ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೆಂಡೆ ಮೀನು

ವಿಕಿಸೋರ್ಸ್ದಿಂದ
ಗೆಂಡೆ ಮೀನು

ಸೈಪ್ರಿನಿಫಾರ್ಮೀಸ್ ಗಣದ ಸೈಪ್ರಿನಿಡೀ ಕುಟುಂಬಕ್ಕೆ ಸೇರಿದ ಅನೇಕ ಜಾತಿಯ ಮೀನುಗಳಿಗೆ ಅನ್ವಯವಾಗುವ ಹೆಸರು. ಕಾರ್ಪ್ ಎಂಬುದು ಆಂಗ್ಲ ಭಾಷೆಯಲ್ಲಿ ಕರೆಯುವ ಸಾಮಾನ್ಯ ಹೆಸರು. ಗೆಂಡೆ ಮೀನುಗಳು ಸಿಹಿನೀರಿನಲ್ಲಿ ವಾಸ ಮಾಡುವಂಥವು. ಭಾರತದಲ್ಲಿ ಸ್ಥಳೀಯವಾಗಿ ದೊರಕುವ ಕೆಲವು ಪಂಟಿಯಸ್ ಅಥವಾ ಬಾರ್ಬಸ್ ಪ್ರಭೇದಗಳು, ಗಂಗಾನದಿ ಮೂಲದ ದೊಡ್ಡ ಗೆಂಡೆಗಳಾದ ಕಾಟ್ಲಾ, ರೋಹು, ಮೃಗಾಲ ಮೀನುಗಳು, ಅಲ್ಲದೆ ವಿದೇಶಿ ಮೂಲದ ಸಾಮಾನ್ಯ ಗೆಂಡೆ (ಸೈಪ್ರಿನಸ್ ಕಾರ್ಪಿಯೊ), ಬೆಳ್ಳಿಗೆಂಡೆ (ಹೈಪಾಫ್ತಾಲ್ಮಿಕ್ತಿಸ್ ಮಾಲಿಟ್ರಿಕ್ಸ್‌) ಮತ್ತು ಹುಲ್ಲು ಗೆಂಡೆ (ಟೀನೊಫಾರೊಂಗೊಡಾನ್ ಇಡೆಲ) ಮೀನುಗಳು ಹಾಗೂ ಕೃಷ್ಣಾ, ಗೋದಾವರಿ, ಕಾವೇರಿ ಮತ್ತಿತರ ನದಿ, ಜಲಾಶಯಗಳಲ್ಲಿ ಕಂಡುಬರುವ ಲೇಬಿಯೋ ಫಿಂಬ್ರಿಯೇಟಸ್, ಲೇಬಿಯೋ ಕೊಂಟಿಯಸ್, ಸಿರ್ಹೈನಸ್ ಸಿರ್ಹೋಸಾ ಮುಂತಾದ ಮೀನುಗಳಿಗೆ ಸಾಮಾನ್ಯವಾಗಿ ಕರೆಯುವ ಹೆಸರು ಗೆಂಡೆ ಮೀನುಗಳು. ಆದರೆ ಇವುಗಳನ್ನು ಅವುಗಳದೇ ಆದ ವಿಶಿಷ್ಟ ಹೆಸರುಗಳಿಂದಲೂ ಕರೆಯುವುದುಂಟು. ಭಾರತದ ದೊಡ್ಡ ಗೆಂಡೆಗಳನ್ನು ಮತ್ತು ವಿದೇಶಿ ಗೆಂಡೆಗಳನ್ನು ಹೊರತುಪಡಿಸಿ ಉಳಿದವು ಸಣ್ಣ ಹಾಗೂ ಮಧ್ಯಮ ಗಾತ್ರದವು. ಆದ್ದರಿಂದ ಇವುಗಳನ್ನು ಮೈನರ್ ಕಾರ್ಪ್ ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಗೆಂಡೆ ಮೀನುಗಳ ಬಣ್ಣ ಬಿಳಿ ಅಥವಾ ಬೂದು. ಕೆಲವಕ್ಕೆ ಸಣ್ಣ ಮೀಸೆಗಳಿವೆ (ಬಾರ್ಬಲ್ಸ್‌), ಇನ್ನು ಕೆಲವಕ್ಕೆ ಇಲ್ಲ. ಸಾಮಾನ್ಯವಾಗಿ ಹೊಟ್ಟೆ ಗುಂಡಗಿರುತ್ತದೆ. ಕಿವಿರು ಸೀಳುಗಳು ಅಗಲವಾಗಿರುತ್ತವೆ. ಪಾಶರ್ವ್‌ರೇಖೆ ಪುರ್ಣವಾಗಿರುತ್ತದೆ.


ಗೆಂಡೆ ಮೀನುಗಳು ಸಸ್ಯಾಹಾರಿಗಳು. ನೀರಿನಲ್ಲಿ ಜೀವಿಸುವ ಫ್ಲವಕಗಳು, ಕೊಳೆಯುತ್ತಿರುವ ಸಸ್ಯ ಸಂಬಂಧೀ ವಸ್ತುಗಳೇ ಪ್ರಧಾನ ಆಹಾರ. ಇವಕ್ಕೆ ದವಡೆ ಹಲ್ಲಿಲ್ಲ. ಹುಲ್ಲು ಗೆಂಡೆ ಮೀನಿಗೆ ಗಂಟಲಿನಲ್ಲಿ ಹಲ್ಲುಗಳಿರುತ್ತವೆ. ಇದರಿಂದ ಅದು ಮೃದು ಜಲಸಸ್ಯಗಳನ್ನು ತಿನ್ನುತ್ತದೆ. ಕೆರೆ ಕುಂಟೆಗಳಲ್ಲಿ ಜಲಸಸ್ಯಗಳ ಜೈವಿಕ ನಿಯಂತ್ರಣಕ್ಕೆ ಇದು ಸೂಕ್ತ ಮೀನು. ಬಹುತೇಕ ಗೆಂಡೆ ಮೀನುಗಳು ತಿನ್ನಲು ಯೋಗ್ಯವಾದಂಥವು. ಒಳನಾಡು ಮೀನುಗಾರಿಕೆಯಲ್ಲಿ ಇವುಗಳ ಪಾತ್ರ ಹಿರಿದು. ಪ್ರಪಂಚಾದ್ಯಂತ 2003 ರಲ್ಲಿ ಸೈಪ್ರಿನಿಡೀ ಕುಟುಂಬಕ್ಕೆ ಸೇರಿದ ಸುಮಾರು 17.85 ದಶಲಕ್ಷಟನ್ ಮೀನುಗಳ ಉತ್ಪಾದನೆಯಾಗಿದೆಯೆಂದರೆ ಮೀನುಗಾರಿಕೆಯಲ್ಲಿ ಇದರ ಪ್ರಾಮುಖ್ಯ ಅರಿವಾಗುತ್ತದೆ. ದೊಡ್ಡಗೆಂಡೆ ಮೀನುಗಳು (ಕಾಟ್ಲಾ, ರೋಹು, ಮೃಗಾಲ) ಮತ್ತು ವಿದೇಶಿ ಗೆಂಡೆ ಮೀನು (ಸಾಮಾನ್ಯ ಗೆಂಡೆ, ಬೆಳ್ಳಿ ಗೆಂಡೆ, ಹುಲ್ಲುಗೆಂಡೆ) ಗಳನ್ನು ಒಂದೇ ಕೊಳದಲ್ಲಿ ಮಿಶ್ರ ಕೃಷಿ ಮಾಡಲು ಸಾಧ್ಯವಾದ್ದರಿಂದ ಹಾಗೂ ಈ ಮೀನುಗಳು ಶೀಘ್ರವಾಗಿ ಅಂದರೆ ವರ್ಷಕ್ಕೆ 1-2 ಕೆಜಿ ವರೆಗೆ ಬೆಳೆಯುವುದರಿಂದ ಮೀನುಕೃಷಿಗೆ ನೆಚ್ಚಿನ ತಳಿಗಳಾಗಿವೆ.


ವಿದೇಶಿ ಗೆಂಡೆಗಳು ಮೂಲತಃ ಚೀನ ಮತ್ತು ಮಧ್ಯ ಏಷ್ಯದ ಸಿಹಿನೀರಿನಲ್ಲಿ ಇದ್ದಂತಹವು. ಕಾಲಕ್ರಮೇಣ ಇವನ್ನು ಸಾಕಾಣೆಗಾಗಿ ಇತರ ದೇಶಗಳಿಗೂ ಕೊಂಡೊಯ್ಯ ಲಾಯಿತು. ಇವುಗಳಲ್ಲಿ ಸಾಮಾನ್ಯಗೆಂಡೆ ಪ್ರಪಂಚದ ಎಲ್ಲ ಭಾಗಗಳಲ್ಲಿಯೂ ಕಾಣಸಿಗುತ್ತದೆ. ಇದು ಉಷ್ಣ ಪ್ರದೇಶಗಳಷ್ಟೆ ಅಲ್ಲದೆ ಸಮಶೀತೋಷ್ಣ ಮತ್ತು ಶೀತ ವಲಯಗಳಲ್ಲೂ ಹೊಂದಿಕೊಂಡು ಬದುಕಬಲ್ಲದ್ದಾಗಿದೆ. ಇದೇ ಮೀನಿನ ಅನೇಕ ತಳಿಗಳಿವೆ. ಉದಾ: ಮಿರರ್ ಕಾರ್ಪ್ (ಕನ್ನಡಿ ಮೀನು), ಸ್ಕೇಲ್ ಕಾರ್ಪ್, ಲೆದರ್ ಕಾರ್ಪ್. ಗೆಂಡೆ ಮೀನುಗಳು ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ. ದೊಡ್ಡ ಗೆಂಡೆಗಳು ಮೇ-ಆಗಸ್ಟ್‌ ತಿಂಗಳುಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಸಾಮಾನ್ಯ ಗೆಂಡೆ ವರ್ಷವೆಲ್ಲ ಮೊಟ್ಟೆಯಿಡುತ್ತದಾದರೂ ಜುಲೈ-ಆಗಸ್ಟ್‌ ಮತ್ತು ಫೆಬ್ರವರಿ-ಮಾರ್ಚಿ ಅವಧಿಯಲ್ಲಿ ಸಂತಾನೋತ್ಪತ್ತಿ ಅಧಿಕ.