ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಟ್ಟಿಗಣ್ಣು (ಗ್ಲೊಕೊಮಾ)

ವಿಕಿಸೋರ್ಸ್ದಿಂದ

ಗಟ್ಟಿಗಣ್ಣು (ಗ್ಲೊಕೊಮಾ)

ಗ್ಲೊಕೋಮಾ ಕಣ್ಣಿನ ಒಂದು ಗಂಭೀರವಾದ ಕಾಯಿಲೆ. ಸ್ಥೂಲವಾಗಿ ಹೇಳುವುದಾದರೆ ಇದರಲ್ಲಿ ಕಣ್ಣಿನ ಒಳಗಿನ ಒತ್ತಡ ಹೆಚ್ಚಾಗುತ್ತದೆ. ಈ ಕಾಯಿಲೆ ಗಂಭೀರವಾಗಲು ಕಾರಣವೇನೆಂದರೆ ಹೆಚ್ಚಿನ ಸಂದರ್ಭಗಳಲ್ಲಿ ಈ ಕಾಯಿಲೆಯ ಇರುವು ಗೊತ್ತಾಗುವ ಹೊತ್ತಿಗೆ ಕಣ್ಣಿನ ನರವಾದ ಆಪ್ಟಿಕ್ ನರಕ್ಕೆ ಬಹಳಷ್ಟು ತೊಂದರೆ ಉಂಟಾಗಿರುತ್ತದೆ. ಅಲ್ಲದೇ ಕಾಯಿಲೆಯಿಂದ ಹಾಳಾದ ನರವನ್ನು ಮತ್ತೆ ಪುನಶ್ಚೇತನಗೊಳಿಸಲು ಸಾಧ್ಯವಿಲ್ಲ. ಹಾಗಾಗಿ ಈ ಕಾಯಿಲೆಯಿಂದ ನಾಶವಾದ ದೃಷ್ಟಿ ಮತ್ತೇ ಪುನಃ ಬರುವ ಸಾಧ್ಯತೆ ಇಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ನೋವು ವೇದನೆ ಇಲ್ಲದಿರುವುದರಿಂದ ರೋಗಿ ಕಣ್ಣಿನ ಪೊರೆ ಎಂದು ತಿಳಿದು ವೈದ್ಯರಲ್ಲಿ ಬರುವುದನ್ನು ಮುಂದೆ ಹಾಕುತ್ತಾನೆ.

ಸಮಸ್ಯೆಯ ಅಗಾಧತೆ

ನಮ್ಮ ದೇಶದಲ್ಲಿ ಗ್ಲೊಕೊಮಾದ ಸಮಸ್ಯೆ ಹೆಚ್ಚಿರಲು ಕಾರಣ ಬಡತನ. ಅಜ್ಞಾನ ಮತ್ತು ಅಸಮರ್ಪಕ ಆರೋಗ್ಯ ವ್ಯವಸ್ಥೆ. ಒಂದು ಅಂದಾಜಿನ ಪ್ರಕಾರ ಕಣ್ಣಿನ ಆಸ್ಪತ್ರೆಗೆ ಭೇಟಿ ಕೊಡುವ ಪ್ರತಿ ಹತ್ತರಲ್ಲಿ ಒಬ್ಬರಿಗೆ ಗ್ಲೊಕೊಮಾ ಇದೆ ಮತ್ತು ನೂರರಲ್ಲಿ ಒಬ್ಬರು ಈ ಕಾಯಿಲೆಯಿಂದ ಅಂಧರಾಗುತ್ತಾರೆ. ನಮ್ಮ ದೇಶದ ವಿವಿಧ ಭಾಗಗಳಲ್ಲಿ ಕೈಗೊಂಡ ಸಮೀಕ್ಷೆಯ ಪ್ರಕಾರ ಗ್ಲೊಕೊಮಾವು 14-25% ಸಂದರ್ಭಗಳಲ್ಲಿ ಕಾರಣವಾಗಿರುತ್ತದೆ. ಆದರೆ ಮುಂದುವರಿದ ದೇಶಗಳಾದ ಅಮೆರಿಕ, ಇಂಗ್ಲೆಂಡ್‍ಗಳಲ್ಲಿ ಈ ಪ್ರಮಾಣ 12-13%.

ದೇಹದಲ್ಲಿ ರಕ್ತ ಒತ್ತಡ ಇರುವ ಹಾಗೆಯೇ ಕಣ್ಣಿಗೂ ಒಂದು ನಿರ್ದಿಷ್ಟ ಒತ್ತಡ ಇರುತ್ತದೆ. ಸಾಮಾನ್ಯವಾಗಿ ಕಣ್ಣಿನ ಒತ್ತಡ 10ರಿಂದ 20 ಮಿಮೀ(ಪಾದರಸ) ಇರುತ್ತದೆ. ಈ ಅಂಕಿಗಿಂತ ಒತ್ತಡ ಹೆಚ್ಚಾದಾಗ ಗ್ಲೊಕೊಮಾ ಇರಬಹುದೇ ಎಂದು ನೇತ್ರವೈದ್ಯ ಅನುಮಾನಿಸುವುದು ಸಹಜ. ಕಣ್ಣಿನ ಒತ್ತಡ ಒತ್ತಡಮಾಪಕ ಯಂತ್ರದಿಂದ ಅಳೆಯಲ್ಪಡುತ್ತದೆ. ಗ್ಲೊಕೊಮಾದ ಪ್ರಮುಖ ವಿಧಗಳು

ತೆರೆದ ಕೋನದ ಗ್ಲೊಕೊಮಾ. 2.ಸಂಕುಚಿತ ಕೋನದ ಗ್ಲೊಕೊಮಾ. 3.ಜನನಾಗತ ಗ್ಲೊಕೊಮಾ ತೆರೆದ ಕೋನ್ ಗ್ಲೊಕೊಮಾ :

ಸಾಮಾನ್ಯವಾಗಿ ಹೆಂಗಸರು, ಗಂಡಸರು ಇಬ್ಬರಲ್ಲಿಯೂ ಭೇದವಿಲ್ಲದೆ ಕಾಣಿಸಿಕೊಳ್ಳುವ ಈ ಗ್ಲೊಕೊಮಾ ಹೆಚ್ಚಾಗಿ ಕಾಣಿಸಿಕೊಳ್ಳುವ ವಯಸ್ಸು 60 ರಿಂದ 70 ವರ್ಷಗಳು. ನಮ್ಮ ದೇಶದಲ್ಲಿ ಬೇರೆ ಎಲ್ಲಾ ವಿಧಗಳ ಗ್ಲೊಕೊಮಾಗಳಿಗಿಂತ ಈ ವಿಧದ ಗ್ಲೊಕೋಮಾ ಹೆಚ್ಚಿನವರಲ್ಲಿ ಕಾಣಿಸಿಕೊಳ್ಳುತ್ತದೆ. ಇದರ ಪ್ರಾಮುಖ್ಯತೆ ಹೆಚ್ಚಾಗಲು ಕಾರಣ: ಹೆಚ್ಚಿನ ಯಾವ ಲಕ್ಷಣಗಳೂ ಇಲ್ಲದೆ ಇದು ಕಾಣಿಸಿಕೊಳ್ಳುವುದರಿಂದ ರೋಗವಿದೆಯೆಂದು ಗೊತ್ತಾಗುವ ಸಮಯಕ್ಕೆ ಅದು ಆಪ್ಟಿಕ್ ನರಕ್ಕೆ ಬಹಳಷ್ಟು ಹಾನಿಯನ್ನು ಉಂಟುಮಾಡಿರುತ್ತದೆ. ರೋಗಿಯು ಮುಖ್ಯವಾಗಿ ಅನುಭವಿಸುವ ಲಕ್ಷಣಗಳೆಂದರೆ ಕಣ್ಣು ಮಂಜಾಗುವಿಕೆ, ಓದುವುದು, ಹತ್ತಿರದ ಕೆಲಸ ಕಷ್ಟವಾಗುವುದು, ಪದೇ ಪದೇ ಕನ್ನಡಕ ಬದಲಾವಣೆ ಮಾಡುವ ಅಗತ್ಯ ಮತ್ತು ದೃಷ್ಟಿಯ ಕ್ಷೇತ್ರದಲ್ಲಿ ಆಗುವ ವ್ಯತ್ಯಾಸಗಳು. ಒಟ್ಟಿನಲ್ಲಿ ಹೇಳುವುದಾದರೆ ಈ ರೀತಿಯ ಗ್ಲೊಕೊಮಾ ರೋಗಿಗೆ ತನ್ನ ಇರವು ಗೊತ್ತಾಗುವ ಮೊದಲೇ ಹೆಚ್ಚಿನ ಸಂದರ್ಭಗಳಲ್ಲಿ ಒಂದು ಕಣ್ಣಿನ ನರವನ್ನು ಭಾಗಶಃ ಅಥವಾ ಸಂಪೂರ್ಣನಾಶ ಮಾಡುವುದಲ್ಲದೆ, ಮತ್ತೊಂದು ಕಣ್ಣಿನಲ್ಲಿಯೂ ಸ್ವಲ್ಪ ಪ್ರಮಾಣದ ನಾಶವನ್ನು ಉಂಟುಮಾಡಿರುತ್ತದೆ. ತಡವಾಗಿ ಗೊತ್ತಾಗಲು ಇನ್ನೊಂದು ಕಾರಣವೆಂದರೆ ರೋಗಿಯ ದೃಷ್ಟಿಯ ಮಧ್ಯಭಾಗದ ಕ್ಷೇತ್ರವು, ನರವು ಸಂಪೂರ್ಣ ನಾಶವಾಗುವವರೆಗೂ ಉಳಿದಿರುತ್ತದೆ. ಆದ್ದರಿಂದ ಈ ರೀತಿಯ ಗ್ಲೊಕೊಮಾ ಆದಷ್ಟು ಬೇಗ ಪತ್ತೆ ಹಚ್ಚಲ್ಪಡುತ್ತದೆ. ರೋಗ ಪತ್ತೆ ಹಚ್ಚಲು ಸಹಾಯಕವಾಗುವ ಮುಖ್ಯ ಅಂಶಗಳು :1.ಕಣ್ಣಿನ ಒಳಗಿನ ಒತ್ತಡ, 2.ಆಪ್ಟಿಕ್ ಚಕ್ರದ ಬದಲಾವಣೆಗಳು, 3.ದೃಷ್ಟಿಯ ಕ್ಷೇತ್ರದ ವ್ಯತ್ಯಾಸಗಳು. ವಿವಿಧ ರೀತಿಯ ಕಾಣದಿರುವ ಜಾಗಗಳು, ದೃಷ್ಟಿಯ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವುದು (ಅಂದರೆ ಕಣ್ಣಿನ ನರದ ಯಾವುದೋ ಒಂದು ನಿರ್ದಿಷ್ಟವಾದ ಭಾಗ ದೃಷ್ಟಿ ನಾಶ ಹೊಂದಿದೆ ಎಂದರ್ಥ) ಆಪ್ಟಿಕ್ ನರದಿಂದ ಉಂಟಾದ ಎಲ್ಲರಲ್ಲಿಯೂ) ಇರುವ ಕಾಣದಿರುವ ಜಾಗವು ವಿಸ್ತಾರವಾಗುವುದು, ದೃಷ್ಟಿಯ ಕ್ಷೇತ್ರದ ಪ್ರಮಾಣ ಕ್ರಮೇಣ ಕಿರಿದಾಗುತ್ತಾ ಬರುವುದು. ಇಲ್ಲಿ ಒತ್ತಡ ಯಾವ ಕಾರಣದಿಂದ ಹೆಚ್ಚಾಗುತ್ತದೆ ಎಂಬ ಅಂಶ ನಿರ್ದಿಷ್ಟವಾಗಿ ಗೊತ್ತಿಲ್ಲ. ಬಹುಶಃ ಏಕ್ವಿಯಸ್ ದ್ರವವು ಹೊರಹೋಗಿ ರಕ್ತಕ್ಕೆ ಹೀರಲ್ಪಡುವ ಮೊದಲು ಅದು ಹೊರ ಹೋಗುವ ಭಾಗದಲ್ಲಿ ಕಂಡುಬರುವ ವಿರೋಧದಿಂದ ಒತ್ತಡ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.

ಚಿಕಿತ್ಸೆ : ಔಷಧಗಳಾದ ಪೈಲೋಕಾರ್, ಎಪಿರಿನ್, ಟಿಮೋಲಾಲ್‍ಗಳನ್ನು ಉಪಯೋಗಿಸಬಹುದಾದರೂ ಇವುಗಳನ್ನು ಜೀವನ ಪರ್ಯಂತ ಉಪಯೋಗಿಸಬೇಕಾದ್ದರಿಂದ ವೆಚ್ಚದ ದೃಷ್ಟಿಯಿಂದ ಮತ್ತು ಅನುಕೂಲದ ದೃಷ್ಟಿಯಿಂದ ಶಸ್ತ್ರಕ್ರಿಯೆಯನ್ನು ಮಾಡಿ ಒತ್ತಡವನ್ನು ಕಡಿಮೆ ಮಾಡಬೇಕಾಗುತ್ತದೆ. ಸಂಕುಚಿತ ಕೋನದ ಗ್ಲೊಕೊಮಾ

ಮೇಲೆ ತಿಳಿಸಿದ ಗ್ಲೊಕೊಮಾಗೆ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳುವ ಈ ರೀತಿಯ ಗ್ಲೊಕೊಮಾವು ಹೆಚ್ಚಾಗಿ ಹೆಂಗಸರಲ್ಲಿ ಮಾನಸಿಕ ಒತ್ತಡ ಜಾಸ್ತಿ ಇರುವವರಲ್ಲಿ ಚಿಂತೆ ಹೆಚ್ಚು ಮಾಡುವವರಲ್ಲಿ ಕಾಣಿಸಿಕೊಳ್ಳುತ್ತದೆ. ಸಾಮಾನ್ಯ 50-60 ವರ್ಷಗಳ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುವ ಇದರಲ್ಲಿ ಮೊದಲು ಕಣ್ಣು ಸ್ವಲ್ಪ ಮಂಜಾಗುತ್ತದೆ. ಬೆಳಕಿನ ಸುತ್ತ ಬಣ್ಣ ಬಣ್ಣದ ಚಕ್ರಗಳು ಕಾಣಿಸುತ್ತವೆ. ಕೆಲವೊಮ್ಮೆ ತಲೆನೋವು ಬರುತ್ತದೆ ಎಂದು ಶುರುವಾಗಿ ನಂತರ ಒಂದು ದಿನ ಇದ್ದಕ್ಕಿದ್ದ ಹಾಗೇ ಕಣ್ಣಿನಲ್ಲಿ ವಿಪರೀತ ನೋವು, ಕಣ್ಣು ಒಂದೇ ಸಾರಿ ಕಾಣುವುದಿಲ್ಲ. ಮಿತಿ ಮೀರಿದ ತಲೆನೋವು, ವಾಂತಿ ಎಂದು ರೋಗಿಯು ವೈದ್ಯರಲ್ಲಿ ಬಂದಾಗ ವಿವರವಾದ ಪರೀಕ್ಷೆಯಿಂದ ಗೊತ್ತಾಗುವ ಅಂಶ ಕಣ್ಣು ಕೆಂಗಣ್ಣು ಆಗಿರುವುದು. ಕಣ್ಣಿನ ದೃಷ್ಟಿ ಬಹಳವಾಗಿ ಕಡಿಮೆಯಾಗಿರುವುದು. ಆಗ ಸರಿಯಾದ ಚಿಕಿತ್ಸಾ ಕ್ರಮ ಕೈಗೊಳ್ಳದಿದ್ದರೆ, ಕಣ್ಣು ಸಂಪೂರ್ಣ ಅಂಧತ್ವ ಹೊಂದುವ ಸಾಧ್ಯತೆಯಿದೆ. ಈ ರೀತಿಯ ಗ್ಲೊಕೊಮಾದಲ್ಲಿ ಕಣ್ಣಿನ ಒತ್ತಡ ಹೆಚ್ಚಾಗಲು ಕಾರಣ ಏಕ್ಷಿಯಸ್ ದ್ರವವು ಹಿಂಭಾಗದ ಗೂಡಿನ ಭಾಗದಿಂದ ಮುಂಭಾಗದ ಗೂಡಿನ ಭಾಗಕ್ಕೆ ಹೋಗುವ ಜಾಗದಲ್ಲಿ ಉಂಟಾಗುವ ಅಡಚಣೆ.

ಚಿಕಿತ್ಸೆ : ಇದರ ಚಿಕಿತ್ಸೆ ಕೊನೆಯಲ್ಲಿ ಶಸ್ತ್ರಕ್ರಿಯೆಯೇ ಸರಿ. ಆದರೆ ಒತ್ತಡ ಹೆಚ್ಚಾಗಿದ್ದಾಗ ಅದನ್ನು ಕಡಿಮೆ ಮಾಡಲು ಔಷಧಿಗಳಾದ ಪೈಲೋಕಾರ್, ಅಸಟಚೋಲಮೈಡ್ ಮಾತ್ರೆಗಳು, ಮ್ಯಾನಿಟಾಲ್ ಇಂಜೆಕ್ಷನ್ ಇತ್ಯಾದಿ. ಶಸ್ತ್ರಕ್ರಿಯೆಯಿಂದ ಹಿಂಭಾಗದ ಮತ್ತು ಮುಂಭಾಗದ ಗೂಡುಗಳ ಮಧ್ಯೆ ಏಕ್ವಿಯಸ್ ದ್ರವವು ಚಲಿಸಲು ಹೊಸ ದಾರಿಯನ್ನು ಮಾಡುವುದು.

ಜನನಾಗತ ಗ್ಲೊಕೊಮಾ (ಗೂಳಿಕಣ್ಣು)

ಮಗು ಜನಿಸುವ ಮೊದಲೇ ಬೆಳವಣಿಗೆಯ ಹಂತದಲ್ಲಿರುವಾಗ ಮುಂಭಾಗದ ಗೂಡಿನ ಕೋನದ ಭಾಗದಲ್ಲಿ ಕೆಲವು ಅಂಗಾಂಶಗಳ ಕೊರತೆಯಿಂದ ಏಕ್ವಿಯಸ್ ದ್ರವದ ಚಲನೆಗೆ ಉಂಟಾಗುವ ತೊಂದರೆಯಿಂದ ಕಣ್ಣಿನ ಒತ್ತಡವು ಹೆಚ್ಚಾಗುತ್ತದೆ. ಹೆಚ್ಚಾದ ಒತ್ತಡವು ಕಣ್ಣಿನ ಎಲ್ಲಾ ಭಾಗಗಳ ಮೇಲೆ ತನ್ನ ಪ್ರಭಾವ ಬೀರುವುದರಿಂದ ಮತ್ತು ಕಣ್ಣಿನ ಹೊರಗಿನ ಕವಚಗಳು ಬಹಳ ತೆಳುವಾಗಿರುವುದರಿಂದ ಆ ಇಡೀ ಕಣ್ಣೇ ದೊಡ್ಡದಾಗಿ ಮಗುವಿನ ಕಣ್ಣು `ಗೂಳಿಕಣ್ಣು ಕಾಣುವ ಹಾಗೆ ಕಾಣುವುದರಿಂದ ಇದಕ್ಕೆ ಈ ಹೆಸರು.

ಚಿಕಿತ್ಸೆ : ಮಾಡುವುದು ಕಠಿಣ. ಆದರೂ ಶಸ್ತ್ರಕ್ರಿಯೆಯ ಮೂಲಕ ಪ್ರಯತ್ನಿಸಬಹುದು. ಹೀಗೆ ದೃಷ್ಟಿಗೆ ಮಾರಕವಾದ `ಗ್ಲೊಕೊಮಾವು ಅತೀ ಬೇಗ ಪತ್ತೆ ಹಚ್ಚಲ್ಪಡಬೇಕು ಮತ್ತು ಚಿಕಿತ್ಸೆಯನ್ನು ತೀವ್ರ ರೀತಿಯಲ್ಲಿ ಕೈಗೊಳ್ಳಬೇಕು.

ಮೇಲಿನ ವಿಧಗಳಲ್ಲದೆ, ಕಣ್ಣಿನ ವಿವಿಧ ಅಂಗಗಳ ಕಾಯಿಲೆಗಳ ಕಾರಣದಿಂದ ಅಥವಾ ದೈಹಿಕವಾಗಿ ಇರುವ ಕೆಲವು ಕಾಯಿಲೆಗಳ ಕಾರಣದಿಂದಲೂ ಗ್ಲೊಕೊಮಾ ಕಾಣಿಸಿಕೊಳ್ಳಬಹುದು. ಇವುಗಳ ಚಿಕಿತ್ಸೆ ಎಂದರೆ ಗ್ಲೊಕೊಮಾಕ್ಕೆ ಕಾರಣವಾದ ಮೂಲ ಕಾಯಿಲೆಗಳ ಚಿಕಿತ್ಸೆ.

ಪರಿಷ್ಕರಣೆ: ಡಾ|| ಎಚ್. ಎಸ್. ಮೋಹನ್