ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯೊಸ್ಟ್ಲೆರ್, ಆರ್ಥರ್

ವಿಕಿಸೋರ್ಸ್ದಿಂದ

ಕ್ಯೊಸ್ಟ್ಲೆರ್, ಆರ್ಥರ್

1905-. ಬ್ರಿಟನಿನಲ್ಲಿ ನೆಲಸಿದ ಹಂಗರಿಯ ಲೇಖಕ. ಬುಡಾಪೆಸ್ಟಿನಲ್ಲಿ ಹುಟ್ಟಿದ ಈತ ವಿಯನ್ನ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ. ಜರ್ಮನಿಯ ಅನೇಕ ವರ್ತಮಾನ ಪತ್ರಿಕೆಗಳಿಗೆ ಮಧ್ಯ ಪ್ರಾಚ್ಯದ ವರದಿಗಾರನಾಗಿ ದುಡಿದ. 1926-31ರಲ್ಲಿ ಪ್ಯಾರಿಸ್ ಪತ್ರಿಕೆಯೊಂದರ ವರದಿಗಾರನಾಗಿಯೂ ಬರ್ಲಿನ್ನಿನ ವಿದೇಶೀ ಸಂಪಾದಕನಾಗಿಯೂ ಕೆಲಸ ಮಾಡಿದ. 1930ರಲ್ಲಿ ಕಮ್ಯೂನಿಸ್ಟ್ ಪಕ್ಷಕ್ಕೆ ಸೇರಿ ಸೋವಿಯತ್ ರಷ್ಯದ ಅತಿಥಿಯಾಗಿ ಆ ನಾಡನ್ನೆಲ್ಲ ಸುತ್ತಿ ಬಂದ. 1936ರಲ್ಲಿ ಲಂಡನ್ನಿನ ಪತ್ರಿಕೆಯೊಂದರ ವರದಿಗಾರನಾಗಿ ಸ್ಪೇನಿಗೆ, ಅಲ್ಲಿ ನಡೆಯುತ್ತಿದ್ದ ಅಂತರ್ಯುದ್ಧದ ಸುದ್ದಸಂಗ್ರಹಕ್ಕಾಗಿ, ಹೋದಾಗ ಗೂಢಚಾರನೆಂದು ಈತನನ್ನು ಬಂಧಿಸಿ ಸೆರೆಯಲ್ಲಿಟ್ಟು ಮರಣದಂಡನೆ ವಿಧಿಸಿದರು. ಆಂಗ್ಲಮಿತ್ರರ ಪ್ರಯತ್ನಗಳಿಂದಾಗಿ ಈತನ ಬಿಡುಗಡೆಯಾಯಿತು. ಆ ಎಲ್ಲ ಅನುಭವಗಳನ್ನೂ ಸ್ಪ್ಯಾನಿಷ್ ಟೆಸ್ಟಮೆಂಟ್ (1937), (ಅಮೆರಿಕೆಯ ಪ್ರಕಟನೆ-ಡಯಾಲಾಗ್ ವಿತ್ ಡೆತ್ 1942) ಎಂಬ ಕೃತಿಯಲ್ಲಿ ತಿಳಿಸಿದ್ದಾನೆ. ಕಮ್ಯೂನಿಷ್ಟ್ ವಾಮಪಕ್ಷದವರಲ್ಲಿನ ಭ್ರಷ್ಟಾಚಾರವನ್ನು ಕಂಡ ಈತನಿಗೆ ಕಮ್ಯೂನಿಸ್ಟ್ ತತ್ತ್ವಗಳ ಬಗ್ಗೆ ಭ್ರಮನಿರಸನವಾಗಿ ಅಂದಿನಿಂದ ಅಂದರೆ 1941ರಿಂದೀಚೆಗೆ ಕಮ್ಯೂನಿಸಂನ ವಿರೋಧವಾಗಿ ಬರೆಯತೊಡಗಿದ. ದಿ ಗ್ಲಾಡಿಯೇಟರ್ (1939), ಸ್ಕಮ್ ಆಫ್ ದಿ ಆರ್ತ್ (1941), ದಿ ಯೋಗಿ ಆಫ್ ದಿ ಕಮೀಸರ್ (1945), ಇನ್‍ಸೈಟ್ ಅಂಡ್ ಔಟ್‍ಲುಕ್; ಎನ್ ಇನ್‍ಕ್ವೈರಿ ಇನ್‍ಟು ದಿ ಕಾಮನ್ ಫೌಂಡೇಷನ್ಸ್ ಆಫ್ ಸೈನ್ಸ್ ಆರ್ಟ್‍ಲಡ್ ಸೊಷಿಯಲ್ ಎಥಿಕ್ಸ್ (1949), ಪ್ರಾಮಿಸ್ ಅಂಡ್ ಫುಲ್‍ಫಿಲ್ ಮೆಂಟ್: ಪ್ಯಾಲಸ್ಟೈನ್ (1917-1919), ಎಂಬ ಗ್ರಂಥಗಳನ್ನೂ ಡಾರ್ಕ್‍ನೆಸ್ ಅಟ್ ನೂನ್ (1941), ಅರೈವಲ್ ಅಂಡ್ ಡಿಪಾರ್ಚರ್ (1943), ತೀವ್ಸ್ ಇನ್ ದಿ ನೈಟ್ (1946) ಎಂಬ ಕಾದಂಬರಿಗಳನ್ನೂ ಟ್ವೈಲೈಟ್ (1945) ಎಂಬ ನಾಟಕವನ್ನೂ ಬರೆದಿದ್ದಾನೆ. ದಿ ಸ್ಲೀಪ್ ವಾಕರ್ಸ್ (1959), ದಿ ಲೋಟಸ್ ಅಂಡ್ ದಿ ರೋಬಾಟ್, ದಿ ಆಕ್ಟ್ ಆಫ್ ಕ್ರಿಯೇಷನ್ ಎಂಬ ಗ್ರಂಥಗಳಲ್ಲಿ ಈತನ ಆಳವಾದ ಚಿಂತನದ ಫಲಗಳನ್ನು ಕಾಣಬಹುದು. ಆರೋ ಇನ್ ದಿ ಬ್ಲೂ ಮತ್ತು ದಿ ಇನ್‍ವಿಸಿಬಲ್ ರೈಟಿಂಗ್ ಎಂಬ ಗ್ರಂಥಗಳು ಆತ್ಮಕಥಾರೂಪವಾಗಿದೆ.

ಡಾರ್ಕ್‍ನೆಸ್ ಅಟ್ ನೂನ್ ಕಾದಂಬರಿಯನ್ನು ಕು.ಶಿ.ಹರಿದಾಸಭಟ್ಟರು ನಡುಹಗಲಿನ ಕತ್ತಲು ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. (ಕೆ.ಬಿ.ಪಿ.)