ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಸ್ಟೇವಸ್

ವಿಕಿಸೋರ್ಸ್ದಿಂದ

ಸ್ವೀಡನಿನ ದೊರೆಗಳ ಹೆಸರು.


ಗಸ್ಟೇವಸ್ I ವೇಸ

1496-1560. ಸ್ವೀಡನನ್ನು ಡೆನ್ಮಾರ್ಕಿನಿಂದ ಪ್ರತ್ಯೇಕಿಸಿ ಅಲ್ಲಿ ಸ್ವತಂತ್ರ ರಾಜಮನೆತನವನ್ನು ಸ್ಥಾಪಿಸಿದ. ಈತ 15ನೆಯ ಶತಮಾನದ ಕೊನೆಯಲ್ಲಿ ಅಲ್ಲಿಯ ಪ್ರಸಿದ್ಧ ಮನೆತನವೊಂದರಲ್ಲಿ ಹುಟ್ಟಿದ. ಈತನ ಪೂರ್ವಿಕರು ಸ್ಕಾಂಡಿನೇವಿಯದ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದರು. ಸ್ವೀಡನಿನ ರೀಜೆಂಟರಾಗಿದ್ದ ಸ್ಟೂರರ ಮನೆತನದೊಡನೆ ಸಂಬಂಧ ಹೊಂದಿದ್ದರು. ಗಸ್ಟೇವಸ್ ಯೌವನದಲ್ಲಿ ಸ್ಟೆನ್ ಸ್ಟೂರನ ಪರವಾಗಿ ಡೆನ್ಮಾರ್ಕಿನ ರಾಜ ಎರಡನೆಯ ಕ್ರಿಶ್ಚನೊಡನೆ 1517-18ರಲ್ಲಿ ಕಾದಾಡಿದ. ಸ್ಟೇನ್ ಮತ್ತು ಕ್ರಿಶ್ಚನ್ ನಡುವೆ ಆದ ಒಪ್ಪಂದದ ಪ್ರಕಾರ ಗಸ್ಟೇವಸ್ನನ್ನು ಕ್ರಿಶ್ಚನನಿಗೆ ಒತ್ತೆಯಾಗಿ ಸ್ಟೆನ್ ಒಪ್ಪಿಸಿದ. ಕ್ರಿಶ್ಚನ್ ಒಪ್ಪಂದವನ್ನು ಉಲ್ಲಂಘಿಸಿ ಗಸ್ಟೇವಸನನ್ನು ಡೆನ್ಮಾರ್ಕಿಗೆ ಕೊಂಡೊಯ್ದ. ಗಸ್ಟೇವಸ್ ಬಂಧನದಿಂದ ತಪ್ಪಿಸಿಕೊಂಡು ಲುಬೆಕ್ ನಗರಕ್ಕೆ ಓಡಿಹೋದ. ಅಲ್ಲಿ ಅನೇಕ ಮಂದಿ ಶ್ರೀಮಂತರು ಇವನ ಸ್ನೇಹಿತರಾದರು. ಅನಂತರ ಗಸ್ಟೇವಸ್ ಸ್ವೀಡನನ್ನು ತಲುಪಿದ. ಸ್ವೀಡನಿನ ರೀಜೆಂಟರಾಗಿದ್ದ ಸ್ಟೆನ್ ಸ್ಟೂರ್ 1520ರಲ್ಲಿ ಮರಣ ಹೊಂದಿದ್ದರಿಂದ ಎರಡನೆಯ ಕ್ರಿಶ್ಚನ್ ಸ್ಟಾಕೋಂ ಉಳಿದು ಇಡೀ ಸ್ವೀಡನಿನ ಮೇಲೆ ಅಧಿಕಾರ ಸ್ಥಾಪಿಸಿದ. ಕ್ರಿಶ್ಚನ್ ತನ್ನ ತೀವ್ರ ವಿರೋಧಿಗಳೆನಿಸಿ ದವರನ್ನೆಲ್ಲ ಕೊಲೆ ಮಾಡಿದ. ಗಸ್ಟೇವಸನ ತಂದೆಯೂ ಚಿಕ್ಕಪ್ಪಂದಿರೂ ಸಾವಿಗೆ ಈಡಾದರು. ಗಸ್ಟೇವಸ್ ಧೈರ್ಯಗೆಡಲಿಲ್ಲ. ಸ್ವೀಡನಿನಲ್ಲಿ ಕ್ರಿಶ್ಚನನ ಅಧಿಕಾರವನ್ನು ಕೊನೆಗಾಣಿಸದೆ ಗತ್ಯಂತರವಿಲ್ಲವೆಂದು ನಿರ್ಧರಿಸಿದ. ಅವನು ಕ್ರಿಶ್ಚನಿನ ಆಡಳಿತವನ್ನು ವಿರೋಧಿಸುತ್ತ ಗುಂಪಿನ ಮುಖಂಡನಾಗಿ ಬಂಡಾಯಕ್ಕೆ ಸಿದ್ಧವಾದ. ಲುಬೆಕ್ನ ಶ್ರೀಮಂತ ವರ್ತಕರು ಗಸ್ಟೇವಸನಿಗೆ ಅಗತ್ಯವಾಗಿದ್ದ ಹಣದ ನೆರವು ನೀಡಿದರು. ಗಸ್ಟೇವಸ್ ಪ್ರಬಲನಾಗಿ, ಸ್ವೀಡನಿನ ಮೇಲೆ ಡೆನ್ಮಾರ್ಕಿನ ದೊರೆ ಎರಡನೆಯ ಕ್ರಿಶ್ಚನನ ಆಡಳಿತವನ್ನು ಕೊನೆಗಾಣಿಸಿದ. 1523ರಲ್ಲಿ ಈತ ಸ್ವತಂತ್ರ ಸ್ವೀಡನಿನ ರಾಜನಾದ. ಈತ ಚುನಾವಣೆಯ ಮುಖಾಂತರ ಸಿಂಹಾಸನಕ್ಕೆ ಬಂದರೂ ಮುಂದೆ ರಾಜತ್ವ ತನ್ನ ವಂಶಪಾರಂಪರ್ಯ ವಾಗುವಂತೆ ಪ್ರತಿನಿಧಿಸಭೆಯ ಒಪ್ಪಿಗೆ ದೊರಕಿಸಿಕೊಂಡ. ಡೆನ್ಮಾರ್ಕಿನಲ್ಲಿ ಸಿಂಹಾಸನಕ್ಕಾಗಿ ಕಚ್ಚಾಟಗಳುಂಟಾದವು. ಆ ಸಮಯದಲ್ಲಿ ಗಸ್ಟೇವಸ್ ಎರಡನೆಯ ಕ್ರಿಶ್ಚನನ ವಿರೋಧಿಗಳ ಜೊತೆ ಸೇರಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡ. ಕ್ರಿಶ್ಚನನ ಚಿಕ್ಕಪ್ಪ ಒಂದನೆಯ ಫ್ರೆಡರಿಕ್ ಎಂಬವನು ಕ್ರಿಶ್ಚನನನ್ನು ಓಡಿಸಿ ತಾನೇ ದೊರೆಯಾಗಿದ್ದ. ಅವನು ಗಸ್ಟೇವಸನ ಸಖ್ಯ ಸಾಧಿಸುವುದು ಅವನ ಹಿತದೃಷ್ಟಿಯಿಂದ ಅವಶ್ಯವಾಯಿತು. ಸ್ವೀಡನ್ ಡೆನ್ಮಾರ್ಕ್ಗಳ ಮಧ್ಯೆ ಕಾಲಕ್ರಮದಲ್ಲಿ ಸ್ನೇಹ ಬೆಳೆಯಿತು.


ಗಸ್ಟೇವಸ್ ಅನೇಕ ಸುಧಾರಣೆಗಳನ್ನು ಕೈಗೊಂಡ. ಹೆಚ್ಚು ತೆರಿಗೆಗಳನ್ನು ವಿಧಿಸಿದ. ಶ್ರೀಮಂತವಾಗಿದ್ದ ಚರ್ಚುಗಳ ಆಸ್ತಿಯನ್ನು ಮೊಟಕುಗೊಳಿಸಲು ಹವಣಿಸಿದ. ರಾಜ ತನಿಗಿಷ್ಟ ಬಂದಂತೆ ಚರ್ಚಿನ ಆಸ್ತಿಯನ್ನು ಬಳಸಿಕೊಳ್ಳಬಹುದೆಂದು ಸ್ವೀಡನಿನ ಪ್ರತಿನಿಧಿ ಸಭೆ 1527ರಲ್ಲಿ ಒಪ್ಪಿಗೆ ನೀಡಿತು. ಈ ನಿಮಿತ್ತವಾಗಿ ಸ್ವೀಡನಿನಲ್ಲಿ ಮತಸುಧಾರಣೆಯೂ ಪ್ರಾರಂಭವಾಯಿತು. ಗಸ್ಟೇವಸ್ ಪ್ರಾಟೆಸ್ಟಂಟ್ ಪಂಥದತ್ತ ವಾಲಲು ಅವನ ಧಾರ್ಮಿಕ ಒಲವಿಗಿಂತ ರಾಜಕೀಯ ಚಾತುರ್ಯವೇ ಮುಖ್ಯ ಕಾರಣ. ಜರ್ಮನಿಯ ಪ್ರಾಟೆಸ್ಟಂಟ್ ರಾಜರು ನಿರ್ಮಿಸಿಕೊಂಡಿದ್ದ ರಾಜಕೀಯ ನೀತಿಯನ್ನನುಸರಿಸಿ ಸ್ವೀಡನಿನಲ್ಲಿ ಪ್ರಬಲವಾದ ರಾಜತ್ವವನ್ನು ಸ್ಥಾಪಿಸಿದ. ವೈಯಕ್ತಿಕವಾಗಿ ವಿಪುಲವಾದ ಹಣ ಮತ್ತು ಆಸ್ತಿಯನ್ನು ಕಲೆ ಹಾಕಿ ಇತರ ಎಲ್ಲ ಶ್ರೀಮಂತರಿಗಿಂತಲೂ ಸ್ಥಿತಿವಂತನೆನಿಸಿಕೊಂಡ. ಇಡೀ ಸ್ವೀಡನ್ ಒಂದು ಭಾರಿ ಜಹಗೀರು, ಅದಕ್ಕೆ ತಾನೇ ಅಧಿಪತಿ-ಎಂಬಂತೆ ಅವನ ಧೋರಣೆ ಯಾಗಿತ್ತು. ಸ್ವೀಡನಿನ ಆಡಳಿತವನ್ನು ಪ್ರಗತಿದಾಯಕವಾಗಿ ಮಾರ್ಪಡಿಸಲು ಆತ ಅನೇಕ ಸುಧಾರಣೆಗಳನ್ನು ಕೈಗೊಂಡ. ಕೊನೆಗೆ 1644ರಲ್ಲಿ ರಾಜತ್ವ ವಂಶಪಾರಂಪರ್ಯವಾಗಿ ಅವನ ಮನೆತನದ ಹಕ್ಕೆಂಬುದಕ್ಕೆ ಪ್ರತಿನಿಧಿ ಸಭೆ ಸಮ್ಮತಿ ನೀಡಿತು.


ಗಸ್ಟೇವಸ್ ವೇಸ ಪರಾಕ್ರಮಿ. ಹಲವು ವೇಳೆ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗುತ್ತಿದ್ದ. ತನ್ನ ಶತ್ರುಗಳನ್ನು ನಿರ್ನಾಮ ಮಾಡಲು ಎಂಥ ಕೃತ್ಯಕ್ಕೂ ಅವನು ಹಿಂಜರಿಯುತ್ತಿರಲಿಲ್ಲ. ಸಾಹಿತ್ಯ ಮತ್ತು ಕಲೆಯಲ್ಲಿ ಹೆಚ್ಚು ಅಭಿರುಚಿಯಿಲ್ಲದಿದ್ದರೂ ಅವನು ಸಂಗೀತಪ್ರಿಯನಾಗಿದ್ದ. ಸ್ವೀಡಿಷ್ ಭಾಷೆಯಲ್ಲಿ ಚತುರ ಭಾಷಣಕಾರನಾಗಿದ್ದ. ಪತ್ರ ವ್ಯವಹಾರದಲ್ಲಿ ಅವನಿಗೆ ವಿಶೇಷ ಪ್ರತಿಭೆಯಿತ್ತು. ಸ್ವೀಡನನ್ನು ಸ್ವತಂತ್ರಗೊಳಿಸಿ 40 ವರ್ಷಗಳ ಕಾಲ ಭದ್ರವಾದ ಆಡಳಿತ ನಡೆಸಿದ. ಮತಸುಧಾರಣಾ ಚಳವಳಿಯಲ್ಲಿ ಸ್ವೀಡನ್ ಭಾಗವಹಿಸುವಂತೆ ಮಾಡಿದ. ಸದಾ ಸಜ್ಜಾಗಿದ್ದ ಭೂ ಸೈನ್ಯ ಹಾಗೂ ನೌಕಾದಳವನ್ನು ಅವನು ಪ್ರಪ್ರಥಮವಾಗಿ ಸ್ಥಾಪಿಸಿದ. ಸಮಕಾಲೀನ ದಕ್ಷ ರಾಜರಲ್ಲಿ ಗಸ್ಟೇವಸ್ ವೇಸನೂ ಒಬ್ಬನೆಂದು ಪರಿಗಣಿತನಾಗಿದ್ದಾನೆ. ಗಸ್ಟೇವಸ್ ವೇಸನ ಮರಣಾ ನಂತರ (1560) ಅವನ ಮಗ 14ನೆಯ ಎರಿಕ್ ರಾಜನಾದ.


ಗಸ್ಟೇವಸ್ II ಅಡಾಲ್ಫಸ್

1594-1632. ಸ್ವೀಡನಿನ 9ನೆಯ ಚಾರ್ಲ್ಸ್ ಗೆ ಅವನ ಎರಡನೆಯ ಹೆಂಡತಿ ಕ್ರಿಸ್ಟೀನಳಲ್ಲಿ ಹುಟ್ಟಿದ ಹಿರಿಯ ಮಗ. ತನ್ನ ತಂದೆಯ ಮರಣಾನಂತರ 1611ರಲ್ಲಿ ಇನ್ನೂ ಚಿಕ್ಕ ವಯಸ್ಸಿನಲ್ಲೇ ಪಟ್ಟಕ್ಕೆ ಬಂದ. ಅವನ ತಂದೆಯ ದರ್ಪಿಷ್ಟ ಆಡಳಿತ, ಪೋಲೆಂಡಿನೊಡನೆ ಅವನ ಯುದ್ಧ-ಈ ಕಾರಣ ಗಳಿಂದಾಗಿ ಗಸ್ಟೇವಸ್ ಸಿಂಹಾಸನಕ್ಕೆ ಬಂದ ತರುವಾಯ ಅನೇಕ ಕಷ್ಟಗಳನ್ನೆದುರಿಸ ಬೇಕಾಯಿತು. ಬಾಲ್ಯದಲ್ಲಿ ಒಳ್ಳೆಯ ಶಿಕ್ಷಣವನ್ನು ಪಡೆದಿದ್ದ ಗಸ್ಟೇವಸ್ ಚತುರತೆಯಿಂದ ತನಗೆದುರಾದ ತೊಡಕುಗಳನ್ನು ಬಗೆಹರಿಸಿಕೊಂಡ. ಆಡಳಿತದಲ್ಲಿದ್ದ ಲೋಪದೋಷ ಗಳನ್ನು ಸರಿಪಡಿಸಿದ. ಶ್ರೀಮಂತರಿಗೆ ಹಣ ಕೊಟ್ಟು ಅವರ ವಿಶ್ವಾಸ ಸಂಪಾದಿಸಿಕೊಂಡ. ಸ್ಥಳೀಯ ಸಂಸ್ಥೆಗಳನ್ನು ನೇರ್ಪುಗೊಳಿಸಿದ. ಹೀಗಾಗಿ ಪ್ರಜೆಗಳ ಮೆಚ್ಚುಗೆಗೆ ಪಾತ್ರನಾದ. ಈತ ಸ್ವೀಡನ್ನ ಅತ್ಯಂತ ಪ್ರಸಿದ್ಧ ರಾಜರಲ್ಲೊಬ್ಬ. ಇವನ ಸುಧಾರಣೆಗಳು ಮುಂದಿನ ಎರಡು ಶತಮಾನಗಳ ಕಾಲದಲ್ಲಿ ಸ್ವೀಡನ್ನ ಪ್ರಗತಿಗೆ ಸಹಕಾರಿಯಾದವು. ಈತ ವಾಕ್ಚತುರ, ಮೇಧಾವಿ, ಸಂಗೀತಪ್ರಿಯ, ತೀಕ್ಷ್ಣಮತಿ. ವಿದ್ಯಾಭ್ಯಾಸದ ಪ್ರಗತಿಗೆ ಇವನು ವಿಶೇಷ ಗಮನ ಕೊಟ್ಟ. ಅನೇಕ ಶಾಲೆಗಳನ್ನು ಸ್ಥಾಪಿಸಿದ. ಸ್ವೀಡನ್ನ ಉಪ್ಸಾಲ ವಿಶ್ವವಿದ್ಯಾಲಯ ಪುರೋಭಿವೃದ್ಧಿ ಹೊಂದಿ ಯುರೋಪಿನ ಇತರ ಸುಪ್ರಸಿದ್ಧ ವಿಶ್ವವಿದ್ಯಾಲಯಗಳಿಗೆ ಸರಿಸಮನಾಗಿ ಬೆಳೆದು ಪ್ರಸಿದ್ಧಿಗೆ ಬರಲು ಈತನೇ ಕಾರಣ. ರಾಷ್ಟ್ರದ ವಾಣಿಜ್ಯ ಪ್ರಗತಿ ಸಾಧಿಸಲು ಅನೇಕ ಹೊಸ ಪಟ್ಟಣಗಳನ್ನು ಸ್ಥಾಪಿಸಿದ. ಅವುಗಳಲ್ಲಿ ಎಲ್ಲವೂ ಬೆಳೆಯಲಿಲ್ಲವಾದರೂ ಗಾತನ್ಬರ್ಗ್ ಪ್ರಸಿದ್ಧವಾಯಿತು. ದೇಶದಲ್ಲಿ ದೊರೆಯುತ್ತಿದ್ದ ಖನಿಜ ನಿಕ್ಷೇಪಗಳನ್ನು ಸದುಪಯೋಗಪಡಿಸಿಕೊಳ್ಳುವ ಸಲುವಾಗಿ ವಿದೇಶಿ ಬಂಡವಾಳಗಾರರನ್ನು ಆಹ್ವಾನಿಸಿ ಗಣಿ ಉದ್ಯಮಗಳನ್ನು ಸ್ಥಾಪಿಸಿದ. ಇದರಿಂದ ಸ್ವೀಡನ್ ದೇಶ ತಾಮ್ರ ಮತ್ತು ಕಬ್ಬಿಣ ಕೈಗಾರಿಕೆಗಳಲ್ಲಿ ವಿಶೇಷ ಪ್ರಗತಿ ಸಾಧಿಸಿತು.


2ನೆಯ ಗಸ್ಟೇವಸ್ ಆಂತರಿಕ ಹಾಗೂ ಅಂತಾರಾಷ್ಟ್ರೀಯ ನೀತಿಗಳನ್ನು ಬಹು ಸೂಕ್ಷ್ಮವಾಗಿ ಯೋಚಿಸಿ ರೂಪಿಸುತ್ತಿದ್ದ. ಡೆನ್ಮಾರ್ಕ್ ರಷ್ಯಗಳೊಡನೆ ಅವನು ಅನಿವಾರ್ಯವಾಗಿ ಯುದ್ಧ ಮಾಡಲೇಬೇಕಾಯಿತು. ರಷ್ಯದೊಡನೆ ಸಂಧಾನವನ್ನೇರ್ಪ ಡಿಸಿಕೊಂಡು ಪರಿಸ್ಥಿತಿಯನ್ನು ಸುಧಾರಿಸಿಕೊಂಡ. ಪೋಲೆಂಡಿನೊಡನಿದ್ದ ಹಗೆತನವನ್ನು ಅಂತ್ಯಗೊಳಿಸಲು ಅವನು ಅನೇಕ ಕ್ರಮಗಳನ್ನು ಕೈಗೊಂಡ. ಯುರೋಪಿನ ಪ್ರಾಟೆಸ್ಟಂಟ್ ರಾಷ್ಟ್ರಗಳೊಡನೆ ಮೈತ್ರಿ ಬೆಳೆಸಿದ. ಬ್ರಾಂಡನ್ಬರ್ಗಿನ ಜಾನ್ ಸಿಗಿಸ್ಮಂಡನ ಮಗಳಾದ ಎಲಿಯನೋರಳನ್ನು 1620ರಲ್ಲಿ ವಿವಾಹವಾದದ್ದು ಈ ಉದ್ದೇಶಕ್ಕಾಗಿ.


ಈ ಮಧ್ಯೆ 1618ರಲ್ಲಿ ಯುರೋಪಿನಲ್ಲಿ ಮೂವತ್ತು ವರ್ಷಗಳ ಯುದ್ಧ ಪ್ರಾರಂಭವಾಯಿತು. ಆಸ್ಟ್ರಿಯದ ಚಕ್ರವರ್ತಿ 2ನೆಯ ಫರ್ಡಿನೆಂಡ್ ಪೋಲೆಂಡಿಗೆ ವಿಶೇಷ ಸಹಾಯ ನೀಡಿದ. ಸ್ವೀಡನ್ಗೂ ಪೋಲೆಂಡ್ಗೂ ವೈರ ಬೆಳೆಯಿತು. ಆಸ್ಟ್ರಿಯನ್ ರ ಸಹಾಯದಿಂದ ಬಾಲ್ಟಿಕ್ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಪೋಲೆಂಡ್ ಯತ್ನಿಸಿತು. 2ನೆಯ ಗಸ್ಟೇವಸ್ 1621ರಲ್ಲಿ ಪೋಲೆಂಡ್ನ ಸೈನ್ಯವನ್ನು ರೀಗ್ ನಲ್ಲಿ ಸೋಲಿಸಿದ. ಆ ವೇಳೆಗೆ ಮಧ್ಯ ಜರ್ಮನಿಯಲ್ಲಿ ಆಸ್ಟ್ರಿಯನ್ ಸೈನ್ಯಗಳು ಪ್ರಾಟೆಸ್ಟಂಟ್ ರಾಜರನ್ನು ಸೋಲಿಸಿದವು. 1627ರಲ್ಲಿ ಪ್ರಾಟೆಸ್ಟಂಟ್ ಪಂಥಕ್ಕೆ ವಿಪತ್ತೊದಗಿದಂತೆ ಕಂಡಿತು. ಗಸ್ಟೇವಸ್ ಪ್ರಾಟೆಸ್ಟಂಟ್ ರಾಜರ ಒಕ್ಕೂಟವನ್ನು ಸ್ಥಾಪಿಸಿ ಆಸ್ಟ್ರಿಯನ್ ಸಾಮ್ರಾಜ್ಯವನ್ನು ಸೋಲಿಸಲು ಯತ್ನಿಸಿದ. ಆದರೆ ಅವನ ಈ ಪ್ರಯತ್ನ ಪೂರ್ಣವಾಗಿ ಯಶಸ್ವಿಯಾಗಲಿಲ್ಲ. ಸ್ವೀಡನ್ ಮತ್ತು ಪ್ರಾಟೆಸ್ಟಂಟ್ ಪಂಥದ ಮೇಲ್ಮೆಗಾಗಿ ಹೋರಾಡಲು ಗಸ್ಟೇವಸ್ ನಿರ್ಧರಿಸಿ 1629ರಲ್ಲಿ ಜರ್ಮನಿಯನ್ನು ಪ್ರವೇಶಿಸಿದ. ಪ್ರಾಟೆಸ್ಟಂಟ್ ಪಂಥಾನುಯಾಯಿಗಳು ಗಸ್ಟೇವಸ್ನನ್ನು ಉತ್ತರದ ಸಿಂಹ ಎಂಬುದಾಗಿ ಕರೆದು ಅವನ ನೇತೃತ್ವದಲ್ಲಿ ಹೋರಾಡಲು ಸಿದ್ಧರಾದರು. ಮ್ಯಾಗ್ಡೆಬರ್ಗ್ ನಗರವನ್ನು ವಶಪಡಿಸಿ ಕೊಳ್ಳುವುದರಲ್ಲಿ ಗಸ್ಟೇವಸ್ ವಿಫಲನಾದರೂ ಧೈರ್ಯಗೆಡದೆ ಯುದ್ಧವನ್ನು ಮುಂದುವರಿಸಿದ. ಬ್ರೈಟೆನ್ಫೆಲ್ಟ್ ಕದನದಲ್ಲಿ ಗಸ್ಟೇವಸ್ ಆಸ್ಟ್ರಿಯನ್ ಸಾಮ್ರಾಜ್ಯದ ಸೈನ್ಯವನ್ನು ಸಂಪೂರ್ಣವಾಗಿ ಸೋಲಿಸಿ ಅದ್ಭುತ ವಿಜಯ ಗಳಿಸಿದ. ಅವನ ಪ್ರತಿಷ್ಠೆ ಹೆಚ್ಚಿತು. ಪ್ರಾಟೆಸ್ಟಂಟ್ ಪಂಥಕ್ಕೆ ಒದಗಿದ್ದ ವಿಪತ್ತು ದೂರವಾಯಿತು. 1632ರಲ್ಲಿ ಗಸ್ಟೇವಸ್ ಬವೇರಿಯದ ಮೇಲೆ ದಂಡೆತ್ತಿಹೋಗಿ ಮ್ಯೂನಿಕ್ ಅನ್ನು ಆಕ್ರಮಿಸಿದ. ಅದೇ ವರ್ಷ ಲುಟ್ಸೆನ್ನಲ್ಲಿ ನಡೆದ ಕದನದಲ್ಲಿ ಗಸ್ಟೇವಸ್ನ ಸೈನ್ಯ ವಿಜಯ ಗಳಿಸಿತಾದರೂ ಅಶ್ವದಳವೊಂದರ ಮುಂದಾಳಾಗಿದ್ದ ಆತ ಮರಣ ಹೊಂದಿದ.


2ನೆಯ ಗಸ್ಟೇವಸ್ ರಾಜತಂತ್ರ ನಿಪುಣ, ವೀರಯೋಧ, ಚತುರ ದಳಪತಿ. ಕರ್ತವ್ಯ, ಶ್ರದ್ಧೆ, ಕರುಣೆ, ಸಹನೆ ಮೊದಲಾದ ಗುಣಗಳಿಗೂ ಅವನು ಹೆಸರಾಗಿದ್ದ. ತನ್ನ ರಾಷ್ಟ್ರದ ಹಿರಿಮೆಯನ್ನು ಹೆಚ್ಚಿಸಿದ ಪ್ರಾಟೆಸ್ಟಂಟ್ ಪಂಥದ ಉಳಿವು ಸಂದಿಗ್ಧ ಸ್ಥಿತಿಯಲ್ಲಿದ್ದಾಗ ಅದಕ್ಕೆ ಗೆಲವು ತುಂಬಿ, ರಣರಂಗದಲ್ಲಿ ವೀರಾವೇಶದಿಂದ ಹೋರಾಡಿದ. ಗಸ್ಟೇವಸ್ನ ಮರಣಾನಂತರ ಅವನ ಏಕಮಾತ್ರ ಪುತ್ರಿಯಾದ ಕ್ರಿಸ್ಟೀನ ಸ್ವೀಡನ್ನ ಸಿಂಹಾಸನವನ್ನೇರಿದಳು.


ಗಸ್ಟೇವಸ್ III

1746-92. ಸ್ವೀಡನಿನ ದೊರೆ ಅಡಾಲ್ಫಸ್ ಫ್ರೆಡರಿಕ್ ಮತ್ತು ಲೂಯಿಸ ಉಲ್ರಿಕ-ಇವರ ಮಗ. ಲೂಯಿಸ ಉಲ್ರಿಕ ಪ್ರಷ್ಯದ ಫ್ರೆಡರಿಕ್ ಮಹಾಶಯನ ಸೋದರಿ. 3ನೆಯ ಗಸ್ಟೇವಸ್ 1771ರಲ್ಲಿ ಸ್ವೀಡನ್ನ ರಾಜನಾದ. ರಾಜತಂತ್ರ ನಿಪುಣರೂ ವಿದ್ವಾಂಸರೂ ಅವನಿಗೆ ಬಾಲ್ಯದಲ್ಲಿ ಶಿಕ್ಷಣ ನೀಡಿದರು. 1771ರ ಪ್ರಾರಂಭದಲ್ಲಿ ಯುವರಾಜ ಗಸ್ಟೇವಸ್ ರಾಜಕೀಯ ಸಂಧಾನಕ್ಕಾಗಿ ಫ್ರಾನ್ಸ್ ಗೆ ಭೇಟಿ ನೀಡಿದ್ದ ಕಾಲದಲ್ಲಿ ಅವನ ತಂದೆ ಮರಣ ಹೊಂದಿದ. ತತ್ಕ್ಷಣ ಗಸ್ಟೇವಸ್ ರಾಜಧಾನಿಗೆ ಧಾವಿಸಿ ಬಂದು ಅಧಿಕಾರ ವಹಿಸಿಕೊಂಡ. ಆ ವೇಳೆಗೆ ಸ್ವೀಡನ್ನಲ್ಲಿ ಹ್ಯಾಟ್ಸ್ ಮತ್ತು ಕ್ಯಾಪ್ಸ್ ಎಂಬ ಎರಡು ಪ್ರಧಾನ ಗುಂಪುಗಳು ಅಧಿಕಾರಕ್ಕಾಗಿ ಹೋರಾಟದಲ್ಲಿ ತೊಡಗಿದ್ದವು. ಗಸ್ಟೇವಸ್ ಈ ಪಕ್ಷಗಳೊಡನೆ ಸಂಧಾನದಲ್ಲಿ ತೊಡಗಿ, ಭಿನ್ನಾಭಿಪ್ರಾಯಗಳನ್ನೂ ಆಂತರಿಕ ಕಚ್ಚಾಟಗಳನ್ನೂ ಕೊನೆಗಾಣಿಸಲು ಯತ್ನಿಸಿ ವಿಫಲನಾದ. ಈ ಪಕ್ಷಗಳು ಪರಸ್ಪರ ಬಲಾಬಲಪ್ರದರ್ಶನದಲ್ಲಿ ತೊಡಗಿದವು. ಕೊನೆಗೆ ಗಸ್ಟೇವಸ್ ತನ್ನ ಆಪ್ತ ದಳಪತಿಗಳ ಸಹಾಯದಿಂದ ಈ ಪಕ್ಷಗಳ ಬಲವನ್ನು ಸೋಲಿಸಿ ಅವರ ನಾಯಕರನ್ನು ಬಂಧಿಸಿ ಪ್ರತಿನಿಧಿ ಸಭೆಯನ್ನು ಸೇರಿಸಿ ಹೊಸ ಸಂವಿಧಾನವನ್ನು ಅಸ್ತಿತ್ವಕ್ಕೆ ತಂದ.


ಅನಂತರ ಗಸ್ಟೇವಸ್ ಸ್ವೀಡನ್ನ್ನು ಪ್ರಗತಿಪರ ರಾಷ್ಟ್ರವನ್ನಾಗಿ ಮಾರ್ಪಡಿಸಲು ವಿಶೇಷವಾಗಿ ಶ್ರಮಿಸಿದ. ಆಡಳಿತ ಯಂತ್ರವನ್ನು ಚುರುಕುಗೊಳಿಸಿದ. ನ್ಯಾಯಾಂಗದಲ್ಲಿ ಅನೇಕ ಸುಧಾರಣೆಗಳು ಜಾರಿಗೆ ಬಂದವು. ಪತ್ರಿಕಾ ಸ್ವಾತಂತ್ರ್ಯ ನೀಡುವ ಸುಗ್ರೀವಾಜ್ಞೆ ಯೊಂದು 1774ರಲ್ಲಿ ಹೊರಬಂತು ಈತ ಮತೀಯ ಸ್ವಾತಂತ್ರ್ಯವನ್ನು ಘೋಷಿಸಿದ. ವಾಣಿಜ್ಯ ವಹಿವಾಟುಗಳ ಮೇಲಿದ್ದ ನಿರ್ಬಂಧಗಳನ್ನು ತೆಗೆದುಹಾಕಿದ. ನಾಣ್ಯಪದ್ಧತಿ ಯನ್ನು ಸುಧಾರಿಸಿದ. ರಾಷ್ಟ್ರೀಯ ನೌಕಾಬಲದ ಸಾಮರ್ಥ್ಯವನ್ನು ಇಮ್ಮಡಿಗೊಳಿಸಿದ. ಕೇವಲ ಆರು ವರ್ಷಗಳಲ್ಲಿ ಅನೇಕ ಪ್ರಗತಿಪರ ಸುಧಾರಣೆಗಳು ಜಾರಿಗೆ ಬಂದವು. ಆದರೂ 1778ರಲ್ಲಿ ರೀಕ್ಸ್ ದಾಗ್ ಸಭೆ ಗಸ್ಟೇವಸ್ನ ಅಧಿಕಾರಕ್ಕೆ ವಿರೋಧ ವ್ಯಕ್ತಪಡಿಸಿತು. ಗಸ್ಟೇವಸ್ ಈ ಸಭೆಯ ಅಧಿಕಾರವನ್ನು ಮೊಟಕುಗೊಳಿಸಲು ಸಮಯ ಕಾಯುತ್ತಿದ್ದ. 1789ರಲ್ಲಿ ಸ್ವೀಡನ್ ರಷ್ಯಗಳ ಮಧ್ಯೆ ಯುದ್ಧ ಸಂಭವಿಸಿದ್ದರಿಂದ ಗಸ್ಟೇವಸ್ ರೀಕ್ಸ್ ದಾಗ್ ಸಭೆಯನ್ನು ಮೂಲೆಗೊತ್ತಿ ಸಂಪೂರ್ಣ ಅಧಿಕಾರವನ್ನು ತಾನೇ ವಹಿಸಿಕೊಂಡ. 1790ರಲ್ಲಿ ರಷ್ಯವನ್ನು ನೌಕಾಯುದ್ಧದಲ್ಲಿ ಸೋಲಿಸಿದ. ಆದರೂ ಸ್ವೀಡನ್ಗಿಂತ ರಷ್ಯ ಪ್ರಬಲವೆಂಬುದನ್ನರಿತ ಗಸ್ಟೇವಸ್ ಅದರೊಂದಿಗೆ ಶಾಂತಿ ಏರ್ಪಡಿಸಿಕೊಂಡು ಎಂಟು ವರ್ಷಗಳ ರಕ್ಷಣಾ ಒಪ್ಪಂದ ಮಾಡಿಕೊಂಡ. ರಷ್ಯದ ಸಾಮ್ರಾಜ್ಞಿ ಕ್ಯಾಥರೀನ್ ಸ್ವೀಡಿನ್ಗೆ ವಾರ್ಷಿಕ ಸಹಾಯಧನ ನೀಡಲೊಪ್ಪಿದರು. ಅನಂತರ ಗಸ್ಟೇವಸ್ ಐರೋಪ್ಯ ಸಮಸ್ಯೆಗಳಿಗೆ ಗಮನ ನೀಡತೊಡಗಿದ. ಕ್ರಾಂತಿ ವಿರುದ್ಧವಾಗಿ ದೊರೆಗಳ ಕೂಟವೊಂದನ್ನು ಸ್ಥಾಪಿಸುವುದು ಇವನ ಉದ್ದೇಶವಾಗಿತ್ತು. ಆದರೆ ಬಡತನ ಮತ್ತು ಪರಸ್ಪರ ಅಸೂಯೆಗಳಿಂದಾಗಿ ಈ ಪ್ರಯತ್ನಕ್ಕೆ ಯಶಸ್ಸು ದೊರಕಲಿಲ್ಲ. 1792ರಲ್ಲಿ ಶ್ರೀಮಂತರ ಸಂಚೊಂದಕ್ಕೆ ಗಸ್ಟೇವಸ್ ಬಲಿಯಾದ. ಸ್ಟಾಕ್ಹೋಮಿನ ನಾಟಕಶಾಲೆಯೊಂದರಲ್ಲಿ ಕ್ಯಾಪ್ಟನ್ ಜೇಕಬ್ ಜೊಹಾನ್ ಆಂಕಾರ್ಸ್ಟ್ರಾಂ ಈತನನ್ನು ತಿವಿದ (ಮಾರ್ಚ್ 16). ಹದಿಮೂರು ದಿನಗಳ ಆನಂತರ ಗಸ್ಟೇವಸ್ ತೀರಿಕೊಂಡ.


3ನೆಯ ಗಸ್ಟೇವಸ್ ಸ್ವೀಡಿನ್ನ ಅತಿ ದಕ್ಷ ಹಾಗೂ ರಾಷ್ಟ್ರಾಭಿಮಾನ ರಾಜರಲ್ಲಿ ಒಬ್ಬ. ಅವನು ಸಾಹಿತ್ಯ ಕಲೆಗಳಲ್ಲಿ ಅಭಿರುಚಿ ಹೊಂದಿದ್ದು ಅವಕ್ಕೆ ವಿಶೇಷ ಪ್ರೋತ್ಸಾಹ ನೀಡಿದ. ಗಸ್ಟೇವಸ್ 1786ರಲ್ಲಿ ಸ್ವೀಡಿಷ್ ಅಕಾಡೆಮಿಯನ್ನು ಸ್ಥಾಪಿಸಿದ. ಈತನಿಂದ ನಾಟ್ಯಕಲೆಗೆ ವಿಶೇಷ ಪ್ರೋತ್ಸಾಹ ದೊರಕಿತು. ಇವನ ಸಾಂಸ್ಕೃತಿಕ ಅಭಿಮಾನ ಮತ್ತು ಪ್ರೋತ್ಸಾಹ ಹಾಗೂ ರಾಜಕೀಯ ಸಿದ್ಧಿಗಳಿಂದಾಗಿ ಇವನ ಆಳ್ವಿಕೆ ಸ್ವೀಡನ್ನ ಇತಿಹಾಸದಲ್ಲಿ ಗಸ್ಟೇವಿಯನ್ ಯುಗವೆಂದು ಪ್ರಸಿದ್ಧವಾಗಿದೆ.


ಗಸ್ಟೇವಸ್ 4

1778-1837. 3ನೆಯ ಗಸ್ಟೇವಸ್ನ ಮಗ. 3ನೆಯ ಗಸ್ಟೇವಸ್ ಕೊಲೆಯಾದಾಗ ಈತ ಇನ್ನೂ ಬಾಲಕನಾಗಿದ್ದ. ಆದ್ದರಿಂದ ಗತಿಸಿದ ರಾಜನ ಸೋದರನೂ ಸಾಡರ್ಮನ್ಲೆಂಟಿನ ಡ್ಯೂಕನು ಆಗಿದ್ದ ಚಾರಲ್ಸ್ ರೀಜೆಂಟಾಗಿ ಆಡಳಿತ ನಡೆಸುವಂತೆ ಏರ್ಪಾಡಾಗಿತ್ತು. 4ನೆಯ ಗಸ್ಟೇವಸ್ ಬಾಲ್ಯದಲ್ಲಿ ಯೋಗ್ಯ ಶಿಕ್ಷಣ ಪಡೆದ. ಬೇಡನಿನ ಚಾರಲ್ಸ್ ಲೂಯಿಯ ಮಗಳಾದ ಫ್ರೆಡರಿಕ್ ಡೊರೋತಿಯಳೊಂದಿಗೆ 1797ರಲ್ಲಿ ಇವನ ವಿವಾಹವಾಯಿತು. 1800ರಲ್ಲಿ ಪ್ರಾಪ್ತ ವಯಸ್ಕನಾದ 4ನೆಯ ಗಸ್ಟೇವಸ್ ವಿಧಿವತ್ತಾಗಿ ಸಿಂಹಾಸನಾರೋಹಣ ಮಾಡಿದ. ಫ್ರಾನ್ಸಿನ ಕ್ರಾಂತಿಯ ಪರಿಣಾಮವಾಗಿ ಗಸ್ಟೇವಸ್ ಹಲವು ಉಗ್ರಕ್ರಮಗಳನ್ನು ಆಚರಣೆಗೆ ತಂದ. ಅಲ್ಲದೆ ಕೆಲವು ವರ್ಷಗಳ ಕಾಲ ಸ್ವೀಡನ್ನಲ್ಲಿ ಬೆಳೆಗೆ ಹಾನಿ ತಟ್ಟಿತ್ತು. 1808ರ ವೇಳೆಗೆ ದೇಶದಲ್ಲಿ ಆರ್ಥಿಕಸ್ಥಿತಿ ಅಧೋಗತಿ ಹೊಂದಿತು. ಗಸ್ಟೇವಸ್ ಚತುರತೆಯಿಂದ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳುವ ಬದಲು ಬೆದರಿಕೆಯ ಉಗ್ರಕ್ರಮಗಳನ್ನು ಕೈಗೊಂಡ. ಅವನನ್ನು ಅಧಿಕಾರದಿಂದ ತೆಗೆಯಲು ಪಿತೂರಿಗಳು ನಡೆದುವು. ಕೊನೆಗೆ 1809ರಲ್ಲಿ ಸೇನಾನಾಯಕರು ಅರಮನೆಗೆ ನುಗ್ಗಿ ರಾಜನನ್ನೂ ಅವನ ಪರಿವಾರವನ್ನೂ ಬಂಧಿಸಿ ರಾಜಧಾನಿಯಿಂದ ಬೇರೆ ಕಡೆಗೆ ಸಾಗಿಸಿ ಬಂಧನದಲ್ಲಿಟ್ಟರು. ಕೂಡಲೇ ಡಯಟ್ ಸಭೆ ಸೇರಿ ಕ್ರಾಂತಿಯನ್ನು ಅನುಮೋದಿಸಿ ಗಸ್ಟೇವಸ್ನ ಚಿಕ್ಕಪ್ಪನಾದ ಚಾರ್ಲ್ಸ್ ನ ನೇತೃತ್ವದಲ್ಲಿ ತಾತ್ಕಾಲಿಕವಾಗಿ ಆಡಳಿತ ನಡೆಸುವ ಏರ್ಪಾಡು ಮಾಡಿತು. ಸಿಂಹಾಸನದ ಹಕ್ಕನ್ನು ತನ್ನ ಮಗನಿಗೆ ಉಳಿಸುವ ದೃಷ್ಟಿಯಿಂದ 4ನೆಯ ಗಸ್ಟೇವಸ್ ತಾನಾಗಿಯೇ ಸಿಂಹಾಸನ ತ್ಯಾಗ ಮಾಡಿದ. ಸೈನ್ಯದ ಬೆಂಬಲ ಪಡೆದಿದ್ದ ಕ್ರಾಂತಿಯ ಮುಖಂಡರು ಗಸ್ಟೇವಸ್ನ ಸಂತತಿಗೆ ಸಿಂಹಾಸನದ ಹಕ್ಕಿಲ್ಲವೆಂದು ತೀರ್ಮಾನಿಸಿದರು. ಗಸ್ಟೇವಸ್ ಮತ್ತು ಅವನ ಕುಟುಂಬದವರನ್ನು ಜರ್ಮನಿಗೆ ಸ್ಥಳಾಂತರಿಸಲಾಯಿತು. ಅವನ ಚಿಕ್ಕಪ್ಪ ಚಾರ್ಲ್ಸ್ ನನ್ನೇ 13ನೆಯ ಚಾರ್ಲ್ಸ್ ದೊರೆಯೆಂದು ಘೋಷಿಸಲಾಯಿತು. ಆತ ಒಪ್ಪಿಕೊಂಡ ನೂತನ ಉದಾರವಾದಿ ಸಂವಿಧಾನವನ್ನು ಡಯಟ್ ಸ್ಥಿರೀಕರಿಸಿತು.


ಗಸ್ಟೇವಸ್ ತನ್ನ ಜೀವನದ ಉಳಿದ ಕಾಲವನ್ನು ಬೇರೆಬೇರೆ ಸ್ಥಳಗಳಲ್ಲಿ ಕಳೆದ. ಗಾಟಾರ್ಪ್ನ ಕೌಂಟ್ ಎಂಬ ಬಿರುದು ತಳೆದ. ಇವನು ಕೆಲವು ಗ್ರಂಥಗಳನ್ನೂ ಬರೆದಿದ್ದಾನೆ. ಈತ ಸಂಸಾರವನ್ನು ತ್ಯಜಿಸಿ ಅವ್ಯವಸ್ಥೆಯ ಜೀವನ ನಡೆಸಿ 1812ರಲ್ಲಿ ವಿವಾಹವಿಚ್ಛೇದ ಮಾಡಿಕೊಂಡು, ಅಂತಿಮವಾಗಿ ಸ್ವಿಟ್ಜóರ್ಲೆಂಡಿನಲ್ಲಿ ಒಂಟಿ ಜೀವನ ನಡೆಸಿದ. 1837ರಲ್ಲಿ ಮರಣ ಹೊಂದಿದ. 2ನೆಯ ಆಸ್ಕಾರ್ ದೊರೆಯ ಸಲಹೆಯಂತೆ 1884ರಲ್ಲಿ ಅವನ ದೇಹವನ್ನು ಸ್ವೀಡನ್ಗೆ ತಂದು ರಿಡ್ಡರ್ ಹೋಂಸ್ಕಿರ್ಕದಲ್ಲಿ ಸಮಾಧಿ ಮಾಡಲಾಯಿತು.


ಗಸ್ಟೇವಸ್ 5

1858-1950. 2ನೆಯ ಆಸ್ಕರನ ಮಗ. 1872ರಲ್ಲಿ ಯುವರಾಜನಾದ. ಸೈನ್ಯದಲ್ಲಿ ಉನ್ನತ ಅಧಿಕಾರಿಯಾಗಿದ್ದ. ವಿದೇಶಗಳಲ್ಲಿ ಪ್ರಯಾಣ ಕೈಗೊಂಡು ಅನುಭವ ಗಳಿಸಿದ. ಬೇಡನಿನ ಗ್ರಾಂಡ್ ಡ್ಯೂಕ್ 1ನೆಯ ಫ್ರೆಡರಿಕ್ನ ಮಗಳೂ 4ನೆಯ ಗಸ್ಟೇವಸ್ನ ಮರಿಮಗಳೂ ಆದ ವಿಕ್ಟೋರಿಯಳನ್ನು 1881ರಲ್ಲಿ ವಿವಾಹವಾದ್ದರಿಂದ ಸ್ವೀಡನ್ನ ವೇಸ ವಂಶದೊಂದಿಗೆ ಇವನ ವಂಶ ಸಮಾವೇಶಗೊಂಡಿತು. 5ನೆಯ ಗಸ್ಟೇವಸ್ 1907ರಲ್ಲಿ ಸ್ವೀಡನ್ನ ರಾಜನಾದ. ಎರಡು ಮಹಾಯುದ್ಧಗಳ ಕಾಲದಲ್ಲಿ ಇವನ ನೇತೃತ್ವದಲ್ಲಿ ಸ್ವೀಡನ್ ತಟಸ್ಥ ನೀತಿ ಅನುಸರಿಸಿತು. 1942ರಲ್ಲಿ ಇವನು ತೀವ್ರವಾದ ಕಾಯಿಲೆಯಿಂದ ಮಲಗುವವರೆಗೂ ಒಳ್ಳೆಯ ಟೆನಿಸ್ ಆಟಗಾರನಾಗಿದ್ದ. 5ನೆಯ ಗಸ್ಟೇವಸ್ 1950ರಲ್ಲಿ ಸ್ಟಾಕ್ಹೋಂನಲ್ಲಿ ಮರಣ ಹೊಂದಿದ.


ಗಸ್ಟೇವಸ್ 6


5ನೆಯ ಗಸ್ಟೇವಸ್ನ ಮಗ. 1882ರಲ್ಲಿ ಹುಟ್ಟಿದ. ತನ್ನ ತಂದೆಯ ಸುದೀರ್ಘ ಆಳ್ವಿಕೆಯ ಕಾಲದಲ್ಲಿ ಗಸ್ಟೇವಸ್ ಪ್ರಾಕ್ತನ ಶಾಸ್ತ್ರದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು ಒಳ್ಳೆಯ ವಿದ್ವಾಂಸನೆನಿಸಿಕೊಂಡಿದ್ದ. ಅವನು ಸ್ವೀಡನ್ನ ಅನೇಕ ಐತಿಹಾಸಿಕ ಸ್ಥಳಗಳಲ್ಲಿ ಪ್ರಾಕ್ತನ ಸಂಶೋಧನೆ ನಡೆಸಿ ಆ ಬಗ್ಗೆ ಲೇಖನಗಳನ್ನು ಪ್ರಕಟಿಸಿದ್ದಾನೆ. ಗ್ರೀಸ್, ಚೀನ ಮತ್ತು ಸೈಪ್ರಸ್ ಪ್ರದೇಶಗಳಲ್ಲಿ ಅವನ ನೇತೃತ್ವದಲ್ಲಿ ಸ್ವೀಡನಿನ ಪ್ರಾಕ್ತನ ತಜ್ಞರು ಅನೇಕ ಸಂಶೋಧನೆಗಳನ್ನು ನಡೆಸಿದ್ದಾರೆ. 6ನೆಯ ಗಸ್ಟೇವಸ್ ತನ್ನ ತಂದೆಯ ಮರಣಾನಂತರ 1950ರಲ್ಲಿ ಸ್ವೀಡನ್ನ ಸಿಂಹಾಸನವನ್ನೇರಿದ.