ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗುಂಡ್ಲುಪೇಟೆ

ವಿಕಿಸೋರ್ಸ್ದಿಂದ


ಚಾಮರಾಜನಗರ ಜಿಲ್ಲೆಯ ಒಂದು ತಾಲ್ಲೂಕು ಹಾಗೂ ಅದರ ಮುಖ್ಯಸ್ಥಳ. ಈ ತಾಲ್ಲೂಕಿನ ದಕ್ಷಿಣದಲ್ಲಿ ಕೇರಳ ಮತ್ತು ತಮಿಳುನಾಡು, ಪೂರ್ವದಲ್ಲಿ ಚಾಮರಾಜನಗರ, ಉತ್ತರದಲ್ಲಿ ನಂಜನಗೂಡು, ಪಶ್ಚಿಮಉತ್ತರದಲ್ಲಿ ಹೆಗ್ಗಡದೇವನಕೊಟೆ ತಾಲ್ಲೂಕು ಇವು ಸುತ್ತುವರಿದಿವೆ. ಕಸಬೆ, ಹಂಗಳ, ಬೇಗೂರು ಮತ್ತು ತೆರಕಣಾಂಬಿ ಹೋಬಳಿಗಳು ಗ್ರಾಮಗಳು 162. ತಾಲ್ಲೂಕಿನ ವಿಸ್ತೀರ್ಣ 14,062ಚ.ಕಿಮೀ. ಜನಸಂಖ್ಯೆ 2,12,895.


ತಾಲ್ಲೂಕಿನ ದಕ್ಷಿಣ ಹಾಗೂ ಪಶ್ಚಿಮ ಭಾಗ ಅರಣ್ಯ ಮತ್ತು ಬೆಟ್ಟಗುಡ್ಡಗಳಿಂದ ಆವೃತವಾಗಿದೆ. ಬಂಡೀಪುರ ಮತ್ತು ಬೇರಂಬಾಡಿ ರಕ್ಷಿತ ಅರಣ್ಯಗಳು ಇರುವುದು ಇಲ್ಲಿಯೇ. ಈ ತಾಲ್ಲೂಕಿನ ಪೂರ್ವ ಮತ್ತು ಉತ್ತರ ಭಾಗಗಳಲ್ಲಿ ಜನವಸತಿ ಹೆಚ್ಚು. ಈ ಜನವಸತಿ ಪ್ರದೇಶಗಳು ಮತ್ತು ಅರಣ್ಯಗಳ ನಡುವೆ ತಾಲ್ಲೂಕಿನ ಪಶ್ಚಿಮ ಮತ್ತು ದಕ್ಷಿಣ ಮೇರೆಗಳಿಗೆ ಸಮಾನಾಂತರವಾಗಿ ಹಬ್ಬಿರುವ ಒಂದು ಬೆಟ್ಟಸಾಲಿದೆ. ಎರಡು ದಿಕ್ಕುಗಳ ಈ ಬೆಟ್ಟದ ಹರವುಗಳು ಗೋಪಾಲಸ್ವಾಮಿ ಬೆಟ್ಟದಲ್ಲಿ ಸಂಧಿಸುತ್ತವೆ. ತಾಲ್ಲೂಕಿನ ದಕ್ಷಿಣ ಗಡಿಯಲ್ಲಿ ಮೋಯರ್ ನದಿ ಹರಿಯುತ್ತದೆ. ಇದೇ ಕರ್ನಾಟಕ ಮತ್ತು ತಮಿಳುನಾಡಿನ ಈ ಭಾಗದ ಗಡಿ ರೇಖೆ. ತಾಲ್ಲೂಕಿನ ಮುಖ್ಯ ನದಿ ಗುಂಡ್ಲುಹೊಳೆ. ಈ ನದಿ ತಾಲ್ಲೂಕಿನ ಮಧ್ಯದಲ್ಲಿ ದಕ್ಷಿಣದಿಂದ ಉತ್ತರಕ್ಕೆ ಹರಿಯುತ್ತದೆ. ಮುಂದೆ ನಂಜನಗೂಡಿನಲ್ಲಿ ಕಪಿಲಾ ನದಿಯನ್ನು ಸೇರುತ್ತದೆ. ತಾಲ್ಲೂಕಿನಲ್ಲಿ ಎರೆಮಣ್ಣು ಇದೆ. ಹೆಚ್ಚು ಭಾಗ ನುರುಜುಭೂಮಿ, ಮಳೆ ಕಡಿಮೆ. ಜೋಳ ಮುಖ್ಯ ಬೆಳೆ. ರಾಗಿ, ಅವರೆ, ಹರಳು ಇತ್ಯಾದಿಗಳ ವ್ಯವಸಾಯ ಸಹ ಇದೆ. ಕೆರೆಗಳಿಂದ ಸ್ವಲ್ಪಮಟ್ಟಿಗೆ ಬತ್ತದ ಬೆಳೆ ಆಗುತ್ತದೆ. ತೋಟಗಳೂ ಇವೆ. ಇಲ್ಲಿಯ ವೀಳ್ಯದ ಎಲೆ ಪ್ರಸಿದ್ಧ.


ಗುಂಡ್ಲುಪೇಟೆ ಈ ತಾಲ್ಲೂಕಿನ ಕೇಂದ್ರ. ಗುಂಡ್ಲುಹೊಳೆಯ ಎಡದಂಡೆಯ ಮೇಲಿರುವ ಈ ಊರು ಮೈಸೂರು-ಉದಕಮಂಡಲ (ಊಟಿ) ಹೆದ್ದಾರಿಯಲ್ಲಿ ಮೈಸೂರಿನ ದಕ್ಷಿಣಕ್ಕೆ 61ಕಿಮೀ ದೂರದಲ್ಲಿದೆ. ಗುಂಡ್ಲುಪೇಟೆಯಿಂದ ಪೂರ್ವಕ್ಕಿರುವ ಚಾಮರಾಜನಗರಕ್ಕೆ, ಪಶ್ಚಿಮದೆಡೆ ಕೇರಳದ ಸುಲ್ತಾನ ಬತ್ತೇರಿ ಮತ್ತು ಮುಂದೆ ಕಣ್ಣಾನೂರಿಗೆ, ವಾಯವ್ಯದಲ್ಲಿ ಹೆಗ್ಗಡದೇವನಕೋಟೆ ಕಡೆಗೆ ರಸ್ತೆಗಳಿವೆ.


ಈ ಊರಿನ ಪ್ರಾಚೀನನಾಮ ವಿಜಯಪುರ. ಇದು ತೆರಕಣಾಂಬಿ ಅರಸರ ವಶದಲ್ಲಿ ಬಹಳ ಕಾಲ ಇತ್ತೆಂದು ತೋರುತ್ತದೆ. 1674ರಲ್ಲಿ ಮೈಸೂರಿನ ಚಿಕ್ಕದೇವರಾಜ ಒಡೆಯರು ಈ ಸ್ಥಳ ಬೆಳೆಯಲು ಕಾರಣ. ಇವರು ತಮ್ಮ ಬಾಲ್ಯವನ್ನು ಗುಂಡ್ಲುಪೇಟೆಯ ಸಮೀಪದಲ್ಲಿನ ಹಂಗಳದಲ್ಲಿರುವ ಒಂದು ಕೋಟೆಯಲ್ಲಿ ಬಂಧನದಲ್ಲಿ ಕಳೆಯುತ್ತಿದ್ದಾಗ ಇವರ ತಂದೆ ವಿದಿsವಶರಾಗಲು ಅವರ ಅಂತ್ಯಕ್ರಿಯೆಯನ್ನು ವಿಜಯಪುರದ ಬಳಿ ಇರುವ ಗುಂಡ್ಲುಹೊಳೆ ಬಳಿ ನೆರವೇರಿಸಿ ಮತ್ತೆ ಸೆರೆಮನೆಗೆ ಹಿಂದಿರುಗಿದರು. ಕಾಲಾನಂತರ ತಂದೆಯ ಅಂತ್ಯಕ್ರಿಯೆ ನಡೆದ ಸ್ಥಳದ ಬಳಿ ಒಂದು ಅಗ್ರಹಾರವನ್ನು ಕಟ್ಟಿಸಿ, ವಿಜಯಪುರದ ಕೋಟೆಯನ್ನು ವಿಸ್ತರಿಸಿ ಭದ್ರಪಡಿಸಿ, ತಂದೆಯ ಸಮಾಧಿಯ ಮೇಲೆ ಪರವಾಸುದೇವ ದೇವಾಲಯವನ್ನು ಕಟ್ಟಿಸಿದರು. ಅಂದಿನಿಂದ ವಿಜಯಪುರ ಪೇಟೆ ಸ್ಥಳವಾಗಿ ಬೆಳೆದು ಗುಂಡ್ಲುಪೇಟೆ ಎಂಬ ಹೆಸರನ್ನು ಗಳಿಸಿತು. ಈಗ ಅಗ್ರಹಾರವಾಗಲಿ ಕೋಟೆಯಾಗಲಿ ಉಳಿದಿಲ್ಲ. ಪರವಾಸುದೇವ ದೇವಾಲಯ ಟಿಪ್ಪು ಸುಲ್ತಾನನ ಆಳಿಕೆಯವರೆಗೂ ಉತ್ತಮ ಸ್ಥಿತಿಯಲ್ಲಿತ್ತು. ಅನಂತರದ ವರ್ಷಗಳಲ್ಲಿ ಸರಿಯಾದ ರಕ್ಷಣೆಯಿಲ್ಲದೆ ಪಾಳುಬಿದ್ದಿದೆ. ಕಣಶಿಲೆಯಿಂದ ಕಟ್ಟಿರುವ ಈ ದೇವಾಲಯ ಸಾಕಷ್ಟು ವಿಶಾಲವಾಗಿದ್ದು ಗರ್ಭಗೃಹ, ಪ್ರದಕ್ಷಿಣಾಪಥ, ಸುಕನಾಸಿ, ವಿಶಾಲವಾದ ಮತ್ತು ಚೌಕಟ್ಟಾದ 13 ಕಂಬಗಳಿರುವ ನವರಂಗ ಮತ್ತು ಅದಕ್ಕೆ ಉತ್ತರ ಹಾಗೂ ದಕ್ಷಿಣದ ಕಡೆ ಒಂದೊಂದು ಸಣ್ಣ ಕೋಣೆ ಇವೆ. ದೇವಾಲಯದ ಮುಂದುಗಡೆ ಒಂದು ಮುಖಮಂಟಪವಿತ್ತು. ಈಚೆಗೆ ಅದನ್ನು ವಿಜಯನಾರಾಯಣ ದೇವಾಲಯದ ಮುಂಭಾಗಕ್ಕೆ ಸ್ಥಳಾಂತರಿಸಲಾಗಿದೆ. ದೇವಾಲಯದ ವಿನ್ಯಾಸ, ಅಲಂಕೃತವಾದ ಸುಕನಾಸಿಯ ದ್ವಾರ, ಶಿಲ್ಪಗಳು ಮತ್ತು ಕಂಬಗಳು ವಾಸ್ತುಶಿಲ್ಪದ ದೃಷ್ಟಿಯಿಂದ ವಿಶೇಷವಾದದ್ದು. ಈ ದೇವಾಲಯದ ಎಡಪಾರ್ಶ್ವದಲ್ಲಿ ಪರವಾಸುದೇವನ ದೇವಿಯಾದ ಕಮಲವಲ್ಲಿಯ ದೇವಾಲಯವಿದೆ. ಈ ಎರಡೂ ದೇವಾಲಯಗಳ ವಿಗ್ರಹಗಳನ್ನು ಈಗ ವಿಜಯನಾರಾಯಣ ದೇವಾಲಯಕ್ಕೆ ಸ್ಥಳಾಂತರಿಸಲಾಗಿದೆ.


ವಿಜಯನಾರಾಯಣ ದೇವಾಲಯ ಕೋಟೆಯ ಒಳಗಿದೆ. ಇದನ್ನು ಹೊಯ್ಸಳ ವಿಷ್ಣುವರ್ಧನ ಕಟ್ಟಿಸಿದನೆಂದು ಪ್ರತೀತಿ. ಆದರೆ ಇದು ವಿವಿಧ ಹಂತಗಳ ರಚನೆ. ಮುಖಮಂಟಪ ಈಚಿನದು. ನವರಂಗದ ಮೇಲ್ಫಾವಣಿ ವಿಜಯನಗರ ಶೈಲಿಯಂತೆ ಒಳಭಾಗದಲ್ಲಿ ಸಮತಟ್ಟಾಗಿದ್ದು ಮಧ್ಯದಲ್ಲಿ ಕಮಲವನ್ನು ಕೆತ್ತಲಾಗಿದೆ. ನವರಂಗದ ದಕ್ಷಿಣ ಭಾಗದಲ್ಲಿ ಈಗ ಮೂರು ಕೋಣೆಗಳನ್ನು ಮಾಡಿ ಪರವಾಸುದೇವ ಮತ್ತು ಆತನ ಪತ್ನಿಯರ ವಿಗ್ರಹಗಳನ್ನು ಮತ್ತು ಆಳ್ವಾರರ ವಿಗ್ರಹಗಳನ್ನು ಇಡಲಾಗಿದೆ. 13-14ನೆಯ ಶತಮಾನಕ್ಕೆ ಸೇರಿದ ಮೂಲ ವಿಜಯನಾರಾಯಣ ದೇವಾಲಯ ತಲಕಾಡಿನ ವೈದ್ಯೇಶ್ವರ ದೇವಾಲಯದಂತೆ ಮೂಲತಃ ಗರ್ಭಗೃಹ ಮತ್ತು ಸುಕನಾಸಿಯನ್ನು ಮಾತ್ರ ಹೊಂದಿತ್ತು. ಅನಂತರ ಶ್ರೀರಂಗಪಟ್ಟಣ ಹಾಗೂ ತೊಣ್ಣೂರಿನಲ್ಲಿರುವಂತೆ ಮುಚ್ಚಿರುವ ಪ್ರದಕ್ಷಿಣಾಪಥವನ್ನು ಕಲ್ಪಿಸಲಾಯಿತು. ಗರ್ಭಗೃಹದ ದ್ವಾರ ಪರವಾಸುದೇವ ದೇವಾಲಯದಲ್ಲಿರುವಂತೆಯೇ ಸುಂದರವಾಗಿದೆ. ಇಲ್ಲಿಯ ಮೂರ್ತಿ ಅಭಯ ಮುದ್ರೆಯಲ್ಲಿ ನಿಂತಿದ್ದು ಬಲಗೈಯಲ್ಲಿ ಕಮಲವನ್ನು ಹಿಡಿದಿದೆ. ಇದರ ಹಿಂಭಾಗದಲ್ಲಿರುವ ತೋರಣದಲ್ಲಿ ದಶಾವತಾರವನ್ನು ಕೆತ್ತಲಾಗಿದ್ದು ಈ ಶಿಲ್ಪ ಹೊಯ್ಸಳರ ಶಿಲ್ಪರಚನೆಯ ಅನುಕರಣೆಯಂತೆ ಕಾಣುತ್ತದೆ. ಇದು ವಿಜಯನಗರದ ಆರಂಭ ಕಾಲಕ್ಕೆ ಸೇರಿದ್ದೆಂದು ಹೇಳಬಹುದು. ಇಲ್ಲಿಯ ಪರವಾಸುದೇವ ವಿಗ್ರಹ ಸುಂದರವೂ ಸರಳವೂ ಆಗಿದೆ. ತಲೆಯ ಮೇಲ್ಭಾಗದಲ್ಲಿ ಬಿಚ್ಚಿರುವ ಹೆಡೆಯುಳ್ಳ ಆದಿಶೇಷನ ಸುರುಳಿಯ ಮೇಲೆ ಶಂಖಚಕ್ರ ಧಾರಿಯಾದ ವಾಸುದೇವ ಸುಖಾಸೀನನಾಗಿದ್ದಾನೆ. ಪರವಾಸುದೇವನ ಉತ್ಸವಮೂರ್ತಿಯೂ ಒಳ್ಳೆಯ ಶಿಲ್ಪ. ಹಸ್ತಿನಾವತಿಯಲ್ಲಿದ್ದ ಈ ವಿಗ್ರಹವನ್ನು ಶಿವಸಮುದ್ರಕ್ಕೆ ತಂದು ಅನಂತರ ಇಲ್ಲಿಗೆ ತರಲಾಯಿತೆಂದು ಪ್ರತೀತಿ.


ಈ ದೇವಾಲಯಕ್ಕೆ ಒಂದೂವರೆ ಕಿಮೀ ಈಶಾನ್ಯದಲ್ಲಿ ರಾಮೇಶ್ವರ ದೇವಾಲಯವಿದೆ. ಈಗ ಶಿಥಿಲವಾಗಿರುವ ಈ ಗುಡಿಯನ್ನು 1337ರಲ್ಲಿ ಕುಮಾರ ಕಂಪಣ್ಣನೆಂಬುವನು ಕಟ್ಟಿಸಿದ. ಇದರ ರಚನೆ ತಲಕಾಡಿನ ವೈದ್ಯೇಶ್ವರ ದೇವಾಲಯ ದಂತಿದೆ. ಚೌಕಟ್ಟಾದ ಗರ್ಭಗೃಹ, ಸುಕನಾಸಿ, ನಾಲ್ಕು ಕಂಬಗಳಿರುವ ನವರಂಗ ಮತ್ತು ಪೂರ್ವ ಹಾಗೂ ದಕ್ಷಿಣ ದಿಕ್ಕುಗಳಲ್ಲಿ ಕೈಸಾಲೆ ಹಾಗೂ ಪ್ರವೇಶ ದ್ವಾರಗಳಿವೆ. ಈ ದೇವಾಲಯವನ್ನು ಕಣಶಿಲೆಯಿಂದ ಕಟ್ಟಿ ಗೋಪುರವನ್ನು ಮಾತ್ರ ಇಟ್ಟಿಗೆಯಿಂದ ರಚಿಸಲಾಗಿದೆ. ದೇವಾಲಯದ ಅಧಿಷ್ಠಾನ ಪಟ್ಟಿಕೆಗಳ ಮೇಲೆ ಅನೇಕ ಕನ್ನಡ ಶಾಸನಗಳಿವೆ.