ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೊಂಕಿದ ಸಿರ

ವಿಕಿಸೋರ್ಸ್ದಿಂದ

ಕೊಂಕಿದ ಸಿರ

ಒಂದು ಸಿರ (ಅಭಿಧಮನಿ) ಅದರ ಸಹಜ ಗಾತ್ರಮಿತಿಯನ್ನು ಮೀರಿ ಹಿಗ್ಗಿ (ಡೈಲೇಟ್) ಉದ್ದವಾಗಿ ವಮಕಿಯಂತಾದಾಗ ಅದನ್ನು P 70Éೂಂಕಿದ ಸಿರ (ವೆರಿಕೋಸ್ ವೇನ್) ಎನ್ನುತ್ತಾರೆ. ಸಾಮಾನ್ಯವಾಗಿ ಕಾಲಿನ, ಅನ್ನನಾಳದ, ವೀರ್ಯಕೋಶದ ಮತ್ತು ಗುದದ್ವಾರದ ಸಿರಗಳು ಈ ರೋಗಕ್ಕೆ ಈಡಾಗುತ್ತವೆ. ರಕ್ತವನ್ನು ಕಾಲಿನಿಂದ ಸರಿಯಾಗಿ ಗುಂಡಿಗೆಗೆ ಒಯ್ಯಲು ಕಾಲಿನ ಮೀನಖಂಡಗಳ ಕುಗ್ಗುವಿಕೆ, ಸಿರಗಳಲ್ಲಿನ ಕವಾಟಗಳು ಮತ್ತು ಒಳ ಮತ್ತು ಹೊರ ವ್ಯವಸ್ಥೆಗಳಲ್ಲಿ ಸಂಪರ್ಕ ಏರ್ಪಡಿಸುವ ಸಣ್ಣಸಿರಗಳು (ಕಮ್ಯೂನಿಕೇಟಿಂಗ್ ವೇನ್ಸ್) ಸಹಾಯ ಮಾಡುತ್ತವೆ. ಈ ವ್ಯವಸ್ಥೆಯಲ್ಲಿ ಸರಿಯಾದ ಹೊಂದಾಣಿಕೆ ಇಲ್ಲದಾಗ ರಕ್ತ ಹೊರಸಿರಗಳಲ್ಲಿಯೇ ನಿಂತು ಕೊಂಕಿದ ಸಿರ ಆಗುತ್ತದೆ.

ಕಾರಣಗಳು: 1 ಮನುಷ್ಯನ ನೇರ ನಿಲುವಿಗೆ ಕೊಡಬೇಕಾದ ದಂಡ ಕೊಂಕಿದ ಸಿರಗಳು. ಚತುಷ್ಟಾದಿ ಪ್ರಾಣಿಗಳಲ್ಲಿ ಈ ರೀತಿಯ ತೊಂದರೆ ಇಲ್ಲ. 2 ಕವಾಟಗಳಲ್ಲಿನ ಅನುವಂಶಿಕ ದೋಷಗಳು. 3 ಸ್ನಾಯುಗಳ ದೌರ್ಬಲ್ಯ ಮತ್ತು ಕೃಶತ್ವ. 4 ಕಾಲುಗಳಲ್ಲಿನ ಸ್ನಾಯುಗಳನ್ನು ಸುತ್ತವರಿಯುವ ಒಳಪದರದ ಎಳೆಯುವಿಕೆಯಿಂದ ಸಿರಗಳಲ್ಲಿನ ರಕ್ತದ ಭಾರ ಕವಾಟಗಳ ಮೇಲೆ ಬಿದ್ದು ಅವು ದುರ್ಬಲವಾಗುತ್ತದೆ. 5 ಸಿರಗಳಲ್ಲಿ ರಕ್ತ ಗುಂಡಿಗೆಗೆ ವಾಪಸಾಗುವಾಗ ತಡೆಯುಂಟಾಗುವಿಕೆ. ಉದಾಹರಣೆಗೆ, ಹೊಟ್ಟೆಯೊಳಗಿನ ಗಂತಿಗಳು, ಬಸಿರು, ಒಳಸಿರಗಳ ರಕ್ತಗರಣಿ. 6 ಹುಟ್ಟಿನಿಂದ ಬಂದ ಅಪಧಮನಿ-ಅಭಿಧಮನಿ ವ್ರಣಗಳು (20 ವರ್ಷ ವಯಸ್ಸಿನ ಮೊದಲೇ ತಲೆದೋರಿದಾಗ).

ಚಿಹ್ನೆಗಳು: ಕಾಲಿನ ಸ್ನಾಯುಗಳಲ್ಲಿ, ವಿಶೇಷವಾಗಿ ಮೀನಖಂಡಗಳಲ್ಲಿ, ನೋವು ಮತ್ತು ಆಯಾಸವೂ ಸಿರಗಳು ಕೊಂಕಿರುವ ಸ್ಥಳಗಳಲ್ಲಿ ಚುಚ್ಚುವಂಥ ಸೆಳೆತವೂ ಉಂಟಾಗುತ್ತವೆ. ಸಂಜೆಯಾದಂತೆ ಕಾಲಿನ ಕೆಳಗಂಟು ಊದುತ್ತದೆ. ಸಿರಗಳ ಮೇಲಿನ ಚರ್ಮದಲ್ಲಿ ಕೆರೆತವೂ ತಲೆದೋರಬಹುದು. ಕೆಲವರಿಗೆ ಮೀನ ಖಂಡಗಳಲ್ಲಿ ಅಸಾಧ್ಯ ನೋವು ತಲೆದೋರಬಹುದು. ಕಾಲಿನ ಸಿರಗಳು ದಪ್ಪವಾಗಿ ಕೊಂಕಿರುವುದನ್ನು ಸುಲಭವಾಗಿ ಗುರುತಿಸುವುದು ಸಾಧ್ಯ.

ಉಪಚಾರ: ಸಮಾಧಾನಕಾರಕ ಅಂಶಗಳನ್ನು ಕೆಳಕಂಡ ಅವಸ್ಥೆಗಳಲ್ಲಿ ಸೂಚಿಸಬಹುದು. 1 ಬಸಿರು, 2 ಶಸ್ತ್ರಚಿಕಿತ್ಸೆಗೊಳಗಾಗಲು ಇಚ್ಛೆಪಡದವರು, 3 ಶಸ್ತ್ರಚಿಕಿತ್ಸೆಗೊಳಗಾಗಲು ಅಸಮರ್ಥರು.

ಸ್ಥಿತಿಸ್ಥಾಪಕ (ಇಲಾಸ್ಟಿಕ್) ಪಟ್ಟಿಗಳನ್ನು ಬಿಗಿಯಾಗಿ ಸುತ್ತುವುದರ ಮೂಲಕ ಅಥವಾ ಉದ್ದವಾದ ಸ್ಥಿತಿಸ್ಥಾಪಕ ಕಾಲುಚೀಲುಗಳನ್ನು ಧರಿಸುವುದರ ಮೂಲಕ ಅಥವಾ ರಾಸಾಯನಿಕ ವಸ್ತುಗಳನ್ನು ಸಿರಗಳಿಗೆ ಚುಚ್ಚುವುದರ ಮೂಲಕ ಉಪಶಮನ ಪಡೆಯಬಹುದು. ಶಸ್ತ್ರಚಿಕಿತ್ಸೆಯ ಮೂಲಕ ಕೊಂಕಿದ ಸಿರಗಳನ್ನು ತೆಗೆದುಹಾಕಬಹುದು.

ಕೊಂಕಿದ ಸಿರಗಳಿಂದ ತಲೆದೋರುವ ಇತರ ವ್ಯಾಧಿಗಳಲ್ಲಿ ಹೆಸರಿಸಬಹುದಾದವು ಇವು-ಕೊಂಕಿದ ಸಿರಚೀಲ, ಮೂಲವ್ಯಾಧಿ ಮತ್ತು ಅನ್ನನಾಳದ ಕೊಂಕಿದ ಸಿರಗಳು.

ವೀರ್ಯನಾಳದಲ್ಲಿನ ಸಿರಗಳ ಅಸ್ವಾಭಾವಿಕ ಊತದ ಪರಿಣಾಮವಾಗಿ ಕೊಂಕಿದ ಸಿರಚೀಲ (ವೆರಿಕೋಸೀಲ್) ತಲೆದೋರುತ್ತದೆ. ಇದರಿಂದ ರೋಗಿ ತೀವ್ರವಾದ ನೋವನ್ನು ಅನುಭವಿಸುತ್ತಾನೆ. ಇದರ ಕಾರಣಗಳು: 1 ಎಡಮೂತ್ರ ಪಿಂಡ ಸಿರದ ಮೂಲಕ ವೀರ್ಯಪಿಂಡ ಸಿರಕ್ಕೆ ಆಗಾಗ್ಗೆ ಹಿಮ್ಮೊಗವಾಗಿ ಬರುವ ರಕ್ತ, 2 ಉದ್ದವಾದ ಸಪೂರ ನೋವು, ವೀರ್ಯವೃದ್ಧಿಗೆ ತಡೆಯುಂಟಾಗಿ ನಿರ್ವೀಯತೆ ಉಂಟು ಮಾಡುತ್ತದೆ. 95% ಭಾಗ ಇದು ಎಡಭಾಗದಲ್ಲಿ ಕಾಣಿಸಿಕೊಳ್ಳುತ್ತದೆ.

ಉಪಚಾರ: ವೀರ್ಯಗ್ರಂಥಿ ಚೀಲವನ್ನು ಎತ್ತಿಕಟ್ಟುವುದು. ನೋವು ಮತ್ತು ವೀರ್ಯ ಕ್ಷೀಣತೆ ಉಂಟಾದಾಗ ಶಸ್ತ್ರಚಿಕಿತ್ಸೆ.

ಮೂಲವ್ಯಾಧಿಯ (ಪೈಲ್ಸ್) ಕಾರಣಗಳು: 1 ಅನುವಂಶೀಕತೆ, 2 ಗುರುತ್ವ ಬಲ, 3 ಸಿರಗಳು ಗುದನಾಳದ ಶಿಥಿಲ ಲೋಳ್ಪೊರೆಯಲ್ಲಿರುವುದು; 4 ಮಲಬದ್ಧತೆ, 5 ಭೇದಿ.

ಚಿಹ್ನೆಗಳು: 1 ಗುದದ್ವಾರದ ಮೂಲಕ ರಕ್ತಸ್ರಾವ, 2 ಮೂಳೆಗಳು ಹೊರಬರುವುದು, 3 ತುರಿಕೆ, 4 ವಿಪರೀತ ನವೆಯಿಂದ ಕೂಡಿದ ಚರ್ಮರೋಗ (ಪ್ರೊರೈಟಸ್), 5 ನೋವು.

ಉಪಚಾರ: ಸಮಾಧಾನಕಾರಕವಾಗಿ ಮಲಬದ್ಧತೆ ಅಥವಾ ಭೇದಿಯನ್ನು ನಿವಾರಿಸಬೇಕು; ಚುಚ್ಚುಮದ್ದು ನೀಡಬಹುದು. ಶಸ್ತ್ರಚಿಕಿತ್ಸೆ ಶಾಶ್ವತ ಪರಿಹಾರ ನೀಡಬಹುದು.

ಅನ್ನನಾಳದ ಕೊಂಕಿದ ಸಿರಗಳು: ಇವು ಪೋರ್ಟಲ್ ಮತ್ತು ಸಿಸ್ಟೆಮಿಕ್ ಸಿರಗಳ ಸಂಧಿಯಲ್ಲಿ ಕಾಣಿಸಿಕೊಳ್ಳುತ್ತವೆ. ಪೋರ್ಟಲ್ ಸಿಸ್ಟಂನಲ್ಲಿ ರಕ್ತ ಒತ್ತಡಗಳನ್ನು ಹೆಚ್ಚಿಸುವ ರೋಗಗಳಲ್ಲಿ ಈ ಸಿರಗಳು ಉಂಟಾಗುತ್ತವೆ. ಇದರ ಕಾರಣದಿಂದ ಮನುಷ್ಯನಿಗೆ ಪದೇಪದೇ ರಕ್ತವಾಂತಿಯಾಗುತ್ತದೆ. ಇದು ಹೆಚ್ಚಾದಾಗ ಮನುಷ್ಯ ಫಕ್ಕನೆ ಸಾಯಬಹುದು. ಶಸ್ತ್ರಚಿಕಿತ್ಸೆ ಇದಕ್ಕೆ ಸರಿಯಾದ ಉಪಚಾರ.