ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೊಪ್ಪಳ

ವಿಕಿಸೋರ್ಸ್ದಿಂದ

ಕೊಪ್ಪಳ

ಕರ್ನಾಟಕ ರಾಜ್ಯದ ಒಂದು ಜಿಲ್ಲೆ; ತಾಲ್ಲೂಕು ಮತ್ತು ಅವುಗಳ ಆಡಳಿತ ಕೇಂದ್ರ. ರಾಜ್ಯದ ಈಶಾನ್ಯ ಭಾಗದಲ್ಲಿ ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ನಡುವಿನ ಪ್ರದೇಶದಲ್ಲಿದೆ. ಹಿಂದಿನ ರಾಯಚೂರು ಜಿಲ್ಲೆಯನ್ನು ವಿಭಜಿಸಿ 1997ರಲ್ಲಿ ಹೊಸ ಜಿಲ್ಲೆ ಕೊಪ್ಪಳವನ್ನು ರಚಿಸಲಾಯಿತು. ಇದರಲ್ಲಿ ನಾಲ್ಕು ತಾಲ್ಲೂಕುಗಳಿವೆ-ಕೊಪ್ಪಳ, ಗಂಗಾವತಿ ಕುಷ್ಟಗಿ ಮತ್ತು ಯಲಬುರ್ಗ. 20 ಹೋಬಳಿಗಳು, 618 ಗ್ರಾಮಗಳಿವೆ. ಈ ಜಿಲ್ಲೆಯನ್ನು ಉತ್ತರದಲ್ಲಿ ಬಾಗಲಕೋಟೆ ಮತ್ತು ರಾಯಚೂರು, ಪೂರ್ವದಲ್ಲಿ ರಾಯಚೂರು ಮತ್ತು ಬಳ್ಳಾರಿ, ದಕ್ಷಿಣದಲ್ಲಿ ಬಳ್ಳಾರಿ ಹಾಗೂ ಪಶ್ಚಿಮದಲ್ಲಿ ಗದಗ ಜಿಲ್ಲೆಗಳು ಸುತ್ತುವರಿದಿವೆ. ವಿಸ್ತೀರ್ಣ, 8,458Z.Àಕಿಮೀ. ಜನಸಂಖ್ಯೆ 11,93,496.

ಪರಿಸರ: ಈ ಜಿಲ್ಲೆ ದಖನ್ನಿನ ಕಣಿವೆ ಭಾಗದ್ದಲ್ಲಿದ್ದು ಸಮುದ್ರ ಮಟ್ಟಕ್ಕೆ ಹೆಚ್ಚು ಎತ್ತರವಲ್ಲದ ಭೂಪ್ರದೇಶದಿಂದ ಕೂಡಿದೆ. ಇದರಿಂದಾಗಿ ಇಲ್ಲಿ ಯಾವ ಪ್ರಮುಖ ಬೆಟ್ಟಸಾಲುಗಳೂ ಕಂಡುಬರುವುದಿಲ್ಲ. ಅಲ್ಲಲ್ಲಿ ಪಶ್ಚಿಮ ಅಥವಾ ಪೂರ್ವ ಘಟ್ಟಸಾಲಿಗೆ ಸೇರದ ಹೆಚ್ಚು ಎತ್ತರವಲ್ಲದ ಗುಡ್ಡಗಳಿವೆ. ಕುಷ್ಟಗಿ ತಾಲ್ಲೂಕಿನಲ್ಲಿ ಕಂಡುಬರುವ ಬಾದಾಮಿ ಬೆಟ್ಟಗಳ ಶ್ರೇಣಿಗೆ ಸೇರಿದ ಸಾಲೊಂದು ಗಂಗಾವತಿ ತಾಲ್ಲೂಕಿನಲ್ಲಿ ಮುಂದುವರಿಯುತ್ತದೆ. ಕುಷ್ಟಗಿಯಿಂದ 32ಕಿಮೀ ದೂರದಲ್ಲಿರುವ ಜಗದ ಗುಡ್ಡ (736ಮೀ.), ಗಂಗಾವತಿ ತಾಲ್ಲೂಕಿನ ಎಮ್ಮೆಗುಡ್ಡ (821ಮೀ.), ಕನಕಗಿರಿಗೆ ಈಶಾನ್ಯದಲ್ಲಿರುವ ನಿಶಾನಿಗುಡ್ಡ (580ಮೀ.), ಮಾರಿಗುಡ್ಡ (597ಮೀ.), ಇವು ಈ ಜಿಲ್ಲೆಯ ಎತ್ತರದ ಬೆಟ್ಟಗಳು. ಈ ಜಿಲ್ಲೆಯಲ್ಲಿ ಮಳೆ ಕಡಿಮೆ. ಹಾಗಾಗಿ ಸಸ್ಯ ಸಂಪತ್ತೂ ಕಡಿಮೆ. ಕಡಿದಾದ ಮತ್ತು ವಿವಿಧ ಆಕಾರದ ಬಂಡೆಗಳಿಂದ ಆವೃತವಾದ ಪರಿಸರವನ್ನು, ಬಯಲು ಭೂದೃಶ್ಯಗಳನ್ನು ಕಾಣುತ್ತೇವೆ.


ಇಲ್ಲಿನ ಬೆಟ್ಟಗಳು ಪ್ರಾಕೃತಿಕವಾಗಿ ರೂಪಾಂತರ ಹೊಂದಿದ ಪ್ರಾಚೀನ ಶಿಲಾಯುಗಕ್ಕೆ ಸೇರಿದವು. ಅಲ್ಲಲ್ಲಿ ಗ್ರಾನೈಟ್ ಕಲ್ಲಿನ ಬೆಟ್ಟಗಳು ಕಾಣುತ್ತವೆ; ಉಳಿದಂತೆ ಸಮತಟ್ಟಾದ ಬಯಲು ಪ್ರದೇಶ. ಈ ಶಿಲಾ ಪದರದಲ್ಲಿ ನೈಸ್ ಶಿಲೆಗಳು, ಪದರಗಲ್ಲು ಶಿಲೆಗಳು, ಬೆಣಚುಕಲ್ಲುಗಳು ಇವೆ. ಮುಖ್ಯವಾಗಿ ಕೇಂಬ್ರಿಯನ್ ಯುಗಪೂರ್ವದ ರೂಪ ಪರಿವರ್ತನಾ ಪದರಗಲ್ಲುಗಳು ಮತ್ತು ಗ್ರಾನೈಟ್ ಬೆಣಚುಗಲ್ಲು ಬಹುಪಾಲು ಶಿಲೆಗಳು ಧಾರವಾಡ ಶಿಲಾವರ್ಗಕ್ಕೆ ಸೇರಿದವು. ಪರ್ಯಾಯ ದ್ವೀಪ ಸಂಬಂಧವಾದ ಡೈಕ್ ಮಾದರಿಯ ಶಿಲೆಗಳೂ ಕಂಡುಬರುತ್ತವೆ. ಕಲಾದಗಿ ಶ್ರೇಣಿಗೆ ಸೇರಿದ ಕೆಲವು ಶಿಲೆಗಳು ಕುಷ್ಟಗಿ ಸಮೀಪ ಇವೆ. ಇಲ್ಲಿ ಪೆಂಟೆ ಶಿಲೆ ಮತ್ತು ಪುರಳು ಶಿಲೆಯ ಪದರಗಳನ್ನು ಕಾಣಬಹುದು. ಕಣಶಿಲೆಯ ಗುಡ್ಡಗಳು, ಟ್ರ್ಯಾಪ್ ಶಿಲೆಯ ಉಬ್ಬುಗಳು ಗಂಗಾವತಿ ತಾಲ್ಲೂಕಿನಲ್ಲಿವೆ.

ಜಿಲ್ಲೆಯಲ್ಲಿ ಕಬ್ಬಿಣ, ತಾಮ್ರ, ಸೀಸದ ಅದುರು, ಅಭ್ರಕ, ಸ್ಫಟಿಕ ಶಿಲೆ ಮುಂತಾದ ಖನಿಜಗಳಿವೆ. ಸಮೀಪದ ರಾಯಚೂರು ಜಿಲ್ಲೆಯಲ್ಲಿ ಚಿನ್ನದ ನಿಕ್ಷೇಪಗಳಿವೆ. ಜಂಬುಮಣ್ಣು ಮತ್ತು ಕಾವಿಮಣ್ಣಿನ ಭೂಮಿ ಉಪಯುಕ್ತವಾಗಿದೆ. ಕೊಪ್ಪಳ ತಾಲ್ಲೂಕಿನ ಬಹುಭಾಗ ಕಪ್ಪುಮೆಕ್ಕಲು ಮಣ್ಣಿನಿಂದ ಕೂಡಿದ್ದು ಫಲವತ್ತಾಗಿದೆ. ಕಪ್ಪುಮಿಶ್ರಿತ ಕೆಂಪುಮಣ್ಣು ಅಲ್ಲಲ್ಲಿ ಕಂಡುಬರುತ್ತದೆ. ಮರಳು ಮಿಶ್ರಿತ ಕಪ್ಪುಮಣ್ಣು ಅನೇಕ ಕಡೆಗಳಲ್ಲಿ ಹರಡಿದೆ.ಈ ಜಿಲ್ಲೆಯಲ್ಲಿ ಮಳೆ ಕಡಿಮೆ ಬಿದ್ದರೂ ತುಂಗಭದ್ರಾ ಮತ್ತು ಕೃಷ್ಣಾ ನದಿಗಳು ಎರಡೂ ಪಾಶ್ರ್ವಗಳಲ್ಲಿ ಹರಿಯುವುದರಿಂದ ಜಲ ಸಂಪನ್ಮೂಲ ಉತ್ತಮವಾಗಿದೆ. ತುಂಗಭದ್ರಾ ನದಿ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಸರಹದ್ದಾಗಿ ಕ್ರಮಿಸುತ್ತದೆ. ಜಿಲ್ಲೆಯ ಸರಾಸರಿ ಮಳೆ 595ಮಿಮೀ. ಜಿಲ್ಲೆಯಲ್ಲಿ ಹುಟ್ಟಿ ಹರಿಯುವ ತೊರೆಗಳಲ್ಲಿ ನೀರಿನ ಪ್ರಮಾಣ ಕಡಿಮೆ. ಯಲಬುರ್ಗ ತಾಲ್ಲೂಕಿನಲ್ಲಿ ಹುಟ್ಟುವ ಒಂದು ತೊರೆ ಕೊಪ್ಪಳದ ಸಮೀಪ ಹರಿದು ತುಂಗಭದ್ರಾ ಜಲಾಶಯದ ಹಿನ್ನೀರನ್ನು ಸೇರುತ್ತದೆ. ಕುಷ್ಟಗಿ ತಾಲ್ಲೂಕಿನ ಉಪ್ಪಲದೊಡ್ಡಿ ಬಳಿ ಹುಟ್ಟುವ ಕನಕಗಿರಿ ನಾಲಾ ಗಂಗಾವತಿ ತಾಲ್ಲೂಕನ್ನು ಪ್ರವೇಶಿಸಿ ತುಂಗಭದ್ರಾ ನದಿಯನ್ನು ಸೇರುತ್ತದೆ. ತಾವರಗೆರೆ ಬಳಿ ಹುಟ್ಟುವ ಸಿದ್ಧಾಪುರ ನಾಲೆ ಕುಂಟೋಜಿ ಬಳಿ ತುಂಗಭದ್ರಾ ನದಿಯನ್ನು ಸೇರುತ್ತದೆ. ಇನ್ನು ಅನೇಕ ಚಿಕ್ಕ ಪುಟ್ಟ ತೊರೆಗಳು ಆಗ್ನೇಯಾಬಿsಮುಖವಾಗಿ ಹರಿದು ತುಂಗಭದ್ರಾ ನದಿ ಸೇರುತ್ತವೆ. ತೊರೆ ಮತ್ತು ನಾಲಾಗಳ ಮೂಲಕ ಮಳೆಗಾಲದಲ್ಲಿ ನೀರು ಹರಿದರೂ ಬೇಸಗೆಯಲ್ಲಿ ಹೆಚ್ಚಿನವು ಬತ್ತಿಹೋಗುತ್ತವೆ

ಜಿಲ್ಲೆಯ ಅತಿ ಉಷ್ಣ ಹವಾಮಾನ ಹಾಗೂ ವಾತಾವರಣದಲ್ಲಿನ ಕಡಿಮೆ ತೇವಾಂಶ ಸಸ್ಯಗಳ ಬೆಳೆವಣಿಗೆಗೆ ಸಹಾಯಕವಾಗಿಲ್ಲ. ಅಲ್ಲಲ್ಲಿ ಗುಡ್ಡಗಳ ಇಳಿಜಾರಿನಲ್ಲಿ ಪೆÇದೆ ಕಾಡುಗಳು ಕಂಡುಬರುತ್ತವೆ. ಕುಷ್ಟಗಿ ತಾಲ್ಲೂಕಿನಲ್ಲಿ ಅರಣ್ಯ ಪ್ರದೇಶ ಇತರೆಡೆಗಿಂತ ಹೆಚ್ಚಿದೆ. ಜಿಲ್ಲೆಯ ಅರಣ್ಯ ಪ್ರದೇಶದ ವಿಸ್ತೀರ್ಣ 29451 ಹೆಕ್ಟೇರುಗಳು. ಇಲ್ಲಿನ ಕಾಡುಗಳಲ್ಲಿ ಜಾಲ, ಹುಣಿಸೆ, ಹೊಂಗೆ, ಹಾಲೆ, ಮುತ್ತುಗ, ದಿಂಡಿಗ, ಚುಜ್ಜಲು, ಹುರಗಲು, ಹೊನ್ನೆ, ಕಮ್ಮಾರ, ನಲ್ಲಮಡ್ಡಿ, ಬಿಲ್ವ, ಬಾಗೆ, ಕಕ್ಕೆ, ಸೀತಾಫಲ ಮುಂತಾದ ಗಿಡಮರಗಳಿವೆ. ಅಲ್ಲಲ್ಲಿ ಮುಳ್ಳುಗಿಡಗಳ ಕುರುಚಲು ಕಾಡುಗಳಿವೆ. ಭೂಸವಕಳಿಯನ್ನು ತಡೆಯಲು ನೆಡುತೋಪುಗಳನ್ನು ಬೆಳೆಸಲಾಗಿದೆ.

ಕಾಡುಗಳ ಕೊರತೆಯಿಂದ ಪ್ರಾಣಿಪಕ್ಷಿಗಳ ಸಂಖ್ಯೆಯೂ ಕಡಿಮೆ. ಚಿರತೆ, ತೋಳ, ಕತ್ತೆಕಿರುಬ, ನರಿ, ಕಪಿ ಮತ್ತು ಜಿಂಕೆಗಳು ಅಲ್ಲಲ್ಲಿ ಕಂಡುಬರುತ್ತವೆ. ಹಾವುಗಳ ಸಂತತಿ ಹೆಚ್ಚು. ಚೇಳು, ಹಲ್ಲಿ, ನೀರಹಾವು, ಮಣ್ಣುಮುಕ್ಕ, ನಾಗರಹಾವು ಎಲ್ಲೆಡೆಯೂ ಇವೆ. ಬಾತು, ನೀರಕೋಳಿ, ಕಾಗೆ, ಗಾಜುಗ ಮುಖ್ಯವಾದ ಪಕ್ಷಿಗಳು. ಹಸು, ಎಮ್ಮೆ, ಕುರಿ, ಮೇಕೆ, ಕುದುರೆ ಮತ್ತು ಕೋಳಿ ಮುಖ್ಯ ಸಾಕುಪ್ರಾಣಿಗಳು

ಹವಾಮಾನ ವರ್ಷದ ಬಹುಭಾಗ ಉಷ್ಣಾಂಶದಿಂದ ಕೂಡಿರುತ್ತದೆ.ಮಳೆ ಕೆಲವು ವರ್ಷಗಳಲ್ಲಿ ಕಡಿಮೆ ಇದ್ದು ಕೆಲವೊಮ್ಮೆ ಹೆಚ್ಚು ಮಳೆ ಆಗುವುದುಂಟು. 2000 ಇಸವಿಯ ಮಳೆಗಾಲದಲ್ಲಿ 701ಮಿಮೀ. ಮಳೆಯಾಗಿತ್ತು. ವರ್ಷದಲ್ಲಿ 41 ಮಳೆ ದಿನಗಳೆಂದು ಗುರುತಿಸಲಾಗಿದೆ. ಮುಂಗಾರಿನಲ್ಲಿ ವರ್ಷದ ಹೆಚ್ಚಿನ ಭಾಗ ಮಳೆಯಾದರೂ ಹಿಂಗಾರಿನಲ್ಲಿ ಚಂಡಮಾರುತದ ಮಳೆ ಬಿರುಸಿನಿಂದ ದೊಡ್ಡ ಪ್ರಮಾಣದಲ್ಲಿ ಬೀಳುತ್ತದೆ. ಉಷ್ಣಾಂಶ ಅದಿsಕವಿರುವ ಭಾಗದಲ್ಲಿರುವ ಈ ಜಿಲ್ಲೆಯ ಕೆಲವೆಡೆ ಗರಿಷವಿ ಉಷ್ಣಾಂಶ 400ಸೆ.ಇರುವುದೂ ಉಂಟು. ಹಿಂದಿನ ಜಿಲ್ಲಾ ಕೇಂದ್ರ ರಾಯಚೂರಿನಲ್ಲಿ 450ಸೆ.ವರೆಗೂ ಉಷ್ಣಾಂಶ ಏರುವುದನ್ನು ಸ್ಮರಿಸಬಹುದು. ರಾತ್ರಿವೇಳೆ ಉಷ್ಣಾಂಶ ಬೇಗ ಕಡಿಮೆ ಆಗುತ್ತದೆ. ಡಿಸೆಂಬರ್‍ನಲ್ಲಿ ಗರಿಷವಿ ಉಷ್ಣಾಂಶ 29.30ಸೆ. ಇದ್ದರೆ ಕನಿಷವಿ ಉಷ್ಣಾಂಶ 17.70 ಸೆ.ಗೆ ಇಳಿಯುತ್ತದೆ. ನವೆಂಬರ್‍ನಿಂದ ಮೇವರೆಗೆ ಒಣ ಹವೆ ಇರುವುದು. ವ್ಯವಸಾಯ: ಕೊಪ್ಪಳ ಜಿಲ್ಲೆ ವ್ಯವಸಾಯ ಪ್ರಧಾನವಾದುದು. ಜಿಲ್ಲೆಯ ಸೇ.75 ರಷ್ಟು ಜನರು ವ್ಯವಸಾಯ ಮತ್ತು ಆ ಸಂಬಂಧವಾದ ಕಸಬುಗಳನ್ನು ಅವಲಂಬಿಸಿದ್ದಾರೆ. ಮಳೆ ಕಡಿಮೆ ಪ್ರಮಾಣದಲ್ಲಿ ಬೀಳುವುದರಿಂದ ಸಾಗುವಳಿಗಾರರ ಬದುಕು ಅನಿಶ್ಚಿತ ಆದಾಯವನ್ನು ಆಧರಿಸಿದೆ. ಹಿಂದಿನ ವಿಜಯನಗರ ಕಾಲದ ನಾಲೆಗಳು ಸ್ಥಳೀಯವಾಗಿ ಸೀಮಿತ ಪ್ರದೇಶಗಳಿಗೆ ನೀರೊದಗಿಸುತ್ತಿದ್ದವು. ಸುದೈವವಶಾತ್ ಈ ಜಿಲ್ಲೆಯು ರಾಜ್ಯದ ಪ್ರಮುಖ ನದಿಗಳಾದ ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ದೋಆಬ್ ಪ್ರದೇಶದಲ್ಲಿ ಬರುವುದರಿಂದ ನೀರಾವರಿ ಯೋಜನೆಗಳಿಂದ ಜಿಲ್ಲೆ ಹೆಚ್ಚು ಪ್ರಯೋಜನ ಪಡೆದಿದೆ.

ಹೈದರಬಾದ್ ಸಂಸ್ಥಾನದ ಆಡಳಿತದಲ್ಲಿದ್ದಾಗ ತುಂಗಭದ್ರಾ ನದಿಯ ಅಣೆಕಟ್ಟು ಯೋಜನೆಗಳನ್ನು ಕಾರ್ಯಗತಗೊಳಿಸಲು ವಿವಿಧ ಪ್ರಯತ್ನಗಳು ನಡೆದವು. ಆಗಿನ ಮೈಸೂರು ಸಂಸ್ಥಾನ ಮತ್ತು ಮದರಾಸು ಪ್ರಾಂತಗಳು ಈ ಸರಹದ್ದಿನಲ್ಲಿ ಬರುತ್ತಿದ್ದುದರಿಂದ ಅವುಗಳೊಂದಿಗೆ ಸಮಾಲೋಚನೆ ಮತ್ತು ಒಪ್ಪಂದಗಳ ಅಂಗೀಕಾರದಲ್ಲೇ ಸಾಕಷ್ಟು ಕಾಲ ಕಳೆಯಿತು. ಸ್ವಾತಂತ್ರ್ಯ ಬಂದ ಮೇಲೆ 1950ರ ದಶಕದಲ್ಲಿ ತುಂಗಭದ್ರಾ ನದಿಗೆ ಹೊಸಪೇಟೆ ಬಳಿ ಬೃಹತ್ ಜಲಾಶಯ ನಿರ್ಮಿಸುವ ಕಾರ್ಯಯೋಜನೆ ತ್ವರಿತಗೊಂಡಿತು. ಇದು 1968ರ ಹೊತ್ತಿಗೆ ಪೂರ್ಣಗೊಂಡು ಕೊಪ್ಪಳವನ್ನು ಒಳಗೊಂಡಂತೆ ಹಿಂದಿನ ರಾಯಚೂರು ಜಿಲ್ಲೆಯ - ಈ ಜಲಾಶಯದ ಎಡದಂಡೆ ಕಾಲುವೆ ಮೂಲಕ ಹೆಚ್ಚು ಪ್ರದೇಶಗಳಿಗೆ ನೀರಾವರಿ ಸೌಲಭ್ಯ ದೊರೆಯಿತು. ಈಗಿನ ಕೊಪ್ಪಳ ಜಿಲ್ಲೆಯ ಕೊಪ್ಪಳ, ಗಂಗಾವತಿ ತಾಲ್ಲೂಕುಗಳಲ್ಲಿ ನೀರಾವರಿ ಪ್ರದೇಶ ಹೆಚ್ಚಿತು. ಇದಲ್ಲದೆ ಹಳೆಯ ನಾಲಾಗಳು, ಸಣ್ಣ ಪ್ರಮಾಣದ ಅಣೆಕಟ್ಟುಗಳು ಅಥವಾ ಬ್ಯಾರೇಜ್‍ಗಳು ನಿರ್ಮಾಣವಾಗಿದ್ದು ಇವು ಬೇಸಗೆಯ ಬೆಳೆಗಳಿಗೆ ಆಶ್ರಯವಾಗಿವೆ. ಹಾಲಿ ಜಿಲ್ಲೆಯಲ್ಲಿ ಕಾಲುವೆಗಳಿಂದ 63,411 ಹೆಕ್ಟೇರ್, ಕೆರೆಗಳಿಂದ 1763 ಹೆಕ್ಟೇರ್ ಬಾವಿಗಳಿಂದ, 20,262 ಹೆಕ್ಟೇರ್ ಮತ್ತು ಕೊಳವೆ ಬಾವಿಗಳಿಂದ 6363 ಹೆಕ್ಟೆರ್ ಜಮೀನಿಗೆ ನೀರೊದಗುತ್ತಿದೆ. ಬತ್ತ, ಜೋಳ, ಸಜ್ಜೆ, ಹುರುಳಿ, ಹೆಸರು, ಮುಸುಕಿನ ಜೋಳ, ಕಡಲೆ, ಎಳ್ಳು, ದ್ವಿದಳ ಧಾನ್ಯಗಳು, ಸೂರ್ಯಕಾಂತಿ, ಸೋಯಾಬೀನ್, ಹತ್ತಿ, ತೊಗರಿ, ಹರಳುಬೀಜ, ನೆಲಗಡಲೆ, ಅಗಸೆ ಇವು ಮುಖ್ಯ ಬೆಳೆಗಳಾಗಿವೆ. ತೋಟಗಾರಿಕೆ ಬೆಳೆಗಳಲ್ಲಿ ಮಾವು, ಸಪೆÇೀಟ, ಸೀಬೆ, ಬಾಳೆ, ನಿಂಬೆ, ದಾಳಿಂಬೆ, ಅಂಜೂರ ಮೊದಲಾದವು ಪ್ರಮುಖವಾದವು.

ಪಶುಸಂಗೋಪನೆ ಕೃಷಿಯೊಂದಿಗೆ ಜಿಲ್ಲೆಯ ಮುಖ್ಯ ಉಪಕಸಬುಗಳಲ್ಲಿ ಒಂದಾಗಿದೆ. ಇಲ್ಲಿ ಖಿಲಾರ್ ತಳಿಯ ಜಾನುವಾರುಗಳು ಹೆಚ್ಚು. ಅದಿsಕ ಹಾಲು ಉತ್ಪಾದನೆಯ ದೃಷ್ಟಿಯಿಂದ ಮಿಶ್ರತಳಿಗಳನ್ನು ಅಬಿsವೃದ್ಧಿಪಡಿಸಲಾಗಿದೆ. ಜಾನುವಾರು ಮತ್ತು ಕುರಿಗಳ ತಳಿ ಅಬಿsವೃದ್ಧಿಗಾಗಿ ವಿವಿಧ ಫಾರಂಗಳನ್ನು ಸ್ಥಾಪಿಸಿದೆ. 1953ರಲ್ಲಿ ಕೊಪ್ಪಳ ತಾಲ್ಲೂಕಿನ ಮುನಿರಾಬಾದಿನಲ್ಲಿ ಸ್ಥಾಪಿಸಲಾದ ಫಾರಂ ಅವುಗಳಲ್ಲಿ ಪ್ರಮುಖವಾದುದು. ಇಲ್ಲಿ ಆಂಧ್ರ ಮತ್ತು ವಿದೇಶಗಳಿಂದ ತಂದ ತಳಿಗಳೊಂದಿಗೆ ಸ್ಥಳೀಯ ತಳಿಗಳ ಸಂಕರ ಮಾಡುವ ಮೂಲಕ ಹೊಸ ತಳಿಗಳನ್ನು ಬೆಳೆಸಲಾಗುತ್ತಿದೆ. ಕೋಳಿಗಳ ತಳಿ ಅಬಿsವೃದ್ಧಿಗೆ ಸಹ ಇಲ್ಲಿ ಒಂದು ಕೇಂದ್ರವಿದೆ. ಗಂಗಾವತಿಯಲ್ಲಿ ಪ್ರಾದೇಶಿಕ ಕೋಳಿ ಸಾಕಣೆ ಫಾರಂ ಇದೆ. ಆಗಾಗ ಬರಗಾಲಕ್ಕೆ ತುತ್ತಾಗುವ ಪ್ರದೇಶಗಳಲ್ಲಿ ಜಾನುವಾರುಗಳ ಸಂರಕ್ಷಣೆಗಾಗಿ ಗೋಶಾಲೆಗಳಿವೆ. ಮೇವು ಬೆಳೆಸುವ ಫಾರಂಗಳಿವೆ. 1998-99ರ ಅಂಕಿಅಂಶಗಳ ಮೇರೆಗೆ 249,976 ಸ್ಥಳೀಯ ಜಾನುವಾರುಗಳು; 2,165 ವಿದೇಶಿ ತಳಿಯ ಹಸುಗಳು, 8037 ಮಿಶ್ರತಳಿ ಹಸುಗಳು, 90078, ಎಮ್ಮೆಗಳೂ 191912 ಕುರಿಗಳು, 136671 ಮೇಕೆಗಳು ಜಿಲ್ಲೆಯಲ್ಲಿದ್ದವು. ಸಾಕು ಪ್ರಾಣಿಗಳ ಕ್ಷೇಮಾಬಿsವೃದ್ಧಿಗೆ ಪಶುಸಂಗೋಪನ ಇಲಾಖೆಯ ಆಸ್ಪತ್ರೆಗಳು, ಚಿಕಿತ್ಸಾಲಯಗಳು ಇವೆ. ಜಿಲ್ಲೆಯಲ್ಲಿ 9 ಪಶುವೈದ್ಯ ಆಸ್ಪತ್ರೆಗಳು, 11 ಚಿಕಿತ್ಸಾಲಯಗಳು, 59 ಪ್ರಾಥಮಿಕ ಪಶುವೈದ್ಯಕೇಂದ್ರಗಳು, 5 ಸಂಚಾರಿ ಚಿಕಿತ್ಸಾಲಯಗಳು, 12 ಕೃತಕ ಗರ್ಭಧಾರಣಾ ಕೇಂದ್ರಗಳಿವೆ.

ಸಾಕಷ್ಟು ಜಲಾಶಯಗಳು ಮತ್ತು ಕೆರೆಕಟ್ಟೆಗಳಿಂದ ಕೂಡಿರುವ ಈ ಜಿಲ್ಲೆಯಲ್ಲಿ ಮೀನುಗಾರಿಕೆ ಸಹ ಬೆಳೆದಿದೆ. 2000-01ರಲ್ಲಿ 3,324 ಮೆಟ್ರಿಕ್‍ಟನ್ ಮೀನನ್ನು ಹಿಡಿಯಲಾಗಿತ್ತು. ಮುನಿರಾಬಾದಿನಲ್ಲಿ ಮೀನು ಸಾಕಣೆ ಅಬಿsವೃದ್ಧಿ ಫಾರಂ ಇದೆ.

ಕೃಷಿ ಪ್ರದೇಶದ ಸರ್ವತೋಬಿsಮುಖ ಅಬಿsವೃದ್ಧಿಗಾಗಿ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು ಅವನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಮುಖ್ಯವಾಗಿ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ವಹಿಸಲಾಗಿದೆ. ಗಂಗಾವತಿಯ ಗ್ರಾಮಸೇವಕರ ತರಬೇತಿ ಕೇಂದ್ರ, ಸಾಮಾನ್ಯ ಕೃಷಿ ಸಂಶೋಧನ ಕೇಂದ್ರ, ತುಂಗಭದ್ರಾ ಕೃಷಿ ಅಬಿsವೃದ್ಧಿ ಕೇಂದ್ರ, ವ್ಯವಸಾಯ ಮತ್ತು ತೋಟಗಾರಿಕೆ ಇಲಾಖೆಗಳು ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿವೆ. ಕೈಗಾರಿಕೆ: ಈ ಜಿಲ್ಲೆ ಕೈಗಾರಿಕೆಯಲ್ಲಿ ಹಿಂದುಳಿದಿದೆ. ಇಲ್ಲಿನ ಹವಾಮಾನ ಮತ್ತು ಸಾರಿಗೆ ಸಂಪರ್ಕದ ಕೊರತೆಗಳು ಇದಕ್ಕೆ ಭಾಗಶಃ ಕಾರಣವಾಗಿವೆ. ಒಟ್ಟು 179 ಕಾರ್ಖಾನೆಗಳಿದ್ದು ಅವುಗಳಲ್ಲಿ 6012 ಜನ ಉದ್ಯೋಗಿಗಳಿದ್ದಾರೆ. 2 ಕೈಗಾರಿಕಾ ಪ್ರದೇಶಗಳು, 4 ಕೈಗಾರಿಕಾ ಶೆಡ್ಡುಗಳು, 1 ಕಾರ್ಯನಿರತ ಸಕ್ಕರೆ ಕಾರ್ಖಾನೆ ಇವೆ. 199 ಸಣ್ಣ ಕೈಗಾರಿಕಾ ಘಟಕಗಳಿದ್ದು 965 ಜನ ಉದ್ಯೋಗಿಗಳಿದ್ದಾರೆ. ಒಟ್ಟಾರೆ 3,013 ಉದ್ಯೋಗ ಘಟಕಗಳಲ್ಲಿ 21,665 ಉದ್ಯೋಗಗಳು ಸೃಷ್ಟಿಯಾಗಿವೆ (2001). ಮುನಿರಾಬಾದಿನ ಸಾಲಾರಜಂಗ್ ಸಕ್ಕರೆ ಕಾರ್ಖಾನೆ, ತುಂಗಭದ್ರಾ ಪಲ್ಪ್ ಅಂಡ್ ಬೋರ್ಡ್ ಮಿಲ್ಸ್, ಚಾಮುಂಡಿ ರಾಸಾಯನಿಕ ಮತ್ತು ಗೊಬ್ಬರ ತಯಾರಿಕಾ ಕಾರ್ಖಾನೆ, ಫರೂಕ್ ಅನ್ವರ್ ಎಣ್ಣೆ ಕಾರ್ಖಾನೆ, ಸಹಕಾರಿ ನೂಲು ಕಾರ್ಖಾನೆ, ಹತ್ತಿ ಸಂಸ್ಕರಣ ಘಟಕ -ಇವು ಮುಖ್ಯ ಕೈಗಾರಿಕಾ ಸ್ಥಾವರಗಳು.

ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಗಳು ಅದಿsಕವಾಗಿ ಬೆಳೆಯುವುದರಿಂದ ಹೊರ ಜಿಲ್ಲೆಗಳು ಮತ್ತು ಹೊರ ರಾಜ್ಯಗಳೊಂದಿಗೆ ವ್ಯಾಪಾರ ವಹಿವಾಟು ಹೆಚ್ಚು. ಎಣ್ಣೆ ಬೀಜಗಳು, ಸೇಂಗಾ ಎಣ್ಣೆ, ದ್ವಿದಳ ಧಾನ್ಯಗಳು ಮತ್ತು ಹತ್ತಿ ಹೊರ ರಾಜ್ಯಗಳಿಗೆ ರಫ್ತಾಗುತ್ತವೆ. ಮಹಾರಾಷ್ಟ್ರದ ಸೋಲಾಪುರ, ಪುಣೆ, ಮುಂಬಯಿ ಹಾಗೂ ತಮಿಳುನಾಡಿನ ಕೊಯಮತ್ತೂರುಗಳಿಗೆ ಇಲ್ಲಿಂದ ಸರಕುಗಳು ಹೋಗುತ್ತವೆ. ಹದಮಾಡಿದ ಚರ್ಮಕ್ಕೆ ಹೊಸಪೇಟೆ, ಗದಗಗಳಲ್ಲಿ ಮಾರುಕಟ್ಟೆಗಳಿವೆ. ತೆಂಗಿನಕಾಯಿ, ಬೆಲ್ಲ, ಮರ, ವನಸ್ಪತಿ, ಹೊಗೆಸೊಪುŒ, ಕೃತಕ ರೇಷ್ಮೆ ಮೊದಲಾದ ವಸ್ತುಗಳನ್ನು ಜಿಲ್ಲೆಗೆ ಆಮದು ಮಾಡಿಕೊಳ್ಳಲಾಗುವುದು. ಹತ್ತಿ, ಸೇಂಗಾ, ಹುಣಿಸೆಹಣ್ಣು, ಮೆಣಸಿನಕಾಯಿ ಮತ್ತು ಕೈಮಗ್ಗದ ಬಟ್ಟೆಗಳಿಗೆ ಕೊಪ್ಪಳ ದೊಡ್ಡ ವ್ಯಾಪಾರ ಕೇಂದ್ರ. ಬತ್ತ, ಜೋಳ, ಸೇಂಗಾ, ಬೆಲ್ಲ, ಹರಳು, ಸಜ್ಜೆ ಇವುಗಳಿಗೆ ಗಂಗಾವತಿ ಮುಖ್ಯ ವ್ಯಾಪಾರ ಸ್ಥಳ. ಕುಷ್ಟಗಿ, ಯಲಬುರ್ಗ, ಕುಕನೂರು ಇತರ ಮುಖ್ಯ ವ್ಯಾಪಾರ ಕೇಂದ್ರಗಳು. 93 ಕೃಷಿ ಮಾರಾಟ ಸಹಕಾರ ಸಂಘಗಳಿವೆ. 4 ನಿಯಂತ್ರಿತ ಮಾರುಕಟ್ಟೆಗಳು, 12ಉಪ ಮಾರುಕಟ್ಟೆಗಳಿವೆ.

ಸಹಕಾರಿ ರಂಗ ಆರ್ಥಿಕ ಚಟುವಟಿಕೆಗಳ ಎಲ್ಲ ಕ್ಷೇತ್ರಗಳಲ್ಲೂ ಕೈ ಹಾಕಿದೆ. ಜಿಲ್ಲಾ ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆ ಕೃಷಿ ಸಾಲಗಳನ್ನು ನೀಡುತ್ತ ಬಂದಿದೆ. 172 ಕೃಷಿ ಸಾಲ ನೀಡಿಕೆ ಸಹಕಾರ ಸಂಘಗಳು ಕಾರ್ಯನಿರತವಾಗಿವೆ. ವ್ಯವಸಾಯೇತರ ಸಾಲನೀಡಿಕೆ ಸಹಕಾರ ಸಂಘಗಳ ಸಂಖ್ಯೆ 55. ಸಾಲೇತರ ಸಹಕಾರ ಸಂಘಗಳ ಸಂಖ್ಯೆ 465 (1998). ಹಾಲು ಉತ್ಪಾದನೆ, ಕೋಳಿ ಸಾಕಣೆ, ಮೀನು ಮಾರಾಟ, ಕಂಬಳಿ ಮಾರಾಟ, ತೋಟಗಾರಿಕೆ ಉತ್ಪನ್ನಗಳ ಮಾರಾಟ ಈ ಎಲ್ಲ ವ್ಯವಹಾರಗಳಲ್ಲೂ ಸಹಕಾರಿ ಸಂಘಗಳ ಪಾತ್ರ ಪ್ರಮುಖವಾಗಿದೆ.

ಜಿಲ್ಲೆಯ ಸಾಕ್ಷರತಾ ಪ್ರಮಾಣ ಸೇ.55.02. ಅದರಲ್ಲಿ ಸೇ.169.15 ಪುರುಷರು, ಸೇ.40.76 ಮಹಿಳೆಯರು ಸಾಕ್ಷರರಾಗಿದ್ದಾರೆ. ಸಾಕ್ಷರತಾ ಆಂದೋಲನ ಯೋಜನೆ ಜಿಲ್ಲೆಯಲ್ಲಿ ಕಾರ್ಯನಿರತ ವಾಗಿರುವುದಲ್ಲದೆ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಾಗಿ ಶಾಲೆಗಳನ್ನು ತೆರೆದು ಶಿಕ್ಷಣ ಒದಗಿಸಲಾಗುತ್ತಿದೆ. ಮಕ್ಕಳನ್ನು ಶಾಲೆಗೆ ಸೇರಿಸಲು ಒಡಂಬಡಿಸಿ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಅವರಿಗೆ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನವೂ ನಡೆದಿದೆ. ಆದರೆ ಅe್ಞÁನ, ಬಡತನ, ಕುಟುಂಬದಲ್ಲಿ ಸಾಮಾನ್ಯ ಶಿಕ್ಷಣದ ಜೊತೆಗೆ ಉನ್ನತ ಶಿಕ್ಷಣ ನೀಡುವ 9 ಕಾಲೇಜುಗಳು, ತಾಂತ್ರಿಕ ಶಿಕ್ಷಣ ನೀಡುವ 3 ಪಾಲಿಟೆಕ್ನಿಕ್‍ಗಳು ಇವೆ. ಆರೋಗ್ಯ ಸುಧಾರಣೆಗಾಗಿ 5 ಸರ್ಕಾರಿ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ. ಭಾರತೀಯ ವೈದ್ಯಪದ್ಧತಿಯ ಚಿಕಿತ್ಸಾಲಯಗಳು ಮತ್ತು ಅನೇಕ ಸರ್ಕಾರಿ ಆರೋಗ್ಯ ಕೇಂದ್ರಗಳು ಇವೆ.

ಸಮಗ್ರ ಗ್ರಾಮ ಸ್ವಸಹಾಯ ಯೋಜನೆ, ಗ್ರಾಮೀಣ ಇಂಧನ ಕಾರ್ಯಕ್ರಮ, ಮಾನವ ದಿನಗಳ ಕೆಲಸಗಳ ಸೃಷ್ಟಿ, ನಿರ್ಮಲ ಗ್ರಾಮ ಯೋಜನೆ, ಇಂದಿರಾ ಆವಾಸ್ ಯೋಜನೆ, ಪ್ರಧಾನ ಮಂತ್ರಿಗಳ ರಸ್ತೆ ನಿರ್ಮಾಣ ಯೋಜನೆ, ಕೊಳವೆ ನೀರು ಸರಬರಾಜು ಯೋಜನೆ ಮೊದಲಾದವು ಗ್ರಾಮಗಳ ನಾಗರಿಕ ಸೌಲಭ್ಯಗಳನ್ನು ಹೆಚ್ಚಿಸಲು ಉದ್ದೇಶಿತವಾಗಿವೆ. ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಸಮಿತಿಗಳು ಗ್ರಾಮೀಣ ಪ್ರದೇಶದ ಪ್ರತಿನಿದಿsಗಳಿಂದ ಕೂಡಿದ್ದು ಈ ಪ್ರದೇಶದ ಅಬಿsವೃದ್ಧಿ ಕಾರ್ಯಗಳ ಮುಖ್ಯ ಜವಾಬ್ದಾರಿ ಹೊತ್ತಿವೆ.

ಸಾರಿಗೆ ಸಂಪರ್ಕ: ಆರ್ಥಿಕವಾಗಿ ಹಿಂದುಳಿದಿದ್ದು ತುಂಗಭದ್ರಾನದಿ ಮತ್ತು ಕಣಿವೆಗಳಿಂದ ಕೂಡಿದ ಈ ಜಿಲ್ಲೆ ರಸ್ತೆ ಸಂಪರ್ಕದಲ್ಲಿ ತುಂಬಾ ಕನಿಷವಿ ಸೌಲಭ್ಯ ಹೊಂದಿದ್ದಿತು. ತುಂಗಭದ್ರಾ ನದಿಗೆ ಸೇತುವೆಗಳಾದ ಮೇಲೆ ಹೊರ ಪ್ರದೇಶಗಳೊಂದಿಗೆ ಹೆಚ್ಚು ಸಂಪರ್ಕವೇರ್ಪಟ್ಟಿತು. ಚೆನ್ನೈ-ಪುಣೆ ರಾಷ್ಟ್ರೀಯ ಹೆದ್ದಾರಿ ಈ ಜಿಲ್ಲೆಯ ಕೊಪ್ಪಳ-ಕುಷ್ಟಗಿ ಮೂಲಕ ಹಾದುಹೋಗಿದ್ದು ಅದರ ಉದ್ದ ಜಿಲ್ಲೆಯಲ್ಲಿ 125ಕಿಮೀ ಬಿಜಾಪುರ ಜಿಲ್ಲೆಯ ಹುನಗುಂದದಿಂದ ಕುಷ್ಟಗಿ ಇರಕಲ್‍ಗಡ ಕೊಪ್ಪಳ ಮೂಲಕ ಬಳ್ಳಾರಿ ಸೇರುವ ಮಾರ್ಗ ಪ್ರಮುಖ ರಾಜ್ಯ ಹೆದ್ದಾರಿಯಾಗಿದೆ. ಕೊಪ್ಪಳದಿಂದ ಹುಬ್ಬಳಿ-ಧಾರವಾಡದೊಡನೆ ಸಂಪರ್ಕಿಸುವ ರಸ್ತೆ ಇನ್ನೊಂದು ಪ್ರಮುಖ ರಸ್ತೆ ಮಾರ್ಗ. ಕೊಪ್ಪಳದಿಂದ ರಾಯಚೂರು, ಗದಗ, ಶೋರಾಪುರ, ಲಿಂಗಸುಗೂರು, ಮುದ್ಗಲ್ ಮೊದಲಾದ ಜಿಲ್ಲೆಯ ಹೊರ ಸ್ಥಳಗಳಿಗೆ ಉತ್ತಮ ರಸ್ತೆ ಸಂಪರ್ಕವಿದೆ. ಜಿಲ್ಲೆಯ ಒಳಗೆ ಜಿಲ್ಲಾ ಕೇಂದ್ರದಿಂದ ಎಲ್ಲ ತಾಲ್ಲೂಕುಗಳನ್ನು ಕೂಡಿಸುವ ಜಿಲ್ಲಾ ರಸ್ತೆಗಳಿವೆ. ಗ್ರಾಮೀಣ ರಸ್ತೆಗಳು ನಿಧಾನಗತಿಯಲ್ಲಿ ಅಬಿsವೃದ್ಧಿ ಕಾಣುತ್ತಿವೆ. ಜಿಲ್ಲೆಯಲ್ಲಿ 270ಕಿಮೀ ರಾಜ್ಯ ಹೆದ್ದಾರಿ; 537ಕಿಮೀ ಜಿಲ್ಲಾ ರಸ್ತೆಗಳು ಮತ್ತು 1251ಕಿಮೀ ಗ್ರಾಮ ರಸ್ತೆಗಳಿವೆ. ಭಾರಿ ಸೇತುವೆಗಳ ಸಂಖ್ಯೆ 19 (2001). ಹುಬ್ಬಳ್ಳಿ-ಬಳ್ಳಾರಿ ರೈಲು ಮಾರ್ಗ ಮುನಿರಾಬಾದ್ ಮತ್ತು ಕೊಪ್ಪಳದ ಮೂಲಕ ಹಾದುಹೋಗುತ್ತದೆ. ಅದರ ಉದ್ದ 55ಕಿಮೀ.

ಇತಿಹಾಸ: ಕೊಪ್ಪಳ ಜಿಲ್ಲೆ ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ಆಸುಪಾಸಿನಲ್ಲಿದ್ದು ಪ್ರಾಚೀನ ಕಾಲದಿಂದಲೂ ಜನವಸತಿ ಹೊಂದಿದ ಪ್ರದೇಶವಾಗಿದೆ. ಗಂಗಾವತಿ ತಾಲ್ಲೂಕಿನ ಬೆಂಕಲ್ ಮತ್ತು ಕೆರೆಹಾಳ್ ನೆರೆಯ ರಾಯಚೂರು ಜಿಲ್ಲೆಯ ಮಸ್ಕಿ, ಹಾಳಾಪುರ, ಕಲ್ಲೂರು ಮೊದಲಾದ ಕಡೆಗಳಲ್ಲಿ ಇತಿಹಾಸ ಪೂರ್ವ ಕಾಲದ ನಿವೇಶನಗÀಳಿದ್ದುದನ್ನು ವಿದ್ವಾಂಸರು ಗುರುತಿಸಿದ್ದಾರೆ. ಕೊಪ್ಪಳ ಮತ್ತಿತರ ಕಡೆಗಳಲ್ಲಿ ಬೃಹತ್ ಶಿಲಾ ಸಮಾದಿsಗಳು ದೊರೆತಿವೆ. ಶಿಲಾಯುಗದ ಉಪಕರಣಗಳು, ಮಣ್ಣಿನ ಮಡಿಕೆಗಳು, ಟೆರಕೋಟ ಮೂರ್ತಿಗಳು ಇಲ್ಲಿ ದೊರೆತಿವೆ. ಈ ಆಧಾರಗಳ ಮೇಲೆ ಈ ಪ್ರದೇಶ ದಕ್ಷಿಣ ಭಾರತದ ಅತಿ ಪುರಾತನ ಮಾನವ ನೆಲೆಗಳನ್ನು ಹೊಂದಿದ್ದ ವಲಯಗಳಲ್ಲೊಂದೆಂದು ಹೇಳಬಹುದು.

ಕೊಪ್ಪಳದ ಬಳಿಯ ಮಲಿಮಲ್ಲಪ್ಪ ಬೆಟ್ಟದ ತುದಿಯ ಮೇಲೆ ಅನೇಕ ಹಾಸುಗಲ್ಲಿನ ಕಟ್ಟಡಗಳು ಕಂಡುಬಂದಿವೆ. ಅವನ್ನು ಸ್ಥಳೀಯವಾಗಿ 'ಮೊರಿಯರ ಅಂಗಡಿ' ಎಂದು ಕರೆಯುತ್ತಾರೆ. ಇದು ಮೌರ್ಯರ ಕಾಲದ ವಸತಿಯ ಬಗ್ಗೆ ಮತ್ತು ಆಗ ಉತ್ತರ ಭಾರತದ ಜನ ಇಲ್ಲಿ ಮಾರುಕಟ್ಟೆಗಳನ್ನು ಸ್ಥಾಪಿಸಿ ವಾಣಿಜ್ಯ ವ್ಯವಹಾರಗಳನ್ನು ನಡೆಸುತ್ತಿದ್ದ ಬಗ್ಗೆ ಸುಳಿವು ನೀಡುತ್ತದೆ. ಪೌರಾಣಿಕ ಐತಿಹ್ಯಗಳು ಈ ಪ್ರದೇಶದಲ್ಲೂ ಇತರೆಡೆಗಳಂತೆಯೆ ಅಸ್ತಿತ್ವದಲ್ಲಿವೆ. ಪಾಲ್ಕಿಗುಂಡು ಬೆಟ್ಟ ಮತ್ತು ಮಲಿ ಮಲ್ಲಪ್ಪನ ಬೆಟ್ಟದ ನಡುವಿನ ಬಯಲನ್ನು ಪಾಂಡವರ ವಠಾರ ಎಂದು ಕರೆಯಲಾಗಿದೆ. ಇಲ್ಲೂ ಹಾಸುಗಲ್ಲು ಕಟ್ಟಡಗಳಿವೆ. ಗಂಗಾವತಿ ತಾಲ್ಲೂಕಿನ ಆನೆಗೊಂದಿ (ನೋಡಿ- ಆನೆಗೊಂದಿ) ರಾಮಾಯಣ ಕಾಲದ ಕಿಷ್ಕಿಂದೆಯ ಭಾಗವಾಗಿತ್ತೆಂದು ನಂಬಿಕೆಯಿದೆ. ಗವಿಮಠ ಬೆಟ್ಟ ಮತ್ತು ಪಾಲ್ಕಿಗುಂಡು ಬೆಟ್ಟದಲ್ಲಿ ಒಂದೊಂದು ಅಶೋಕನ ಶಾಸನಗಳು ದೊರೆತಿವೆ. ಕೌಟಿಲ್ಯ ತನ್ನ ಅರ್ಥಶಾಸ್ತ್ರದಲ್ಲಿ ಮೌರ್ಯ ಸಾಮ್ರಾಜ್ಯದ ಕಾಲದಲ್ಲಿ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ನಡುವೆ ನಡೆಯುತ್ತಿದ್ದ ವಾಣಿಜ್ಯ ಹಾಗೂ ಆಗಿನ ವ್ಯಾಪಾರ ಸರಕುಗಳ ಬಗ್ಗೆ ಮಾಹಿತಿ ನೀಡಿದ್ದಾನೆ. ಮೌರ್ಯ ಸಾಮ್ರಾಜ್ಯದ ಹೊರಗಿನ ದಕ್ಷಿಣ ರಾಜ್ಯಗಳನ್ನು ಚೋಳ, ಪಾಂಡ್ಯ, ಸಾತಿಯಪುತ, ಕೇರಲಪುತ ಮತ್ತು ತಂಬಪನ್ನಿ (ಶ್ರೀಲಂಕಾ) ಎಂದು ಅಶೋಕನ ಶಾಸನಗಳಲ್ಲಿ ಹೆಸರಿಸಲಾಗಿದೆ. ಈ ದೃಷ್ಟಿಯಿಂದ ನೋಡಿದಾಗ ಪೂರ್ವೋಕ್ತ ದೇಶಗಳು ದಖನ್ನಿನ ಹೊರಗಿದ್ದು ಆಂದಿನ ದಖನ್ನಿನ ಪ್ರದೇಶ ಮೌರ್ಯ ಸಾಮ್ರಾಜ್ಯದ ಒಂದು ಪ್ರಾಂತ್ಯವಾಗಿದ್ದದ್ದು ತಿಳಿದುಬರುತ್ತದೆ. ಮೌರ್ಯರ ಶಾಸನಗಳಲ್ಲಿ ಬರುವ ಸುವರ್ಣಗಿರಿಯನ್ನು ಕೊಪ್ಪಳ ಜಿಲ್ಲೆಯ ಕನಕಗಿರಿ ಎಂದು ಕೆಲವು ವಿದ್ವಾಂಸರು ಗುರುತಿಸಿದ್ದರೆ, ಇನ್ನು ಕೆಲವರು ಇದನ್ನು ಮಸ್ಕಿ ಇರಬಹುದೆಂದು ಅಬಿsಪ್ರಾಯಪಟ್ಚಿದ್ದಾರೆ. ಅದೇನೇ ಇದ್ದರೂ ಈ ಪ್ರದೇಶ ಬಹು ಪುರಾತನ ನಾಗರಿಕತೆ ಮತ್ತು ಸಂಸ್ಕøತಿಗಳ ನೆಲೆಬೀಡೆಂಬುದು ಸ್ಪಷ್ಟವಾಗಿದೆ. ಮೌರ್ಯ ಸಾಮ್ರಾಜ್ಯದ ಪತನಾನಂತರ ದಖನ್‍ನಲ್ಲಿ ಸ್ಥಾಪಿತವಾದ ಪ್ರಥಮ ಸ್ವತಂತ್ರ ಸಾಮ್ರಾಜ್ಯವೆಂದರೆ ಸಾತವಾಹನರದು. ಇಂದಿನ ಮಹಾರಾಷ್ಟ್ರ ರಾಜ್ಯದ ಪ್ರತಿಷಾವಿನ ಅಥವಾ ಪೈಠಣ್ ಅನ್ನು ರಾಜಧಾನಿಯಾಗಿ ಹೊಂದಿದ್ದ ಈ ಸಾಮ್ರಾಜ್ಯದ ಭಾಗವಾಗಿ ಕೊಪ್ಪಳ ಉನ್ನತ ಸ್ಥಿತಿಗೆ ಬಂದಿತು. ಕ್ರಿ.ಪೂ.3ನೆಯ ಶತಮಾನದಿಂದ ಕ್ರಿ.ಶ 2ನೆಯ ಶತಮಾನದವರೆಗೂ ಆಳಿದ ಈ ವಂಶದ ಸಾಮ್ರಾಟರು ಉತ್ತರ ಭಾರತದವರೆಗೂ ತಮ್ಮ ಕೀರ್ತಿ ಪತಾಕೆಯನ್ನು ಹಾರಿಸಿದರು. ಕೊನೆಗೆ ದಕ್ಷಿಣ ಪಥಕ್ಕೆ ಸೀಮಿತವಾದ ಇವರು ತುಂಗಭದ್ರಾ ದಕ್ಷಿಣಕ್ಕೂ ತಮ್ಮ ಆಳಿಕೆಯನ್ನು ಚಾಚಿದ್ದರು. ಸಾತವಾಹನರ ಕಾಲದಿಂದ ಕೊಪ್ಪಳ ಪ್ರಸಿದ್ಧಿ ಪಡೆದಿತ್ತು. ಇಲ್ಲಿನ ಸುತ್ತಮುತ್ತಲ ಬೆಟ್ಟಗುಡ್ಡಗಳಿಗೆ ಕೊಪಣ್ರಾದಿ ಮತ್ತು ಕುಪಣಾಚಲ ಎಂಬ ಹೆಸರುಗಳಿವೆ. ಕೊಪ್ಪಳಕ್ಕೆ ಕೊಪಣ ಅಥವಾ ಕೋಪಣ ನಗರವೆಂಬ ಹೆಸರಿದ್ದಿತು. ಈ ಜಿಲ್ಲೆಯ ಕವಲೂರು, ಆಳವಂಡಿ, ಮಾದಿನೂರು, ಕುಕ್ಕನೂರು, ಪುರ, ಆನೆಗೊಂದಿ, ಇಟಗಿ ಮತ್ತು ಮುಧುವೊಳಲು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿವೆ.

ಸಾತವಾಹನರ ಅನಂತರ ಕರ್ನಾಟಕದ ಉತ್ತರ ಭಾಗದಲ್ಲಿ ಮತ್ತು ಕರಾವಳಿಯಲ್ಲಿ ಕದಂಬರು ಪ್ರಬಲ ರಾಜ್ಯಸ್ಥಾಪಿಸಿ ಆಳಿದರು. ಆದರೆ ದಕ್ಷಿಣದಲ್ಲಿ ತಲಕಾಡಿನ ಗಂಗರು, ಪೂರ್ವದಲ್ಲಿ ವಾಕಾಟಕರು ಕದಂಬರ ಸಮಕಾಲೀನರಾಗಿ ಆಳಿದರು. ಕದಂಬರು ಈ ಜಿಲ್ಲೆಯ ಮೇಲೆ ಎಷ್ಟು ನಿಯಂತ್ರಣ ಹೊಂದಿದ್ದರು ಎಂದು ಹೇಳಲು ಸ್ಪಷ್ಟ ಆಧಾರಗಳು ಲಭ್ಯವಿಲ್ಲ. ಆದರೆ ಚಿತ್ರದುರ್ಗದ ಬಳಿಯ ಚಂದ್ರವಳ್ಳಿಯಲ್ಲಿ ಕದಂಬರ ಶಾಸನ ದೊರೆತಿರುವುದರಿಂದ ಈ ಜಿಲ್ಲೆಯ ಮೇಲೆ ಒಂದಲ್ಲ ಒಂದು ಕಾಲದಲ್ಲಿ ಭಾಗಶಃವಾಗಿ ಅಥವಾ ಪೂರ್ಣವಾಗಿ ಅವರು ನಿಯಂತ್ರಣ ಹೊಂದಿದ್ದರು ಎಂದು ಹೇಳಬಹುದು. ಇದೇ ವೇಳೆಗೆ ಮಧ್ಯ ಭಾರತದಲ್ಲಿ ಪ್ರಬಲ ರಾಜ್ಯ ಸ್ಥಾಪಿಸಿದ ವಾಕಾಟಕರು ಕುಂತಳ ದೇಶದವರೆಗೂ ತಮ್ಮ ರಾಜ್ಯ ವಿಸ್ತರಿಸಿದ್ದರೆಂದು ತಿಳಿದುಬರುತ್ತದೆ. ಅವರು ಈ ಪ್ರದೇಶವನ್ನು ಸಾಕಷ್ಟು ಕಾಲ ಆಳಿರಬೇಕು.

ಕೊಪ್ಪಳ ಜಿಲ್ಲೆಗೆ ಸಮೀಪದಲ್ಲಿ ಈಗಿನ ಬಿಜಾಪುರ ಜಿಲ್ಲೆಯ ಬಾದಾಮಿಯಲ್ಲಿ 6ನೆಯ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದ ಚಳುಕ್ಯ ಮನೆತನ ಪರ್ಯಾಯ ದ್ವೀಪದಲ್ಲಿ ಒಂದು ಪ್ರಬಲ ಸಾಮ್ರಾಜ್ಯವನ್ನು ಕಟ್ಟುವಲ್ಲಿ ಸಫಲವಾಯಿತು. ಕದಂಬ ರಾಜ್ಯ ಬಹುಮಟ್ಟಿಗೆ ಚಳುಕ್ಯ ಸಾಮ್ರಾಜ್ಯದಲ್ಲಿ ವಿಲೀನವಾಗಿ ಕೆಲವು ಶಾಖೆಗಳ ಆಳಿಕೆ ಮಾತ್ರ ಮುಂದುವರಿಯಿತು. ಬಾದಾಮಿ ಚಳುಕ್ಯರ ಶಾಸನಗಳು ಕೊಪ್ಪಳ ಜಿಲ್ಲೆಯ ಕೊಪ್ಪಳ, ಹಲಗೇರಿ, ಇಟಗಿ ಮತ್ತು ಕುಕನೂರು ಮೊದಲಾದೆಡೆಗಳಲ್ಲಿ ದೊರೆತಿವೆ. ಇವರು 757ರಲ್ಲಿ ರಾಷ್ಟ್ರಕೂಟರಿಂದ ಪರಾಜಯ ಹೊಂದುವವರೆಗೂ ಸಮಗ್ರವಾಗಿ ಆಳಿದರು. ಇವರ ಕಾಲದಲ್ಲಿ ಕೊಪ್ಪಳ ಒಂದು ಪಟ್ಟಣವಾಗಿ ಬೆಳೆಯಿತು. ಚೀನಿ ಪ್ರವಾಸಿ ಯುವಾನ್‍ಚಾಂಗನು ದಾಖಲಿಸಿರುವ ಕೊಂಕಿನಪುಲೋ ಎಂಬುದು ಕೊಪ್ಪಳವೆಂದು ಗುರುತಿಸಲಾಗಿದೆ.

ರಾಷ್ಟ್ರಕೂಟರು, ಬಾದಾಮಿ ಚಳುಕ್ಯರನ್ನು ಸೋಲಿಸಿ ಅವರ ಉತ್ತರಾದಿsಕಾರಿಗಳಾಗಿ ಮಾನ್ಯಖೇಟದಿಂದ ಆಳತೊಡಗಿದ್ದು ಕೊಪ್ಪಳ ಜಿಲ್ಲೆಯ ಇತಿಹಾಸಕ್ಕೆ ಹೊಸ ತಿರುವನ್ನು ನೀಡಿತು. ಆಗ ಕೋಪ್ಪಳ ಅಥವಾ ಕೋಪಣ ನಗರ ಜೈನರ ಪುಣ್ಯಸ್ಥಳವಾಗಿ ಪ್ರಸಿದ್ಧವಾಗಿತ್ತು. ದಕ್ಷಿಣ ಭಾರತದ ಜೈನ ರಾಜಮನೆತನದವರು ವಿಶೇಷವಾಗಿ ಇಲ್ಲಿಗೆ ಯಾತ್ರೆ ಬರುತ್ತಿದ್ದರು. ಕೊಪ್ಪಳ, ಇಟಗಿ, ಅರಕೇರಿ, ಸಂಕನೂರು, ಅಳವಂಡಿ, ಬೆಣಗೇರಿಗಳಲ್ಲಿ ರಾಷ್ಟ್ರಕೂಟರಿಗೆ ಸಂಬಂದಿsಸಿದ ಶಾಸನಗಳು ದೊರೆತಿವೆ. ಕೊಪ್ಪಳದಲ್ಲಿ ರಾಷ್ಟ್ರಕೂಟರ ದಂಡನಾಯಕರಲ್ಲೊಬ್ಬನಾದ ಮಾಮರಸನೆಂಬಾತನಿದ್ದನೆಂದು ತಿಳಿದುಬರುತ್ತದೆ. ರಾಷ್ಟ್ರಕೂಟರ ಸಾಮಂತರೂ ನಿಕಟ ಬಂಧುಗಳೂ ಆಗಿದ್ದ ತಲಕಾಡಿನ ಗಂಗರು ಈ ಪ್ರದೇಶದೊಂದಿಗೆ ಹೆಚ್ಚಿನ ಸಂಪರ್ಕ ಮತ್ತು ಅದಿsಕಾರ ಹೊಂದಿದ್ದರು. ಗಂಗ ಇಮ್ಮಡಿ ಬೂತುಗನ (936-61) ಶಾಸನ ಸಮೀಪದ ಇಟಗಿಯಲ್ಲಿ ದೊರೆತಿದೆ. ಈತ ರಾಷ್ಟ್ರಕೂಟ ಮುಮ್ಮಡಿ ಅಮೋಘವರ್ಷನ ಮಗಳು ರೇವಕನಿಮ್ಮಡಿಯನ್ನು ಮದುವೆಯಾಗಿದ್ದ. ಈ ಸಂದರ್ಭದಲ್ಲಿ ಚಕ್ರವರ್ತಿಯು ಬೂತುಗನಿಗೆ ಪುರಿಗೆರೆ 300, ಬೆಳ್ವೊಲ 300, ಕಿಸುಕಾಡು 70 ಮತ್ತು ಬಾಗೆನಾಡು 70 ಇವುಗಳನ್ನು ನೀಡಿದ್ದ. ಕುಕನೂರಿನ ತಾಮ್ರಶಾಸನ ಇಮ್ಮಡಿ ಮಾರಸಿಂಹನಿಗೆ ಸೇರಿದ್ದು ಅದರಲ್ಲಿ ಗಂಗರ ವಂಶಾವಳಿಯನ್ನು ನೀಡಲಾಗಿದೆ. ಗಂಗಾವತಿ ತಾಲ್ಲೂಕಿನ ಹೆಬ್ಬಾಳದ ಶಾಸನ ಈ ಭಾಗದಲ್ಲಿ ಗಂಗರು ಆಳಿದ್ದಕ್ಕೆ ಸಾಕ್ಷಿಯಾಗಿದೆ.

ಗಂಗ ಮನೆತನಕ್ಕೆ ಕೊಪ್ಪಳ ಪುಣ್ಯಕ್ಷೇತ್ರವಾಗಿದ್ದುದಲ್ಲದೆ ಅಲ್ಲಿ ರಾಜಮನೆತನದ ಅನೇಕ ಸದಸ್ಯರು ಸ್ವಯಂಪ್ರೇರಣೆಯಿಂದ ಸಲ್ಲೇಖನ ವ್ರತ ಕೈಗೊಂಡು ದೇಹತ್ಯಾಗ ಮಾಡಿದ ವಿವರಗಳು ತಿಳಿದುಬರುತ್ತವೆ. ಇವರಲ್ಲಿ ಇಮ್ಮಡಿ ಬೂತುಗನ ಪತ್ನಿ ಪದ್ಮಬ್ಬರಸಿ, ಮಾರಸಿಂಹನ ಅಕ್ಕ ಹಾಗೂ ಚಾಳುಕ್ಯ ಹರಿಗನ ಪತ್ನಿ ಬಿಜ್ಜಬ್ಬರಸಿ ಮೊದಲಾದವರು ಸೇರಿದ್ದಾರೆ. ಕೊಪ್ಪಳದಲ್ಲಿ ಹಲವಾರು ಜೈನ ಮುನಿಗಳು ಮೋಕ್ಷ ಪಡೆದ ವಿವರಗಳು ಅಲ್ಲಿನ ಶಾಸನಗಳಲ್ಲಿ ದೊರೆಯುತ್ತವೆ.

ರಾಷ್ಟ್ರಕೂಟರ ಆಳಿಕೆಯನ್ನು ಕೊನೆಗಾಣಿಸಿ ಚಾಳುಕ್ಯರ ಅದಿsಕಾರವನ್ನು ಮತ್ತೆ ಸ್ಥಾಪಿಸಿದ ಚಾಳುಕ್ಯ ತೈಲಪನ ಮೊದಲ ವರ್ಷದ ಆಳಿಕೆಯ (973) ಶಾಸನ ಮಾದಿನೂರಿನಲ್ಲಿದೆ. ಅದರಲ್ಲಿ ರಾಜನು ಬ್ರಹ್ಮಾಂಡಕ್ರತು ಎಂಬ ಯಾಗವನ್ನು ಮಾಡಿದನೆಂದು ಹೇಳಿದೆ. ಕಲ್ಯಾಣದ ಚಾಳುಕ್ಯರೆಂದು ಪ್ರಸಿದ್ಧರಾದ ಈ ವಂಶದವರ ಆಳಿಕೆಯು 12ನೆಯ ಶತಮಾನದ ಉತ್ತರಾರ್ಧದವರೆಗೂ ಮುಂದುವರಿಯಿತು. ಈ ಯುಗದಲ್ಲಿ ಹೇಮಾವತಿ, ಹೆಂಜೇರು ಮತ್ತು ಕಂಪಿಲಿಯಿಂದ ಆಳಿದ ನೊಳಂಬರು ಈ ಜಿಲ್ಲೆಯ ಕೆಲವು ಭಾಗಗಳನ್ನು ಆಳಿರುವ ಸಂಭವ ಹೆಚ್ಚಿದೆ. ಕಳಚುರಿಗಳು ಅಲ್ಪಾವದಿsಯ ಕಾಲ ಆಳಿದರೂ ಅವರ ಕೆಲ ಶಾಸನಗಳು ಜಿಲ್ಲೆಯಲ್ಲಿ ದೊರೆತಿವೆ. ಆ ಕಾಲದಲ್ಲಿ ಕುಕನೂರು ಪ್ರಸಿದ್ಧ ಧಾರ್ಮಿಕ ಸ್ಥಳವಾಗಿತ್ತು. ಅಲ್ಲಿನ ಜೇಷಾವಿದೇವಿಗೆ ರಾಜರು ಮತ್ತು ದಂಡನಾಯಕರು ನಡೆದುಕೊಳ್ಳುತ್ತಿದ್ದರು. ಹೊಯ್ಸಳರು ಮತ್ತು ಸೇವುಣರ ಕಾಲದಲ್ಲಿ ಈ ಪ್ರಾಂತ್ಯ ಅವರಿಬ್ಬರ ನಡುವಿನ ವಿವಾದಾತ್ಮಕ ಪ್ರದೇಶವಾಗಿತ್ತು. ಈ ಎರಡು ರಾಜ್ಯಗಳ ನಡುವೆ ಮಧ್ಯಗಾಮಿ ರಾಜ್ಯದಂತಿದ್ದ ಕಂಪಿಲಿ ರಾಜ್ಯದ ಪ್ರಬಲ ನೆಲೆಗಳಲ್ಲೊಂದಾದ ಕುಮ್ಮಟದುರ್ಗ ಕೊಪ್ಪಳ ತಾಲ್ಲೂಕಿನಲ್ಲಿದೆ. ಮೊದಲು ಕಂಪಿಲಿಯಿಂದ ಬಳ್ಳಾರಿ ಜಿಲ್ಲೆ ಆಳುತ್ತಿದ್ದ ಇಲ್ಲಿನ ಅರಸರು 1315ರಲ್ಲಿ ಕುಮ್ಮಟದುರ್ಗದಿಂದ ಆಳುತ್ತಿದ್ದುದು ಶಾಸನಗಳಿಂದ ಕಂಡುಬರುತ್ತದೆ. ದೇವಗಿರಿಯಲ್ಲಿ ನೆಲೆಸಿದ್ದ ದೆಹಲಿ ಸುಲ್ತಾನರ ಸೈನ್ಯವನ್ನು ಧೈರ್ಯದಿಂದ ಎದುರಿಸಿ ಹುತಾತ್ಮರಾದ ಕಂಪಿಲಿರಾಯ ಮತ್ತು ಕುಮಾರರಾಮ ಈ ಮನೆತನದವರು.

ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಮೊದಲ ಚಟುವಟಿಕೆಗಳು ಪ್ರಾರಂಭವಾದದ್ದು ಈ ಜಿಲ್ಲೆಯ ಆನೆಗೊಂದಿಯಲ್ಲಿ ಎಂದು ತಿಳಿದುಬರುತ್ತದೆ. ವಿಜಯನಗರ ಅರಸರ 1342ರ ಶಾಸನ ಆನೆಗೊಂದಿಯಲ್ಲಿ ದೊರೆತಿದೆ. ಕೊಪ್ಪಳದ 1346ರ ಶಾಸನದಲ್ಲಿ ಹರಿಹರನ ಉಲ್ಲೇಖವಿದೆ. ಆನೆಗೊಂದಿ, ಕನ್ನೇರುಮಡು, ಕೆಸರಟ್ಟಿ, ಕಲ್ಲೂರು, ಬಂಡಿಹಾಳಗಳಲ್ಲಿ ವಿಜಯನಗರದ ಅರಸರ ಮತ್ತು ಮಾಂಡಲಿಕರ ಶಾಸನಗಳು ಲಭ್ಯವಾಗಿವೆ. ವಿಜಯನಗರದ ಆಯಕಟ್ಟಿನ ಪ್ರದೇಶವಾಗಿದ್ದ ಈ ಜಿಲ್ಲೆಯ ಒಡೆತನಕ್ಕಾಗಿ ವಿಜಯನಗರ ಅರಸರು ಮತ್ತು ಬಹಮನೀ ಸುಲ್ತಾನರುಗಳ ನಡುವೆ ಆಗಾಗ ಯುದ್ಧಗಳಾಗುತ್ತಿದ್ದವು. ಕಲ್ಲೂರು ಮತ್ತು ಬಂಡಿಹಾಳದ ಶಾಸನಗಳು ಅಚ್ಯುತರಾಯನ ಕಾಲದಲ್ಲಿ ಅವನ ಮಾಂಡಲಿಕರಾಗಿದ್ದ ಗುಜ್ಜಲವಂಶದ ಅರಸರ ಬಗ್ಗೆ ತಿಳಿಸುತ್ತದೆ.

ತಾಳಿಕೋಟೆಯ ಯುದ್ಧದ ತರುವಾಯವೂ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸ್ವಲ್ಪ ಕಾಲ ಐತಿಹಾಸಿಕ ಮಹತ್ತº ಪಡೆದಿತ್ತು. ಆನೆಗೊಂದಿಯಲ್ಲಿ ಆಶ್ರಯ ಪಡೆದ ವಿಜಯನಗರದ ಅರಸು ಮನೆತನದವರು ಅಲ್ಲಿ ತಮ್ಮ ಅದಿsಕಾರವನ್ನು ಮುಂದುವರಿಸಿದರು. ಶ್ರೀರಂಗಪಟ್ಟಣದ ಪ್ರಾಂತ್ಯಾದಿsಕಾರಿಯಾಗಿದ್ದ ಶ್ರೀರಂಗರಾಯ ಆನೆಗೊಂದಿಯ ಮೂಲದವನೆಂದು ತಿಳಿದುಬರುತ್ತದೆ. 1657ರಲ್ಲಿ ಶಿವಾಜಿಯು ಆನೆಗೊಂದಿ ಮೊದಲಾದ ಒಂಬತ್ತು ಸಮತಗಳನ್ನು ಶ್ರೀರಂಗರಾಯನ ಕುಟುಂಬದ ಪೆÇೀಷಣೆಗಾಗಿ ನೀಡಿದ್ದನೆಂದು ಹೇಳಲಾಗಿದೆ. ಈ ಕಾಲದಲ್ಲಿ ಕೊಪ್ಪಳವು ಕೊಪಣನಾಡು ಅಥವಾ ಕೋಪಣವೇಂಟೆಯ ಕೇಂದ್ರ ಸ್ಥಳವಾಗಿದ್ದಿತು.

ಕಂಪಿಲಿ ರಾಜ್ಯ ಪತನಗೊಂಡು ದಖನ್ನಿನ ದೆಹಲಿ ಪ್ರಾಂತ್ಯಾದಿsಕಾರಿಯ ವಶಕ್ಕೆ ಬಂದ ದೋಆಬ್ ಪ್ರಾಂತ್ಯವು ಅಂದರೆ ಕೊಪ್ಪಳ ಜಿಲ್ಲೆ ಮತ್ತು ಈಗಿನ ರಾಯಚೂರು ಜಿಲ್ಲೆಗಳ ಪ್ರದೇಶವು ಮುಂದೆ ಸದಾ ವಿಜಯನಗರ ಮತ್ತು ಬಹಮನೀ ರಾಜ್ಯದ ನಡುವೆ ವಿವಾದಿತ ಪ್ರದೇಶವಾಗಿ ಪರಿಣಮಿಸಿತು. ರಾಯಚೂರಿನೊಂದಿಗೆ ಕೊಪ್ಪಳ ಜಿಲ್ಲೆಯ ಕೆಲವು ಭಾಗಗಳೂ ಆಗಾಗ ಈ ಎರಡು ರಾಜ್ಯ- ಸಾಮ್ರಾಜ್ಯಗಳ ನಡುವೆ ಕೈ ಬದಲಾಯಿಸುತ್ತಿದ್ದುದನ್ನು ಕಾಣಬಹುದು. ರಾಯಚೂರು ಮತ್ತು ಮುದುಗಲ್ಲು ದೀರ್ಘಕಾಲ ಬಿಜಾಪುರ - ಗುಲ್ಬರ್ಗ ಮತ್ತು ಬೀದರ್‍ನಿಂದ ಆಳಿದ ಬಹಮನೀ ರಾಜ್ಯದ ವಶದಲ್ಲಿರುತ್ತಿದ್ದುದ್ದರಿಂದ ಕೊಪ್ಪಳದ ಅನೇಕ ಸ್ಥಳಗಳೂ ಅದರ ಆಳಿಕೆಗೊಳಪಟ್ಟಿದ್ದವು. ಪದೇ ಪದೇ ಬಹಮನೀ ಸೈನ್ಯಗಳು ವಿಜಯನಗರದ ಪ್ರದೇಶಗಳಿಗೆ ನುಗ್ಗಿ ಕೊಲೆ, ಲೂಟಿ ಮತ್ತು ದಬ್ಬಾಳಿಕೆಗಳಲ್ಲಿ ತೊಡಗುತ್ತಿದ್ದವು. ಎರಡನೆಯ ದೇವರಾಯ ಮತ್ತು ಕೃಷ್ಣದೇವರಾಯ ಈ ದಾಳಿಗಳನ್ನು ಯಶಸ್ವಿಯಾಗಿ ಎದುರಿಸಿ ಸುಲ್ತಾನರ ಆಳಿಕೆಯಿಂದ ಈ ಪ್ರದೇಶವನ್ನು ಮುಕ್ತಗೊಳಿಸಿದ್ದರು. 1565ರಲ್ಲಿ ತಾಳಿಕೋಟೆ ಯುದ್ಧದಲ್ಲಿ ವಿಜಯನಗರದ ಸೈನ್ಯ ಸೋತ ಮೇಲೆ ಈ ಜಿಲ್ಲೆ ಬಹುಮಟ್ಟಿಗೆ ಬಿಜಾಪುರದ ಸುಲ್ತಾನ್‍ಶಾಹಿಯ ಅದಿsೀನಕ್ಕೊಳಗಾಯಿತು. ಶಿವಾಜಿ 1677ರಲ್ಲಿ ಕೊಪ್ಪಳವನ್ನು ಮುತ್ತಿ ವಶಪಡಿಸಿಕೊಂಡ. ಸ್ವಲ್ಪ ಕಾಲದಲ್ಲೇ ಬಿಜಾಪುರ ರಾಜ್ಯ ಔರಂಗಜೇಬನ ಮಹಾ ದಕ್ಷಿಣ ದಂಡಯಾತ್ರೆಗೆ ಬಲಿಯಾದ ಮೇಲೆ ಅನೇಕ ವರ್ಷಗಳ ಅರಾಜಕತೆಯ ಅನಂತರ ಈ ಜಿಲ್ಲೆ ಹೈದರಾಬಾದಿನ ನಿಜಾಮರ ಆಡಳಿತದಡಿ ಬಂದಿತು.

ಹೈದರ್‍ಅಲಿ ಮತ್ತು ಟಿಪ್ಪುಸುಲ್ತಾನರ ದಂಡಯಾತ್ರೆಗಳಿಂದಾಗಿ ಈ ಪ್ರದೇಶ ಸ್ವಲ್ಪ ಅವದಿsಗೆ ಮೈಸೂರು ರಾಜ್ಯದ ಭಾಗವಾಗಿತ್ತು. ಆದರೆ 1799ರಲ್ಲಿ ಟಿಪ್ಪು ಬ್ರಿಟಿಷರಿಗೆ ಸಂಪೂರ್ಣವಾಗಿ ಸೋತ ಅನಂತರ ಆದ ರಾಜಕೀಯ ಒಡಂಬಡಿಕೆಯ ಮೇರೆಗೆ ಕೊಪ್ಪಳ ಜಿಲ್ಲೆ ಅಂದಿನ ರಾಯಚೂರು ಜಿಲ್ಲೆಯ ಭಾಗವಾಗಿ ಹೈದರಾಬಾದ್ ಸಂಸ್ಥಾನಕ್ಕೆ ಸೇರಿತು. ಹೈದರಾಬಾದ್ ನಿಜಾಮರ ಸರ್ಕಾರವು ಸಂಸ್ಥಾನವನ್ನು ಜಹಗೀರಿಗಳು, ಪೈಗಗಳು ಮತ್ತು ನಿಜಾಮರ ಖಾಸಾ ಜಮೀನುಗಳೆಂದು ವಿಂಗಡಿಸಿದ್ದಿತು. ಜಹಗೀರಿಗಳನ್ನು ರಾಜ್ಯಕ್ಕೆ ಸೈನ್ಯ ಮೊದಲಾದವನ್ನು ಒದಗಿಸಿ ಉತ್ತಮ ಸೇವೆ ಸಲ್ಲಿಸಿದವರಿಗೆ ನೀಡಲಾಗುತ್ತಿತ್ತು. ಪೈಗಗಳನ್ನು ಅರಮನೆಗೆ ಬೇಕಾದ ಶ್ರೀಮಂತರು ಮತ್ತು ಕುಲೀನರಿಗೆ ಕೊಡಲಾಗುತ್ತಿತ್ತು. ಈ ನಿಜಾಮರ ಖಾಸಾ ಜಮೀನುಗಳನ್ನು ರೈತರು ಗುತ್ತಿಗೆಗೆ ಸಾಗುವಳಿ ಮಾಡುತ್ತಿದ್ದರು. ಕೊಪ್ಪಳ ಮತ್ತು ಯಲಬುರ್ಗ ತಾಲ್ಲೂಕುಗಳು ನವಾಬ್ ಸಾಲರ್‍ಜಂಗ ಎಂಬ ಜಹಗೀರುದಾರನಿಗೆ ಸೇರಿದ್ದವು. ಕುಷ್ಟಗಿ ತಾಲ್ಲೂಕು ಒಬ್ಬ ದೇಸಾಯಿಯ ಜಹಗೀರಾಗಿದ್ದಿತು. ಆನೆಗೊಂದಿಯೂ ಒಂದು ಪುಟ್ಟ ಜಹಗೀರಾಗಿತ್ತು. ಈ ಊಳಿಗಮಾನ್ಯ ವ್ಯವಸ್ಥೆಯಲ್ಲಿ ಶ್ರೀಮಂತ ಮತ್ತು ಪ್ರಭಾವಿ ವರ್ಗದ ಅಲ್ಪಸಂಖ್ಯಾತರ ಕೈಯಲ್ಲಿ ರೈತರೂ ಕಾರ್ಮಿಕರು ಹೀನ ಸ್ಥಿತಿಯಲ್ಲಿ ಬದುಕಬೇಕಾಯಿತು. ಗ್ರಾಮದಲ್ಲಿ ಸರ್ಕಾರದ ಪರವಾಗಿ ಪಟೇಲ ಮತ್ತು ಗ್ರಾಮ ಮುಖ್ಯರಿರುತ್ತಿದ್ದರು. ಈ ಜಹಗೀರುದಾರರುಗಳು ನಿಜಾಮನಿಗೆ ವಾರ್ಷಿಕ ಪೆÇಗದಿ ಕೊಡುತ್ತಿದ್ದರು. ಅವರಿಗೆ ಪೆÇಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಗಳನ್ನು ಹೊಂದುವ ಅದಿsಕಾರವಿದ್ದಿತು.

ಈ ಬಗೆಯ ಆಳಿಕೆಯಲ್ಲಿ ಜನಸಾಮಾನ್ಯರ ಹಕ್ಕುಬಾಧ್ಯತೆಗಳು ಕುಂಠಿತಗೊಂಡಿದ್ದುವು. 20ನೆಯ ಶತಮಾನದ ಪ್ರಾರಂಭದ ಹೊತ್ತಿಗೆ ಭಾರತಾದ್ಯಂತ ಬಲಗೊಳ್ಳುತ್ತಿದ್ದ ಸ್ವಾತಂತ್ರ್ಯಚಳವಳಿಯ ಪ್ರಭಾವ ಹೈದರಾಬಾದ್ ಸಂಸ್ಥಾನವನ್ನೂ ತಟ್ಟದಿರಲಿಲ್ಲ. 1911ರಲ್ಲಿ ಧಾರವಾಡದಲ್ಲಿ ಜರುಗಿದ ಅಖಿಲ ಕರ್ನಾಟಕ ರಾಜಕೀಯ ಸಮ್ಮೇಳನದಲ್ಲಿ ಈ ಜಿಲ್ಲೆಯ ಹಲವರು ಬಂದು ಭಾಗವಹಿಸಿದರು. ಬೆಳಗಾಂವಿಯಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ಸಮ್ಮೇಳನ (1924) ಸ್ವಾತಂತ್ರ್ಯ ಹೋರಾಟದ ಬಗ್ಗೆ ಈ ಪ್ರಾಂತದ ಜನರ ಗಮನ ಸೆಳೆಯುವಲ್ಲಿ ಮುಖ್ಯ ಪಾತ್ರ ವಹಿಸಿತು. 1916-17 ರಿಂದಲೇ ಕೊಪ್ಪಳದಲ್ಲಿ ಒಂದು ಖಾದಿ ಪ್ರಚಾರ ಕೇಂದ್ರ ಪ್ರಾರಂಭಗೊಂಡಿತ್ತು. 1922ರಲ್ಲಿ ಆರ್.ಬಿ.ದೇಸಾಯಿಯವರು ಕುಕನೂರಿನಲ್ಲಿ ವಿದ್ಯಾನಂದ ಗುರುಕುಲವನ್ನು ಸ್ಥಾಪಿಸಿದರು. ಇದು ಜನರಲ್ಲಿ ರಾಷ್ಟ್ರೀಯ ಭಾವನೆ ಬೆಳೆಸಲು ಸಹಕಾರಿಯಾಯಿತು. 1920-21ರಲ್ಲಿ ರಾಯಚೂರಿನಲ್ಲಿ ಪಂಡಿತ ತಾರಾನಾಥರು ಸ್ಥಾಪಿಸಿದ ಹಮ್‍ದರ್ದ್ ರಾಷ್ಟ್ರೀಯ ಶಾಲೆಯು ಸ್ವಾತಂತ್ರ್ಯ ಚಳವಳಿಯ ಗುರಿಗಳನ್ನು ಪ್ರಚಾರಗೊಳಿಸಿತು. ರಾಯಚೂರಿನ ಅಡವಿರಾವ್ ಫಡ್ನಾವಿಸ್, ಆರ್.ಜಿ.ಜೋಷಿ, ಗಾಣದಾಳ್ ನಾರಾಯಣಪ್ಪ, ವೀರಣ್ಣಮಾಸ್ತರ ಮೊದಲಾದವರ ನಾಯಕತ್ವದಲ್ಲಿ ಸ್ವಾತಂತ್ರ್ಯ ಚಳವಳಿ ಹರಡಿತು. 1928ರಲ್ಲಿ ರಾಯಚೂರಿನಲ್ಲಿ ಸ್ಥಾಪನೆಗೊಂಡ ಕರ್ನಾಟಕ ಸಂಘ ಇನ್ನೊಂದು ಮುಖ್ಯ ಘಟ್ಟವಾಯಿತು. 1930ರಲ್ಲಿ ಗಾಂದಿsೀಜಿಯವರು ಕೊಪ್ಪಳ ತಾಲ್ಲೂಕಿನ ಮೂಲಕ ರೈಲಿನಲ್ಲಿ ಹಾದುಹೋದಾಗ ಅವರನ್ನು ಅನೇಕರು ಭೇಟಿಯಾದರು. 1934ರಲ್ಲಿ ರಾಯಚೂರಿನಲ್ಲಿ 20ನೆಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. 1938ರಲ್ಲಿ ಹೈದರಾಬಾದ್ ಸಂಸ್ಥಾನದ ಪ್ರದೇಶ ಕಾಂಗ್ರೆಸ್ ಸಮಿತಿ ಅಸ್ತಿತ್ವಕ್ಕೆ ಬಂತು. ಈ ಭಾಗದ ಜನರು ಮೂರು ನಿಟ್ಟಿನಲ್ಲಿ ತಮ್ಮ ಹೋರಾಟವನ್ನು ಮುಂದುವರಿಸಬೇಕಾಗಿತ್ತು. ಒಂದು ಕಡೆ ಬ್ರಿಟಿಷರಿಂದ ವಿಮೊಚನೆ; ಇನ್ನೊಂದು ಕಡೆ ಜಹಗೀರ್‍ದಾರಿ ವ್ಯವಸ್ಥೆ ನಿಜಾಮ್‍ಶಾಹಿಯಿಂದ ಬಿಡುಗಡೆ; ಮೂರನೆಯದಾಗಿ ಕನ್ನಡೇತರ ರಾಜ್ಯದಿಂದ ಹೊರಬಂದು ಕನ್ನಡನಾಡಿನ ಏಕೀಕರಣ ಸಾದಿsಸುವುದು. ಸಿರೂರು ವೀರಭದ್ರಪ್ಪ ಅಳವಂಡಿ ಶಿವಮೂರ್ತಿಸ್ವಾಮಿ, ಎಲ್.ಕೆ.ಷರಾಫ್, ಡಿ.ಜಿ.ಬಿಂದು, ಜನಾರ್ಧನರಾವ್‍ದೇಸಾಯಿ, ಬುರ್ಲಿಬಿಂದು ಮಾಧವರಾವ್, ಜಿ.ಕೆ.ಪ್ರಾಣೇಶಾಚಾರ್ಯ ಮತ್ತಿತರರು ಜನಜಾಗೃತಿ ಮತ್ತು ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಸ್ವಾತಂತ್ರ್ಯ ಚಳವಳಿ ಮತ್ತು ಕರ್ನಾಟಕ ಏಕೀಕರಣ ಚಳವಳಿಗಳು ನಿಧಾನವಾಗಿಯಾದರೂ ದೃಢವಾಗಿ ಪ್ರಗತಿಯಲ್ಲಿದ್ದಾಗಲೇ ಇಲ್ಲಿ ಜನತೆ ಹೊಸ ಸಮಸ್ಯೆಯನ್ನು ಎದುರಿಸಬೇಕಾಯಿತು. 1945ರ ಅನಂತರ ಭಾರತಕ್ಕೆ ಸ್ವಾತಂತ್ರ್ಯ ಸಿಗುವುದು ನಿಚ್ಚಳವಾಗುತ್ತಿದ್ದಂತೆಲ್ಲ ಹೈದರಾಬಾದ್ ಸಂಸ್ಥಾನದ ನಿಜಾಮರು ಭಾರತ ಒಕ್ಕೂಟದಿಂದ ಪ್ರತ್ಯೇಕವಾಗುಳಿಯುವ ಪ್ರಯತ್ನದಲ್ಲಿ ತೊಡಗಿದರು. 1947ರ ಆಗಸ್ಟ್ 15ರಂದು ಭಾರತ ಸ್ವತಂತ್ರವಾಯಿತು. ಅದೇ ತಿಂಗಳ 27ರಂದು ಹೈದರಾಬಾದ್ ರಾಜ್ಯ ಭಾರತ ಒಕ್ಕೂಟದಿಂದ ಪ್ರತ್ಯೇಕವಾಗುಳಿಯಲು ನಿರ್ಧರಿಸಿ ಸ್ವಾತಂತ್ರ್ಯ ಘೂೀಷಿಸಿಕೊಂಡಿತು. ಜೊತೆಗೆ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿರುವವರನ್ನು ದಮನ ಮಾಡುವುದಕ್ಕಾಗಿ ಜನರಲ್ಲಿ ಭಯ ಹುಟ್ಟಿಸಲು ರಜಾಕಾರರೆಂದು ಕರೆದುಕೊಂಡ ಮುಸ್ಲಿಮ್ ಉಗ್ರವಾದಿಗಳ ಗುಂಪು ಹಿಂಸಾಚಾರಕ್ಕಿಳಿಯಿತು. ಇದರಿಂದ ಅನೇಕಕಡೆ ಬಿsೀಕರ ಲೂಟಿ, ದರೋಡೆ, ಕೊಲೆ ಸುಲಿಗೆ, ಅತ್ಯಾಚಾರಗಳು ನಡೆದವು. ಆಗ ಈ ರಾಜ್ಯದ ಜನರ ರಕ್ಷಣೆಗೆ ಭಾರತ ಸರ್ಕಾರ ಮುಂದಾಗಿ 1948ರ ಸೆಪ್ಟೆಂಬರ್ 13ರಂದು ಪೆÇಲೀಸ್ ಕಾರ್ಯಾಚರಣೆ ಪ್ರಾರಂಬಿsಸಿತು. ಅದೇ ತಿಂಗಳ 18ರಂದು ಹೈದರಾಬಾದ್ ಸಂಸ್ಥಾನವನ್ನು ವಶಪಡಿಸಿಕೊಂಡು ಭಾರತ ಒಕ್ಕೂಟದಲ್ಲಿ ಸೇರಿಸಲಾಯಿತು. 1956 ನವೆಂಬರ್ 1ರಂದು ಭಾಷಾವಾರು ರಾಜ್ಯಗಳ ರಚನೆಯಾದಾಗ ಕೊಪ್ಪಳವೂ ಸೇರಿದಂತೆ ಅಂದಿನ ರಾಯಚೂರು ಜಿಲ್ಲೆ ಮತ್ತು ಹೈದರಾಬಾದ್ ಕರ್ನಾಟಕ ಭಾಗ ವಿಶಾಲ ಮೈಸೂರು ರಾಜ್ಯದಲ್ಲಿ ಒಂದಾಯಿತು.

ಈ ಜಿಲ್ಲೆ ಸಾಂಸ್ಕøತಿಕವಾಗಿ ಮತ್ತು ಧಾರ್ಮಿಕವಾಗಿ ಉತ್ತಮ ಪರಂಪರೆ ಹೊಂದಿದೆ. ಶೈವ ಮಠಗಳು, ಅಗ್ರಹಾರಗಳು, ಜೈನ ಕೇಂದ್ರಗಳಿಂದ ಕೂಡಿರುವುದಲ್ಲದೆ ಜನಪದ ಸಾಹಿತ್ಯ ಸಂಪತ್ತಿನಿಂದಲೂ ಕೂಡಿದೆ. ವೀರಶೈವಧರ್ಮ ಹೊಸ ಸಾಂಸ್ಕøತಿಕ ಪರಿಸರವನ್ನು ಸೃಷ್ಟಿಸಿತು. ಯಲಬುರ್ಗ ತಾಲ್ಲೂಕಿನ ಕುಕನೂರಿನ ಕಲ್ಲೇಶ್ವರ ದೇವಾಲಯ ಮತ್ತು ಅದೇ ತಾಲ್ಲೂಕಿನ ಇಟಗಿಯ ಮಹಾದೇವ ದೇವಾಲಯ ಚಾಳುಕ್ಯ ಪರಂಪರೆಯ ಶಿಲ್ಪ ಮತ್ತು ವಾಸ್ತುಗಳನ್ನು ಹೊಂದಿವೆ. ಕೊಪ್ಪಳದ ಕೋಟೆ ನೆಲಮಟ್ಟದಿಂದ 400' ಎತ್ತರದ ಗುಡ್ಡದ ಮೇಲಿದ್ದು ಅದನ್ನು ವಿನ್ಯಾಸ ಮತ್ತು ಭದ್ರತೆಯ ದೃಷ್ಟಿಯಿಂದ ಐರೋಪ್ಯ ದಂಡನಾಯಕರೂ ಮೆಚ್ಚಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಕೌರೂರು, ಬಳಂಗೆರೆ, ಆಳವಂಡಿ, ತಳಕಲ್ಲು, ಆನೆಗೊಂದಿ, ಮುನಿರಾಬಾದ್ ಮೊದಲಾದ ಪ್ರೇಕ್ಷಣೀಯ ಸ್ಥಳಗಳಿವೆ. ಸ್ತ್ರೀ ದೇವತೆಗಳ ಆರಾಧನೆ ಅತ್ಯಂತ ಪೂರ್ವಕಾಲದಿಂದಲೂ ಬಂದ ಬಳುವಳಿ. ಕುಕನೂರಿನ ಮಹಾಮಾಯ, ಜೇಷಾವಿದೇವಿ, ಸಂಕನೂರಿನ ಸಂಕಲಾದೇವಿ, ಹೊಸೂರಿನ ಮಹಾಮಾಯಾ, ಹುಲಿಗಿಯ ಹುಲೆಗೆಮ್ಮ ಇವು ಪ್ರಸಿದ್ಧ ಶಕ್ತಿ ದೇವತೆಗಳು. ಕುಷ್ಟಗಿಯ ಅಡವಿರಾಯನ ಜಾತ್ರೆ, ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆ, ಕನಕಗಿರಿ ಜಾತ್ರೆ, ಯಲಬುರ್ಗ ತಾಲ್ಲೂಕಿನ ಮಂಗಳೂರಿನ ಮಂಗಳೇಶ್ವರ ಜಾತ್ರೆಗಳು ಭಕ್ತಾದಿಗಳನ್ನು ಆಕರ್ಷಿಸುತ್ತವೆ.

ಶಾಸ್ತ್ರೀಯ ಸಂಗೀತ ಇಲ್ಲಿ ಹೆಚ್ಚು ಜನಪ್ರಿಯ; ದಾಸ ಪರಂಪರೆಯೂ ಉಂಟು. ಪ್ರಾಚೀನ ಕಾಲದಿಂದಲೂ ಸಾಹಿತ್ಯ ರಚನೆಗೆ, ಕವಿಪಂಡಿತರಿಗೆ ಹೆಸರುವಾಸಿ. ಇತ್ತೀಚಿನ ಸಾರಸ್ವತ ಲೋಕದ ಹಲವಾರು ಸಾಧಕರು ಇಲ್ಲಿನವರು. ಇವರಲ್ಲಿ ಸಿದ್ದಯ್ಯ ಪುರಾಣಿಕ, ಪಾಂಡುರಂಗರಾವ್ ದೇಸಾಯಿ, ಜಯತೀರ್ಥ ರಾಜಪುರೋಹಿತ, ಇಟಗಿ ರಾಘವೇಂದ್ರ, ಕುಷ್ಟಗಿ ರಾಘವೇಂದ್ರರಾವ್, ದೇವೇಂದ್ರ ಕುಮಾರ ಹಕಾರಿ, ಎಚ್.ಎಸ್.ಪಾಟೀಲ, ಬಿ.ಆರ್.ತುಬಾಕಿ, ಗವಿಸಿದ್ದ ಬಳ್ಳಾರಿ, ನಾ.ಭ.ಶಾಸ್ತ್ರಿ,ಕೀರ್ತನಕೇಸರಿ ಜಯರಾಮಾಚಾರ್ಯ, ಮಾಧವರಾವ್ ಮುಧೋಳ (ಉರ್ದು ಮತ್ತು ಕನ್ನಡ ಭಾಷೆಗಳೆರಡರಲ್ಲೂ ಪರಿಣಿತಿ ಪಡೆದಿದ್ದರು. ಉರ್ದು-ಕನ್ನಡ ನಿಘಂಟಿನಲ್ಲಿ ಇವರು ಕೆಲಸಮಾಡಿದ್ದರು) ಮೊದಲಾದವರನ್ನು ಇಲ್ಲಿ ಹೆಸರಿಸಬಹುದು. (ಡಿ.ಎಸ್.ಜೆ.)

ತಾಲ್ಲೂಕು: ಕೊಪ್ಪಳ ತಾಲ್ಲೂಕು ಹಾಗೂ ಅದರ ಮುಖ್ಯ ಪಟ್ಟಣ. ದಕ್ಷಿಣಕ್ಕೆ ತುಂಗಭದ್ರಾ ಜಲಾಶಯ, ಪಶ್ಚಿಮಕ್ಕೆ ಧಾರವಾಡ ಜಿಲ್ಲೆ, ಉತ್ತರಕ್ಕೆ ಯಲಬುರ್ಗ ತಾಲ್ಲೂಕು ಮತ್ತು ಪೂರ್ವಕ್ಕೆ ಗಂಗಾವತಿ ತಾಲ್ಲೂಕು ಇವೆ. ಕೊಪ್ಪಳ, ಇರಕಲ್ಲಗಡ, ಇತ್ತಿನಹಾಳ ಮತ್ತು ಅಲವಂಡಿ ಈ ನಾಲ್ಕು ಹೋಬಳಿಗಳಿವೆ. 156 ಹಳ್ಳಿಗಳಿವೆ. ತಾಲ್ಲೂಕಿನ ಒಟ್ಟು ವಿಸ್ತೀರ್ಣ 1,378.6ಚ.ಕಿಮೀ.

ತಾಲ್ಲೂಕಿನ ಬಹುಭಾಗ ಕಪುŒಮೆಕ್ಕಲು ಮಣ್ಣಿನ ಮಟ್ಟಸ ಪ್ರಸ್ಥಭೂಮಿ. ತಾಲ್ಲೂಕಿನ ಈಶಾನ್ಯ ಮತ್ತು ಕೊಪ್ಪಳ ಪಟ್ಟಣದ ಸಮೀಪದಲ್ಲಿ ಗುಡ್ಡಗಳಿವೆ. ತುಂಗಭದ್ರಾನದಿ ತಾಲ್ಲೂಕಿನ ದಕ್ಷಿಣದ ಗಡಿಯಾಗಿತ್ತು. ಈಗ ತುಂಗಭದ್ರಾ ಜಲಾಶಯದ ಹರವಿನಲ್ಲಿ ಆ ಅಂಚಿನ ಭಾಗಗಳು ಮುಳುಗಿವೆ. ತುಂಗಭದ್ರಾ ಅಣೆಕಟ್ಟಿರುವುದು ತಾಲ್ಲೂಕಿನ ಆಗ್ನೇಯದಲ್ಲಿ ಮುನಿರಾಬಾದ್ ಬಳಿ. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 594.65ಮಿಮೀ. ಕೃಷಿ ತಾಲ್ಲೂಕಿನ ಮುಖ್ಯ ಜೀವನೋಪಾಯ. ಸಾಗುವಳಿಯಾಗುತ್ತಿರುವ ಒಟ್ಟು 3,40,592 ಎಕರೆಗಳಲ್ಲಿ 5,285ಕ್ಕೂ ಹೆಚ್ಚು ಎಕರೆಗಳಿಗೆ ನೀರಾವರಿ ಸೌಲಭ್ಯವಿದೆ (ಕಾಲುವೆಯಿಂದ 4,702 ಎಕರೆಗಳು, ಬಾವಿಗಳಿಂದ 285 ಎಕರೆಗಳು, ಇತರ ಮೂಲಗಳಿಂದ 150 ಎಕರೆಗಳು). ಜೋಳ (51,940), ನೆಲಗಡಲೆ (37,005), ಹತ್ತಿ (27,835), ಗೋದಿ (7,200), ತೊಗರಿ (5,562), ಬಾಜ್ರ (4,593), ಬತ್ತ (2,942), ಕಬ್ಬು (2,583), ಹುರುಳಿ (1,320), ಹರಳು (260) ಮುಖ್ಯ ಬೆಳೆಗಳು.

ಕೊಪ್ಪಳದಿಂದ 13ಕಿಮೀ ದೂರದಲ್ಲಿರುವ ಕಿನ್ನಾಳು ಗ್ರಾಮ ಮರದ ಕುಶಲ ಕೈಗಾರಿಕೆಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿನ ಕೆಲವು ಚಿತ್ರಗಾರ ಮನೆತನದವರು ಉತ್ತಮವಾಗಿ ರಚಿಸಿ ಬಣ್ಣಹಾಕಿದ ದೇವವಿಗ್ರಹಗಳು, ಪ್ರಾಣಿಗಳ ಬೊಂಬೆಗಳು, ಹಣ್ಣು ತರಕಾರಿಗಳ ತದ್ರೂಪ ಬೊಂಬೆಗಳು, ನಾಟಕಗಳಲ್ಲಿ ಬಳಸುವ ಕಿರೀಟ, ಮುಖವಾಡ, ತೊಟ್ಟಿಲು, ಪೀಠಗಳನ್ನು ತಯಾರಿಸುತ್ತಾರೆ. ನೇಯ್ಗೆ, ಕೊಂಬಿನಿಂದ ಬಾಚಣಿಗೆಯ ತಯಾರಿಕೆ ಈ ಮೊದಲಾದ ಉದ್ಯಮಗಳೂ ಇಲ್ಲಿವೆ.

ತುಂಗಭದ್ರಾ ನದಿಯ ಉಪನದಿಯಾದ ಹಿರೇಹಳ್ಳದ ಎಡದಂಡೆಯ ಮೇಲಿರುವ ಕೊಪ್ಪಳ ಈ ತಾಲ್ಲೂಕಿನ ಮುಖ್ಯ ಪಟ್ಟಣ. ಜನಸಂಖ್ಯೆ 56,145. ಇದು ತಾಲ್ಲೂಕಿನ ವಾಣಿಜ್ಯ, ಕೈಗಾರಿಕೆ ಮತ್ತು ವಿದ್ಯಾಕೇಂದ್ರ ಹಾಗೂ ಹುಬ್ಬಳ್ಳಿ ಗುಂತಕಲ್ಲು ರೈಲುಮಾರ್ಗದ ಒಂದು ನಿಲ್ದಾಣ. ಬಳ್ಳಾರಿ, ಕುಷ್ಪಗಿ, ಹುಬ್ಬಳ್ಳಿ, ಯಲಬುರ್ಗ, ಗಂಗಾವತಿಗಳಿಗೆ ರಸ್ತೆ ಸಂಪರ್ಕವಿದೆ. ಕೈಮಗ್ಗದ ಬಟ್ಟೆಗಳಿಗೆ ಇದು ಪ್ರಸಿದ್ಧ. ವಾರ್ಷಿಕವಾಗಿ ಜನವರಿಯಲ್ಲಿ ಗವಿಸಿದ್ದೇಶ್ವರ ಜಾತ್ರೆ ನಡೆಯುತ್ತದೆ. ಈ ಪಟ್ಟಣದ ಪಶ್ಚಿಮಕ್ಕೆ ಬೆಟ್ಟಗಳ ಸಾಲು ಹಬ್ಬಿದೆ. ಇವುಗಳಲ್ಲಿ ಪಾಲ್ಕಿ ಗುಂಡು ಅತ್ಯಂತ ಎತ್ತರವಾದ್ದು (2339'). ಪೂರ್ವಕ್ಕಿರುವ ಬೆಟ್ಟಗಳ ಸಾಲಿನಲ್ಲಿ ಗವಿಮಠವಿದೆ. ದಕ್ಷಿಣಕ್ಕೆ ಮತ್ತೊಂದು ಬೆಟ್ಟದ ಸಾಲು ಇದೆ. ಅದನ್ನು ಬಹದ್ದೂರ್ ಬಂಡೆ (1980') ಎನ್ನುತ್ತಾರೆ.

ಗವಿಮಠ ಬೆಟ್ಟದಲ್ಲಿ ನಾಲ್ಕು ಗವಿಗಳಿವೆ. ಅಲ್ಲದೆ ಪುರಾತನವಾದ ವೀರಶೈವ ಮಠ ಮತ್ತು ಜೈನಸಮಾದಿsಗಳೂ ಇವೆ. ಪಾಲ್ಕಿಗುಂಡಿನ ಪಶ್ಚಿಮಕ್ಕಿರುವ ಮಲಿಮಲ್ಲಪ್ಪನ ಬೆಟ್ಟದಲ್ಲಿ ಮೋರಿಯರ ಅಂಗಡಿ ಎಂದು ಕರೆಯುವ ಬೃಹತ್ ಶಿಲಾಯುಗೀನ ಕಲ್ಮನೆ ಸಮಾದಿsಗಳಿವೆ. ಅಶೋಕನ ಎರಡು ಲಘುಪ್ರಸ್ತರ ಧರ್ಮಶಾಸನಗಳು ಸಿಕ್ಕಿದ್ದು ಗವಿಮಠ ಮತ್ತು ಪಾಲ್ಕಿಗುಂಡು ಬೆಟ್ಟಗಳಲ್ಲಿ. ಇವುಗಳಿಂದ ಕೊಪ್ಪಳ ಕ್ರಿ.ಪೂ.3ನೆಯ ಶತಮಾನದಷ್ಟು ಪ್ರಾಚೀನವಾದ್ದೆಂದು ಊಹಿಸಬಹುದು. ಕ್ರಿ.ಶ.9ನೆಯ ಶತಮಾನದಿಂದ 13ನೆಯ ಶತಮಾನದವರೆಗಿನ ಹಲವು ಶಿಲಾಶಾಸನಗಳೂ ಅನಂತರದ ಮುಸ್ಲಿಂ ದಾಖಲೆಗಳೂ ದೊರಕಿವೆ. ಕೊಪಣಪುರವರಾದಿsೀಶ್ವರರಾದ ಶಿಲಾಹಾರರ ಒಂದು ಶಾಖೆಗೆ ಇದು ರಾಜಧಾನಿಯಾಗಿದ್ದಿರಬಹುದು. ಗಂಗ ಮತ್ತು ಕಲ್ಯಾಣದ ಚಾಳುಕ್ಯರ ಕಾಲದಲ್ಲಿ ಕೊಪ್ಪಳ ಮುಖ್ಯ ಕೇಂದ್ರವಾಗಿದ್ದಿರಲೂಬಹುದು. ಇದನ್ನು ಶಾಸನ ಮತ್ತು ಸಾಹಿತ್ಯಗಳಲ್ಲಿ ಕೊಪಣ, ಕುಪಣ, ಕುಪಿನ ಎಂದು ಕರೆದಿರುವುದಲ್ಲದೆ, ಆದಿತೀರ್ಥ, ಮಹಾತೀರ್ಥ,ವಿದಿತ ಮಹಾ ಕೊಪಣನಗರಮುಂತಾಗಿ ಬಣ್ಣಿಸಲಾಗಿದೆ. ಒಂದು ಕಾಲದಲ್ಲಿ ಪ್ರಸಿದ್ಧ ಜೈನಕ್ಷೇತ್ರವಾಗಿತ್ತು. ಇಲ್ಲಿ 722 ಬಸದಿಗಳೂ 24 ಜೈನಸಂಘಗಳೂ ಇದ್ದುವೆಂದು ಹೇಳಲಾಗಿದೆ.ಇಲ್ಲಿ ಅನೇಕ ಜೈನಶಾಸನಗಳೂ ದೊರೆತಿವೆ.

ಇತಿಹಾಸಪ್ರಸಿದ್ಧವಾದ ಕೊಪ್ಪಳದ ಕೋಟೆಯನ್ನು ಕಟ್ಟಿದವರು ಯಾರೆಂಬುದು ತಿಳಿದಿಲ್ಲ. ಟಿಪ್ಪುಸುಲ್ತಾನ 1786ರಲ್ಲಿ ಇದನ್ನು ವಶಪಡಿಸಿಕೊಂಡು, ಫ್ರೆಂಚ್ ಶಿಲ್ಪಿಗಳ ನೆರವಿನಿಂದ ಇನ್ನೂ ಭದ್ರ ಪಡಿಸಿದನೆಂದು ತಿಳಿದುಬರುತ್ತದೆ. ಕಡಿದಾದ ಮೆಟ್ಟಿಲುಗಳನ್ನೊಳ ಗೊಂಡಿದೆ. ದಕ್ಷಿಣ ಭಾರತದ ದುರ್ಗಮ ಕೋಟೆಗಳಲ್ಲಿ ಕೊಪ್ಪಳ ಕೋಟೆಯೂ ಒಂದು. ಈ ಕೋಟೆಯನ್ನು 1790ರಲ್ಲಿ ಇಂಗ್ಲಿಷ್ ಮತ್ತು ನಿಜಾಮಿ ಪಡೆಗಳು ಸತತವಾಗಿ ಮುತ್ತಿಗೆ ಹಾಕಿದ್ದುಂಟು. 1858ರಲ್ಲಿ ಈ ದುರ್ಗ ಮುಂಡರಗಿ ಬಿsೀಮರಾಯನ ವಶದಲ್ಲಿತ್ತು. 1949ರ ವರೆಗೆ ಕೊಪ್ಪಳ ನವಾಬ್ ಸಾಲಾರ್‍ಜಂಗನ ಜಹಗೀರಿಯಾಗಿತ್ತು. (ಜೆ.ಆರ್.ಪಿ.;ಎಚ್.ಆರ್.ಆರ್.ಬಿ.)

ಕೊಪ್ಪಳ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಖ್ಯ ಪಾತ್ರವಹಿಸಿತ್ತು. ಸಂಗ್ರಾಮದ ಜ್ವಾಲೆ 1858ರಲ್ಲಿ ಮುಂಡರಗಿ ಭೀಮರಾಯ ಹಾಗೂ ಹಮ್ಮಿಗೆ ಕೆಂಚನಗೌಡ ಇವರ ಹೋರಾಟದಿಂದಲೇ ಪ್ರಾರಂಭವಾಯಿತೆನ್ನಬಹುದು. ಹೈದರಾಬಾದು ಕರ್ನಾಟಕದಲ್ಲಿ ಕೊಪ್ಪಳ ಭಾಗದಲ್ಲಿಯೇ ಮೊದಲಿಗೆ ರಾಜಕೀಯ ಚಟುವಟಿಕೆಗಳು ಕಂಡುಬಂದವು. ಬಹಳ ಮೊದಲೇ ಕೀರ್ತನಕೇಸರಿ ಜಯರಾಮಾಚಾರ್ಯರು ಪುರಾಣದ ಕಥೆಗಳಿಗೆ ರಾಜಕೀಯ ರಂಗು ಕೊಟ್ಟು ಸ್ಫೂರ್ತಿ ಹುಟ್ಟುವಂತೆ ಸ್ವಚ್ಫಂದ ಶೈಲಿಯಲ್ಲಿ ಕೀರ್ತನಗಳನ್ನು ಹೇಳತೊಡಗಿ ಕರ್ನಾಟಕದಲ್ಲೆಲ್ಲ ಅಸಹಕಾರ, ಕಾಯಿದೆ ಭಂಗ, ಖಾದಿ ಪ್ರಚಾರ, ನಿದಿsಸಂಗ್ರಹಗಳಿಗಾಗಿ ಅದನ್ನು ಬಳಸಿಕೊಡರು. ಪುಟ್ಟಾಭಟ್ಟ ಜಹಗೀರದಾರ ಮತ್ತು ಹೊಸಪೇಟೆಯ ಚಕ್ರಪಾಣಿ ಆಚಾರ್ಯರು ಈ ಭಾಗದಲ್ಲಿ ಖಾದಿ ಪ್ರಚಾರ ಮಾಡಿದರು. ಇಲ್ಲಿಯವರಾದ ಬಸವಂತರಾವ್ ಕಾಟರಹಳ್ಳಿ ಮತ್ತು ಹಿರೇಮಠ ಅವರು ಹೈದರಾಬಾದಿನಲ್ಲಿ ಪೆÇೀಲಿಸರ ಕಣ್ಣುತಪ್ಪಿಸಿ ರಾಷ್ಟ್ರಧ್ವಜ ಹಾರಿಸಿದರು. 1928ರಷ್ಟು ಮಂಚೆಯೇ ಕಾಂಗ್ರೆಸ್ಸನ್ನು ಸೇರಿದವರಲ್ಲಿ ಪ್ರಮುಖರೆಂದರೆ ಕೊಪ್ಪಳದವರಾದ ಎಚ್.ಕೊಟ್ರಪ್ಪ, ಹಂಪಿ ನರಸಿಂಗರಾವ್ ಮತ್ತು ಸಿರೂರು ವೀರಭದ್ರಪ್ಪನವರು. ನಿಜಾಮ್ ಮತ್ತು ಬ್ರಿಟಿಷ್ ಸರ್ಕಾರ ಇವರಿಗೆ ಬಹಳ ತೊಂದರೆ ಕೊಟ್ಟಿತ್ತು. 1938ರಲ್ಲಿ ಹೈದರಾಬಾದಿನಲ್ಲಿ ನಡೆದ ವಂದೇ ಮಾತರಂ ವಿದ್ಯಾರ್ಥಿ ಆಂದೋಲನದಲ್ಲಿ ಮತ್ತು 1941ರಲ್ಲಿ ನಡೆದ ವೈಯಕ್ತಿಕ ಸತ್ಯಾಗ್ರಹದಲ್ಲಿ ಕೊಪ್ಪಳದ ವಿದ್ಯಾರ್ಥಿ ಮುಖಂಡ ಇಟಗಿ ವಿರೂಪಾಕ್ಷಯ್ಯನವರ ನೇತೃತ್ವದಲ್ಲಿ ಅನೇಕರು ಸೆರೆಮನೆ ಸೇರಿದರು. ಈ ಭಾಗದಲ್ಲಿದ್ದ ಕುಕನೂರಿನ ವಿದ್ಯಾವಂತ ಗುರುಕುಲ ಅದರ ಸಂಸ್ಥಾಪಕರಾದ ರಾಘವೇಂದ್ರರಾವ್ ದೇಸಾಯಿ ಅವರ ಮುಂಧೋರಣೆಯಿಂದ ರಾಜಕೀಯ ಜಾಗೃತಿಯಲ್ಲಿ ಬಹಳ ಮಹತ್ವದ ಪಾತ್ರ ವಹಿಸಿತು. ಈ ಹೊತ್ತಿಗೆ ನಗರದ ಪ್ರಮುಖ ವಕೀಲರನೇಕರು ರಾಜಕೀಯದಲ್ಲಿ ದುಮುಕಿದರು. ಹಳ್ಳಿಹಳ್ಳಿಗಳಲ್ಲಿ ವಾಚನಾಲಯಗಳು ಸ್ಥಾಪನೆಯಾದವು. ಚಲೇಜಾವ್ ಚಳವಳಿಯಿಂದಾರಂಬಿsಸಿ ಸ್ವಾತಂತ್ರ್ಯದವರೆಗೆ ಈ ಭಾಗದಲ್ಲಿ ಆದ ಹೆಚ್ಚಿನ ಜಾಗೃತಿ ಮುಖಂಡರಾದ ಜನಾರ್ದನರಾವ್ ದೇಸಾಯಿ (ವಕೀಲರು), ಪ್ರಾಣೇಶಾಚಾರ್ ಮುಂತಾದವರ ಲಕ್ಷ್ಯವನ್ನು ಸೆಳೆಯಿತು. ತಂಡತಂಡವಾಗಿ ಸತ್ಯಾಗ್ರಹಿಗಳು ಕೊಪ್ಪಳಕ್ಕೆ ಬಂದು ಸೆರೆಯಾದರು. ಭಾರತ ಸ್ವತಂತ್ರವಾದರೂ ಇನ್ನೂ ಜಾಗೀರಾಗಿ ಉಳಿದಿದ್ದ ಕೊಪ್ಪಳ ಭಾಗದಲ್ಲಿ ಅನೇಕ ಕಡೆ ಜನರು ರಾಷ್ಟ್ರಧ್ವಜವನ್ನು ಹಾರಿಸಿ ಸ್ವಾತಂತ್ರ್ಯ ಘೂೀಷಿಸಿ ಮತ್ತೆ ಸೆರೆಮನೆಗೆ ಹೋದರು. ಈ ಚಳವಳಿಯೇ ಪ್ರಬಲವಾಗಿ ಹೈದರಾಬಾದ್ ಸ್ವಾತಂತ್ರ್ಯಾಂದೋಳನದ ಸ್ವರೂಪ ತಳೆಯಿತು. ಚಳವಳಿ ಹೆಚ್ಚಿದಂತೆ ನಿಜಾಮರ ದಬ್ಬಾಳಿಕೆ ಹೆಚ್ಚಾದಾಗ ಕೊಪ್ಪಳ ಭಾಗದಿಂದ ಜೇಲು ಸೇರಿದ ಬೆಣಕಲ್ ಬಿsೀಮಸೇನರಾವ್ ಎಂಬ ತರುಣ ಸತ್ಯಾಗ್ರಹಿ ಗುಲ್ಬರ್ಗ ಜೈಲಿನಲ್ಲಿ ನಡೆದ ಲಾಠಿ ಪ್ರಹಾರದಲ್ಲಿ ಮೃತನಾದ. ಜನ ರೊಚ್ಚಿಗೆದ್ದರು. ಗದಗಿನಲ್ಲಿ ಪ್ರಾದೇಶಿಕ ಸ್ಟೇಟ್ ಕಾಂಗ್ರೆಸ್ ಕೇಂದ್ರವನ್ನು ತೆರೆದರು. ನಿರಾಶ್ರಿತರಾಗಿ ಹೊರಬರುವ ಕುಟುಂಬಗಳ ವ್ಯವಸ್ಥೆ ಮಾಡಬೇಕಾಯಿತು. ಕೊಪ್ಪಳದ ಗಡಿಯ ಸುತ್ತ ಕಾಂಗ್ರೆಸಿನ ಕಾರ್ಯಕರ್ತರ ಸಶಸ್ತ್ರ ಶಿಬಿರಗಳು ಏರ್ಪಟ್ಟವು. ನಿಜಾಮರ ಪೆÇಲೀಸು, ಸೈನ್ಯ ಮತ್ತು ರಜಾಕಾರರ ವಿರುದ್ಧ ದಾಳಿ, ಕಚೇರಿಗಳ ನಾಶ ಮೊದಲಾದವು ನಡೆದವು. ಗಡಿಭಾಗದ ಅನೇಕ ಹಳ್ಳಿಗಳು ಸಂಪೂರ್ಣವಾಗಿ ಈ ಕಾರ್ಯಕರ್ತರ ಅದಿsೀನವಾದವು. ಹೀಗೆ ನಿಜಾಮರ ಸತ್ತೆಯನ್ನು ನಿಷ್ಕ್ರಿಯೆಗೊಳಿಸುವ ಆಂದೋಲನ ತೀವ್ರಗೊಂಡಾಗ ಭಾರತ ಸರ್ಕಾರದಿಂದ ಪೆÇಲೀಸ್ ಕಾರ್ಯಾಚರಣೆ ನಡೆದು ಹೈದರಾಬಾದಿನೊಂದಿಗೆ ಕೊಪ್ಪಳವೂ ಸ್ವತಂತ್ರವಾಯಿತು. (ಜೆ.ಆರ್.ಪಿ.)