ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯುನಿಫಾರಂ ಲಿಪಿ

ವಿಕಿಸೋರ್ಸ್ದಿಂದ

ಕ್ಯುನಿಫಾರಂ ಲಿಪಿ

ವಿಶ್ವದ ಇತಿಹಾಸದಲ್ಲೇ ಮೊದಲನೆಯದಾದ ಮತ್ತು ಪ್ರಾಚೀನ ಸುಮೇರಿಯನರು ಬಳಸುತ್ತಿದ್ದ ಲಿಪಿ. ಈ ಲಿಪಿಯ ಚಿಹ್ನೆಗಳು ನಲ್ಲಿ ಬೆಣೆ, ಬಾಣದ ತುದಿ ಮೊದಲಾದ ಆಕಾರಗಳಲ್ಲಿವೆ. ಲ್ಯಾಟಿನಿನಲ್ಲಿ ಕ್ಯೂನಿಫಾರಂನ ಅರ್ಥ ಬೆಣೆಯಾಕಾರ ಎಂದಾಗುತ್ತದೆ. ಈ ಲಿಪಿಯ ಉಗಮ ಯಾವಾಗ ಎಂದು ತಿಳಿಯದಿದ್ದರೂ ಕ್ರಿ.ಪೂ. 4ನೆಯ ಸಹಸ್ರಮಾನದ ಕಾಲದಿಂದ ಇದು ಬಳಕೆಯಲ್ಲಿತ್ತು. ಇದು ಮೊದಲಿಗೆ ಚಿತ್ರಲಿಪಿಯಾಗಿತ್ತು. ಕಾಲಕ್ರಮದಲ್ಲಿ ಇದು ಶಬ್ದವರ್ಣ (ವರ್ಡ್-ಸಿಲಬಿಕ್) ಲಿಪಿಯಾಗಿ ತದನಂತರ ಕೀಲಲಿಪಿ ಆಯಿತು. ಇದರಲ್ಲಿ ಅನೇಕ ಬಗೆಯ ಚಿಹ್ನೆಗಳಿವೆ. ಕೆಲವು ಏಕಧ್ವನಿಸೂಚಕಗಳು ಮತ್ತೆ ಕೆಲವು ಬಹುಧ್ವನಿಸೂಚಕಗಳು. ಇದರಿಂದುಂಟಾಗುವ ಸಂದಿಗ್ಧತೆಯನ್ನು ನಿವಾರಿಸಲು ಪದದ ಮುಂದೆ ಅಥವಾ ಹಿಂದೆ ನಿರ್ದೇಶಕ ಚಿಹ್ನೆಗಳನ್ನು ಬರೆಯುತ್ತಿದ್ದರು. ದೇಶ, ಬೆಟ್ಟ, ದೇವತೆ, ಪಕ್ಷಿ, ಪ್ರಾಣಿ ಮುಂತಾದ ನಿರ್ದೇಶಕ ಚಿಹ್ನೆಗಳು ಕೀಲಲಿಪಿ ಶಾಸನಗಳಲ್ಲಿ ವಿಶೇಷವಾಗಿವೆ. ಸುಮೇರಿಯನರು ಹಸಿಯ ಜೇಡಿಮಣ್ಣಿನ ಫಲಕಗಳ ಮೇಲೆ ಮೊನಚಾದ ಲೇಖನಿಗಳಿಂದ ತಮ್ಮ ಶಾಸನಗಳನ್ನು ಬರೆಯುತ್ತಿದ್ದುದರಿಂದ ವೃತ್ತಾಕಾರವುಳ್ಳ ಚಿಹ್ನೆಗಳು ಮಾಯವಾಗಿ, ಮೊಳೆಯಾಕಾರದ ಬರೆಹ ರೂಢಿಗೆ ಬಂತು. ಆಸ್ಸೇರಿಯನರು ಈ ಲಿಪಿಯನ್ನು ಸುಧಾರಿಸಿ ಅನಾವಶ್ಯಕವಾದ ಚಿಹ್ನೆಗಳನ್ನು ಬಿಟ್ಟು ಸುಮಾರು 570 ಚಿಹ್ನೆಗಳನ್ನು ಬಳಸುತ್ತಿದ್ದರು. ಅವುಗಳಲ್ಲೂ ಸುಮಾರು 200 ಚಿಹ್ನೆಗಳು ಹೆಚ್ಚು ಬಳಕೆಯಲ್ಲಿರಲಿಲ್ಲ. ಪರ್ಷಿಯನರು ಅರಾಮೇಯಿಕ್ ಲಿಪಿಯ ಆಧಾರದ ಮೇಲೆ ಇದರಲ್ಲಿ ಇನ್ನೂ ಬದಲಾವಣೆಗಳನ್ನು ಮಾಡಿ ಇದು ಅಕ್ಷರಲಿಪಿಯ ಸ್ಥಿತಿಗೆ ಸಮೀಪವಾಗುವಂತೆ ಮಾಡಿದರು.

ಕೀಲಲಿಪಿಯನ್ನು ಸುಮೇರಿಯನರು, ಬ್ಯಾಬಿಲೋನಿಯನರು, ಅಸ್ಸೀಯನರು, ಎಲಾಮೈಟ್, ಕಾಸೈಟ್, ಹಿಟ್ಟೈಟ್ ಮುಂತಾದ ಜನಗಳು ಬಳಸುತ್ತಿದ್ದರು. ಕಾಲಕ್ರಮದಲ್ಲಿ ಅದು ತನ್ನ ಪ್ರಾಮುಖ್ಯವನ್ನು ಕಳೆದುಕೊಂಡಿತು. ಕ್ರಿ.ಪೂ. 6ಕ್ಕೆ ಸೇರಿದ ಶಾಸನವೇ ನಮಗೆ ದೊರಕಿರುವ ಕ್ಯೂನಿಫಾರಂ ಲಿಪಿಯ ಶಾಸನಗಳಲ್ಲಿ ಕೊನೆಯದು. ಆಗಿನ ನಾಗರಿಕತೆಯ ಪ್ರತೀಕವಾಗಿದ್ದ ಕ್ಯೂನಿಫಾರಂ ಲಿಪಿ ಕಣ್ಮರೆಯಾಯಿತು. 19ನೆಯ ಶತಮಾನದಲ್ಲಿ ಜಿ.ಎಫ್.ಗ್ರೋಟ್‍ಫೆಂಟ್ ಮತ್ತು ಎಚ್.ಸಿ.ರಾಲಿನ್‍ಸನ್ ಎಂಬ ವಿದ್ವಾಂಸರು ಈ ಲಿಪಿಯನ್ನು ಓದಲು ಹಾದಿ ಹಾಕಿಕೊಟ್ಟರು. (ಎ.ವಿ.ಎನ್.)