ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೊಂಟಿ ಮೀನು

ವಿಕಿಸೋರ್ಸ್ದಿಂದ

ಕೊಂಟಿ ಮೀನು

ಸಿಪ್ರಿನಿಡೆ ಕುಟುಂಬಕ್ಕೆ ಸೇರಿದ ಆಸ್ಟಿಯೋಕೈಲಸ್ ಎಂಬ ಶಾಸ್ತ್ರೀಯ ಒಂದು ಜಾತಿಯ ಸಿಹಿನೀರು ಮೀನು. ಕೊಂಟಿ, ಕೀಲಿ ಕೊಂಟಿ, ಬಗರಿ ಕೊಂಟಿ ಮುಂತಾದ ಸ್ಥಳಿಯ ಹೆಸರುಗಳೂ ಇದಕ್ಕಿವೆ. ಪಶ್ಚಿಮ ಏಷ್ಯಾ ಮತ್ತು ಭಾರತದ ಸಿಂಧ್ ಪ್ರದೇಶ, ದಕ್ಷಿಣ ಭಾರತದಲ್ಲಿ ಪಶ್ಚಿಮ ಘಟ್ಟಗಳು, ಹಾಗೂ ನೀಲಗಿರಿ ಬೆಟ್ಟಗಳ ಝರಿಗಳಲ್ಲಿ, ಇದರ ವ್ಯಾಪ್ತಿಯಿದೆ. ಕರ್ನಾಟಕದಲ್ಲಿ ಆಸ್ಟಿಯೋಕೈಲಸ್ ನ್ಯಾಶಿಯೈ, ಅ. ಥಾಮಸಿಯೈ, ಮತ್ತು ಆ. ಬ್ರವಿಡಾರ್ಸಾಲಿಸ್ ಎಂಬ ಮೂರು ಪ್ರಬೇಧಗಳಿವೆ. ಇದು ಸುಮಾರು 12 ಸೆಂ,ಮೀ ಉದ್ದಕ್ಕೆ ಬೆಳೆಯುತ್ತವೆ. ಕೊಳವೆಯಂತಹ ದೇಹ, ಮೂತಿಯ ಕೆಳಬಾಗದಲ್ಲಿರುವ ಬಾಯಿ, ಕೆಳದವಡೆಯ ಒಳಭಾಗದಲ್ಲಿರುವ ಕೊಂಬಿನ ಪದರ, ಕೆಳದುಟಿ ಇಲ್ಲದಿರುವುದು, ಗಂಟಲಿನ (ಫ್ಯಾರಿಂಜಿಯಲ್) ಹಲ್ಲುಗಳು, ಮೀಸೆಗಳು (ಬಾರ್ಬಲ್)ಗಳಿರುವುದಿಲ್ಲ, ಯಾವುದೇ ನಿಯಮಬದ್ಧ ಜೋಡಣೆಯನ್ನು ತೋರದ ಸಣ್ಣ ಹುರುಪೆಗಳು, ಕಣ್ಣಿನಿಂದ ಬಾಲದರೆಕ್ಕೆವರೆಗೆ ಇರುವ ಕಪ್ಪು ಬಣ್ಣದ ಪಟ್ಟಿ, - ಇವು ಕೊಂಟಿ ಮೀನಿನ ಲಕ್ಷಣಗಳು. ಇವುಗಳ ಸಂತಾನೋತ್ಪತ್ತಿಯ ಕಾಲ ಜೂನ್ - ಜುಲೈ ತಿಂಗಳುಗಳು.

(ಬಿ.ಎಚ್.ಎಂ.; ಟಿ.ಎಸ್.ವಿಶ್ವನಾಥ್)