ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುವಿ ಭಾಷೆ

ವಿಕಿಸೋರ್ಸ್ದಿಂದ

ಕುವಿ ಭಾಷೆ

	 ಮಧ್ಯದ್ರಾವಿಡ ಭಾಷೆಗಳಲ್ಲೊಂದು, ಇದರ ಕ್ಷೇತ್ರ ಉರಿಯ ಮತ್ತು ತೆಲುಗು ಭಾಷೆಗಳ ನಡುವಿನದು. 1951 ನೆಯ ಜನಗಣತಿಯ ಪ್ರಕಾರ ಇದು 2,920 ಕ್ಕಿಂತ ಹೆಚ್ಚು ಜನರ ಭಾಷೆ ಎಂದು ಪರಿಗಣಿತವಾಗಿದೆ. ತೆಲುಗು ಮತ್ತು ಉರಿಯ ಭಾಷೆಗಳ ದಟ್ಟಪ್ರಭಾವ ಇದರ ಮೇಲುಂಟು. ಒಂದೇ ಕ್ಷೇತ್ರದಲ್ಲಿ ಕಂಡು ಬಂದರೂ ಕುವಿ ಮತ್ತು ಕುಈ ಭಾಷೆಗಳು ಭಿನ್ನಭಾಷೆಗಳು. ಈ ಭಾಷೆಗಳನ್ನು ನಿಶ್ಚಿತವಾಗಿ ಯಾವ ಜನ ಬಳಸುತ್ತಿದ್ದಾರೆ. ಎಂಬ ಅಂಶ ಇನ್ನೂ ಗೊತ್ತಾಗಿಲ್ಲ. ಕುಯಿಗರೇ ಕುಈ ಭಾಷೆ ಆಡುವ ಜನಾಂಗವೆಂದು ಕೆಲವರೂ ಕುವಿಂಗರೇ ಕುವಿಭಾಷೆ ಆಡುವ ಜನಾಂಗ ಇರಬಹುದೆಂದು ಮತ್ತೆ ಕೆಲವರೂ ಅಭಿಪ್ರಾಯ ಪಟ್ಟಿದ್ದಾರೆ. ಆಧುನಿಕ ಭಾಷಾವಿಜ್ಞಾನಿಗಳ ದೃಷ್ಟಿಯಲ್ಲಿ ಅವು ಬೇರೆ ಬೇರೆ ಸ್ವತಂತ್ರ ಭಾಷೆಗಳು ಎಂಬ ಅಭಿಪ್ರಾಯವಿದೆ. ಮಧ್ಯದ್ರಾವಿಡ ಭಾಷೆಗಳಲ್ಲಿ ಕೊಲಾಮಿ, ನಾಯ್ಕಿ ಭಾಷೆಗಳ ಸಂಬಂಧ ಇರುವಂತೆ ಕುಈ, ಕುವಿಭಾಷಣಗಳ ಸಂಬಂಧ ಎಂದು ಕೆಲವು ವಿದ್ವಾಂಸರು ಮನಗಂಡಿದ್ದಾರೆ. ಈ ಎರಡು ಭಾಷೆಗಳ ಧ್ವನಿವ್ಯವಸ್ಥೆ, ಆಕೃತಿಮಾರಚನೆ, ವಾಕ್ಯರಚನೆ, ಮತ್ತು ವ್ಯಾಕರಣಾಂಶಗಳನ್ನು ಹೋಲಿಸಿ ನೋಡಿದಾಗ ಇವುಗಳ ಸಾಮ್ಯ ತಿಳಿದು ಬರುವುದು. ಈ ಎರಡು ಭಾಷೆಗಳಿಗೂ ಲಿಪಿ ಇಲ್ಲ. ಈ ಭಾಷೆಯನ್ನು ಆಡುವ ಜನರು ಬೆಟ್ಟಗುಡ್ಡಗಳಲ್ಲಿಯೇ ಹೆಚ್ಚಾಗಿ ವಾಸಮಾಡುವಂಥವರು. ಕುವಿಭಾಷೆ ಉರಿಯಕ್ಕಿಂತಲೂ ಹೆಚ್ಚಾಗಿ ತೆಲುಗು ಭಾಷೆಯನ್ನೇ ಹೋಲುತ್ತದೆ. ಇಲ್ಲಿನ ಧ್ವನಿವ್ಯವಸ್ಥೆ ಕುಈ ಭಾಷೆಯನ್ನೂ ಲಿಂಗವಚನ, ವಿಭಕ್ತಿಪ್ರತ್ಯಯಗಳು ಗೋಂಡಿ, ಖೊಂಡ, ಕುರುಖ್ ಮತ್ತು ಕುಈ ಭಾಷೆಗಳನ್ನೂ ಪದಸಮೂಹ ಕುರುಖ್, ಗೋಂಡಿ, ಖೊಂಡ್, ಮತ್ತು ಕುಈ ಭಾಷೆಗಳನ್ನೂ ವ್ಯಾಕರಣಾಂಶಗಳು ಮುಖ್ಯವಾಗಿ ಗೋಂಡಿ, ಖೊಂಡ, ಕುರುಖ್, ಮಲ್ತೊ ಮತ್ತು ಕುಈ ಭಾಷೆಯನ್ನೂ ಹೆಚ್ಚಾಗಿ ಹೋಲುತ್ತವೆ. ಎಫ್.ವಿ.ಪಿ. ಶೂಲೆ (sಛಿhuಟze) ಎಂಬಾತ ಕುವಿ ವ್ಯಾಕರಣವನ್ನು ರಚಿಸಿದ್ದಾನೆ. ಅಲ್ಲದೆ, ಎ.ಜಿ. ಫಿಟ್ಸ್‍ಜೆರಾಲ್ಡ್ ಎಂಬಾತ 1933ರಲ್ಲಿ ಕುವಿಂಗರ ಭಾಷೆ ಎಂಬ ಗ್ರಂಥವನ್ನು ಬರೆದು ಕುವಿಂಗರ ಪರಿಚಯ ಕೊಟ್ಟಿದ್ದಾನೆ. ಕುವಿಭಾಷೆಯ ವ್ಯಾಕರಣಕ್ಕೆ ಸಂಬಂಧಿಸಿದ ಹೆಚ್ಚಿನ ವಿಚಾರಗಳು ಬೆಳಕಿಗೆ ಬಂದಿಲ್ಲ. ಇದರಲ್ಲಿನ ಕೆಲವು ಮೂಲ ದ್ರಾವಿಡ ಧ್ವನಿಗಳನ್ನು ನೋಡಿದಾಗ ಈ ಕೆಲವು ಧ್ವನಿ ಪರಿವರ್ತನೆಗಳು ಕಂಡು ಬರುತ್ತವೆ:

-ಕ್->-ಯ್-,-ಕ್ಕ್->-ಕ್-,-ಚ್->-ಹ್-,

-ಚ್->-ಸ್-,-ಟ್->-ಡ್-,-ಟ್ಟ್-ಟ್-,-ನ್ತ್->-ನ್ದ್-,

-ಮ್ಪ್->-ಮ್ಬ್-,-ರ್->-ಜ್-,-ನ್ರ್-ನ್ಜ್-,-ಳ್->-ಲ್-,

-ಳ್ಳ್>-ಲ್ಲ್-,-ಡ್->ದ್-,-ಡ್ಡ್->ದ್ದ್-. (ನೋಡಿ- ಕುಈ-ಭಾಷೆ)

(ಕೆ.ಕೆ.ಜಿ.)