ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯೂಫಿಯ

ವಿಕಿಸೋರ್ಸ್ದಿಂದ

ಕ್ಯೂಫಿಯ

ಲೈತ್ರೇಸೀ ಕುಟುಂಬದ ಕ್ಯೂಫಿಯ ಮಿನಿಯೇಟ ಎಂಬ ವೈಜ್ಞಾನಿಕ ಹೆಸರಿನ ವಾರ್ಷಿಕ ಸಸ್ಯ. ಇದರ ಹೊಳಪಿನ ಎಲೆಗಳ ಮತ್ತು ನಸುಗೆಂಪು ಹೂವಿನ ಅಲಂಕಾರಕ್ಕಾಗಿ ಈ ಸಸ್ಯ ತೋಟಗಾರಿಕೆಯಲ್ಲಿ ಪ್ರಾಮುಖ್ಯ ಪಡೆದಿದೆ. 12"-15" ಎತ್ತರಕ್ಕೆ ಬೆಳೆಯುವ ಈ ಸಸ್ಯವನ್ನು ಕುಂಡದಲ್ಲಿ ಅಥವಾ ಮಡಿಗಳಲ್ಲಿ ಬೆಳೆಸಬಹುದು.

ಅಭಿಮುಖ ಜೋಡಣೆಯನ್ನು ತೋರುವ ಅಂಡಾಕಾರದ ಇಲ್ಲವೆ ಭರ್ಜಿಯಾಕಾರದ ಸರಳ ಎಲೆಗಳು, ರೆಸೀಮ್ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿರುವ ದ್ವಿಲಿಂಗಿ ಹೂಗಳು ಕ್ಯೂಫಿಯದ ಮುಖ್ಯಲಕ್ಷಣಗಳಲ್ಲಿ ಕೆಲವು. ದಳಗಳ ಸಂಖ್ಯೆಯಲ್ಲಿ ಗಮನಾರ್ಹವಾದ ವ್ಯತ್ಯಾಸಗಳನ್ನು ನೋಡಬಹುದು. ಕ್ಯೂ.ಇಗ್ನಿಯ ಎಂಬ ಪ್ರಭೇದದಲ್ಲಿ ದಳಗಳೇ ಇಲ್ಲ. ಬದಲಿಗೆ ಕಣ್ಣುಕೋರೈಸುವಂಥ ಬಣ್ಣವುಳ್ಳ ಪುಷ್ಪಗಳಿವೆ. ಕ್ಯೂ. ಹಿಸೋಪಿಫೋಲಿಯ ಎಂಬುದರಲ್ಲಿ ಸಮಗಾತ್ರದ 6 ದಳಗಳಿವೆ. ಇವೆರಡು ಬಗೆಗಳ ನಡುವೆ 2 ದೊಡ್ಡ ಹಾಗೂ 4 ಚಿಕ್ಕ ದಳಗಳನ್ನು ಪಡೆದಿರುವ ಪ್ರಭೇದಗಳೂ (ಕ್ಯೂ.ಪ್ರೊಕಂಬೆನ್ಸ್) ಎರಡು ದಳಗಳನ್ನು ಮಾತ್ರ ಹೊಂದಿರುವ ಪ್ರಭೇದಗಳೂ (ಕ್ಯೂ.ಲಾವಿಯ) ಇವೆ. 12 ದಳಗಳಿರುವ ಭೇದಗಳೂ ಇಲ್ಲದಿಲ್ಲ (ಉದಾ: ಕ್ಯೂ.ಮೈಕ್ರೊಪೆಟಾಲ).

ಕ್ಯೂಫಿಯವನ್ನು ಬೀಜಗಳ ಮೂಲಕ ವೃದ್ಧಿಸಲಾಗುತ್ತದೆ. ಬೀಜಗಳನ್ನು ಮೊದಲು ಬಿತ್ತನೆ ಮಾಡಿ, 25-26ನೆಯ ದಿನದ ಸಸಿಗಳನ್ನು, 12"ನ ಕುಂಡಗಳಲ್ಲೊ ಇಲ್ಲವೆ ಮಡಿಗಳಲ್ಲಿ 9"-12" ಅಂತರ ಕೊಟ್ಟೊ ನೆಡಬೇಕು. 45, 60 ಮತ್ತು 75ನೆಯ ದಿನ ಒಂದು ಸಾರಿ ತುದಿಯನ್ನು ಜಿಗುಟಬೇಕು. 90-105 ದಿನಗಳಲ್ಲಿ ಗಿಡ ಹೂಬಿಡಲು ಆರಂಭಿಸುತ್ತದೆ. 140 ದಿನಗಳಲ್ಲಿ ಬೀಜವನ್ನು ಬಿಡಿಸಬಹುದು. (ಕೆ.)