ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಾಗಲ್ ನಿಕಲೈ ವಸೀಲ್ಯವಿಚ್

ವಿಕಿಸೋರ್ಸ್ದಿಂದ

ಗಾಗಲ್ ನಿಕಲೈ ವಸೀಲ್ಯವಿಚ್[ಸಂಪಾದಿಸಿ]

1809-52. ಹೆಸರಾಂತ ರಷ್ಯನ್ ಸಾಹಿತಿ. 1809ರಲ್ಲಿ ಉಕ್ರೇನಿನಲ್ಲಿ ಜನಿಸಿದ. ನಿರುದ್ಯೋಗಿಯಾಗಿ ಸೇಂಟ್ ಪೀಟರಸ್ ಬರ್ಗಿಗೆ ಬಂದು 1826ರಲ್ಲಿ ಅಲ್ಲಿ ಸಣ್ಣಪುಟ್ಟ ಸರ್ಕಾರಿ ಕೆಲಸದಲ್ಲಿದ್ದು ಅನಂತರ ಅನೇಕ ವರ್ಷಗಳ ಕಾಲ ನಟನಾಗಿ, ಕವಿಯಾಗಿ ತೊಳಲಾಡಿದ. ಕೊನೆಯಲ್ಲಿ ಸಣ್ಣಕತೆಗಾರನೆಂದು ಅಪಾರ ಖ್ಯಾತಿ ಪಡೆದ. ಈವ್ನಿಂಗ್ ಆನ್ ಎ ಫಾರಮ್ ನಿಯರ್ ದಿಕಂಕ (ವಚೇದನ ಕುತೋರ್ ಬ್ಲಿಜ್ó ದಿಕಂಕ) (ದಿಕಂಕ ಬಳಿಯ ಕೃಷಿಕ್ಷೇತ್ರಗಳಲ್ಲಿನ ಸಂಜೆ ಗಳು) ಎನ್ನುವ ಇವನ ಮೊದಲ ಕಥಾಸಂಕಲನ ಈತನಿಗೆ ಹೆಸರು ತಂದ ಗ್ರಂಥ. ಈ ಕಥೆಗಳಲ್ಲಿ ಉಕ್ರೇನ್ ಪ್ರಾಂತ್ಯದ ಸಾಮಾನ್ಯ ಜನರ ನಡೆನುಡಿ ಹಾಗೂ ಜಾನಪದವನ್ನು ಕುರಿತ ವಾಸ್ತವ ಚಿತ್ರಗಳಿವೆ. ಗಾಗಲ್ ಸೇಂಟ್ ಪೀಟರ್ಸ್ಬರ್ಗ್ ವಿಶ್ವವಿದ್ಯಾಲಯ ದಲ್ಲಿ ಇತಿಹಾಸದ ಪ್ರಾಧ್ಯಾಪಕನಾಗಿ ಕೆಲವು ಕಾಲ ಕೆಲಸಮಾಡಿ, ವೃತ್ತಿಯಲ್ಲಿ ಏನೊಂದು ಯಶಸ್ಸನ್ನೂ ಗಳಿಸಲಾರದೆ 1834ರಲ್ಲಿ ಕೆಲಸಕ್ಕೆ ಶರಣು ಹೊಡೆದು, ಸಾಹಿತಿ ಯಾಗಿಯೇ ಬದುಕಬೇಕೆಂಬ ನಿರ್ಧಾರಕ್ಕೆ ಬಂದ. ಡೈರಿ ಆಫ್ ಎ ಮ್ಯಾಡ್ ಮ್ಯಾನ್ (1835) ಇವನು 1836ರಿಂದ 1846ರವರೆಗೆ ಇಟಲಿಯಲ್ಲಿ ವಾಸಿಸುತ್ತಿದ್ದ. ಇವನು 1842ರಲ್ಲಿ ದಿ ಓವರ್ ಕೋಟ್ ಎಂಬ ಹಾಸ್ಯ ಭರಿತವಾದ ಕಾದಂಬರಿ ರಚಿಸಿದ. ಈತ ಬರೆದ ಅತಿಮುಖ್ಯ ಕೃತಿಗಳೆಂದರೆ ರೆವಿಜೋರ್ಸ್ (ದಿ ಗವರ್ನಮೆಂಟ್ ಇನ್ಸ್ಪೆಕ್ಟರ್ 1836) ಎನ್ನುವ ವಿಡಂಬನಾತ್ಮಕ ನಾಟಕ ಮತ್ತು ಡೆಡ್ ಸೋಲ್ಸ್ 1842 (ಸತ್ತ ಆತ್ಮಗಳು) ಎಂಬ ಅಪೂರ್ಣ ಕಾದಂಬರಿ. ಇನ್ಸ್ಟೆಕ್ಟರ್ ನಾಟಕದಲ್ಲಿ ಮೂರ್ಖರಾದ. ಲಂಚಕೋರರಾದ, ಸಣ್ಣ ಪುಟ್ಟ ಸರ್ಕಾರಿ ಅಧಿಕಾರಿಗಳ ಅಧಿಕ ಪ್ರಸಂಗತನ, ಪೆದ್ದು ಪೆದ್ದಾದ ನಡೆವಳಿಕೆ - ಇವನ್ನು ಅತ್ಯಂತ ಹಾಸ್ಯಭರಿತ ಶೈಲಿಯಲ್ಲಿ ಗೇಲಿಮಾಡಿದ್ದಾನೆ. ಸತ್ತ ಆತ್ಮಗಳು ಎಂಬ ಕಾದಂಬರಿಯಲ್ಲಿ ರಷ್ಯದ ಜೀತಗಾರಿಕೆ ಪದ್ಧತಿಯನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಿದ್ದಾನೆ. ಇಡೀ ರಷ್ಯನ್ ಸಮಾಜವನ್ನು ಬಡಿದೆಬ್ಬಿಸಿದ ಈ ಕಾದಂಬರಿಯನ್ನು ಮುಂದುವರಿಸಿ ರಷ್ಯನ್ ಸಮಾಜವನ್ನೇ ಸಮಗ್ರವಾಗಿ ಚಿತ್ರಿಸುವ ಮಹಾಕಾದಂಬರಿಯನ್ನು ರಚಿಸ ಬೇಕೆಂದು ಗಾಗಲ್ ನಿಶ್ಚಯಿಸಿದ್ದ. ಆದರೆ ಅತಿಯಾಗಿ ನೀತಿಭೋಧೆ ಮಾಡುವ ಶೈಲಿಯಿಂದಾಗಿ ಕಾದಂಬರಿಯ ರಚನೆ ತೀರಾ ನಿಧಾನವಾಯಿತು. ಇವನು ರೋಮ್ ನಲ್ಲಿ ಇದ್ದಾಗ ಮತಭ್ರಾಂತನಾದ ಪಾದ್ರಿಯ ಪ್ರಭಾವಕ್ಕೆ ಒಳಗಾಗಿ 1845 ರಲ್ಲಿ ಇದ್ದಕ್ಕಿದ್ದಂತೆ ಧಾರ್ಮಿಕ ವಿಷಯಗಳತ್ತ ಮನಸ್ಸು ಹರಿಯಿತಾಗಿ ಗಾಗಲ್ ಚಿತ್ತಕ್ಷೋಭೆಗೆ ಒಳಗಾದ. ಅಗ ತಾನು ಅಲ್ಲಿಯವರೆಗೆ ಬರೆದಿಟ್ಟಿದ್ದ ಸತ್ತ ಆತ್ಮಗಳು ಕಾದಂಬರಿಯ ಮುಂದಿನ ಭಾಗದ ಹಸ್ತಪ್ರತಿಯನ್ನು ಸುಟ್ಟುಹಾಕಿದ. ಇವನು 1852ರ ಫೆಬ್ರವರಿ 24ರಂದು ನಿಧನವಾದ. ಸೊಚಿನೆನಿಯಾ ಎನ್ನುವ ಗದ್ಯನಿರೂಪಣೆ ಮತ್ತು ಜ್ಹೆನಿಟ್ಬ (ವಿವಾಹ) ಎಂಬ ವಿನೋದ ಪ್ರಹಸನ ಇವನ ಇತರ ಕೃತಿಗಳು. ಪುಷ್ಕಿನ್, ಲೆರ್ಮೊಂಟಾವ್ ಮೊದಲಾದವರ ರೊಮ್ಯಾಂಟಿಕ್ ಯುಗದಿಂದ ಹಿಡಿದು - ತುರ್ಗೆನೈಫ್, ಟಾಲ್ಸ್ಟಾಯ್, ದಾಸ್ತೋವ್ಸ್ಕಿ ಮುಂತಾದ ವಾಸ್ತವತಾವಾದಿಗಳವರೆಗಿನ ಕಾಲಾವಧಿಯಲ್ಲಿ ಬಂದ ಗಾಗಲ್ ಅತ್ಯಂತ ಪ್ರಮುಖ ಸಾಹಿತಿ. ಇವನ ವಿಕಟ ವಾಸ್ತವಿಕ ದೃಷ್ಟಿ,ವಿಡಂಬನಯುತ ವಾದ ವರ್ಣರಂಜಿತ ಗದ್ಯಶೈಲಿ ಇವು ದಾಸ್ತೋವ್ಸ್ಕಿ, ಬೆಲಿ ಮುಂತಾದವರ ಮೇಲೆ ಗಾಢಪ್ರಭಾವ ಬೀರಿದುವು. ಗಾಗಲ್ ರಷ್ಯನ್ ಸಮಾಜದ ಹಳೆಯ ಹುರುಳಿಲ್ಲದ ಕಂದಾಚಾರ ಪದ್ಧತಿಗಳು ನಡೆವಳಿಕೆಗಳು, ನೀತಿ ನಿಯಮಗಳನ್ನು ಯಥಾವತ್ತಾಗಿ ಎತ್ತಿ ತೋರಿಸಿದ್ದಾನೆ. ಬದುಕಿನ ವ್ಯಗ್ರ ಸಮಸ್ಯೆಗಳನ್ನು ಸಾಹಿತಿ ಯಥಾರ್ಥವಾಗಿ ಚಿತ್ರಿಸಬೇಕೆಂದು ಹೊಸ ಪಂಥವನ್ನೇ (ರಿಯಲಿಸಂ) ಪ್ರಾರಂಭಿಸಿದವನು ಈತ. ತನ್ನ ಚಿತ್ತಚಾಂಚಲ್ಯ, ವಿಚಾರದ ಅಸಾಂಗತ್ಯ, ಮುಂತಾದ ದೋಷಗಳಿಂದಾಗಿ ಈತ ನಿಷ್ಠೆಯಿಲ್ಲದವನು, ಪ್ರಗತಿವಿರೋಧಿ ಎಂಬ ಆಕ್ಷೇಪಣೆಗಳಿಗೆ ಪಾತ್ರನಾಗಿದ್ದಾನೆ.