ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಮೆಲ್ಲಿ, ಕರೇರಿ

ವಿಕಿಸೋರ್ಸ್ದಿಂದ

ಗಮ್ಮೆಲ್ಲಿ, ಕರೇರಿ 1651-1725. ಇಟಲಿಯ ಕಾನೂನು ಪಂಡಿತ, ಔರಂಗ್ಜೇಬನ ಕಾಲದಲ್ಲಿ ಭಾರತಕ್ಕೆ ಭೇಟಿ ಕೊಟ್ಟ ವಿದೇಶಿ ಪ್ರವಾಸಿಗಳಲ್ಲೊಬ್ಬ. ಟ್ಯೂರಿನೋವ್ ನಗರದಲ್ಲಿ 1651ರಲ್ಲಿ ಈತ ಜನಿಸಿದ. ಸಂಸಾರದಲ್ಲಿ ತೊಂದರೆಗಳಿಗೆ ಒಳಗಾಗಿ ಮನೆ ಬಿಟ್ಟು ಪ್ರವಾಸ ಕೈಗೊಂಡ. ತುರ್ಕಿ ಮತ್ತು ಪರ್ಷಿಯಗಳ ಮೂಲಕ 1693ರಲ್ಲಿ ಭಾರತಕ್ಕೆ ಬಂದ ಈತ ಸುಮಾರು ಆರು ತಿಂಗಳು ಇಲ್ಲಿ ಸಂಚರಿಸಿದ. ದಾಮನ್, ಡಿಯೂ, ಸೂರತ್, ಬಸ್ಸೇನ್, ಕನ್ಹೇರಿ, ಸಾಲ್ಸೆಟ್ ಮತ್ತು ಗೋವಗಳನ್ನು ಸಂದರ್ಶಿಸಿ, ಬಿಜಾಪುರದ ಬಳಿಯ ಗಲ್ಗಲಾ ಎಂಬ ಸ್ಥಳಕ್ಕೆ ಪ್ರಯಾಣ ಹೊರಟು ಅಲ್ಲಿ ತಂಗಿದ್ದ ಔರಂಗ್ಜೇಬನ ಶಿಬಿರ ತಲಪಿದ. ಮಾರ್ಚ್ 21ರಂದು ಚಕ್ರವರ್ತಿ ಔರಂಗ್ಜೇಬನನ್ನು ಭೇಟಿ ಮಾಡಿದ. ಈತ ಭಾರತಕ್ಕೆ ಬಂದ ಉದ್ದೇಶವೇನೆಂದೂ ಇವನಿಗೆ ಮೊಗಲರ ಸರ್ಕಾರದಲ್ಲಿ ಸೇವೆ ಸಲ್ಲಿಸುವ ಆಸಕ್ತಿಯಿದೆಯೇ ಎಂದೂ ಚಕ್ರವರ್ತಿ ಇವನನ್ನು ಕೇಳಿದ. ತಾನು ಏಷ್ಯದ ಪ್ರಬಲ ಚಕ್ರವರ್ತಿಯನ್ನೂ ಆತನ ವೈಭವವನ್ನೂ ನೋಡಲು ಮಾತ್ರ ಬಂದಿದ್ದುದಾಗಿ ಗಮೆಲ್ಲಿ-ಕರೇರಿ ಔರಂಗ್ಜೇಬನಿಗೆ ತಿಳಿಸಿದ. ಹಂಗರಿಯಲ್ಲಿ ತುರ್ಕರಿಗೂ ಐರೋಪ್ಯರಿಗೂ ನಡೆಯುತ್ತಿದ್ದ ಯುದ್ಧದ ಬಗ್ಗೆ ಔರಂಗ್ಜೇಬ್ ಅನೇಕ ಪ್ರಶ್ನೆಗಳನ್ನು ಹಾಕಿ ಅವನಿಂದ ಉತ್ತರ ಪಡೆದ. ಅಲ್ಲಿಗೆ ಅವರ ಭೇಟಿ ಮುಕ್ತಾಯವಾಯಿತು. ಗಮೆಲ್ಲಿ-ಕರೇರಿ ಔರಂಗ್ಜೇಬನ ಆಸ್ಥಾನದ ವೈಭವವನ್ನು ವರ್ಣಿಸಿದ್ದಾನೆ. ಎಪ್ಪತ್ತೆಂಟು ವರ್ಷಗಳ ವೃದ್ಧನಾದರೂ ಔರಂಗ್ಜೇಬ್ ಕನ್ನಡಕದ ಸಹಾಯವಿಲ್ಲದೆ ಎಲ್ಲ ಪತ್ರಗಳನ್ನೂ ನೋಡಿ ಅವಕ್ಕೆ ಸಹಿ ಹಾಕುತ್ತಿದ್ದನೆಂದು ಕರೇರಿ ಬರೆಯುತ್ತಾನೆ. ಉತ್ಸಾಹದಿಂದ ಕೆಲಸ ನಿರ್ವಹಿಸುತ್ತಿದ್ದುದು ಔರಂಗ್ಜೇಬನಲ್ಲಿ ಈತ ಕಂಡ ಒಂದು ದೊಡ್ಡ ಗುಣ. ಬಿಜಾಪುರ ರಾಜ್ಯ ಕಳೆದುಕೊಂಡಿದ್ದ ಸಿಕಂದರ್ ಆಲಿಷಾನನ್ನೂ, ಗೋಲ್ಕೊಂಡದ ಮಾಜಿ ಸುಲ್ತಾನ ತಾನಕ್ಷಾನನ್ನೂ ಗಮೆಲ್ಲಿ-ಕರೇರಿ ನೋಡಿದ. ಬಹಳ ಕಷ್ಟನಷ್ಟಗಳನ್ನು ಅನುಭವಿಸಿ ಅಲ್ಲಿಂದ ಹೊರಟು, ಏಪ್ರಿಲ್ 5ರಂದು ಗೋವ ತಲುಪಿದ. ಅಲ್ಲಿಂದ ಮೆಕಾವ್ಗೆ ಹೋದ. ಅನಂತರ ಚೀನದ ಒಳಭಾಗಕ್ಕೆ ಹೋಗಿ, ಚೀನದ ಚಕ್ರವರ್ತಿಯನ್ನು ಪ್ರತ್ಯಕ್ಷವಾಗಿ ಭೇಟಿ ಮಾಡಿದ. ಏಳು ತಿಂಗಳುಗಳ ಕಾಲ ಅಲ್ಲಿ ಪ್ರವಾಸಮಾಡಿ, ಫಿಲಿಪೀನ್ಸಿನ ಮನಿಲಕ್ಕೆ ಹೋದ. ಅನಂತರ ಪೆಸಿಫಿಕ್ ಸಾಗರದ ಮೇಲೆ ಪ್ರಯಾಣ ಮಾಡಿ ಮೆಕ್ಸಿಕೋ ದೇಶದ ಅಕಾಪುಲ್ಕೊಗೆ ಹೋಗಿ, 1699ರ ಡಿಸೆಂಬರಿನಲ್ಲಿ ತನ್ನ ದೇಶಕ್ಕೆ ಹಿಂದಿರುಗಿದ. ಈತ 1725ರಲ್ಲಿ ನೇಪಲ್ಸ್ ನಲ್ಲಿ ನಿಧನವಾದ.


ಗಮೆಲ್ಲಿ-ಕರೇರಿ ಬರೆದ ಪ್ರವಾಸಕಥನದಲ್ಲಿ ಅನೇಕ ವಾಸ್ತವ ಸಂಗತಿಗಳೊಂದಿಗೆ ಅವಾಸ್ತವ ಸಂಗತಿಗಳೂ ಉತ್ಪ್ರೇಕ್ಷೆಗಳೂ ಸೇರಿಕೊಂಡಿವೆ. ಔರಂಗ್ಜೇಬ್ ಬೀಡು ಬಿಟ್ಟಿದ್ದ ಸ್ಥಳದಲ್ಲಿ 60,000 ಅಶ್ವಗಳು, 10 ಲಕ್ಷ ಸಿಪಾಯಿಗಳು, 50,000 ಒಂಟೆಗಳು ಮತ್ತು 3,000 ಆನೆಗಳನ್ನು ಒಳಗೊಂಡ ಸೇನೆಯಿತ್ತೆಂದು ಗಮೆಲ್ಲಿ-ಕರೇರಿ ಹೇಳಿರುವು ದನ್ನು ನಂಬಲು ಕಷ್ಟವಾಗುತ್ತದೆ. ಅವನ ಶಿಬಿರದ ಸುತ್ತಳತೆ 45 ಕಿಮೀ ಎಂದೂ ಅಲ್ಲಿ 250 ಪ್ರತ್ಯೇಕ ಮಾರುಕಟ್ಟೆಗಳಿದ್ದುವೆಂದೂ ಅತ್ಯಮೂಲ್ಯ ವಸ್ತುಗಳು ಮೊದಲು ಗೊಂಡು ಎಲ್ಲ ತರದ ಸರಕುಗಳೂ ಅಲ್ಲಿ ದೊರಕುತ್ತಿದ್ದುವೆಂದೂ ಈತ ಬರೆದಿದ್ದಾನೆ. ಒಟ್ಟಿನಲ್ಲಿ ಇವನ ಗ್ರಂಥ ಸ್ವಾರಸ್ಯವಾಗಿಯೂ ಉಪಯುಕ್ತವಾಗಿಯೂ ಇದೆ.