ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುರುವೆಗಿಡ

ವಿಕಿಸೋರ್ಸ್ದಿಂದ

ಕುರುವೆಗಿಡ ಮಾಲ್ವೇಸೀ ಕುಟುಂಬಕ್ಕೆ ಸೇರಿದ ಅಬ್ಯುಟಿಲಾನ್ ಎಂಬ ಶಾಸ್ತ್ರೀಯ ಹೆಸರಿನ ಸಸ್ಯಜಾತಿ. ಇದರಲ್ಲಿ 120 ಪ್ರಭೇದಗಳೂ ಉಷ್ಣ ಮತ್ತು ಉಪೋಷ್ಣವಲಯಗಳಲ್ಲಿ ಸಾಮಾನ್ಯವಾಗಿ ಬೆಳೆಯುತ್ತವೆ. ಆವಿಸೆನ್ನಿ, ಇಂಡಿಕಮ್ ಮತ್ತು ಏಷ್ಯಾಟಿಕಮ್ ಪ್ರಭೇದಗಳು ಭಾರತದಲ್ಲಿ ಕಾಣಬರುತ್ತವೆ. ಇಂಡಿಕಮ್ ಪ್ರಭೇದಕ್ಕೆ ಕನ್ನಡದಲ್ಲಿ ತುತ್ತಿ, ಶ್ರೀಮುದ್ರೆಗಿಡ ಮುಂತಾದ ಹೆಸರುಗಳೂ ಇವೆ. ಇಂಡಿಕಮ್ ಪ್ರಭೇದದ ಕುರುವೆಗಿಡ ಸುಮಾರು 4'-6' ಎತ್ತರಕ್ಕೆ ಬೆಳೆಯುವ ಪೊದೆ ಸಸ್ಯ. ಸಸ್ಯದ ಮೇಲೆಲ್ಲ ಸಣ್ಣ ಕೂದಲುಗಳಿವೆ. ಎಲೆಗಳು ಸರಳ ; ಪರ್ಯಾಯವಾಗಿ ಜೋಡಣೆಗೊಂಡಿವೆ. ಅವುಗಳ ಆಕಾರ ಹೃದಯದಂತೆ, ತೊಟ್ಟು ಉದ್ದ ಮತ್ತು ಅಂಚು ಗರಗಸದಂತೆ. ಹೂಗಳು ಒಂಟೊಂಟಿಯಾಗಿ ಎಲೆಗಳ ಕಂಕುಳಲ್ಲಿ ಮೂಡುತ್ತವೆ. ಅವುಗಳ ಬಣ್ಣ ಹಳದಿ ಅಥವಾ ಕಿತ್ತಳೆ. ಒಂದೊಂದು ಹೂವಿನಲ್ಲೂ ಬಿಡಿಯಾದ 5 ಪುಷ್ಪ ಪತ್ರಗಳೂ 5 ದಳಗಳೂ ಅಸಂಖ್ಯಾತ ಕೇಸರುಗಳೂ 5ರಿಂದ ಹಲವಾರು ಕಾರ್ಪೆಲುಗಳನ್ನೊಳಗೊಂಡ ಉಚ್ಚಸ್ಥಾನದ ಅಂಡಾಶಯವೂ ಇವೆ. ಕಾಯಿ ಒಣಗಿದಾಗ ಹಲವಾರು ವಿಭಾಗಗಳಾಗಿ ಒಡೆಯುತ್ತದೆ. ಇದಕ್ಕೆ ಕ್ಯಾರ್‍ಸೆರುಲಸ್ ಎಂಬ ಶಾಸ್ತ್ರೀಯ ಹೆಸರಿದೆ. ಈ ಸಸ್ಯದ ಎಲ್ಲ ಭಾಗಗಳಲ್ಲೂ ಲೋಳೆಯಂಥ ರಸ ಇದೆ. ಕುರುವೆ ಗಿಡದ ಕಾಂಡದಿಂದ ಒಂದು ಬಗೆಯ ನಾರನ್ನು ತೆಗೆಯಬಹುದು. ಇದರಿಂದ ಬರುವ ನಾರು ಉತ್ತಮದರ್ಜೆಯದೆಂದು ಹೆಸರಾಗಿದೆ. ರೇಷ್ಮೆಯನ್ನು ಹೋಲುವ ಈ ನಾರು ಬಲು ಉದ್ದವೂ ಹೌದು. ಸಸ್ಯಕ್ಕೆ 4 ಅಥವಾ 5 ತಿಂಗಳು ವಯಸ್ಸಾದಾಗ ಕಾಂಡವನ್ನು ಕತ್ತರಿಸಿ ನೀರಿನಲ್ಲಿ ಕೊಳೆಸಿ ನಾರನ್ನು ಹೊರತೆಗೆಯುತ್ತಾರೆ. ನಾರನ್ನು ಹಗ್ಗಮಾಡಲು ಉಪಯೋಗಿಸುತ್ತಾರೆ. ಔಷಧಿರೂಪದಲ್ಲಿ ಸಹ ಈ ನಾರು ಸಸ್ಯ ಬಹಳ ಉಪಯುಕ್ತ. ಜ್ವರಬಂದಾಗ ಶರೀರವನ್ನು ತಂಪುಗೊಳಿಸಲು ಇದರ ರಸವನ್ನು ಕೊಡುತ್ತಾರೆ. ಸುಮಾತ್ರದಲ್ಲಿ ಈ ಸಸ್ಯದಿಂದ ಒಂದು ರೀತಿಯ ರಸವನ್ನು ತಯಾರಿಸಿ ಸಂಧಿವಾತಕ್ಕೆ ಬಳಸುತ್ತಾರೆ. ಭಾರತದಲ್ಲಿ ಇದರ ಬೇರಿನ ರಸವನ್ನು ತಂಪುಕಾರಕ ಔಷಧಿಯಾಗಿ ಉಪಯೋಗಿಸುವುದುಂಟು. (ಬಿ.ಪಿ.)