ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಂಗಾಧರ ಶಾಸನ

ವಿಕಿಸೋರ್ಸ್ದಿಂದ

ಗಂಗಾಧರ ಶಾಸನ:-

ಕನ್ನಡ ಕವಿಗಳ ಚರಿತ್ರೆಯನ್ನು ನಿರೂಪಿಸುವಲ್ಲಿ ಸಹಾಯವಾಗುವ ಕೆಲವೆ ಶಾಸನಗಳಲ್ಲಿ ಒಂದು. ಇದು ಕನ್ನಡದ ಆದಿಕವಿಯೆನಸಿ ಕೊಂಡಿರುವ ಪಂಪನ ತಮ್ಮ ಜಿನವಲ್ಲಭನಿಂದ ಕೆತ್ತಿಸಲಾದುದು. ಕಂಡರಿಸಿದ ಶಿಲ್ಪಿ ಎರೆಯಮ್ಮ. ಉದ್ದೇಶ ಜಿನವಲ್ಲಭನನ್ನು ಸುತ್ತಿಸುವುದೇ ಆಗಿದ್ದರೂ ಪಂಪನ ಚರಿತ್ರೆಯ ಮೇಲೆ ಇದು ಅನುಷಂಗಿಕವಾಗಿ ವಿಶೇಷ ಬೆಳಕನ್ನು ಬೀರಿದೆ. ಪಂಪನ ಅಜ್ಜ, ತಂದೆ, ತಾಯಿ, ಆಕೆಯ ತವರಿನವರು, ಸೋದರ ಹಾಗೂ ಗುರು ಇವರ ಬಗೆಗೆ ಕೆಲವು ಸ್ಪಷ್ಟ ಹೇಳಿಕೆಗಳನ್ನಿದು ಒಳಗೊಂಡಿದೆ. ಈ ಶಾಸನ ಮೊದಲಬಾರಿಗೆ ತೆಲಗು ಪತ್ರಿಕೆ ಭಾರತಿಯಲ್ಲಿ ೧೯೬೭ರ ಮಾರ್ಚ್ ತಿಂಗಳಲ್ಲಿ ಆಂಧ್ರಪ್ರದೇಶದ ಪುರಾತತ್ವ ಶಾಖೆಯ ಸಹಾಯಕ ಸಂಚಾಲಕರಾದ ಎನ್. ವೆಂಕಟರಾಮಯ್ಯನವರಿಂದ ಪ್ರಕಾಶಗೊಂಡಿತು. ಅನಂತರ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳ ಪತ್ರಿಕೆಗಳಲ್ಲೂ ಕನ್ನಡ ಶಾಸನ ಸಂಪದ ಎಂಬ ಶಾಸನಗಳ ಸಂಗ್ರಹಗ್ರಂಥದಲ್ಲೂ ಅಚ್ಚಾಯಿತು.

ಗಂಗಾಧರ ಶಾಸನ ಆಂಧ್ರಪ್ರದೇಶದ ಕರೀಮ್‍ನಗರ ಜಿಲ್ಲೆಯಲ್ಲಿದೆ. ಕರೀಮ್‍ನಗರದಿಂದ ಜಗತ್ಯಾಲ ತಾಲ್ಲೂಕಿಗೆ ಹೋಗುವ ದಾರಿಯಲ್ಲಿ ಕುರ್ಕಿಯಾಲ್ ಎಂಬ ಹಳ್ಳಿಯಿಂದ ಪೂರ್ವದಲ್ಲೂ ಗಂಗಾಧರವೆಂಬ ಹಳ್ಳಿಯಿಂದ ದಕ್ಷಿಣದಲ್ಲೂ ನೇಲ್ಕೊಂಡಪಲ್ಲಿಯೆಂಬ ಹಳ್ಳಿಯಿಂದ ಈಶಾನ್ಯದಲ್ಲೂ ಎಂದರೆ ಈ ಮಧ್ಯದಲ್ಲಿರುವ ಬೆಟ್ಟದಲ್ಲಿ ಈ ಶಾಸನವನ್ನು ಕೊರೆಯಲಾಗಿದೆ. ಕುರ್ಕಿಯಾಲ್ ಎಂಬ ಹಳ್ಳಿಯ ಸೀಮೆಯ ಒಳಗಡೆಯೇ ಇದು ಬರುತ್ತದೆ. ಬೆಟ್ಟದ ಪಕ್ಕದಲ್ಲಿ ವಾಯುವ್ಯದಿಶೆಯಲ್ಲಿ ಪಾತಚೆರುವು ಎಂಬ ಕೆರೆಯೊಂದಿದೆ ಬಹುಶಃ ಇದುವೆ ಕವಿತಾಗುಣಾರ್ಣವತಟಾಕವಾಗಿರಬಹುದೆಂದು ವಿದ್ವಾಂಸರ ಅಭಿಪ್ರಾಯ. ಬೆಟ್ಟಕ್ಕೆ ಈಗ ಬೊಮ್ಮಲ ಗುಟ್ಟವೆಂದು (ಗೊಂಬೆಗಳ ಗುಡ್ಡ) ಹೆಸರು. ಬೆಟ್ಟದ ನಿಡಿದಾದ ದಾರಿಯಲ್ಲಿ ಸುಮಾರು 125' ಏರಿದಮೇಲೆ ಒಂದು ಬೃಹತ್ ಶಿಲೆಯಿದೆ. ಅದರ ಮೇಲೆ ಸುಮಾರು 4' ಎತ್ತರದ ಸ್ತ್ರೀಮೂರ್ತಿಯೊಂದನ್ನು ಕೆತ್ತಿದೆ. ಜನತೆ ಈಕೆಯನ್ನು ಬೊಮ್ಮಲಮ್ಮನೆಂದು (ಚಕ್ರೇಶ್ವರಿ) ಈಗಲೂ ಪೂಜಿಸುತ್ತಾರೆ. ಈ ವಿಷಯ ಆ ವಿಗ್ರಹದ ಪಾದದಲ್ಲಿಯೆ ಕೆತ್ತಲಾಗಿರವ ಶಾಸನದಲ್ಲಿ ಸ್ಪಷ್ಟವಿದೆ. ಚಕ್ರೇಶ್ವರಿ ಎಂದರೆ ಅದೇ ವೃಷಭಾದ್ರಿಯಲ್ಲಿದ್ದ ವೃಷಭನಾಥ ತೀರ್ಥಂಕರನ ಯಕ್ಷಿಣಿ. ಆ ವೃಷಭನಾಥ ಜಿನಾಲಯ ಎಲ್ಲಿದ್ದಿತೆಂಬುದು ಈಗ ತಿಳಿಯದು. ಚಕ್ರೇಶ್ವರಿಯ ಜೊತೆಗೆ ಇನ್ನೂ ಕೆಲವು ಪ್ರತಿಮೆಗಳು ಆಕೆಯ ಎಡಕ್ಕೂ ಬಲಕ್ಕೂ ಇವೆ. ಆಕೆಯ ತಲೆಯ ಮೇಲೆಯೆ ಸ್ವಲ್ಪ ಎತ್ತರದಲ್ಲಿ ಎರಡು ದೊಡ್ಡ ಜಿನಬಿಂಬಗಳೂ ಇವೆ. ಇವು ಬಹಳ ಎತ್ತರದ ಮೇಲಿರುವುದರಿಂದ ಬಹುದೂರದ ವರೆಗೆ ಗೋಚರಿಸುತ್ತವೆ ಅದರಲ್ಲೂ ನೀಲ್ಕೊಂಡಪಲ್ಲಿಗೆ ಹೆಚ್ಚು ಸ್ಫುಟವಾಗಿ ಕಾಣಿಸುತ್ತವೆ. ಈ ಶಾಸನದ ಪ್ರಕಾರ, ಇಲ್ಲಿರುವ ಎಲ್ಲ ಪ್ರತಿಮೆಗಳನ್ನೂ ಕೆತ್ತಿಸಿದ ವ್ಯಕ್ತಿ, ಪಂಪನ ತಮ್ಮ ಜಿನವಲ್ಲಭ, ಮೊದಲ ಸಲ ಈ ಶಾಸನವನ್ನು ಪ್ರಕಟಿಸಿದ ವ್ಯಕ್ತಿಗಳು ಗಂಗಾಧರವೆಂಬ ಹಳ್ಳಿಯಿಂದ ಶಾಸನವಿರುವ ಎಡೆಗೆ ನೋಡಲು ಹೋದರಾಗಿ ತಮ್ಮ ಲೇಖನದಲ್ಲವರು ಇದನ್ನು ಗಂಗಾಧರ ಗ್ರಾಮ ಹತ್ತನೆಯ ಶತಮಾನದಲ್ಲಿ ಜೈನಧರ್ಮಿಗಳಿಗೆ ಒಂದು ಕೇಂದ್ರವಾಗಿತ್ತು. ಇದು ಪಂಪನಿಗೆ ಆಶ್ರಯವನ್ನಿತ್ತ ಎರಡನೆಯ ಅರಿಕೇಸರಿಯ ಪ್ರಥಮ ಪುತ್ರನಾದ ವಾಗ್ರಜನಿಗೆ ರಾಜಧಾನಿಯೂ ಆಗಿತ್ತು. ಅವನ ಆಸ್ಥಾನದಲ್ಲಿ ಕವಿಯಾಗಿದ್ದ ಸೋಮದೇವಸೂರಿ ಸಂಸ್ಕøತಕಾವ್ಯವಾದಯಶಸ್ತಿಲಕಚಂಪುವನ್ನು ಗಂಗಾಧರದಲ್ಲಿಯೇ ರಚಿಸಿ ಸಮಾಪ್ತಿಗೊಳಿಸಿದ. ಜೈನಧರ್ಮದ ಕೇಂದ್ರವಾಗಿದ್ದ ಗಂಗಾಧರದ ಹತ್ತಿರವೇ ಬೊಮ್ಮಲಗುಟ್ಟ ಇರುವುದರಿಂದ, ಕುರ್ಕಿಯಲ್ ಗ್ರಾಮ ಅಷ್ಟು ಪುರಾತನವೆಂದು ತೋರುದುದರಿಂದ ಈ ಶಾಸನವನ್ನು ಗಂಗಾಧರ ಶಾಸನ ಎಂದಿರುವಲ್ಲಿ ಔಚಿತ್ಯವಿದೆ. ಕೆಲವರು ಇದನ್ನು ಕುರ್ಕಿಯಾಲ ಶಾಸನವೆಂದೂ ಕರೆದಿದ್ದಾರೆ.

ಈ ಶಾಸನದಲ್ಲಿ 14'5 ಅಂಗುಲ ಅಳತೆಯ ಪಂಕ್ತಿಗಳು ಹತ್ತು ಮತ್ತು 4' ಅಳತೆಯ ಪಂಕ್ತಿ ಒಂದು-ಹೀಗೆ ಒಟ್ಟು ಹನ್ನೊಂದು ಪಂಕ್ತಿಗಳಿವೆ. ಶಾಸನದ ಲಿಪಿ, ಹತ್ತನೆಯ ಶತಮಾನದಲ್ಲಿ ರಾಷ್ಟ್ರಕೂಟ ಹಾಗು ಚಾಳುಕ್ಯರ ನಾಡಿನಲ್ಲೊಂದೆಡೆಯಲ್ಲಿ ಈಗಿನ ತೆಲಂಗಾಣ ಪ್ರದೇಶದಲ್ಲಿ) ಬಳಕೆಯಲ್ಲಿದ್ದ ಕನ್ನಡ-ತೆಲುಗು ಲಿಪಿ. ಅಕ್ಷರಗಳು ಎರಡನೆಯ ಅರಿಕೇಸರಿಯ ವೇಮುಲವಾಡದ ಶಾಸನಾಕ್ಷರಗಳನ್ನು ಹೋಲುತ್ತವೆ. ಕನ್ನಡ, ಸಂಸ್ಕøತ ಮತ್ತು ತೆಲುಗು ಹೀಗೆ ಮೂರು ಭಾಷೆಗಳನ್ನು ಇದರಲ್ಲಿ ಬಳಸಲಾಗಿದೆ. ಧೋರಣೆ ಗದ್ಯ ಪದ್ಯಾತ್ಮಕವಾಗಿದೆ. ಓಂ ನಮಃ ಸಿದ್ದೇಭ್ಯಃ ಎಂಬ ಸಂಸ್ಕøತ ವಾಕ್ಯದಿಂದ ಜೈನರ ಪಂಚಪರಮೇಷ್ಠಿಗಳಲ್ಲೊಬ್ಬರಾದ ಸಿದ್ದರ ಸ್ತುತಿಯೊಂದಿಗೆ ಶಾಸನ ಪ್ರಾರಂಭವಾಗುತ್ತದೆ. ತರುವಾಯ ಒಂದು ದೀರ್ಘ ಕನ್ನಡ ಗದ್ಯ, ಅನಂತರದಲ್ಲಿ ಮೂರು ಸಂಸ್ಕøತ ವೃತ್ತಗಳು (ಎರಡು ಶಾರ್ದೂಲವಿಕ್ರೀಡಿತ, ಒಂದು ಪೃಥ್ವಿ), ಅನಂತರದಲ್ಲಿ ಆರು ಕನ್ನಡವೃತ್ತಗಳು (ನಾಲ್ಕು ಚಂಪಕಮಾಲ, ಒಂದು ಮತ್ತೇಭವಿಕ್ರೀಡಿತ, ಒಂದು ಸರಳ), ತರುವಾಯದಲ್ಲಿ ಮೂರು ತೆಲುಗು ಪದ್ಯಗಳು (ಕಂದಗಳು) ಬಂದು ಕೊನೆಗೊಂದು ಕನ್ನಡದ ಸಣ್ಣ ಗದ್ಯ ಭಾಗವಿದೆ. ಶಿಲ್ಪಿ ಬಹಳ ಜಾಕರೂಕತೆಯಿಂದ ಕೆತ್ತಿದ್ದರೂ ಅಲ್ಲಲ್ಲಿ ಸ್ವಲ್ಪ ತಪ್ಪುಗಳಿವೆ. ತೆಲಗು ಪದ್ಯಗಳಲ್ಲಿ ಅವು ಅಧಿಕ. ಕಾರಣ ಪ್ರಾಯಃ ಶಿಲ್ಪಿಗೆ ತೆಲುಗುಭಾಷೆಯ ಪರಿಚಯವಿಲ್ಲದಿರಬಹುದೆಂದು ತೋರುತ್ತದೆ. ಆದರೂ ತೆಲುಗು ಸಾಹಿತ್ಯಕ್ಕೆ ಇದು ಬಹುಮುಖ್ಯವಾದ ಶಾಸನ. ಏಕೆಂದರೆ. ತೆಲುಗು ಭಾಷೆಯಲ್ಲಿ ಸದ್ಯಕ್ಕೆ ಇಲ್ಲಿನವೇ ಪ್ರಥಮಕಂದಪದ್ಯಗಳು.

ಈ ಶಾಸನ ಜಿನವಲ್ಲಭ ಪ್ರಶಸ್ತಿಯಾದುದರಿಂದ ಇದರಲ್ಲಿ ಆತನ ವಂಶಚರಿತ್ರೆ, ಗುಣಸಂಪತ್ತಿ, ವೈದುಷ್ಯ ಹಾಗೂ ಮತಾಭಿನಿವೇಶನ ಮುಂತಾದ ವಿಷಯಗಳನ್ನು ವರ್ಣಿಸಲಾಗಿದೆ. ವಿವರ ಹೀಗಿದೆ :

ಜಿನವಲ್ಲಭ ವೆಂಗಿನಾಡ ಸಪ್ತಗ್ರಾಮಗಳೊಳಗಣ ವಂಗಿಪ ಕಮ್ಮೆ ಬ್ರಾಹ್ಮಣ ಜಮದಗ್ನಿ ಪಂಚಾರ್ಷೇಯ ಶ್ರೀವತ್ಸ ಗೋತ್ರದಲ್ಲಿ ಹುಟ್ಟಿದ ಗುಂಡಿಕ ನಿಡುಂಗೊಂಡೆಯ ಅಭಿಮಾನಚಂದ್ರನ ಮೊಮ್ಮಗನಾದ ಭೀಮಪ್ಪಯ್ಯನಿಗೆ ಬೆಳ್ವೊಲದಣ್ಣಿಗೆರೆಯ ಜೋಯಿಸಸಿಂಘನ ಮೊಮ್ಮಗಳಾದ ಅಬ್ಬಣಬ್ಬೆಯ ಉದರದಲ್ಲಿ ಜನಿಸಿದಾತ. ಕೊಂಡಕುಂದೆಯ ದೇಸಿಯಗಣದ ಪುಸ್ತಕ ಗಚ್ಛಕ್ಕೆ ಸೇರಿದ ಪಂಡರಂಗವಲ್ಲಿಯ ಜಯಣಂದಿ ಸಿದ್ದಾಂತ ಭಟಾರರ ಶಿಷ್ಯ. ಸಬ್ಬಿನಾಡ ನಟ್ಟನಡುವಿದ್ದ ಧರ್ಮಪುರದ ಉತ್ತರ ದಿಗ್ಭಾಗದಲ್ಲಿದ್ದ ವೃಷಭಗಿರಿಯಲ್ಲಿ ಅನಾದಿಕಾಲದಿಂದ ತೀರ್ಥಸ್ಥಳವೆಂದು ಪ್ರಸಿದ್ಧವಾದ ಆ ಪರ್ವತ ದಕ್ಷಿಣ ದಿಶಾಭಾಗದ ಸಿದ್ಧಶಿಲೆಯಲ್ಲಿ ತಮ್ಮ ಕುಲದೈವವೇ ಮೊದಲಾದ ದೇವತೆಗಳನ್ನೂ ಜಿನಬಿಂಬಗಳನ್ನು ಚಕ್ರೇಶ್ವರಿಯನ್ನೂ ಆಕೆಯ ಅಕ್ಕಪಕ್ಕದಲ್ಲಿ ಇನ್ನೂ ಕೆಲವು ಪ್ರತಿಮೆಗಳನ್ನೂ ಈತ ಕೆತ್ತಿಸಿದ. ತ್ರಿಭುವನ ತಿಲಕವೆಂಬ ಜಿನಬಸದಿಯನ್ನು ಕಟ್ಟಿಸಿದ. ಕವಿತಾಗುಣಾರ್ಣವವೆಂಬ ಕೆರೆಯನ್ನೂ ಮದನವಿಳಾಸವೆಂಬ ವನವನ್ನೂ ಮಾಡಿಸಿದ. ಅಣ್ಣ ಅಗ್ರಹಾರವಾಗಿ ಪಡೆದ ಧರ್ಮಪುರವನ್ನೂ ಅದರ ಹತ್ತಿರದ ವೃಷಭಗಿರಿಯಲ್ಲಿ ನಡೆಯುವ ಜೈನಾಭೀಷೇಕೋತ್ಸವವನ್ನೂ ನೋಡಲು ಬರುತ್ತಿದ್ದ ಯಾತ್ರಾರ್ಥಿಗಳಿಗೆ ಸನ್ಮಾನದಾನಗಳನ್ನು ಭೀಮನ ತನುಜನೂ ಪಂಪನ ಅನುಜನೂ ಆದ ಜಿನವಲ್ಲಭ ಮಾಡುತ್ತಿದ್ದ. ಈತ ಸಮ್ಯಕ್ತ್ವರತ್ನಾಕರ, ಗುಣಪಕ್ಷಪಾತಿ; ಚತುರ ಕವಿತ್ವರಚನೆಯಲ್ಲಿ ಸುಪ್ರಸಿದ್ಧ. ಮತ್ತೆ ಕಾವ್ಯವನ್ನು ವಿವರಿಸುವಲ್ಲಿ, ಸತ್ಪುರುಷರಿಗೆ ಕಾವ್ಯವನ್ನು ಹೇಳಿಕೊಡುವಲ್ಲಿ, ಸುಶ್ರಾವ್ಯವಾಗಿ ಸಂಗೀತವನ್ನು ಹೇಳುವಲ್ಲಿ, ಸರಾಗವಾಗಿ ಕಾವ್ಯವನ್ನು ವಾಚಿಸುವಲ್ಲಿ ಸಾಟಿಯಿಲ್ಲವೆನಿಸಿ ವಾಗ್ವಧೂವರವಲ್ಲಭನೆಂದು ಕೀರ್ತಿತನಾಗಿದ್ದವ.

ಜೈನಮತದಲ್ಲಿ ಅತೀವ ಶ್ರದ್ಧೇಯುಳ್ಳ ಜಿನವಲ್ಲಭ ಜಿನವಲ್ಲಭವನಗಳನ್ನು ನಿರ್ಮಿಸಿ ದ್ವಿಜರಿಗೆ ಆವಾಸಸ್ಥಾನವಾದ ಆ ದಕ್ಷಿಣ ವೃಷಭಾದ್ರಿಯ ಮೇಲೆ ಜಿನಬಿಂಬಗಳನ್ನೂ ಜೈನ ದೇವತೆಗಳನ್ನು ಕೆತ್ತಿಸಿ ಅದನ್ನೊಂದು ಚೈತ್ರ್ಯಾಲಯದ ಹಾಗೆ ಮಾಡಿಸಿದ. ಪಂಪ ಆ ಧರ್ಮಪುರವನ್ನು ದತ್ತಿಯಾಗಿ ಪಡೆದಿದ್ದನೆನ್ನುವ ವಿಷಯವನ್ನು ಪ್ರತಿನಿಧಿಸುವ ಪ್ರತೀಕಗಳಾಗಿ ಅವು ಮೆರೆದವು. ವೃಷಭಾದ್ರಿ ಜಿನಧರ್ಮದೊಂದಿಗೆ ನೃಪಕುಲತಿಲಕ ಅರಿಕೇಸರಿ ಹಾಗೂ ಕವಿಕುಲ ತಿಲಕ ಕವಿತಾಗುಣರ್ಣವ ಪಂಪ-ಇವುರುಗಳ ಬಿರುದುಗಳನ್ನೂ ಹೊತ್ತು ನಿಂತಿತು.

ಶಾಸನ ಮತ್ತು ವಿಕ್ರಮಾರ್ಜುನ ವಿಜಯಗಳ ವಂಶಾವಳಿ ಹೀಗಿದೆ :ಶಾಸನ ಹಾಗೂ ಪಂಪನಕೃತಿಯ ವಿವರಗಳನ್ನು ತುಲನಾತ್ಮಕವಾಗಿ ವಿಮರ್ಶೆಗೆ ಇಟ್ಟರೆ ವ್ಯಕ್ತವಾಗುವ ಅಂಶಗಳಿವು: 1) ಪಂಪನ ಅಜ್ಜನಾದ ಅಭಿಮಾನಚಂದ್ರನೇ ಜೈನ. ಆತ ಗುಂಡಿಕ ನಿಡುಂಗೊಂಡೆಯ ವಾಸ್ತವ್ಯನೆಂಬುದು. 2) ಪಂಪನ ತಾಯಿ ಅಬ್ಬಣಬ್ಬೆ, ಬೆಳ್ವೊಲದ ಅಣ್ಣಿಗೆರೆಯ ಜೋಯಿಸಸಿಂಘನೆಂಬುವನ ಮೊಮ್ಮಗಳೆಂಬುದು. 3) ಪಂಪ ದತ್ತಿಯಾಗಿ ಪಡೆದ ಅಗ್ರಹಾರವಾದ ಧರ್ಮಪರ ಸಬ್ಬಿನಾಡ ನಟ್ಟನಡವೆ ಇದ್ದಿತೆಂಬುದಲ್ಲದೆ ಅದು ಈಗಿನ ಬೊಮ್ಮಲಗುಟ್ಟದ ಪಕ್ಕದಲ್ಲೆಲ್ಲೊ ಇದ್ದಿತೆಂಬುದು. 4) ಪಂಪನಿಗೆ ಅರಿಕೇಸರಿ ಹಾಕಿಕೊಟ್ಟ ಶಾಸನ ಶಿಲಾಶಾಸನವಾಗಿದ್ದ ಅದು ವೃಷಭಾದ್ರಿಯಲ್ಲಿ ಇದ್ದಿತೆಂಬುದು. ಇತ್ಯಾದಿಗಳು ಹೊಸವಿಷಯಗಳು.

1) ಗುರುಪರಂಪರೆಯಲ್ಲಿ ದೇವೇಂದ್ರ ಮುನಿಗಳ ಹೆಸರಿಲ್ಲದುದು. 2) ಪಂಪನ ಕೃತಿ ಆದಿಪುರಾಣ ಹೆಸರಿಲ್ಲದುದು. 3) ಅಜ್ಜಂದಿರಾದ ಮಾಧವ ಸೋಮಯಾಜಿ ಹಾಗೂ ಕೊಮರಯ್ಯ ಇವರುಗಳು ಹೆಸರಿಲ್ಲದೆ ಇರುವುದು. 4) ಪಂಪನ ಜೀವನಕ್ಕೆ ಸಂಬಂಧಿಸಿದ ವಿಷಯಗಳ ಬಗೆಗೆ ಆತನ ಇತರ ಬಿರುದುಗಳು ಬಗೆಗೆ ಒಂದಕ್ಷರವೂ ಇಲ್ಲದುದು-ಇತ್ಯಾದಿಗಳು ಇಲ್ಲಿನ ಲೋಪಗಳು.

ಈ ಶಾಸನವನ್ನು ಮೊದಲ ಬಾರಿ ಪ್ರಕಟಿಸಿದ ವಿದ್ವಾಂಸರು ಪಂಪನ ಅಥವಾ ಜಿನವಲ್ಲಭ ತಾಯಿಯ ಹೆಸರು ವಬ್ಬಣಬ್ಬೆ ಎಂದೂ ಆಕೆ ಜೋಯಿಸ ಸಿಂಘನ ಮಗಳೆಂದೂ ಜಿನವಲ್ಲಭ ಗುರುಗಳು ಜಯಗೊಂಡ ಸಿದ್ದಾಂತ ಭಟಾರರೆಂದೂ ಓದಿದ್ದರು. ಆದರೆ ಆಕೆಯ ಹೆಸರು. ಅಬ್ಬಣಬ್ಬೆ ಎಂದು ಪಿ.ಬಿ. ದೇಸಾಯಿವರೂ ಆಕೆ ಜೋಯಿಸಸಿಂಘನ ಮೊಮ್ಮಗಳೆಂದು ಎಂ.ಎಂ.ಕಲ್ಬುರ್ಗಿಯವರೂ ಆತನ ಗುರು ಜಯಣನ್ದಿಸಿದ್ಧಾಂತ ಭಟಾರರೆಂದು ಜಿ.ಎಸ್.ಗಾಯಿ ಅವರೂ ತೀರ್ಮಾನಿಸಿಕೊಟ್ಟಿದ್ದಾರೆ. ಜಿನವಲ್ಲಭ ತಾನು ಪಂಪನ ತಮ್ಮನೆಂದು ಸ್ಪಷ್ಟ ಹೇಳಿಕೊಂಡಿರುವುದರಿಂದ ಆತನ ವಂಶಾವಳಿ ಪಂಪನ ವಂಶಾವಳಿಗೆ ಸರಿಹೋಗುವದರಿಂದ ಆತನ ಈ ಗಂಗಾಧರ ಶಾಸನ ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬನಾದ ಪಂಪನ ಚರಿತ್ರೆಯನ್ನು ಬರೆಯುವಲ್ಲಿ ಅತ್ಯಮ್ಯೂಲ್ಯವಾದ ಸಾಧನವಾಗಿದ್ದು ಸುಮಾರು ಒಂದು ಸಾವಿರ ವರ್ಷ ತಿಳಿಯದಿದ್ದ ವಿಷಯವನ್ನು ತಿಳಿಸಿ ಹೊಸಬೆಳಕನ್ನು ಚೆಲ್ಲಿದೆ. ಈ ಶಾಸನವನ್ನು ಇತ್ತೀಚಿಗೆ ಭಾರತ ಸರ್ಕಾರ ರಾಷ್ಟ್ರೀಯ ಸ್ಮಾರಕಗಳಲ್ಲೊಂದೆಂದು ನಿರ್ಧರಿಸಿದೆ. (ಎಸ್.ಎಸ್.ಜೆಎ.)