ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಾಲ್, ಫ್ರಾನ್ಸ್ ಯೋಸೆಫ್

ವಿಕಿಸೋರ್ಸ್ದಿಂದ

ಗಾಲ್, ಫ್ರಾನ್ಸ್ ಯೋಸೆಫ್[ಸಂಪಾದಿಸಿ]

1758-1828. ದೇಹರಚನಾಶಾಸ್ತ್ರಜ್ಞ. ಜರ್ಮನ್ ದೇಶದವ. ವಿಯೆನ್ನದಲ್ಲಿ ವೈದ್ಯನಾಗಿ ಜೀವನ ನಡೆಸುತ್ತಿದ್ದ. ತಲೆ ಬುರುಡೆಯ ವಿನ್ಯಾಸವನ್ನು ಸೂಕ್ಷ್ಮವಾಗಿ ಗಮನಿಸಿ ವ್ಯಕ್ತಿಯ ಗುಣಸ್ವಭಾವಗಳನ್ನು ಹೇಳಬಹುದು, ಎಂದು ಈತನ ನಂಬಿಕೆ. ಕಪಾಲಸಾಮುದ್ರಿಕೆಯನ್ನು (ಫ್ರೆನಾಲಜಿ) ಕುರಿತು ವಿಯೆನ್ನದಲ್ಲಿ ಈತ ಅನೇಕ ಉಪನ್ಯಾಸಗಳನ್ನು ಕೊಟ್ಟ. ಮತಧರ್ಮಕ್ಕೆ ವಿರುದ್ಧವೆಂಬ ಕಾರಣದಿಂದ ಸರ್ಕಾರ ಇವನ ಭಾಷಣಗಳನ್ನು ಬಹಿಷ್ಕರಿಸಿತು (1802). ಅನಂತರ ಈತ ತನ್ನ ಸಹೋದ್ಯೋಗಿ ಯೋಹಾನ್ ಕ್ಯಾಸ್ಪರ್ ಸ್ಪಜ್ರ್óಹೈಮ್ (1776-1832) ಎಂಬ ಮನಃಶಾಸ್ತ್ರಜ್ಞನೊಂದಿಗೆ ಪ್ಯಾರಿಸ್ಸಿಗೆ ಬಂದು ನೆಲೆಸಿದ (1807). 1810-1819ರ ಕಾಲದಲ್ಲಿ ಈ ಇಬ್ಬರೂ ಕಲೆತು ಪ್ರಕಟಿಸಿದ ಕಪಾಲಸಾಮುದ್ರಿಕಾ ಸಂಬಂಧವಾದ ಗ್ರಂಥಗಳು ಆ ಕಾಲದಲ್ಲಿ ಕ್ರಾಂತಿಯನ್ನೇ ಉಂಟುಮಾಡಿದುವು. 1822ರ ಸುಮಾರಿಗೆ ಗಾಲ್ ತನ್ನ ಸಂಶೋಧನೆಗಳಿಂದ, ಅಧ್ಯಯನದಿಂದ, ಪ್ರತಿಭೆಯಿಂದ ಕಪಾಲಸಾಮುದ್ರಿಕಾ ಶಾಸ್ತ್ರಕ್ಕೆ ಒಂದು ರೂಪ ಕೊಟ್ಟ. ಇದನ್ನು ಸ್ಪಜ್ರ್óಹೈಮ್ ಇಂಗ್ಲೆಂಡ್ ಮತ್ತು ಅಮೆರಿಕಗಳಲ್ಲಿ ಬಿತ್ತರಿಸಿದ. ಫ್ರೆನಾಲಜಿ ಎಂಬ ಪದವೂ ಈತನ ಸೃಷ್ಟಿಯೇ. ಈಗ ಈ ಶಾಸ್ತ್ರ ಶ್ರದ್ಧೇಯವಲ್ಲವೆಂದು ನಿರ್ಧರಿಸಿದ್ದಾರೆ. ಆದರೂ ಗಾಲ್ ದೇಹ ರಚನೆಯ ಸಂಬಂಧವಾಗಿ ಸ್ಪಷ್ಟಪಡಿಸಿದ ವಿವರಗಳು ನಿರ್ದುಷ್ಟವಾದುವು ಎಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ.

  1. ‘ಅನಾಟಮಿ ಅಂಡ್ ಫಿಸಿಯಾಲಜಿ ಆಫ್ ದಿ ನರ್ವಸ್ ಸಿಸ್ಟಮ್’
  2. ‘ಫಿಲಾಸಫಿಕಲ್ ಮೆಡಿಕಲ್ ರೀಸರ್ಚಸ್ ಕನ್ಸರ್ನಿಂಗ್ ನೇಚರ್ ಅಂಡ್ ಸೈನ್ಸ ಇನ್ ಡಿಸೀಸ್ ಅಂಡ್ ಹೆಲ್ತ್’

-ಇವು ಗಾಲನ ಎರಡು ಮುಖ್ಯ ಗ್ರಂಥಗಳು.