ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಮಾರ ಜೀವ

ವಿಕಿಸೋರ್ಸ್ದಿಂದ

ಕುಮಾರ ಜೀವ   ಚೀನದಲ್ಲಿ ಬೌದ್ಧಧರ್ಮದ ಪ್ರಸಾರಕ್ಕೆ ಮುಖ್ಯ ಕಾರಣನಾದ ಬೌದ್ಧಭಿಕ್ಷು. 4ನೆಯ ಶತಮಾನದವ. ತಂದೆ ಕುಮಾರಾಯನ, ಭಾರತೀಯ; ತಾಯಿ ಜೀವಾ, ಕುಚಿನಗರದ ರಾಜಕುಮಾರಿ. ಬಂಧುದತ್ತನ ಮಾರ್ಗದರ್ಶನದಲ್ಲಿ ಕಾಶ್ಮೀರ ಮತ್ತು ಕ್ಯಾಷ್ಭರ್‍ಗಳಲ್ಲಿ ಬೌದ್ಧಸಾಹಿತ್ಯ-ತತ್ತ್ವಶಾಸ್ತ್ರಗಳನ್ನೂ ಗೊಕ್ಕುಕದಲ್ಲಿ ಮಹಾಯಾನ ಬೌದ್ಧದರ್ಶನವನ್ನೂ ಅಧ್ಯಯನ ಮಾಡಿ ಅನಂತರ ಕುಚಿನಗರದ ವಿಹಾರದಲ್ಲಿ ಭಿಕ್ಷುವಾಗಿದ್ದ. ಮಧ್ಯ ಏಷ್ಯದಲ್ಲೆಲ್ಲ ಇವನ ಪಾಂಡಿತ್ಯ ಪ್ರಸಿದ್ಧವಾಗಿತ್ತು. 383 ರಲ್ಲಿ ಚೀನೀಯರು ಕುಚಿನಗರದ ಮೇಲೆ ದಾಳಿ ಮಾಡಿದಾಗ ಕುಮಾರ ಜೀವನನ್ನು ಸೆರೆ ಹಿಡಿದು ಚೀನಕ್ಕೊಯ್ದರು. ಅಲ್ಲಿಯ ಚಕ್ರವರ್ತಿ ಇವನ ವಿದ್ವತ್ತಿಗೆ ಮಾರು ಹೋಗಿ ಇವನನ್ನು 401 ರಲ್ಲಿ ತನ್ನ ರಾಜಧಾನಿಗೆ ಕರೆಸಿಕೊಂಡು ತನ್ನ ಗುರುವಾಗಿ ನೇಮಿಸಿಕೊಂಡ, ಅಲ್ಲಿ ಇವನು 412 ರ ವರೆಗೆ ಇದ್ದು ನೂರಕ್ಕೂ ಹೆಚ್ಚು ಸಂಸ್ಕøತ ಬೌದ್ಧ ಗ್ರಂಥಗಳನ್ನು ಚೀನೀಭಾಷೆಗೆ ಪರಿವರ್ತಿಸಿದ. ಮಹಾಯಾನ ತತ್ತ್ವಗಳನ್ನು ಚೀನೀಯರಿಗೆ ಬೋಧಿಸಿದವರಲ್ಲಿ ಈತ ಮೊದಲಿಗ. ಸದ್ಧರ್ಮ ಪುಂಡರೀಕ, ಸೂತ್ರಾಲಂಕಾರ, ವಜ್ರಚ್ಛೇದಿತಾ ಗ್ರಂಥಗಳ ಅನುವಾದಗಳು ಪ್ರಸಿದ್ಧವಾಗಿವೆ. ಮಧ್ಯಶಾಖೆಯ ಹಲವು ಗ್ರಂಥಗಳನ್ನೂ ಪರಿವರ್ತನೆ ಮಾಡಿದ್ದಾನೆ. ಕುಮಾರಜೀವ 413 ರಲ್ಲಿ ಚೀನದಲ್ಲಿ ತೀರಿಕೊಂಡ. ಸೆಂಗ್‍ಚ ಓ (384-414) ಮತ್ತು ತ ಓ-ಷೆಂಗ್ (ಸು.434)-ಇವರು ಕುಮಾರಜೀವನ ಪ್ರಮುಖ ಶಿಷ್ಯರು.                  

  (ಎಸ್.ಕೆ.ಎಸ್.; ಎಸ್.ಕೆ.ಆರ್.)