ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯೂಬದ ಇತಿಹಾಸ

ವಿಕಿಸೋರ್ಸ್ದಿಂದ

ಕ್ಯೂಬದ ಇತಿಹಾಸ

ಕ್ಯೂಬದ ಪೂರ್ವಚರಿತ್ರೆ ಮತ್ತು ನಾಗರಿಕತೆಯ ವಿಚಾರದಲ್ಲಿ ಗಮನಾರ್ಹ ಸಂಗತಿಗಳೇನೂ ತಿಳಿದುಬಂದಿಲ್ಲ. 1492ರಲ್ಲಿ ಕೊಲಂಬಸ್ ತನ್ನ ಪ್ರಥಮ ಯಾನದಲ್ಲಿ ಕ್ಯೂಬ ದ್ವೀಪವನ್ನು ಕಂಡು ಹಿಡಿದ. 1511ರಿಂದ ಕ್ಯೂಬದ ಪರಿಶೋಧನೆ ಡೀಏಗೋ ವೆಲಜ್ó ಸ್ಕ್ವೆóಜ್óನ ನೇತೃತ್ವದಲ್ಲಿ ಮುಂದುವರಿದು, 1515ರ ವೇಳೆಗೆ ಬಯಾಮೋ, ಬಾರಕೋವ, ಹವಾನ ಮುಂತಾದ ಕಡೆಗಳಲ್ಲಿ ಸ್ಪೇನ್ ವಸಾಹತುಗಳನ್ನು ಸ್ಥಾಪಿಸಿತು. ಅನಂತರದ ಕಾಲದಲ್ಲಿ ನೆರೆಯ ಭೂಭಾಗಗಳನ್ನು ಅನ್ವೇಷಿಸಲು ಸ್ಪೇನಿಗೆ ಇದು ಮುಖ್ಯ ಠಾಣೆಯಾಯಿತು. ಹವಾನ ಮುಖ್ಯ ಬಂದರಾಯಿತು. ಕ್ಯೂಬದಲ್ಲಿ ವ್ಯವಸಾಯ ಅಭಿವೃದ್ಧಿ ಹೊಂದಿತು. ಆ ಮಾರ್ಗವಾಗಿ ಪ್ರಯಾಣ ಮಾಡುತ್ತಿದ್ದ ನೌಕೆಗಳ ಅವಶ್ಯಕತೆಗಳನ್ನು ಅಲ್ಲಿಯ ವಸಾಹತುದಾರರು ಪೂರೈಸುವಂತಾಯಿತು. ಗೆಣಸು, ಬಾಳೆಗಳಲ್ಲದೆ ವಾಣಿಜ್ಯ ಬೆಳೆಗಳಾದ ಕಬ್ಬು, ಹೊಗೆಸೊಪ್ಪುಗಳನ್ನು ಬೆಳೆಯಲಾಗುತ್ತಿತ್ತು. ಬೇಸಾಯಕ್ಕೆ ಕೆಲಸಗಾರರು ಸಾಕಷ್ಟು ಸಂಖ್ಯೆಯಲ್ಲಿ ದೊರೆಯದಿದ್ದುದರಿಂದ ವಸಾಹತುದಾರರು 1522ರಿಂದಲೇ ಗುಲಾಮರನ್ನು ಇಲ್ಲಿಗೆ ತರಲಾರಂಭಿಸಿದರು. ಸ್ಪೇನಿನ ಸ್ವಾರ್ಥಿ ಅಧಿಕಾರಿ ವರ್ಗ ಇಲ್ಲಿಯ ವ್ಯವಸಾಯಪ್ರಗತಿಯನ್ನು ತನ್ನ ಲಾಭಕ್ಕೆ ಬಳಸಿಕೊಂಡಿತ್ತು.

ಕ್ಯೂಬದ ಸ್ಥಾನಮಹತ್ತ್ವದಿಂದಾಗಿ ಅದು ಐರೋಪ್ಯ ನೌಕಾರಾಷ್ಟ್ರಗಳ ಕಲಹಕ್ಕೆ ಕಾರಣವಾಯಿತು. 17ನೆಯ ಶತಮಾನದ ಉದ್ದಕ್ಕೂ ಬ್ರಿಟನ್, ಫ್ರಾನ್ಸ್ ಮತ್ತು ಹಾಲೆಂಡ್‍ಗಳೊಡನೆ ಸ್ಪೇನ್ ಹೋರಾಡುತ್ತಿದ್ದುದರ ಫಲವಾಗಿ ಕ್ಯೂಬ ತೊಂದರೆಗೀಡಾಗಿತ್ತು. ಕಡಲ್ಗಳ್ಳರೂ ದರೋಡೆಕೋರರೂ ಕ್ಯೂಬದ ಐಶ್ವರ್ಯವನ್ನು ದೋಚುತ್ತಿದ್ದರು. ಆದರೂ ಸ್ಪೇನಿನೊಡನೆ ಕ್ಯೂಬದ ನೇರ ಸಂಪರ್ಕಕ್ಕೆ ಅನೇಕ ಅಡ್ಡಿಗಳಿದ್ದುವು. 1697ರ ರಿಸ್ವಿವಿಕ್ ಕೌಲಿನಿಂದ ತಾತ್ಕಾಲಿಕವಾಗಿ ಈ ತೊಂದರೆಗಳು ಕೊನೆಗೊಂಡುವು. 1700-1763ರಲ್ಲಿ ಕ್ಯೂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿಲ್ಲ. ಸ್ಪೇನಿನ ಯುದ್ಧಗಳ ದೆಸೆಯಿಂದ ಕ್ಯೂಬದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತು. ಸ್ಪೇನಿನ ಮಿಲಿಟರಿ ಆಡಳಿತಗಾರರು ಇಲ್ಲಿಯ ಐಶ್ವರ್ಯ, ಸಂಪತ್ತುಗಳ ಶೋಷಣೆ ಮಾಡಿದುದಲ್ಲದೆ ದೇಶೀಯರನ್ನು ಹಲವು ವಿಧವಾದ ದಬ್ಬಾಳಿಕೆಗಳಿಗೆ ಈಡು ಮಾಡುತ್ತಿದ್ದರು. 1732ರಲ್ಲಿ ಇಂಗ್ಲಿಷರು ಹವಾನವನ್ನು ಲೂಟಿ ಮಾಡಿದರು. ಆದರೆ 1763ರಲ್ಲಿ ಸ್ಪೇನಿಗೆ ಅದನ್ನು ಹಿಂದಿರುಗಿಸಿದರು.

1764ರಿಂದ ಕ್ಯೂಬದ ಸ್ಥಿತಿ ಉತ್ತಮಗೊಳ್ಳಲಾರಂಭಿಸಿತು. ಇದರ ಸ್ಥಾನ ಮಹತ್ತ್ವವನ್ನರಿತ ಸ್ಪೇನ್ ಇಲ್ಲಿಗೆ ದಕ್ಷ ಆಡಳಿತಾಗಾರರನ್ನು ನೇಮಿಸಿತು. ವ್ಯವಸಾಯ ಮತ್ತು ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಲಾಯಿತು. ಅಮೆರಿಕ ಸಂಯುಕ್ತ ಸಂಸ್ಥಾನದೊಂದಿಗೆ ವ್ಯಾಪಾರ ಒಪ್ಪಂದವೇರ್ಪಟ್ಟುದರಿಂದ ಇಲ್ಲಿಯ ಸಕ್ಕರೆ, ಕಾಫಿ, ಹೊಗೆಸೊಪ್ಪುಗಳಿಗೆ ಉತ್ತಮ ಮಾರುಕಟ್ಟೆ ದೊರಕಿದಂತಾಯಿತು. ಸಾವಿರಾರು ಫ್ರೆಂಚ್ ವಲಸೆಗಾರರು ಇಲ್ಲಿ ಬಂದು ನೆಲಸಿ ಇಲ್ಲಿಯ ಅಭಿವೃದ್ಧಿಗೆ ಕಾರಣರಾದರು. ದಕ್ಷ ಮತ್ತು ಉದಾರಮನೋಭಾವದ ಅಧಿಕಾರಿಗಳ ನೇತೃತ್ವದಲ್ಲಿ ಕ್ಯೂಬ 18ನೆಯ ಶತಮಾನದ ಉತ್ತರಾರ್ಧ ಮತ್ತು 19ನೆಯ ಶತಮಾನದ ಉತ್ತರಾರ್ಧ ಮತ್ತು 19ನೆಯ ಶತಮಾನದ ಆರಂಭದ ದಶಕಗಳಲ್ಲಿ ಅಭಿವೃದ್ಧಿ ಹೊಂದಿತು. ಈ ಸಮಯದಲ್ಲಿ ಸ್ಪೇನ್ ಯೂರೋಪಿನಲ್ಲಿ ಯುದ್ಧನಿರತವಾಗಿದ್ದುದರಿಂದ ಕ್ಯೂಬ ಬಹಳ ಮಟ್ಟಿಗೆ ಸ್ವತಂತ್ರವೇ ಆಗಿತ್ತೆನ್ನಬಹುದು. ಸ್ಪೇನಿನ ಪಾರ್ಲಿಮೆಂಟಿಗೆ ಕ್ಯೂಬದ ಪ್ರತಿನಿಧಿಗಳು ಆಯ್ಕೆಯಾಗಿ ಹೋಗುತ್ತಿದ್ದರು. ಇಲ್ಲಿಯ ಜನಸಂಖ್ಯೆ ಬೆಳೆಯುತ್ತಿತ್ತು. 1817ರ ವೇಳೆಗೆ 5,53,033ಕ್ಕೆ ಏರಿತು. ಜನರಲ್ಲಿ ರಾಜಕೀಯ ಸ್ವಾತಂತ್ರ್ಯಾಕಾಂಕ್ಷೆಯೂ ಬೆಳೆಯಿತು. ಜನತೆಯ ಆಶೋತ್ತರಗಳಿಗೆ ಸ್ಪೇನ್ ಗಮನ ನೀಡಲಿಲ್ಲ. ದೇಶೀಯರ ಮತ್ತು ವಸಾಹತುಗಾರರ ನಡುವೆ ಭೇದ ಭಾವನೆಗಳು ಹೆಚ್ಚಿದುವು. ಆದರೆ ದೇಶೀಯ ನಾಯಕರಲ್ಲಿ ಒಮ್ಮತವಿಲ್ಲದಿದ್ದುದರಿಂದ ಸ್ವಾತಂತ್ರ್ಯ ಚಳವಳಿ ಹೆಚ್ಚು ಫಲಕಾರಿಯಾಗಲಿಲ್ಲ. ಕೇಂದ್ರ ಸರ್ಕಾರ ತನ್ನ ಅಧಿಕಾರಿಗಳಿಗೆ ಅಮಿತವಾದ ಅಧಿಕಾರ ನೀಡಿದ್ದಲ್ಲದೆ 1837ರಲ್ಲಿ ಪಾರ್ಲಿಮೆಂಟಿನಲ್ಲಿ ಕ್ಯೂಬದ ಪ್ರತಿನಿಧಿಗಳ ಸ್ಥಾನವನ್ನು ರದ್ದುಗೊಳಿಸಿತು. ಈ ಮಧ್ಯೆ ಸಂಯುಕ್ತ ಸಂಸ್ಥಾನದಲ್ಲಿ ಕೆಲವರು ಕ್ಯೂಬವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಆ ಪ್ರಯತ್ನ ಸಫಲವಾಗಲಿಲ್ಲ. 1855ರ ಸುಮಾರಿನಲ್ಲಿ ಅಲ್ಲಲ್ಲಿ ಗಲಭೆಗಳುಂಟಾದುವು. 1868ರಲ್ಲಿ ಸ್ಪೇನಿನ ವಿರುದ್ಧ ಕ್ಯೂಬದ ಜನ ಯುದ್ಧ ಘೋಷಿಸಿದರು. ಹತ್ತು ವರ್ಷಗಳ ಕಾಲ ನಡೆದ ಆಂತರಿಕ ಯುದ್ಧದಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಸತ್ತರು. ಕ್ಯೂಬದ ಪೂರ್ವಭಾಗಗಳಿಗೆ ಮಾತ್ರ ಸೀಮಿತವಾಗಿದ್ದ ಈ ಹೋರಾಟಕ್ಕೆ ಬೋರ್ಜಡೆಲ್ ಕ್ಯಾಸ್ಟಿಲ್ಲೊ ನಾಯಕ. ಗುಲಾಮರ ವಿಮೋಚನೆ ಮತ್ತು ಸಾರ್ವತ್ರಿಕ ಮತದಾನದ ಹಕ್ಕು ಇವು ಇವನ ಬೇಡಿಕೆಗಳಾಗಿದ್ದುವು. ಈ ಹೋರಾಟವನ್ನು ಹತ್ತಿಕ್ಕಲು ಸ್ಪೇನಿನ ಸೈನ್ಯ ದೇಶಾದ್ಯಂತ ಅಮಾನುಷ ಕೃತ್ಯಗಳನ್ನು ಕೈಗೊಂಡಿತು. 1878ರಲ್ಲಿ ಎಲ್ ಜಂóಜೋನ್ ಒಪ್ಪಂದವಾಗಿ ಹೋರಾಟ ಕೊನೆಗೊಂಡಿತು. ಆದರೆ ಸ್ಪೇನ್ ಸರ್ಕಾರ ಒಪ್ಪಂದದ ಷರತ್ತುಗಳನ್ನು ಪಾಲಿಸಲಿಲ್ಲ; ಅದು ತನ್ನ ದಬ್ಬಾಳಿಕೆ ನೀತಿಯನ್ನು ಪುನರಾರಂಭಿಸಿತು. ಈ ಮಧ್ಯೆ ಆರ್ಥಿಕ ಮುಗ್ಗಟ್ಟಿನಿಂದ ಸಂಯುಕ್ತ ಸಂಸ್ಥಾನದಲ್ಲಿ ಕ್ಯೂಬದ ಸಕ್ಕರೆಗೆ ಬೇಡಿಕೆ ಕಡಿಮೆಯಾದುದರಿಂದ ಜನರ ತೊಂದರೆಗಳು ಅಧಿಕವಾದುವು. ಈ ಎಲ್ಲ ಕಾರಣಗಳಿಂದ ಪುನಃ ಸ್ವಾತಂತ್ರ್ಯ ಚಳವಳಿ ಬಲಗೊಂಡಿತು. ಕ್ಯೂಬದ ಹೋರಾಟಗಾರರಲ್ಲಿ ಐಕಮತ್ಯವುಂಟಾಯಿತು. 1895ರಲ್ಲಿ ಪ್ರಾರಂಭವಾದ ಈ ಅಂತಿಮ ಹೋರಾಟದಲ್ಲಿ ಇಡೀ ದೇಶ ಭಾಗವಹಿಸಿತು. ಈ ಮಧ್ಯೆ ಸ್ಪೇನ್ ಮತ್ತು ಸಂಯುಕ್ತಸಂಸ್ಥಾನಗಳ ನಡುವೆ ವಿರಸ ಹುಟ್ಟಿದುದರ ಕಾರಣ ಸಂಯುಕ್ತಸಂಸ್ಥಾನವೂ ಕ್ಯೂಬದ ಜೊತೆಗೂಡಿತು. ಸ್ಪೇನು ಸೋಲನ್ನನುಭವಿಸಿತು. 1898ರ ಅಕ್ಟೋಬರ್ 10ರ ಪ್ಯಾರಿಸ್ ಸಂಧಾನದ ಪ್ರಕಾರ ಸ್ಪೇನ್ ಕ್ಯೂಬವನ್ನು ಸಂಯುಕ್ತಸಂಸ್ಥಾನಕ್ಕೆ ಒಪ್ಪಿಸಿತು. ಸಂಯುಕ್ತಸಂಸ್ಥಾನ ತಾತ್ಕಾಲಿಕವಾಗಿ ಅಧಿಕಾರ ವಹಿಸಿಕೊಂಡು, ಕ್ರಮೇಣ ಕ್ಯೂಬದ ಜನತೆಗೆ ಸ್ವಾತಂತ್ರ್ಯ ನೀಡುವಂತೆ ತೀರ್ಮಾನವಾಯಿತು.

ಅಮೆರಿಕ ಸಂಯುಕ್ತಸಂಸ್ಥಾನ 1899ರ ಜನವರಿ 1ರಿಂದ ಕ್ಯೂಬದಲ್ಲಿ ತನ್ನ ಮಿಲಿಟರಿ ಸರ್ಕಾರವನ್ನು ಆರಂಭಿಸಿತು. ಹೊಸ ಸರ್ಕಾರ ಕ್ಯೂಬದ ಜನರನ್ನೇ ಅಧಿಕಾರಿಗಳನ್ನಾಗಿ ನೇಮಿಸಿ ಸಾರ್ವಜನಿಕರ ಪ್ರಗತಿಗೆ ಗಮನ ಕೊಟ್ಟು, ವಿದ್ಯಾಭ್ಯಾಸ, ಆರೋಗ್ಯ, ನೈರ್ಮಲ್ಯಗಳ ಸುಧಾರಣೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂತು. ಕ್ಯೂಬಕ್ಕೂ ಸಂಯುಕ್ತಸಂಸ್ಥಾನಕ್ಕೂ ಒಪ್ಪಂದವೇರ್ಪಟ್ಟು, ವ್ಯಕ್ತಿಸ್ವಾತಂತ್ರ್ಯವನ್ನೂ ಜನರ ಆಸ್ತಿಯನ್ನೂ ಪ್ರಜಾಸರ್ಕಾರವನ್ನೂ ಕಾಪಾಡಲು ಅಮೆರಿಕ ಪ್ರವೇಶಿಸಬಹುದೆಂದು ಕ್ಯೂಬ ಒಪ್ಪಿಕೊಂಡಿತು. 1902ರಲ್ಲಿ ಕ್ಯೂಬದಲ್ಲಿ ಕಾಂಗ್ರೆಸ್ ಸಭೆ ಸೇರಿ ಅದು ಅಮೆರಿಕದಿಂದ ಅಧಿಕಾರ ವಹಿಸಿಕೊಂಡಿತು. ಥಾಮಸ್ ಎಸ್‍ಟ್ರಡ ಪಾಲ್ಮ ಕ್ಯೂಬದ ಪ್ರಜಾ ಸರ್ಕಾರದ ಮೊದಲನೆಯ ಅಧ್ಯಕ್ಷ. 1902ರಿಂದ 1906ರವರೆಗೆ ಕ್ಯೂಬದ ಪ್ರಜಾ ಸರ್ಕಾರದ ಮೊದಲನೆಯ ಅಧ್ಯಕ್ಷ. 1902ರಿಂದ 1906ರ ವರೆಗೆ ಕ್ಯೂಬ ಸಾಧಿಸಿದ ಅಭಿವೃದ್ಧಿ ಸರ್ವತೋಮುಖವಾದ್ದು. ಆದರೆ ಚುನಾವಣೆಗೆ ಸಿದ್ಧತೆಗಳು ನಡೆಯಬೇಕೆನ್ನುವಾಗ ರಾಜಕೀಯ, ಸಾಮಾಜಿಕ, ಕ್ರಾಂತಿಕಾರಕ ಭಿನ್ನಾಭಿಪ್ರಾಯಗಳಿದ್ದುವು. ಭೇದಭಾವಗಳನ್ನು ಸರಿಪಡಿಸಿ ಶಾಂತಿಯನ್ನೇರ್ಪಡಿಸಲು ಅಮೆರಿಕ ಸಕಾರ ಒಂದು ಸಮಿತಿಯನ್ನು ಕ್ಯೂಬಕ್ಕೆ ಕಳಿಸಿತು. ಆದರೆ ಸಂಧಾನ ಯಶಸ್ವಿಯಾಗಿ ನಡೆಯದಿರಲು ಅಮೆರಿಕ ಸರ್ಕಾರ ಶಾಂತಿ ಸ್ಥಾಪನೆಗಾಗಿ ಕ್ಯೂಬದಲ್ಲಿ ಒಂದು ಕ್ರಾಂತಿ ಸರ್ಕಾರವನ್ನು ಏರ್ಪಡಿಸಿತು. ಅದು ಅಧ್ಯಕ್ಷರ ಅಧಿಕಾರ ಕರ್ತವ್ಯಗಳನ್ನು ನಿಶ್ಚಯಿಸಿ ಪ್ರಾಂತ್ಯಗಳ ಅಧಿಕಾರವನ್ನು ಬಲಪಡಿಸಿತು. 1909ರಲ್ಲಿ ಅಮೆರಿಕದ ಆಡಳಿತ ಮುಗಿದು ಅಮೆರಿಕನ್ ಸೇನೆ ವಾಪಸಾಯಿತು. ಎರಡನೆಯ ಸಲ ಕ್ಯೂಬದಲ್ಲಿ ಜೋಸ್ ಮಿಗೇಲ್ ಗೋಮೆಜ್ ಅಧ್ಯಕ್ಷನೂ ಆಲ್‍ಫ್ರೆಡೊ ಜಯಾಸ್ ಉಪಾಧ್ಯಕ್ಷನೂ ಆಗಿ ಚುನಾಯಿತರಾದರು. ಮುಂದೆಯೂ ಅಧ್ಯಕ್ಷನ ಸ್ವತಂತ್ರ ಆಡಳಿತ ನೀತಿ ಮುಂದುವರಿಯಿತು. ನೆರೆರಾಜ್ಯವಾದ ಕ್ಯೂಬದ ಪರಿಸ್ಥಿತಿ ತನ್ನ ರಾಜಕೀಯ ಧೋರಣೆಗೆ ಅನುಕೂಲವಾಗಿರಬೇಕೆಂಬುದು ಸಂಯುಕ್ತಸಂಸ್ಥಾನದ ಇಚ್ಛೆ. ಆದ್ದರಿಂದ 1909ರಿದ 1925ರ ಮಧ್ಯೆ ಅಧ್ಯಕ್ಷರಾಗಿದ್ದ ಗೋಮೆಜ್, ಮೆನೊಕಲ್ ಮತ್ತು ಜಯಾಸರ ಕಾಲದಲ್ಲಿ ಶಾಂತಿ ಕದಡಿದಾಗ ಅಮೆರಿಕ ಎರಡು ಸಲ ಮಧ್ಯೆ ಪ್ರವೇಶಿಸಿತು. 1925ರಲ್ಲಿ ಗೆರಾರ್ಡೊ ಮಕ್ಯಾಡೊ ಅಧ್ಯಕ್ಷನಾಗಿ ಆಯ್ಕೆಯಾಗಿ 1933ರ ವರೆಗೆ ಅಧಿಕಾರದಲ್ಲಿದ್ದ. ಲಂಚ, ದುರಾಡಳಿತಗಳ ಕಾರಣ ಮಕ್ಯಾಡೊನ ವಿರುದ್ಧ ಜನತೆ ದಂಗೆಯೆದ್ದು ಅವನನ್ನು ಅಧಿಕಾರದಿಂದ ಓಡಿಸಿದ ಮೇಲೆ 1933ರಿಂದ 1958ರ ವರೆಗೂ ಕ್ಯೂಬದ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದವ ಬ್ಯಾಟಿಸ್ಟ. 1958ರಲ್ಲಿ ಕಮ್ಯೂನಿಸ್ಟರ ಪ್ರಚಾರದ ಫಲವಾಗಿ ರಾಜಕೀಯ ಕ್ರಾಂತಿಯುಂಟಾಗಿ ಫೀಡೆಲ್ ಕ್ಯಾಸ್ಟ್ರೊ ಅಧಿಕಾರ ಗಳಿಸಿದ. 1961ರಲ್ಲಿ ತಾನು ಕಮ್ಯೂನಿಸ್ಟ್ ನೀತಿಯನ್ನನುಸರಿಸುವುದಾಗಿ ಆತ ಸಾರಿದ. ಅಮೆರಿಕಕ್ಕೆ ಇದರಿಂದ ಆತಂಕವುಂಟಾಯಿತು. ಕ್ಯೂಬಕ್ಕೆ ಸೋವಿಯೆತ್ ದೇಶದ ಬೆಂಬಲ ದೊರಕಿತು; ವಿಪುಲವಾಗಿ ಯುದ್ಧ ಸಾಮಗ್ರಿಗಳು ಸೋವಿಯತ್ ದೇಶದಿಂದ ಬಂದವು. ಸಂಯುಕ್ತಸಂಸ್ಥಾನದ ಯುದ್ಧ ನೌಕೆಗಳು ಕ್ಯೂಬದ ಸುತ್ತ ಕಾವಲು ಹಾಕಿದವು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸೋವಿಯೆತ್ ದೇಶ ಪರಮಾಣು ಸಜ್ಜಿತ ಶಸ್ತ್ರಾಸ್ತ್ರಗಳನ್ನು ಒದಗಿಸುವುದಿಲ್ಲವೆಂದೂ ಅಲ್ಲಾಗಲೇ ಸ್ಥಾಪಿಸಿದ ಕ್ಷಿಪಣಿಗಳನ್ನು ವಾಪಸ್ಸು ಪಡೆಯುವುದಾಗಿಯೂ ಒಪ್ಪಿಕೊಂಡಿತು. ಅಮೆರಿಕ-ರಷ್ಯಗಳ ನಡುವೆ ನಡೆಯಬಹುದಾಗಿದ್ದ ಯುದ್ಧದ ಭಯ ಈ ರೀತಿ ಕೊನೆಗೊಂಡಿತು. 1963ರ ವೇಳೆಗೆ ಅವುಗಳನ್ನು ಹಿಂತೆಗೆದುಕೊಳ್ಳಲಾಯಿತು. ಕ್ಯೂಬದಲ್ಲಿ ಈಗ ಕಮ್ಯೂನಿಸ್ಟ್ ಆಡಳಿತವಿದೆ. (ಎಸ್.ಕೆ.ಕೆ.)