ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೊಂಬು

ವಿಕಿಸೋರ್ಸ್ದಿಂದ

ಕೊಂಬು

ಅಂಗ್ಯುಲೇಟ ಗುಂಪಿಗೆ ಸೇರಿದ ಅನೇಕ ಸಸ್ತನಿಗಳ ತಲೆಯ ಮೇಲೆ ಬೆಳೆಯುವ ಗಡುಸಾದ ರಚನೆ (ಹಾರ್ನ್). ಕೆರಾಟಿನ್ ಎಂಬ ರಾಸಾಯನಿಕವಸ್ತುವಿನಿಂದ ರಚಿತವಾಗಿದೆ. ಸಾಮಾನ್ಯವಾಗಿ ಜೋಡಿಗಳಲ್ಲೇ ರೂಪುಗೊಂಡಿರುವ ಇದು ರೂಪರಚನೆಯಲ್ಲಿಯೂ ಬೆಳೆವಣಿಗೆಯ ಕ್ರಮದಲ್ಲೂ ವೈವಿಧ್ಯವನ್ನು ಪ್ರದರ್ಶಿಸುತ್ತದೆ. ಅತ್ಯಂತ ಸರಳಮಾದರಿಯ ಕೊಂಬು ಜಿರಾಫೆಗಳಲ್ಲಿ ಕಂಡುಬರುತ್ತದೆ. ಕಿವಿಗಳ ನಡುವೆ ನೆತ್ತಿಯ ಎರಡು ಪಕ್ಕಗಳಲ್ಲಿ ಸಣ್ಣ ಗುಬುಟುಗಳಂತೆ ಮೂಡಿರುವ ರಚನೆಗಳೇ ಜಿರಾಫೆಯ ಕೊಂಬುಗಳು. ಬೆಳವಣಿಗೆಯ ಪ್ರಾರಂಭದಲ್ಲಿ ಮೃದ್ವಸ್ಥಿಯಿಂದ ಕೂಡಿದ ಇವು ಪ್ರಾಣಿ ಬೆಳೆದಂತೆಲ್ಲ ನಿಧಾನವಾಗಿ ಮೂಳೆಯ ಕೇಂದ್ರಭಾಗವನ್ನೂ ಚರ್ಮ ಹಾಗೂ ಕೂದಲಿನ ಹೊರಭಾಗವನ್ನೂ ಒಳಗೊಳ್ಳುತ್ತವೆ. ಜಿರಾಫೆಯ ಜೀವಮಾನವಿಡೀ ಕೊಂಬುಗಳು ಬೆಳೆಯುತ್ತವಾದರೂ ಬೆಳೆವಣಿಗೆಯ ಗತಿ ಬಹಳ ನಿಧಾನ. ಗಂಡು ಮತ್ತು ಹೆಣ್ಣು ಜಿರಾಫೆಗಳೆರಡರಲ್ಲೂ ಕೊಂಬುಂಟು. ಅಲ್ಲದೆ ಜಿರಾಫೆಯಲ್ಲಿ ಕೊಂಬುಗಳ ಮುಂಭಾಗದಲ್ಲಿ ಹೆಚ್ಚು ಕಡಿಮೆ ಕಣ್ಣುಗಳ ನಡುವೆ ನೆತ್ತಿಯ ಮೇಲೆ ಮೂರನೆಯ ಕೊಂಬೂ ಇರುತ್ತದೆ. ಹಸು, ಎಮ್ಮೆ ಮುಂತಾದ ಪ್ರಾಣಿಗಳಲ್ಲಿ ಹಣೆಯ ಮೂಳೆಯ ಮೇಲ್ಭಾಗದಲ್ಲಿ ಆಚೀಚೆ ಒಂದೊಂದು ಕೊಂಬು ಹೊರಡುತ್ತದೆ. ನೇರವಾಗಿ ಇಲ್ಲವೆ ಕೊಂಚಬಾಗಿಕೊಂಡು ಕವಲೊಡೆಯದೆ ಬೆಳೆಯುವ ಇದು ಟೊಳ್ಳಾಗಿದೆ. ಈ ಪ್ರಾಣಿಗಳಲ್ಲಿ ಗಂಡು ಹಾಗೂ ಹೆಣ್ಣುಗಳೆರಡರಲ್ಲೂ ಕೊಂಬು ಇದೆ. ಆಡು, ಕುರಿ ಮುಂತಾದ ಪ್ರಾಣಿಗಳಲ್ಲಿ ಕೊಂಬು ಸುರುಳಿಯಂತೆ ಸುತ್ತಿಕೊಂಡಿದೆ. ಜಿಂಕೆಗಳಲ್ಲಿ ಸಾಮಾನ್ಯವಾಗಿ ಗಂಡಿನಲ್ಲಿ ಮಾತ್ರ ಕೊಂಬಿರುತ್ತದೆ. ಈ ಪ್ರಾಣಿಗಳಲ್ಲಿ ಸಾಮಾನ್ಯವಾಗಿ ಕೊಂಬು ಕವಲೊಡೆದಿದ್ದು ಒಳಗೆಲ್ಲ ಗಟ್ಟಿಯಾಗಿರುತ್ತದೆ. ಕೊಂಬು ಎಳೆಯದಿದ್ದಾಗ ಅದರ ಮೇಲೆಲ್ಲ ಮುಖಮಲ್ಲಿನಂಥ ಮೃದುವಾದ ಚರ್ಮದ ಹೊದಿಕೆಯಿರುತ್ತದೆ. ಕಾಲಕ್ರಮೇಣ ಈ ಹೊದಿಕೆ ಸುಲಿದುಹೋಗಿ ಬರಿಯ ಗಟ್ಟಿಯಾದ ಒಳಭಾಗ ಮಾತ್ರ ಉಳಿಯುತ್ತದೆ. ಜಿಂಕೆಗಳಲ್ಲಿ ಕೊಂಬುಗಳು ವರ್ಷ ವರ್ಷವೂ ಉದುರಿಹೋಗಿ ಮತ್ತೆ ಹುಟ್ಟಿಕೊಳ್ಳುತ್ತವೆ.

ಬಾಚಣಿಕೆ, ಗುಂಡಿ, ಕೊಡೆಗಳ ಹಿಡಿಗಳು, ಸಣ್ಣ ಡಬ್ಬಿಗಳು ಮುಂತಾದ ಉಪಯುಕ್ತ ವಸ್ತುಗಳನ್ನು ತಯಾರುಮಾಡಲು ಕೊಂಬನ್ನು ಬಳಸುತ್ತಾರೆ. (ಬಿ.ಟಿಎಚ್.)

ಕೊಂಬು ತೆಗೆತ: ಕೆಲವು ಉದ್ದೇಶಗಳಿಗಾಗಿ ದನಗಳು ಮತ್ತಿತರ ಪ್ರಾಣಿಗಳಲ್ಲಿ ಕೊಂಬುಗಳನ್ನು ಬೆಳೆಯಲು ಬಿಡದಿರುವುದು ಅಥವಾ ಇದ್ದುದನ್ನು ಕಿತ್ತು ಹಾಕುವುದು (ಡಿಹಾರ್ನಿಂಗ್). ಬೆಳೆದ ದನಗಳಲ್ಲಿ ಕೊಂಬುಗಳನ್ನು ತುಂಡರಿಸಿ ತೆಗೆದು ಹಾಕಬಹುದು. ಕರು ಹುಟ್ಟಿದ ವಾರದೊಳಗಾಗಿ, ಅಂತೂ 10 ದಿವಸಗಳೊಳಗಾಗಿ, ಕೊಂಬುಗಳನ್ನು ಬುಡಮಟ್ಟ ಕೀಳುವುದರಿಂದ ಮುಂದೆ ಅವು ಬೆಳೆಯುವುದನ್ನು ತಪ್ಪಿಸಬಹುದು. ಕಾಡುದನಗಳಿಗೆ ಆತ್ಮರಕ್ಷಣೆಗಾಗಿ ಕೊಂಬುಗಳು ಬೇಕಾಗುತ್ತವೆ. ಕರಾವಿನ ಸಾಕುಪ್ರಾಣಿಗಳಿಗೆ ಅವು ಬೇಕಿಲ್ಲ. ಅಲ್ಲದೆ ಕೊಂಬಿನಲ್ಲಿ ಏಡಿಗಂತಿಯಂಥ ತೀವ್ರ ವ್ರಣವಾದಾಗ ಕೊಂಬನ್ನು ಅವಶ್ಯ ತೆಗೆಯಬೇಕಾಗುತ್ತದೆ. ತುಂಟದನಗಳು ಮತ್ತು ಕೊಂಬಿನ ರೋಗವಿರುವ ದನಗಳು ಇತರ ದನಗಳನ್ನು ಇರಿದು ಗಾಯಗೊಳಿಸುವುದನ್ನು ತಡೆಯಲು ಈ ಕಟಾವು ಅಗತ್ಯವೆನಿಸುತ್ತದೆ.

ಕರಾವಿನ ದನಗಳ ಕೊಂಬುತೆಗೆತದ ಯೋಗ್ಯವಿಧಾನ ಮೊಳೆಚಿವುಟಿಕೆ (ಡಿಬಡ್ಡಿಂಗ್). ಕೊಂಬಿನ ಮೊಳಕೆಗೆ ಕಾಸ್ಟಿಕ್ ರಾಸಾಯನಿಕಗಳನ್ನು ಹಚ್ಚಿ ಅಥವಾ ಕೊಂಬಿನ ಮೊಳಕೆಯ ಸುತ್ತಲೂ ಬರೆಗುಳವನ್ನು ಲೇಪಿಸಿ ಅಥವಾ ಕೊಂಬಿನ ಮೊಳಕೆಯಲ್ಲಿ ಮೊಳೆವ ಪದರವನ್ನು ಶಸ್ತ್ರಕ್ರಿಯೆಯಿಂದ ಸುಲಿದು ಮೊಳೆ ಚಿವುಟಬಹುದು. ಕರುವಿಗೆ ಹಾಲು ಬಿಡಿಸುವ ಮುಂಚೆ ಇಲ್ಲವೇ ಕೊಂಬು ಒಂದಂಗುಲ ಬೆಳೆವುದರೊಳಗಾಗಿ ಕೊಂಬುಗತ್ತರಿಯಿಂದ ಅದನ್ನು ಕತ್ತರಿಸಿ ಹಾಕಬಹುದು. (ಕೆ.ವಿ.ಎಂ.)