ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಾಟಿಂಗೆನ್

ವಿಕಿಸೋರ್ಸ್ದಿಂದ

ಗಾಟಿಂಗೆನ್[ಸಂಪಾದಿಸಿ]

ಜರ್ಮನಿಯಲ್ಲಿ ಒಂದು ವಿಶ್ವವಿದ್ಯಾಲಯ ನಗರ. ಕೆಳ ಸ್ಯಾಕ್ಸನಿಯ ಅತ್ಯಂತ ದಕ್ಷಿಣ ಭಾಗದಲ್ಲಿ, ರೈನ್ ನದಿಯ ದಡದ ಮೇಲೆ, ಹೈನ್ಬರ್ಗ್ ಪರ್ವತದ ತಪ್ಪಲಿನಲ್ಲಿದೆ. ಪ್ರ.ಶ. 950ರ ಜರ್ಮನ್ ದಾಖಲೆಗಳಲ್ಲಿ ಗೋಡಿಂಗ್ ಅಥವಾ ಗುಟಿಂಗಿ ಎಂಬ ಗ್ರಾಮದ ಹೆಸರಿದೆ. ಈ ಗ್ರಾಮವೇ ತರುವಾಯದ ದಿನಗಳಲ್ಲಿ ಗಾಟಿಂಗೆನ್ ಎಂಬ ಹೆಸರು ತಳೆಯಿತು. ಈ ನಗರಕ್ಕೆ ಜರ್ಮನಿಯ ದೊರೆ 4ನೆಯ ಆಟೋ 1210ರಲ್ಲಿ ನಗರಪಾಲಿಕೆ ಹಕ್ಕನ್ನು ನೀಡಿದ. ವಾಣಿಜ್ಯದ ಸೌಲಭ್ಯಗಳಿಗಾಗಿ ಜರ್ಮನಿಯ ನಗರಗಳು 14ನೆಯ ಶತಮಾನದಲ್ಲಿ ಮಾಡಿಕೊಂಡ ಹ್ಯಾನ್ಸೀಯಾಟಿಕ್ ಸಂಘದಲ್ಲಿ ಈ ನಗರ ಉನ್ನತ ಸ್ಥಾನ ಪಡೆಯಿತು. ಇದು 1513ರಲ್ಲಿ ಜರ್ಮನಿಯ ಧಾರ್ಮಿಕ ಪುನರುತ್ಥಾನ ಚಳವಳಿಯಲ್ಲಿ ಭಾಗವಹಿಸಿತು; ಮೂವತ್ತು ವರ್ಷಗಳ ಯುದ್ಧದ (1618-1648) ಕಾಲದಲ್ಲಿ ಕಷ್ಟನಷ್ಟಗಳಿಗೊಳಗಾಯಿತು. ಮುಂದೆ ಒಂದು ಶತಮಾನ ದುರ್ಗತಿಯಲ್ಲಿದ್ದು ತರುವಾಯ ವಿಶ್ವವಿದ್ಯಾಲಯದ ಸ್ಥಾಪನೆಯಿಂದ ಪ್ರಸಿದ್ಧಿಗೆ ಬಂತು. ಈ ನಗರ 18ನೆಯ ಶತಮಾನದಲ್ಲಿ ಜರ್ಮನಿಯ ಯುವ ಕವಿಸಂಘದ ಕೇಂದ್ರವಾಗಿತ್ತು. ಇಲ್ಲಿಯ ಪುರಭವನ 14ನೆಯ ಶತಮಾನದ ಕಟ್ಟಡ.ಇದನ್ನು 1880ರಲ್ಲಿ ಜೀರ್ಣೋದ್ಧಾರ ಮಾಡಲಾಯಿತು. ನಗರದ ಹಳೆಯ ಬೀದಿಗಳು ಕಿರಿದು, ಅಂಕುಡೊಂಕು.

ಈ ನಗರದಲ್ಲಿರುವ ವಿಶ್ವವಿದ್ಯಾಲಯವನ್ನು ಇಂಗ್ಲೆಂಡಿನ ದೊರೆ 2ನೆಯ ಜಾರ್ಜ್ 1737ರಲ್ಲಿ ಸ್ಥಾಪಿಸಿದ. ರಾಷ್ಟ್ರೀಯ ಮನೋಭಾವವನ್ನು ಬೆಳೆಸುವುದರಲ್ಲಿ ಈ ವಿಶ್ವವಿದ್ಯಾಲಯದ ಪಾತ್ರ ಹಿರಿದಾದ್ದು. ಹ್ಯಾನೋವರ್ನ ಆಗಸ್ಟ್ ದೊರೆಯ ಪ್ರತಿಗಾಮಿ ನೀತಿಯನ್ನು ವಿರೋಧಿಸಿದ್ದಕ್ಕಾಗಿ ಇಲ್ಲಿಯ ಏಳ್ವರು ಪ್ರಾಧ್ಯಾಪಕರು ತಮ್ಮ ಕೆಲಸ ಕಳೆದುಕೊಂಡರು (1837). ಗ್ರಿಮ್ ಸೋದರರು ಇವರಲ್ಲಿಬ್ಬರು. ಬಿಸ್ಮಾರ್ಕ್ ಗಾಟಿಂಗೆನ್ನಿನ ವಿದ್ಯಾರ್ಥಿ. ನಾಜಿûಗಳ ಆಡಳಿತ ಕಾಲದಲ್ಲಿ ಗಾಟಿಂಗೆನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸಂಖ್ಯೆ 3,850 ರಿಂದ (1930-31) 1540 ಕ್ಕೆ (1936-37) ಇಳಿದುಹೋಗಿತ್ತು. ವಿಶ್ವವಿದ್ಯಾಲಯದ ಮುಖ್ಯ ಕಟ್ಟಡವೂ ಅದರ ಪಕ್ಕದಲ್ಲಿರುವ ಗ್ರಂಥಾಲಯವೂ ಪ್ರಾಣಿವಿಜ್ಞಾನ, ಮಾನವ ಶಾಸ್ತ್ರ, ಖನಿಜವಿಜ್ಞಾನಗಳಿಗೆ ಸಂಬಂಧಿಸಿದ ಸಂಗ್ರಹಾಲಯಗಳೂ ಉಲ್ಲೇಖಾರ್ಹ.

ಮಧ್ಯಯುಗದಲ್ಲಿ ಗಾಟಿಂಗೆನ್ ಉಣ್ಣೆ ಕೈಗಾರಿಕಾ ಕೇಂದ್ರವಾಗಿತ್ತು. 19-20ನೆಯ ಶತಮಾನಗಳಲ್ಲಿ ವಿe್ಞÁನ, ಶಸ್ತ್ರಕ್ರಿಯೆ ಮತ್ತು ದೃಕ್ ಉಪಕರಣ ಕೈಗಾರಿಕೆಗಳು ಬೆಳೆದಿವೆ. ಇಲ್ಲಿಯ ವಿಜ್ಞಾನ ಸಂಘ ಪ್ರಕಟಿಸುತ್ತಿರುವ (ಸ್ಥಾಪಿತ 1739) ಗಾಟಿಂಗಿಷೆ ಗೇಲಿರ್ಟೆ ಆನ್ಟ್ಸೈಗೆನ್ ಜರ್ಮನಿಯ ಪ್ರಮುಖ ವಿದ್ವತ್ ಪತ್ರಿಕೆ. ಎರಡನೆಯ ಮಹಾಯುದ್ಧ ಕಾಲದಲ್ಲಿ ಈ ನಗರ ಹೆಚ್ಚಾಗಿ ಬಾಂಬು ದಾಳಿಗೆ ತುತ್ತಾಗಲಿಲ್ಲ. 1945ರಲ್ಲಿ ಇದು ಬ್ರಿಟಿಷ್ ಆಕ್ರಮಿತ ವಲಯದಲ್ಲಿ ಇತ್ತು.