ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೂಟೆನ್‌ಬರ್ಗ್, ಯೋಹಾನ್

ವಿಕಿಸೋರ್ಸ್ದಿಂದ
ಗೂಟೆನ್‌ಬರ್ಗ್, ಯೋಹಾನ್

1395-1468. ಜರ್ಮನ್ ಉಪಜ್ಞೆಕಾರ. ಯುರೋಪಿನಲ್ಲಿ ಮುದ್ರಣತಂತ್ರವನ್ನು ಪ್ರಥಮವಾಗಿ ಆವಿಷ್ಕರಿಸಿದವನೆಂದು ಪ್ರತೀತಿ ಮುದ್ರಣ. ಬಿಡಿ ಅಕ್ಷರಗಳನ್ನು ಎರಕ ಹೊಯ್ದು ಮೊಳೆಗಳನ್ನು ತಯಾರಿಸಿ ಅವುಗಳ ಯುಕ್ತ ಜೋಡಣೆಯಿಂದ ಮುದ್ರಣಫಲಕವನ್ನು ತಯಾರಿಸಿ ಬೇಕಾದಷ್ಟು ಪ್ರತಿಗಳನ್ನು ಮುದ್ರಿಸುವ ಯೋಜನೆಯೇ ಗೂಟೆನ್‍ಬರ್ಗ್ ತಂತ್ರ. ಇದರ ಅನುಸಾರ ಮುದ್ರಿತವಾದ ಗೂಟೆನ್‍ಬರ್ಗ್ ಬೈಬಲ್ಲುಗಳು ಇಂದಿಗೂ ಮುದ್ರಣ ಕಲೆಯ ಪರಮೋಚ್ಛಸ್ಥಿತಿಯ ಉತ್ಕೃಷ್ಟ ಉದಾಹರಣೆ ಎಂದು ಪರಿಣತರ ಅಭಿಪ್ರಾಯ. ಆದ್ದರಿಂದ ಗೂಟೆನ್ಬರ್ಗ್ನಿಂದ ಮುದ್ರಣತಂತ್ರ ಪ್ರಾರಂಭವಾದದ್ದು ಮಾತ್ರವಲ್ಲ, ಆ ಕಲೆ ತನ್ನ ಅತ್ಯುನ್ನತ ಮಟ್ಟದಲ್ಲಿಯೇ ವಿಕಾಸವಾಯಿತು. ಪುಟವೊಂದರ 42 ಸಾಲುಗಳ ಎರಡು ಕಾಲಮುಗಳಿರುವ 1282 ಪುಟಗಳ ಗೂಟೆನ್‍ಬರ್ಗ್ ಬೈಬಲ್ಲಿನ 300 ಪ್ರತಿಗಳನ್ನು ಈತ ಮುದ್ರಿಸಿದ್ದ. ಕೈಬರೆಹದ ಪುಸ್ತಕಗಳ ಮೂಲಕ ಮಾತ್ರ ಜ್ಞಾನ ಪ್ರಸಾರ ನಡೆಯುತ್ತಿದ್ದ ದಿನಗಳಲ್ಲಿ ಸಹಜವಾಗಿ ಜ್ಞಾನ ಶ್ರೀಮಂತರ ಹಾಗೂ ಪ್ರಬಲಿಗಳ ಸೊತ್ತಾಗಿತ್ತು. ಪುಸ್ತಕ ಭಂಡಾರಗಳು ವಿರಳ ಸಂಖ್ಯೆಯಲ್ಲಿದ್ದವು. ಮುದ್ರಣ ತಂತ್ರ ಬಳಕೆಗೆ ಬಂದದ್ದರಿಂದ ಒಂದೇ ವಸ್ತುವಿನ ಖಚಿತ ಬಹು ಪ್ರತೀಕರಣಗಳು ಸುಲಭ ಸಾಧ್ಯವಾಯಿತು. ಹೀಗಾಗಿ ಜ್ಞಾನಪ್ರಸಾರಕ್ಕೆ ಬೃಹತ್ ಪ್ರಮಾಣ ಕುಮ್ಮಕ್ಕು ಲಭ್ಯವಾಯಿತು. ಗೂಟೆನ್‍ಬರ್ಗ್‌ನ ಹಿರಿಮೆ ಮತ್ತು ಸಾಧನೆ ಇರುವುದು ಈ ದಿಶೆಯಲ್ಲಿ. ಒಂದು ಶತಮಾನದ ತರುವಾಯ (ಎಂದರೆ 16-17 ನೆಯ ಶತಮಾನ) ಉದಯಿಸಿದ ವೈಜ್ಞಾನಿಕಾಂದೋಲನದ ನಾಂದಿಯನ್ನು ಗೂಟೆನ್‍ಬರ್ಗ್‌ನ ಸಿದ್ಧಿಯಲ್ಲಿ ಗುರುತಿಸಬಹುದು.


ಯೋಹಾನ್ ಗೊಟೆನ್‍ಬರ್ಗ್‌ನ ಬಾಲ್ಯ, ವಿದ್ಯೆ ಮುಂತಾದ ವೈಯಕ್ತಿಕ ವಿವರಗಳು ಖಚಿತವಾಗಿ ತಿಳಿದಿಲ್ಲ. ಮೈನ್ಟ್‌ಜ಼್ ನಗರದಲ್ಲಿ ಸು. 1395ರಲ್ಲಿ ಜನಿಸಿದ. ಮೈನ್ಟ್‌ಜ಼್ ನಗರದ ಮೂಲವಾಸಿಗಳಾದ ಈ ಕುಟುಂಬ ಕಾರಣಾಂತರದಿಂದ ಸ್ಟ್ರಾರ್ಸ್‌ಬರ್ಗ್ ನಗರಕ್ಕೆ ಬಂದು ನೆಲೆಸಿತ್ತು. ಯೋಹಾನನ ಬಾಲ್ಯ ಸಂದದ್ದು ಈ ನಗರದಲ್ಲಿ. ಅಕ್ಕಸಾಲಿಯಾಗಿ ಇವನು ವೃತ್ತಿಶಿಕ್ಷಣ ಪಡೆದ. ಇದೇ ಮುಂದೆ ಅವನಿಗೆ ಅಚ್ಚಿನ ಮೊಳೆಗಳನ್ನು ತಯಾರಿಸುವುದಕ್ಕೂ ಕೊರೆಯುವು ದಕ್ಕೂ ಬೇಕಾದ ಮೂಲಜ್ಞಾನವನ್ನು ಒದಗಿಸಿತು. ಅಕ್ಷರಗಳನ್ನು ವಿಪರ್ಯಯವಾಗಿ ಸಮಗಾತ್ರದ ಲೋಹಮೊಳೆಗಳ ತುದಿಗಳಲ್ಲಿ ಕೊರೆಯುವುದು, ಪಾಠಾನುಸಾರ ಈ ಮೊಳೆಗಳನ್ನು ಜೋಡಿಸಿ ನಿರ್ದಿಷ್ಟ ಮುದ್ರಣಫಲಕವನ್ನು ತಯಾರಿಸು ವುದು. ಇದರೆ ಮೇಲೆ ಯುಕ್ತ ಪ್ರಮಾಣದಲ್ಲಿ ಶಾಯಿಯನ್ನು ಸವರಿ ಸೂಕ್ತ ಕಾಗದದ ಮೇಲೆ ಈ ಫಲಕವನ್ನು ಒತ್ತುವುದರ ಮೂಲಕ ಮುದ್ರಿತಪ್ರತಿಯನ್ನು ಸಿದ್ಧಪಡಿಸುವುದು-ಇವು ಗೂಟೆನ್ ಬರ್ಗ್ ಕನಸು ಕಂಡು ಸುಮಾರು ಇಪ್ಪತ್ತು ವರ್ಷಗಳ ನಿರಂತರ ಪ್ರಯತ್ನದಿಂದ ನನಸಾಗಿಸಿದ ಸಾಹಸಗಳು.


ಹೀಗೆ ಗೂಟೆನ್ಬರ್ಗ್ ಇತಿಹಾಸ ನಿರ್ಮಾಪಕ ಉಪಜ್ಞೆಕಾರನಾಗಿದ್ದರೂ ವ್ಯಾವಹಾರಿಕವಾಗಿ ಅವನು ಸೋಲನ್ನೇ ಅನುಭವಿಸುತ್ತಿದ್ದ. ತನ್ನ ಮುದ್ರಣ ತಂತ್ರವನ್ನು ಕಾರ್ಯಗತಗೊಳಿಸಲು ಅವನು ಸಾಲಮಾಡಿ ಮುಂದುವರಿಸಿದ. ಆದರೆ ಮುದ್ರಣ ಪ್ರಾಯೋಗಿಕವಾಗಿ ಯಶಸ್ವಿ ಆದಾಗಲೂ ಈತನಿಗೆ ಅದರ ಆರ್ಥಿಕ ಲಾಭ ಸಿದ್ಧಿಸಲಿಲ್ಲ. ಕಾಲವಿನ್ನೂ ಪಕ್ವವಾಗಿರದಿದ್ದುದೇ ಇದರ ಕಾರಣ. ಹೀಗಾಗಿ ನ್ಯಾಯಾಲಯದ ಪ್ರಕರಣಗಳನ್ನು ಈತ ಎದುರಿಸಬೇಕಾಯಿತು. ಅಲ್ಲಿ ತನ್ನ ಸಮಸ್ತ ಯಂತ್ರಗಳನ್ನೂ ಸಾಲಗಾರರಿಗೆ 1455ರಲ್ಲಿ ಕಳೆದುಕೊಳ್ಳುವ ದುಸ್ಥಿತಿಗೆ ಈಡಾದ. ಸಾಲಗಾರನಾಗಿಯೇ ಇವನು ಸು. 1468ರ ಫೆಬ್ರವರಿ 3 ರಂದು ಮೈನ್ಟಜ಼್‌ನಲ್ಲಿ ನಿಧನ ಹೊಂದಿದ.