ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯೋಹ್, ಮಾರ್ಟಿನ್

ವಿಕಿಸೋರ್ಸ್ದಿಂದ

ಕ್ಯೋಹ್, ಮಾರ್ಟಿನ್ 1882-1940. ಸ್ವೀಡನ್ನಿನ ಕಾದಂಬರಿಕಾರ ಮತ್ತು ಪತ್ರಿಕೋದ್ಯಮಿ. ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಸ್ಟ್ರಿಂಡ್‍ಬರ್ಗ್ ವಾಸ್ತವತೆಯ ಪರಂಪರೆಯನ್ನು ಪುನರುಜ್ಜೀವನಗೊಳಿಸಿದ ಸಾಹಿತಿಗಳಲ್ಲಿ ಈತನ ಹೆಸರು ದೊಡ್ಡದು. ಸ್ವೀಡನ್ನಿನ ಶ್ರಮಜೀವಿಗಳ ಬಡತನದ ಬದುಕನ್ನು ತದ್ವತ್ತಾಗಿ ಚಿತ್ರಿಸಿದ ಮೊದಲ ಕಾದಂಬರಿಕಾರನೀತ. ಕಾದಂಬರಿ ಕ್ಷೇತ್ರದಲ್ಲಿ ಸಮಾಜ ಮನೋವಿಜ್ಞಾನವನ್ನು ಬಳಸಿದ ಪ್ರಥಮ ಸಾಹಿತಿ. ಸ್ಟಾಕ್‍ಹೋಮಿನ ಮಧ್ಯಮವರ್ಗದ ಕುಟುಂಬದಲ್ಲಿ ಹುಟ್ಟಿದ ಈತ ಸಾಕಷ್ಟು ಸುಖವಾಗಿಯೇ ಇದ್ದರೂ ತನಗಿರುವಷ್ಟು ಸೌಕರ್ಯಗಳೂ ಇಲ್ಲದ ದುರ್ದೈವಿಗಳ ಬಾಳಿನ ಬಗೆಗೆ ಅನುತಾಪವನ್ನೂ ಸಮಾಜದಲ್ಲಿನ ವರ್ಗವೈಪರೀತ್ಯಗಳ ಬಗೆಗೆ ಸಂತಾಪವನ್ನೂ ವ್ಯಕ್ತಪಡಿಸಿದ. 1911ರಲ್ಲಿ ಬರೆದ ಎಲ್ಲೆನ್ ಎಂಬ ಕಾದಂಬರಿ ಸಾಧಾರಣವಾದುದು. ಪತ್ರಿಕೆಗಳಿಗಾಗಿ ಲೇಖನಗಳನ್ನು ಬರೆಯುತ್ತ ಸಾಹಿತ್ಯದ ಹದವನ್ನು ಕಂಡುಕೊಂಡ. ಅಮೆರಿಕದ ಜಾಕ್ ಲಂಡನ್, ಅಪ್ಟನ್ ಸಿಂಕ್ಲೇರ್, ರಷ್ಯದ ಗಾರ್ಕಿ, ದಾಸ್ತಾಯೆವಸ್ಕಿ ಮೊದಲಾದ ಸಾಹಿತಿಗಳ ಪ್ರಭಾವಕ್ಕೆ ಒಳಗಾದರೂ ಅಂಧಾನುಕರಣೆ ಮಾಡದೆ ಅನೇಕ ಕಾದಂಬರಿಗಳನ್ನು ಬರೆದ. ಸ್ವೀಡಿಷ್ ಸಮಾಜ ಜೀವನದ ವಿಶಿಷ್ಟತೆ, ಪ್ರಾದೇಶಿಕತೆ ಈತನ ಎಲ್ಲ ಕಾದಂಬರಿಗಳಲ್ಲೂ ಕಾಣುತ್ತವೆ.

ದೀನದಲಿತರ ಪಾತ್ರವನ್ನು ಚಿತ್ರಿಸುವಲ್ಲಿ ವಾಸ್ತವತೆಯ ಅತಿರೇಕವಾಗಲೀ ಆದರ್ಶೀಕರಣವಾಗಲೀ ಕ್ಯೋಹ್‍ನ ಕೃತಿಗಳಲ್ಲಿ ಕಾಣುವುದಿಲ್ಲ. ಹೀನವರ್ಗದ ಕೆಲವರ ಹೀನ ಸಂಸ್ಕಾರದ ಅರಿವೂ ಈತನಿಗಿದೆ. ಅಂಥ ಜನರ ಅನೇಕ ಕೃತ್ಯಗಳಿಗೆ ಪ್ರೇರಕವಾದ ಮೃಗೀಯ ಪ್ರವೃತ್ತಿಗಳೂ ಈತನ ದೃಷ್ಟಿಗೆ ಬೀಳದೆ ಇಲ್ಲ. 1916ರಲ್ಲಿ ಪ್ರಕಟವಾದ ಗಾಡ್ಸ್ ಬ್ಯೂಟಿಫುಲ್ ವಲ್ರ್ಡ್ ಎಂಬ ಕಾದಂಬರಿಯಲ್ಲಿ ದಲಿತ ವರ್ಗದವರ ಜಿಗುಪ್ಸಾಮಯವಾದ ಬದುಕನ್ನು ಚಿತ್ರಿಸುತ್ತ, ಸಮಾಜಕ್ಕೆ ಹೊರೆ, ಪಿಡುಗು ಎನ್ನಬಹುದಾದ ಯಾವ ದುಷ್ಕøತ್ಯಕ್ಕೂ ಹೇಸದ, ಯಾವ ಉದ್ಧಾರಕ್ಕೂ ಹಂಬಲಿಸಿದ ಜನರೂ ಆ ದಲಿತರಲ್ಲಿ ಇರುವುದನ್ನು ತೋರಿಸುತ್ತಾನೆ.

ವರ್ಕರ್ಸ್, ದಿ ಟಿಂಬರ್ ವ್ಯಾಲಿ, ಪಯಸ್ ಪೀಪಲ್-ಇವು ಈತನ ಕೆಲವು ಕಾದಂಬರಿಗಳ ಇಂಗ್ಲಿಷ್ ಹೆಸರುಗಳು, ಜಾತಿ ಪಂಗಡಗಳ ವಿಶ್ಲೇಷಣೆ ಮತ್ತು ಮೂಲ ಶೋಧನೆ ಪಯಸ್ ಪೀಪಲ್ ಕಾದಂಬರಿಯ ವಸ್ತು. ಒಂದನೆಯ ಮಹಾಯುದ್ಧದಲ್ಲಿ ಮತ್ತು ಅದಕ್ಕೂ ಮುಂಚೆ ಬರೆದ ಈತನ ಕೃತಿಗಳೇ ಉತ್ತಮವಾಗಿವೆ. ಅನಂತರದ ಕಾದಂಬರಿಗಳು ಸತ್ತ್ವಹೀನವೆನಿಸಿವೆ. ಮಾರಿಟ್ಟ ಎಂಬುದು ಕ್ಯೋಹ್‍ನ ಬಾಲ್ಯಜೀವನವನ್ನು ಚಿತ್ರಿಸುವ ಆತ್ಮಕಥೆ. ಅವೇಗರಹಿತ, ವಸ್ತುನಿಷ್ಠ ನಿರೂಪಣೆಯಾದ ಇದು ಕ್ಯೋಹ್‍ನ ಶ್ರೇಷ್ಠ ಕೃತಿ. (ಕೆ.ಬಿ.ಪಿ.)