ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗುಳ್ಳೆನರಿ

ವಿಕಿಸೋರ್ಸ್ದಿಂದ
ಗುಳ್ಳೆನರಿ

ನಾಯಿ ಜಾತಿಗೆ ಸೇರಿದ, ನರಿಯಂತೆ (ಫಾಕ್ಸ್‌) ಕಾಣುವ ಒಂದು ಮಾಂಸಾಹಾರಿ ಸಸ್ತನಿ (ಜಾಕಾಲ್). ಕಾರ್ನಿವೊರ ಗಣದ ಕೇನಿಡೀ ಕುಟುಂಬಕ್ಕೆ ಸೇರಿದೆ. ಈ ಜಾತಿಯ ವೈಜ್ಞಾನಿಕ ಹೆಸರು ಕೇನಿಸ್. ಇದರಲ್ಲಿ ಅನೇಕ ಪ್ರಭೇದಗಳಿವೆ ; ಮುಖ್ಯವಾದವು ಕೇನಿಸ್ ಆರಿಯಸ್ (ಯುರೋಪ್, ಭಾರತವೂ ಸೇರಿದಂತೆ ಏಷ್ಯದ ಹಲವಾರು ದೇಶಗಳು, ಉತ್ತರ ಆಫ್ರಿಕ, ಈಜಿಪ್ಟ್‌ ಮುಂತಾದೆಡೆಗಳಲ್ಲಿ ಕಾಣಬರುತ್ತದೆ), ಕೇನಿಸ್ ಮೆಸೋಮೆಲಾಸ್ (ಕಪ್ಪು ಬೆನ್ನಿನ ಗುಳ್ಳೆನರಿ - ದಕ್ಷಿಣ ಆಫ್ರಿಕದಲ್ಲಿರುವಂಥದು), ಕೇನಿಸ್ ಅಡಸ್ಟಸ್ (ದಕ್ಷಿಣ ಆಫ್ರಿಕದ ಮೂಲವಾಸಿ) ಮತ್ತು ಕೇನಿಸ್ ಸೈಮೆನ್ಸಿಸ್ (ಅಬಿಸೀನಿಯದ ಕೆಂಪು ಗುಳ್ಳೆನರಿ ಅಭಿಸೀನಿಯದಲ್ಲಿ ಕಂಡುಬರುವಂಥದು). ಭಾರತದ ವಿವಿಧ ಭಾಗಗಳಲ್ಲಿ ಕೇ. ಆರಿಯಸ್ ಪ್ರಭೇದದ ಬೇರೆ ಬೇರೆ ಬಗೆಗಳು ಕಂಡುಬರುತ್ತವೆ. ಪಶ್ಚಿಮ ಭಾಗದ ಮರುಭೂಮಿ ಪ್ರದೇಶಗಳಲ್ಲಿ ಕೆ. ಆರಿಯಸ್ ಬಗೆಯೂ ಅಸ್ಸಾಮ್, ನೇಪಾಳ, ಸಿಕ್ಕಿಮ್ಗಳಲ್ಲಿ ಇಂಡಿಕಸ್ ಬಗೆಯೂ ದಕ್ಷಿಣ ಭಾರತದಲ್ಲಿ ನೇರಿಯ ಬಗೆಯೂ ಇವೆ.


ಗುಳ್ಳೆನರಿಗಳ ವಿವಿಧ ಪ್ರಭೇದಗಳ ಗಾತ್ರದಲ್ಲಿ, ಬಣ್ಣದಲ್ಲಿ ಹಲವಾರು ವ್ಯತ್ಯಾಸಗಳಿವೆ. ಆರಿಯಸ್ ಪ್ರಭೇದದ ಉದ್ದ ಸುಮಾರು 60 ಸೆಂಮೀ ಎತ್ತರ ಸುಮಾರು 35 ಸೆಂಮೀ ದೇಹದ ಬಣ್ಣ ಬೂದುಮಿಶ್ರಿತ ಹಳದಿ. ಇದು ಬೆನ್ನಿನಭಾಗ ಗಾಢವಾಗಿಯೂ ಹೊಟ್ಟೆಯ ಭಾಗ ತಿಳಿಯಾಗಿಯೂ ಇದೆ.

ಮೆಸೋಮೆಲಾಸ್ ಪ್ರಭೇದದ ದೇಹ ಕೆಂಪುಮಿಶ್ರಿತ ತುಕ್ಕು ಬಣ್ಣಕ್ಕಿದೆ. ಬೆನ್ನು ಕರಿಯ ಬಣ್ಣದ್ದು. ಅಡಸ್ಟಸ್ ಪ್ರಭೇದ ಬೂದುಬಣ್ಣದ್ದು. ಅಲ್ಲದೆ ಇದರ ಎರಡು ಪಕ್ಕಗಳಲ್ಲಿ ಉದ್ದುದ್ದನೆಯ ಪಟ್ಟಿಗಳಿವೆ. ಸೈಮೆನ್ಸಿಸ್ ಪ್ರಭೇದದ ದೇಹದ ಬಣ್ಣ ಕೆಂಪು. ಉಳಿದ ಪ್ರಭೇದಗಳಿಗೆ ಹೋಲಿಸಿದರೆ ಇದರ ಕಾಲುಗಳು ಹೆಚ್ಚು ಉದ್ದ. ಭಾರತದಲ್ಲಿನ ವಿವಿಧ ಬಗೆಗಳಲ್ಲೂ ಅಲ್ಪ ಸ್ವಲ್ಪ ವ್ಯತ್ಯಾಸಗಳನ್ನು ಗಮನಿಸಬಹುದು. ಹೀಗೆ ತಮ್ಮ ಕೆಲವು ಲಕ್ಷಣಗಳಲ್ಲಿ ಪರಸ್ಪರ ಭಿನ್ನತೆಗಳನ್ನು ತೋರುವುದಾದರೂ ಎಲ್ಲ ಪ್ರಭೇದಗಳಿಗೂ ಹಲವಾರು ಸಮಾನ ಗುಣಲಕ್ಷಣಗಳಿವೆ. ಮೋಟು ಕಿವಿಗಳು, ಪೊದೆಯಂಥ ಬಾಲ, ಹೆಚ್ಚು ಕಡಿಮೆ ನಾಯಿಯ ಮೂತಿಯನ್ನು ಹೋಲುವಂಥ ಮೂತಿ-ಇವು ಗುಳ್ಳೆನರಿಗಳ ಮುಖ್ಯ ಲಕ್ಷಣಗಳಲ್ಲಿ ಕೆಲವು. ಬಾಲದ ಬುಡದಲ್ಲಿ ಒಂದು ಗ್ರಂಥಿ ಉಂಟು. ಇದರ ಸ್ರಾವದಿಂದಾಗಿ ನರಿಗಳಿಗೆ ಅಸಹ್ಯಕರವಾದ ವಾಸನೆಯಿರುತ್ತದೆ.


ಗುಳ್ಳೆನರಿಗಳು ದಟ್ಟವಾದ ಕಾಡುಗಳಿಗಿಂತ ಹೆಚ್ಚಾಗಿ ಬಯಲು ಪ್ರದೇಶಗಳಲ್ಲಿ ಇಲ್ಲವೆ ಕುರುಚಲು ಕಾಡಿನ ಪ್ರದೇಶಗಳಲ್ಲಿ ವಾಸಿಸುತ್ತವೆ. ಇವು ನಿಶಾಚರಿಗಳು. ಹಾಳು ಬಿದ್ದಿರುವ ಜಾಗಗಳಲ್ಲಿನ ನೆಲಗಳ ಬಿಲಗಳಲ್ಲಿ ಇಲ್ಲವೆ ಪೊದೆಗಳ ನಡುವೆ ಹಗಲಿನಲ್ಲಿ ಅಡಗಿಕೊಂಡಿದ್ದು ಮುಸ್ಸಂಜೆಯಲ್ಲಿ ಆಹಾರವನ್ನು ಅರಸಿಕೊಂಡು ಹೊರಬರುತ್ತವೆ. ಇವು ಬಲುಗೋಪ್ಯ ಸ್ವಭಾವದವಾದ್ದರಿಂದ ಇವುಗಳ ಚಲನವಲನಗಳನ್ನು ಅರಿಯುವುದು ಕಷ್ಟ.


ಗುಳ್ಳೆನರಿಗಳು ಕಾಡಿನ ಝಾಡಮಾಲಿಗಳೆಂದು ಹೆಸರಾಗಿವೆ. ಹುಲಿ, ಚಿರತೆ, ಸಿಂಹ ಮುಂತಾದವುಗಳನ್ನು ಹಿಂಬಾಲಿಸಿ, ಅವು ಕೊಂದು, ತಿಂದು, ಮಿಗಿಸಿದ್ದನ್ನು ತಾವು ತಿಂದು ಬದುಕುತ್ತವೆ. ಎಷ್ಟೋ ಸಲ ಸಿಂಹವೊ ಹುಲಿಯೊ ಎರೆಯೊಂದನ್ನು ಹಿಡಿದು ತನಗೆ ತೃಪ್ತಿಯಾಗುವ ತನಕ ತಿಂದು ಮಿಗಿಸುವವರೆಗೂ ಹಲವಾರು ಗಂಟೆಗಳ ಕಾಲ ಕಾಯುತ್ತಿದ್ದು ಅನಂತರ ಮಿಗುವ ಆಹಾರವನ್ನು ತಿನ್ನುವುದುಂಟು. ಗುಳ್ಳೆನರಿಗಳು ಸತ್ತ ಪ್ರಾಣಿಗಳನ್ನು ತಿನ್ನುತ್ತವೆ. ಅಲ್ಲದೆ ರಾತ್ರಿವೇಳೆ ಹಳ್ಳಿಗಳಿಗೆ ನುಗ್ಗಿ ಅಲ್ಲಿ ಸಿಗುವ ಹೊಲಸನ್ನು ಕೆಲವೊಮ್ಮೆ ಕೋಳಿ, ಕುರಿಮರಿ ಮುಂತಾದ ಪ್ರಾಣಿಗಳನ್ನು ತಿನ್ನುವುದುಂಟು. ಹಲ್ಲಿ, ಓತಿಕೇತ, ಕೀಟಗಳು, ಸಣ್ಣ-ಪುಟ್ಟ ಸಸ್ತನಿಗಳು ಮೊದಲಾದವನ್ನೂ ತಿನ್ನುತ್ತವಲ್ಲದೆ, ಕಾಫಿಹಣ್ಣುಗಳು, ಎಲಚಿಹಣ್ಣು ಮುಂತಾದವನ್ನು ಸೇವಿಸುತ್ತವೆ. ಅನೇಕ ಸಲ ದ್ರಾಕ್ಷಿ, ಕಬ್ಬು, ಇತ್ಯಾದಿ ಕೃಷಿಭೂಮಿಗಳಿಗೂ ನುಗ್ಗಿ ಹಾಳು ಮಾಡುವುದುಂಟು. ಇವು ಸಾಮಾನ್ಯವಾಗಿ ಒಂಟಿಯಾಗಿಯೇ ಆಹಾರಾನ್ವೇಷಣೆ ಮಾಡುವುದಾದರೂ ಕೆಲವು ಸಲ ಗುಂಪುಗೂಡಿಕೊಂಡು ಎರೆಪ್ರಾಣಿಗಳನ್ನು ಬೇಟೆಯಾಡುವುದುಂಟು. ಆಹಾರ ಪ್ರಾಣಿಗಳನ್ನು ಅಟ್ಟಿಸಿಕೊಂಡು ವೇಗವಾಗಿ ಓಡಬಲ್ಲವು. ಹೀಗೆ ಓಡುವಾಗ ಓಟದ ವೇಗ ಗಂಟೆಗೆ 50 ಕಿಮೀ ಇರುವುದೆಂದು ಹೇಳಲಾಗಿದೆ. ಸಂಜೆಯ ವೇಳೆ ವಿಶಿಷ್ಟ ರೀತಿಯಲ್ಲಿ ಊಳಿಡುವುದು ಗುಳ್ಳೆನರಿಗಳ ವಿಚಿತ್ರ ಲಕ್ಷಣ. ದೀರ್ಘವಾದ 3-4 ಕೂಗುಗಳನ್ನೂ ಕೊನೆಯಲ್ಲಿ ಕೆಲವು ಹ್ರಸ್ವ ಬಗುಳುವಿಕೆಗಳನ್ನು ಒಳಗೊಂಡಿರುವ ಈ ಗೋಳುಕರೆಯನ್ನು ಕೇಳಿದವರಾರೂ ಸುಲಭವಾಗಿ ಮರೆಯಲಾರರು. ಗುಳ್ಳೆನರಿಗಳು ತಮ್ಮ ಸಂತಾನೋತ್ಪತ್ತಿಯ ಕ್ರಮದಲ್ಲಿ ನಾಯಿ ಮತ್ತು ತೋಳಗಳನ್ನು ಹೋಲುತ್ತವೆ. ಇವುಗಳ ಗರ್ಭಾವಸ್ಥೆಯ ಅವಧಿ 57-70 ದಿವಸಗಳು. ಸಾಮಾನ್ಯವಾಗಿ ಸೂಲಿಗೆ 3-4 ಮರಿಗಳು ಹುಟ್ಟುತ್ತವೆ. ಇತರ ಪ್ರಾಣಿಗಳು ತೊರೆದುಹೋದ ಬಿಲದಲ್ಲೊ ಇಲ್ಲವೆ ತಾವೇ ಸ್ವತ: ಕೊರೆದು ನಿರ್ಮಿಸಿದ ಬಿಲದಲ್ಲೋ ಮರಿಗಳನ್ನು ಈಯುತ್ತವೆ. ತಂದೆ ತಾಯಿಗಳೆರಡೂ ಮರಿಗಳ ಪಾಲನೆಯಲ್ಲಿ ತೊಡಗಿರುತ್ತವೆ. 7-8 ತಿಂಗಳು ವಯಸ್ಸಾದ ಅನಂತರ ಮರಿಗಳಿಗೆ ಸ್ವತಂತ್ರವಾಗಿ ಬೇಟೆಯಾಡುವ ಸಾಮರ್ಥ್ಯ ಬರುತ್ತದೆ. ಗುಳ್ಳೆನರಿಗಳ ಆಯಸ್ಸು ಸುಮಾರು 15 ವರ್ಷಗಳು.