ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುದುರೆ

ವಿಕಿಸೋರ್ಸ್ದಿಂದ

ಕುದುರೆ

  ಏಕ ಖುರಗಳ ಗುಂಪಿಗೆ ಸೇರಿದ ಸ್ತನಿ; ಶಾಸ್ತ್ರೀಯನಾಮ ಈಕ್ವಸ್ ಕೆಬಲ್ಲಸ್. ಇದರ ಪ್ರಾಣಿಶಾಸ್ತ್ರ ವೃತ್ತಾಂತಕ್ಕೆ (ನೋಡಿ- ಈಕ್ವಿಡೇ). ಪ್ರಾಚೀನ

 ಕಾಲದಿಂದಲೂ ಕುದುರೆ ಮನುಷ್ಯನ ಜೀವನದೊಡನೆ ಹಾಸುಹೊಕ್ಕಾಗಿ ಬೆಸೆದು ಹೋಗಿದೆ. ಇತಿಹಾಸವೇ ಆಗಲಿ ನಾಗರಿಕತೆಯ ವಿಕಾಸದ ವಿಶ್ಲೇಷಣೆಯೇ ಆಗಲಿ ಕುದುರೆಯ ಪ್ರಸ್ತಾಪದ ವಿನಾ ಅಪೂರ್ಣ. ಅನಾಗರಿಕತೆಯಿಂದ ನಾಗರಿಕತೆಯೆಡೆಗಿನ ಮಾನವನ ನಡೆಯಲ್ಲಿ ಆತನ ಹೆಜ್ಜೆಯ ಗುರುತುಗಳೊಡನೆ ಕುದುರೆ ಗೊರಸಿನ ಗುರುತುಗಳೂ ಎರಕಗೊಂಡಿವೆ ಎಂಬ ಪ್ರಚಲಿತ ಹೇಳಿಕೆ ಈ ಕಾರಣದಿಂದ ಬಂದುದಾಗಿರಬೇಕು. ಭಾರ ಹೊರಲು, ಸವಾರಿ ಮಾಡಲು, ವ್ಯವಸಾಯದಲ್ಲಿ ನಾನಾ ಬಗೆಯ ಕೆಲಸಗಳನ್ನು ನಿರ್ವಹಿಸಲು ಕುದುರೆಯಂಥ ಉಪಯುಕ್ತ ಹಾಗೂ ಸರ್ವಶಕ್ತ ಪ್ರಾಣಿ ಇನ್ನೊಂದಿಲ್ಲ.

 ಕುದುರೆಯ ಪ್ರಾಚೀನ ಚರಿತ್ರೆಯನ್ನು ಅಪ್ರತ್ಯಕ್ಷ ನಿದರ್ಶನಗಳಿಂದ ಊಹಿಸಬೇಕಷ್ಟೆ. ಭೂಮಿಯ ಮೇಲೆ ಕುದುರೆ ಮಾನವನ ಉಗಮಕ್ಕಿಂತ ಅವೆಷ್ಟೋ ಶತಮಾನಗಳ ಮೊದಲೇ ಆಗಮಿಸಿದ್ದರೂ ಕ್ರಿ.ಪೂ. ಸು. 2000-3000 ವರ್ಷಗಳಿಂದಾಚೆಗೆ ಕುದುರೆಯ ವೃತ್ತಾಂತವನ್ನು ಖಚಿತವಾಗಿ ಹೇಳಬರುವುದಿಲ್ಲ. ದೊರೆತಿರುವ ಪಳೆಯುಳಿಕೆಗಳನ್ನು ಕ್ರಮಬದ್ಧವಾಗಿ ಅಳವಡಿಸಿ ಕುದುರೆಯ ಉಗಮವನ್ನು ವಿವರಿಸಲು ಮಾಡಿರುವ ಹಲವಾರು ಪ್ರಯತ್ನಗಳೂ ಕರಾರುವಾಕ್ಕಾಗಿ ನಿರ್ಧಾರವನ್ನು ನೀಡಲು ಸಮರ್ಥವಾಗಿಲ್ಲ. ಇದು ಹೇಗೂ ಇರಲಿ. ಆಧುನಿಕ ಕುದುರೆಯ ಪೂರ್ವಜ ಏಷ್ಯಖಂಡದಲ್ಲಿತ್ತೆಂದು ನಂಬಲಾಗಿದೆ. ಉತ್ತರ ಮಧ್ಯ ಏಷ್ಯದಲ್ಲಿ ಕುದುರೆಯ ಪೂರ್ವ ಪೀಳಿಗೆಯ ಉಗಮವಾಗಿ ಅಲ್ಲಿಂದ ಮೂರು ಪ್ರಧಾನ ಕವಲುಗಳಾಗಿ ಒಡೆದು ಒಂದು ಪೂರ್ವಕ್ಕೂ, ಇನ್ನೊಂದು ಪಶ್ಚಿಮಕ್ಕೂ, ಮೂರನೆಯದು ನೈಋತ್ಯಕ್ಕೂ ವಲಸೆ ಹೋದವು. ಪೂರ್ವಕ್ಕೆ ಹೋದ ಕವಲು ಮುಂದೆ ಚೀನ ಹಾಗೂ ಇತರ ಮಂಗೋಲಿಯ ಜಾತಿಯ ಕುದುರೆಗಳಿಗೆ ಜನ್ಮನೀಡಿತು. ಪಶ್ಚಿಮದ ಕವಲು ಇಡೀ ಯೂರೋಪ್ ಖಂಡವನ್ನು ವ್ಯಾಪಿಸಿ ಅಲ್ಲಿ ಹಲವಾರು ಬಗೆಯ ಕುದುರೆ ಜಾತಿಗಳು ರೂಪುಗೊಂಡವು. ನೈಋತ್ಯದ ಕವಲು ಏಷ್ಯ ಮೈನರ್, ಇರಾನ್, ಭಾರತ, ಅರೇಬಿಯ, ಆಫ್ರಿಕ-ಈ ವಲಯಗಳಲ್ಲಿ ಕುದುರೆಯ ನಾನಾ ತಳಿಗಳ ಜನ್ಮಕ್ಕೆ ಕಾರಣವಾಯಿತು.

 ಮುಂದೆ ಮಾನವನ ಉಗಮವಾದ ಮೇಲೆ ನಾಗರಿಕತೆ ವರ್ಧಿಸಿದಂತೆ ಕುದುರೆ ಆತನ ನಿಕಟ ಸಹವರ್ತಿಯಾಗಿ ವಿಕಾಸಗೊಂಡಿತು. ಅಂದು ಸ್ವಚ್ಛಂದಜೀವಿಯಾಗಿ ಅಲೆಯುತ್ತಿದ್ದ ಕುದುರೆಗಳು ಬಹುಶಃ ಇಂದು ಎಲ್ಲಿಯೂ ಇಲ್ಲ. ಪಳಗಿದ ಆಧುನಿಕ ಕುದುರೆ ಹವೆಯ ತೀವ್ರ ಏರಿಳಿತಗಳನ್ನು ನಿರೋಧಿಸಿ ಯಾವ ಸನ್ನಿವೇಶಕ್ಕೂ ಹೊಂದಿಕೊಳ್ಳಬಲ್ಲುದಾದ್ದರಿಂದ ಅದನ್ನು ಮನುಷ್ಯಾವೃತ ಪ್ರಪಂಚವಿಡೀ ನೋಡಬಹುದು.

 ವರ್ಗೀಕರಣ: ಇಂದು ಪ್ರಪಂಚದಲ್ಲಿರುವ ಕುದುರೆಯ ಎಲ್ಲ ತಳಿಗಳನ್ನೂ ವರ್ಗೀಕರಿಸುವ ಪ್ರಯತ್ನ ನಡೆದಿಲ್ಲ. ಗಾತ್ರ, ಮಾದರಿ, ಉಗಮಸ್ಥಳ, ಉಪಯೋಗ ಮುಂತಾದ ಹಲವಾರು ದೃಷ್ಟಿಕೋನಗಳಿಂದ ವರ್ಗೀಕರಣ ಮಾಡುವುದು ಸಾಧ್ಯವಿದೆ. ಕುದುರೆಗಳನ್ನು ಸಾಮಾನ್ಯವಾಗಿ ಹೇರುಕುದುರೆ (ಡ್ರಾಫ್ಟ್‍ಹಾರ್ಸ್), ಲಘುಕುದುರೆ ಮತ್ತು ಸಣ್ಣತಳಿ ಕುದುರೆ (ಪೋನಿ, ಎತ್ತರ 56" ಮೀರದ ಕುದುರೆ) ಎಂದು ವರ್ಗೀಕರಿಸುವುದುಂಟು. ಈ ವರ್ಗೀಕರಣ ಬಲು ನಿಷ್ಕøಷ್ಟವೆಂದೇನೂ ಭಾವಿಸಬೇಕಾಗಿಲ್ಲ. ಆರಂಭದ ಕುದುರೆಗಳು ಎತ್ತರದಲ್ಲಿ (ಭುಜಾಸ್ಥಿಗಳ ಸಮೀಪ) ಸರಿ ಸುಮಾರಾಗಿ 48" ಇದ್ದುವು. 56" ಎತ್ತರವಿದ್ದ ಕುದುರೆಗಳು ತೀರ ವಿರಳ. ಆದರೆ ಅವುಗಳ ಇಂದಿನ ಪೀಳಿಗೆಯಾದರೋ 68"-80" ಎತ್ತರ ಬೆಳೆಯುತ್ತವೆ. ಆದಿ ಹಯಗಳ ಬಣ್ಣ ಮಬ್ಬುಕಂದು. ಆದರೆ ಇಂದು ಕಪಿಲ, ಕಂದು, ಚೆಸ್ಟ್‍ನಟ್, ಬೂದು, ಕೆಂಗಂದು, ಬಿಳಿಬೂದು ಮುಂತಾದ ನಾನಾ ಬಣ್ಣಗಳ ಕುದುರೆಗಳಿವೆ. ಒಳ್ಳೆಯ ಕುದುರೆಗೆ ಬಣ್ಣವೂ ಇದೆ ಎಂಬ ಜನಪ್ರಿಯ ಹೇಳಿಕೆ ನಿಜವಾದ ಮಾತು.

 ಕುದುರೆ ಪಂದ್ಯ: ಓಟದ ಪರಿಣತಿಯನ್ನು ಪಡೆದ ಕುದುರೆಗಳದೇ ಒಂದು ತಳಿ. ಕುದುರೆ ಪಂದ್ಯವೂ ಕೋಳಿಪಂದ್ಯದಷ್ಟೇ ಹಳತಾದುದು. ಬ್ಯಾಬಿಲೋನಿಯದವರು ಕುದುರೆ ಕಟ್ಟಿ ರಥಗಳ ಓಟದ ಸ್ಪರ್ಧೆ ನಡೆಸುತ್ತಿದ್ದರು. ಯಾವಾಗ ಹೇಗೆ ಇದು ಆರಂಭವಾಯಿತೆಂದು ನಿರ್ಧರಿಸಲಾಗದಿದ್ದರೂ ಇದು ಬಹಳ ಪ್ರಾಚೀನವಾದುದೆಂದು ಹೇಳಬಹುದು. ಇಂಗ್ಲೆಂಡ್ ಅಮೆರಿಕ ಭಾರತಗಳಲ್ಲಿ ಕುದುರೆ ಪಂದ್ಯ ಬಹಳ ಜನಪ್ರಿಯ ಕ್ರೀಡೆ, ಬೆಂಗಳೂರು, ಮೈಸೂರು, ಬೊಂಬಾಯಿ, ಚೆನ್ನೈ, ಸಿಕಂದರಾಬಾದು, ಉದಕಮಂಡಲ, ಕೊಲ್ಕತ್ತಗಳಲ್ಲಿ ನಡೆಯುವ ಕುದುರೆ ಪಂದ್ಯಗಳು ಹೆಚ್ಚು ಜನರನ್ನು ಆಕರ್ಷಿಸುತ್ತವೆ. ಜಾತಿಯ ಕುದುರೆಗಳನ್ನು ಆರಿಸಿ ಬೆಳೆಸುವ ಬ್ರೀಡರ್, ಅವಕ್ಕೆ ಶಿಕ್ಷಣಕೊಡುವ ಟ್ರೈನರ್ ಮತ್ತು ಪಂದ್ಯಕುದುರೆಗಳನ್ನು ಸವಾರಿಮಾಡುವ ಜಾಕಿಗಳು ಇವರ ಉದ್ಯೋಗಕ್ಕೆ ಈ ಕ್ರೀಡೆ ಕಾರಣವಾಗಿದೆ. ಪಂದ್ಯದ ಕುದುರೆಗಳನ್ನು ಬೆಳೆಸುವ ಕೇಂದ್ರಗಳಿಗೆ ಸ್ಟಡ್ ಫಾರಮ್‍ಗಳೆನ್ನುತ್ತಾರೆ. ಇಂಥದೊಂದು ಸ್ಟಡ್ ಫಾರಮ್ ಕರ್ನಾಟಕದ ತುಮಕೂರು ಜಿಲ್ಲೆಯ ಕುಣಿಗಲ್ ಬಳಿ ಇದೆ.

 ಕುದುರೆ ಹಿಂದೂಧರ್ಮದ ಅನುಸಾರ ಪೂಜ್ಯವಾದ ಪ್ರಾಣಿಯೂ ಹೌದು. ರಾಜನ ಪೂಜ್ಯವಸ್ತುಗಳಲ್ಲಿ ಪಟ್ಟದ ಕುದುರೆಯೂ ಒಂದು ಮುಖ್ಯ ಅಂಶ. ಕುದುರೆ ಕೇವಲ ಮನುಷ್ಯನ ನಾಗರಿಕತೆಯೇ ಅಲ್ಲದೆ, ಇತಿಹಾಸದಲ್ಲಿ ರಾಜ್ಯಗಳ ಚಕ್ರಾಧಿಪತ್ಯಗಳ ಏಳ್ಗೆ ಬೀಳ್ಗೆಗಳಲ್ಲಿಯೂ ಮಹತ್ತರ ಪಾತ್ರವಹಿಸಿದೆ. ಟ್ಯಾಂಕು, ವಿಮಾನಗಳು ಬಳಕೆಗೆ ಬರುವ ಮೊದಲು ಕುದುರೆ ಅತಿಮುಖ್ಯ ವಾಹನವಾಗಿತ್ತು.

 ಇದೇ ಅಲ್ಲದೇ ಕುದುರೆ ಇನ್ನೊಂದು ರೀತಿಯಲ್ಲಿಯೂ ಉಪಯುಕ್ತವಾದ ಪ್ರಾಣಿ. ಇದರ ಮಾಂಸವನ್ನು ತಿನ್ನುತ್ತಾರೆ. ಚರ್ಮವನ್ನು ಹದಗೊಳಿಸಿ ಬಳಸುತ್ತಾರೆ. ಚÀರ್ಮ ಮತ್ತು ಕೂದಲಿನಿಂದ ಉಡುಪು, ಮೆಟ್ಟು ಮುಂತಾದವನ್ನು ತಯಾರಿಸುತ್ತಾರೆ. ದೇಹದ ಅಂಗಾಂಶಗಳಿಂದ ಅಂಟು, ಸೀರಮ್ ತಯಾರಿಸುತ್ತಾರೆ. ಕುದುರೆ ಹಾಲನ್ನು ಕುಡಿಯುತ್ತಾರೆ. ಕುದುರೆ ಮತ್ತು ಕತ್ತೆಗಳ ನಡುವೆ ತಳಿಸಂಮಿಶ್ರಣದಿಂದ ಹುಟ್ಟುವ ಹೇಸರಗತ್ತೆ ಸಾಮಾನು ಹೊರಲು ಹೆಸರಾಗಿದೆ.

 

(ಎಚ್.ಬಿ.ಡಿ.)