್ನೇ ಒಂದು ಜೀವನ ವೃತ್ತಿಯಾಗಿ ಇಟ್ಟುಕೊಂಡಿದ್ದವರನ್ನು ಸಾಫಿಸ್ಟರೆಂದು ಕರೆಯುತ್ತಿದ್ದರು. (ನೋಡಿ- ತರ್ಕಶಾಸ್ತ್ರ-(ಭಾರತೀಯ))                                                     

 (ಜಿ.ಎಚ್.)

ಕುತುಬ್-ಉದ್-ದೀನ್ ಐಬಕ್ : ಭಾರತದಲ್ಲಿ ಮುಸ್ಲಿಂ ಆಳ್ವಿಕೆಯ ಸ್ಥಾಪಕ. ಇವನ ದೇಶ ತುರ್ಕಿಸ್ತಾನ. ಬಾಲ್ಯದಲ್ಲಿ ಈತ ಗುಲಾಮನಾಗಿದ್ದ. ಮಹಮ್ಮದ್ ಘೋರಿ ಇವನನ್ನು ಕೊಂಡುಕೊಂಡ. ಇವನ ಬುದ್ದಿ ಸಾಮಥ್ರ್ಯಗಳು ಘೋರಿಯನ್ನಾಕರ್ಷಿಸಿದುವು. ಅವನ ಅನುಗ್ರಹದಿಂದಾಗಿ ಐಬಕ್  ಕ್ರಮಕ್ರಮವಾಗಿ ಮೇಲೇರಿ ಅಶ್ವದಳದ ಅಧಿಪತಿಯಾದ. ಪಾಟಿಯಾಲದ ಒಂದು ಪ್ರದೇಶದ ಅಧಿಕಾರ ಇವನಿಗೆ ಲಭ್ಯವಾಯಿತು. ಮಹಮ್ಮದ್ ಘೋರಿ 1192ರಲ್ಲಿ ತರೇನ್ ಯುದ್ಧದಲ್ಲಿ ವಿಜಯ ಗಳಿಸಿ ಖುರಾಸಾನಿಗೆ ಹಿಂದಿರುಗಿದಾಗ ಭಾರತದಲ್ಲಿ ಯುದ್ಧ ಮುಂದುವರಿಸಲು ತನ್ನ ನಂಬಿಕೆಯ ಬಂಟನಾದ ಐಬಕನನ್ನು ಬಿಟ್ಟು ಹೋದ. ಐಬಕ್ ಭಾರತದಲ್ಲಿ ಅವನ ಮುಖ್ಯ ಪ್ರತಿನಿಧಿಯಾಗಿದ್ದು 1193ರಲ್ಲಿ ದೆಹಲಿಯನ್ನು ತನ್ನ ಕೇಂದ್ರವನ್ನಾಗಿ ಮಾಡಿಕೊಂಡ. 1194ರ ವೇಳೆಗೆ ಗಂಗಾ-ಯಮುನಾ ನದಿಗಳ ನಡುವಣ ಪ್ರದೇಶ ಇವನ ವಶವಾಯಿತು. ಅನಂತರ 1202-03ರ ವರೆಗೂ ಈತ ಘೋರಿ ಮಹಮ್ಮದನ ದಾಳಿಗಳಲ್ಲಿ ಭಾಗವಹಿಸುತ್ತಿದ್ದು, 1206ರಲ್ಲಿ ಘೋರಿ ಮಹಮ್ಮದನ ಕೊಲೆಯಾದಾಗ ಲಾಹೋರನ್ನು ವಶಪಡಿಸಿಕೊಂಡು ಸ್ವತಂತ್ರನಾಗಿ ಆಳತೊಡಗಿದ. ಮುಸ್ಲಿಮರ ಅಧಿಕಾರ ಭಾರತದಲ್ಲಿ ನೆಲೆಗೊಂಡಿತು. ಈತ ತೀರಿಕೊಂಡದ್ದು 1210ರಲ್ಲಿ. ದೆಹಲಿಯ ಬಳಿ ಇರುವ ಕುತುಬ್‍ಮಿನಾರನ್ನು (ನೋಡಿ- ಕುತುಬ್-ಮಿನಾರ್) ಕಟ್ಟಿಸಲು ಉಪಕ್ರಮಿಸಿದವನೀತ.

 

 (ಎಸ್.ವಿ.ಡಿ.)